Tuesday, March 31, 2015

ನಗಿಸುವ ಹನುಮಪ್ಪನ ಹೊಸ ರಂಗಸಾಧ್ಯತೆ

ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕ ವಿಮರ್ಶೆ


ನಮ್ಮ ಜನಪದರು ತಿರುಪತಿ ತಿಮ್ಮಪ್ಪನಿಗಿಂತ ಊರ ಮುಂದಿನ ಮಾರಮ್ಮನಿಗೆ, ಹನುಮಪ್ಪನಿಗೆ ಹೆದರುವುದೇ ಹೆಚ್ಚು. ಶ್ರೀಮಂತ ದೇವರು ಜನಪದರಿಗೆ ಸಿಗುವುದು ಬಹಳ ಅಪರೂಪ; ಮಂತ್ರಿ ಮಹೋದಯರ ತರ, ಸರ್ಕಾರದ ಸವಲತ್ತುಗಳ ತರ. ಅದೇ ಊರ ಮುಂದಿನ ಮಾರಮ್ಮನೋ ಹನುಮಪ್ಪನೋ ಅವರಿಗೆ ಯಾವಾಗಲೂ ಸಿಗುತ್ತಾರೆ. ಅವರ ಕಷ್ಟ ಸುಖಗಳನ್ನು ಕೇಳಿ ನೆಮ್ಮದಿಯನ್ನು ನೀಡುತ್ತಾರೆ. ಅವರೆಲ್ಲ ಜನಪದರಿಗೆ ಬಹಳ ಆಪ್ತವಾಗಲು ಕಾರಣ ಈ ದೇವರುಗಳು ಅವರ ಜೊತೆ ಜೊತೆಗೆ ಬದುಕುತ್ತಾರೆ. ಊರವರು ಸೇರಿ ಗುಡಿ ಕಟ್ಟಿಸಿದರೆ ಮಳೆ ಬಿಸಿಲಿಂದ ತಪ್ಪಿಸಿಕೊಂಡು ವರ್ಷಕ್ಕೊಮ್ಮೆ ಜಾತ್ರೆನೋ ಹಬ್ಬವೋ ಮಾಡಿಕೊಂಡು ಆರಾಮ ಬದುಕುತ್ತಾರೆ. ಗುಡಿ ಕಟ್ಟಿಸಿಕೊಟ್ಟಿಲ್ಲವೆಂದರೆ ಅಳ್ಳಿಮರದ ನೆರಳಿನಲ್ಲಿ ನೆಮ್ಮದಿಯಾಗಿ ಬದುಕುತ್ತಾ ಭಕ್ತರಿಗೆ ಒಳ್ಳೆಯದನ್ನು ಮಾಡುತ್ತಾ ಊರ ಕಾಪಾಡಿಕೊಂಡು ದೇವರಾಗಿ ಇರುತ್ತಾರೆ. ಯಾವಾಗದರೊಮ್ಮೆ ಭಯಂಕರ ಕೋಪ ಮಾಡಿಕೊಂಡು ಊರಂತ ಊರಿಗೇ ಸಾಂಕ್ರಾಮಿಕ ರೋಗಗಳನ್ನು ತಂದಿಕ್ಕಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಜನಪದರು ದೇವರನ್ನು ಊರ ಮುಂದೆ ತಂದಿರಿಸಿಕೊಂಡು ದೇವರನ್ನೂ ಕಾಪಾಡುತ್ತಾ ತಾವು ಬದುಕುತ್ತಾ ಬಂದಿದ್ದಾರೆ. ನಮ್ಮ ಜನಪದರು ತಮ್ಮ ಗ್ರಾಮ್ಯ ನುಡಿಗಳಲ್ಲಿಯೆ ತಮ್ಮ ಪ್ರೀತಿಯ ದೇವರನ್ನು ಬಯ್ಯುತ್ತಾರೆ ಹೊಗಳುತ್ತಾರೆ ತೆಗಳುತ್ತಾರೆ. ಅಷ್ಟು ನಂಬಿಕೆ ದೇವರಿಗೆ ಮತ್ತು ಭಕ್ತರಿಗೆ.

ಜನಪದವೇ ಹಾಗೆ ಅಲ್ಲಿ ಶೀಲ-ಅಶ್ಲೀಲದ ಮುಚ್ಚುಮರೆ ಇಲ್ಲ. ಒಡನಾಟ ನಂಬಿಕೆ, ಶ್ರದ್ಧೆ, ನಿಷ್ಠೆ, ನಿಷ್ಠುರತೆ, ರೂಢಿ, ಸರಳತೆ ಮುಂತಾದವೆ ಮುಖ್ಯ.
ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭೂತಗಳ ಪಾರಮ್ಯವಾದರೆ, ದಕ್ಷಿಣ ಕರುನಾಡಿನಲ್ಲಿ ಮಾರಮ್ಮನ ಪ್ರಭಾವ ಹೆಚ್ಚು. ಇನ್ನು ಉತ್ತರ ಕರ್ನಾಟಕದಲ್ಲಿ ಹನುಮಪ್ಪ ಅತ್ಯಂತ ಪಾಪ್ಯುಲರ್ ದೇವರು. ಊರ ಮುಂದಿನ ಅರಳೀಕಟ್ಟೆಯಲ್ಲಿಯೋ ಬೇವಿನಗಿಡದ ಬುಡದಲ್ಲಿಯೋ ಅವ ಇರಲೇಬೇಕು ಅಷ್ಟು ಜನಜನಿತ ಹನುಮಪ್ಪ. ಈ ಹನುಮನನ್ನು ಬಿಟ್ಟರೆ ಕನ್ನಡನಾಡಿನ ಬಹುತೇಕ ಊರದೇವರುಗಳು ಮಾಂಸಾಹಾರ ಪ್ರಿಯರು. ಅದಕ್ಕಾಗಿಯೆ ಇರಬೇಕು ಜನಪದರಿಗೆ ಸ್ಪಷ್ಟ ಆಕಾರವಿಲ್ಲದ, ರೂಪವಿಲ್ಲದ, ಆಭರಣಗಳನ್ನು ಇಷ್ಟಪಡದ, ಗುಡಿಯನ್ನೂ ಹೊಂದರಿದ, ಚಳಿ ಮಳೆ ಬಿಸಿಲು ಬೆಂಕಿಗೆ ಚೂರು ಭಯಪಡದ, ಹೆಚ್ಚೆಂದರೆ ವಾಂತಿಬೇಧಿಯನ್ನೋ, ಕಜ್ಜಿಯನ್ನೋ ಉಂಟುಮಾಡಿ ಸೇಡು ತೀರಿಸಿಕೊಳ್ಳುವ ಊರಿನ ಸಂಕಷ್ಟಗಳನ್ನೇ ಮೈವೆತ್ತಿ ನಿಂತಂತಹ ದೇವರುಗಳು ಇಷ್ಟವಾಗಿರುವುದು. ಅವರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವುದು.

ಇಂಥದ್ದೊಂದು ದೇವರು ಮತ್ತು ಭಕ್ತರ ನಡುವಿನ ಅವಿನಾಭಾವ ಸಂಬಂಧದ ಕಥೆ-ವ್ಯಥೆಯನ್ನು ಆಧರಿಸಿದ ಯುವ ನಾಟಕಕಾರ ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ಎಂಬ ವಾಸ್ತವದ ವಿಡಂಬನೆಯ ನಗೆನಾಟಕವನ್ನು ಧಾರವಾಡದ ‘ಆಟಮಾಟ’ ತಂಡ ಈ ವರ್ಷದ ತನ್ನ “ಅಡ್ಡ್ಯಾಟ”ದ ಮೂಲಕ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಉತ್ತರಕರ್ನಾಟಕದ ಜವಾರಿ ಭಾಷೆಯ ಮೂಲಕ ನಾಡಿನ ಜನರನ್ನು ನಗಿಸುತ್ತಾ ಸಾಗಿರುವ ಈ ನಾಟಕ ಒಂದು ಅಪ್ಪಟ ಜನಪದ ನಾಟಕ ಎಂಬುದರಲ್ಲಿ ಎರಡು ಮಾತಿಲ್ಲ.



ವಜ್ರಮಟ್ಟಿ ಮತ್ತು ಧರಗಟ್ಟಿ ಎಂಬುದು ಉತ್ತರಕರ್ನಾಟಕದ ಎಲ್ಲಾ ಸಮಸ್ಯೆಗಳನ್ನು ಹೊತ್ತುಕೊಂಡು ಬದುಕು ಸಾಗಿಸುತ್ತಿರುವ ಸೋದರ ಹಳ್ಳಿಗಳು. ಈ ಎರಡೂರ ಸೀಮೆ ದೇವರು ಹನುಮಪ್ಪ. ಈ ಹನುಮಪ್ಪನೇ ಈ ನಾಟಕದ ಮುಖ್ಯ ಪಾತ್ರ. ಅವನ ಸುತ್ತಲೇ ನಡೆಯುವ ನಾಟಕ ದೇವರನ್ನಿಟ್ಟುಕೊಂಡು ದಂಧೆ ಮಾಡುವವರ, ವಾರ್ತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವವರ, ಪೀಕಲಾಟದ ಪೊಲೀಸುತನದ, ವಶೀಲಿ ವಕೀಲಿತನದ, ಭ್ರಷ್ಟ ರಾಜಕಾರಣಿಗಳ ಮುಖವಾಡಗಳನ್ನು ಪ್ರೇಕ್ಷಕನ ಮುಂದೆ ಬೆತ್ತಲಾಗಿಸುತ್ತದೆ.

ಧರಗಟ್ಟಿ ದೈವಭಕ್ತರು ಹನುಮಪ್ಪನನ್ನು ಕಳ್ಳತನ ಮಾಡುವ ವಿವಾದದೊಂದಿಗೆ ಆರಂಭವಾಗುವ ನಾಟಕ ಆ ದೇವರಿಗಾಗಿ ಎರಡೂರ ದೈವಭಕ್ತರ ಹೊಲಮನೆಗಳನ್ನು ಕಾಲಿಯಾಗಿಸಿ  ಕಡೆಗೆ ದೇವರೇ ಬೇಡವೆನ್ನಿಸುವ ವಿಷಾದದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಟರ ಅಭಿನಯದ ತಾಕತ್ತನೇ ಬಲವಾಗಿ ಅದರಲ್ಲೂ ವಾಚಿಕಾಭಿನಯಕ್ಕೆ ಹೆಚ್ಚು ಒತ್ತು ನೀಡುವ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಕನ್ನಡ ರಂಗಭೂಮಿಯನ್ನು ಕ್ರಿಯಾಶೀಲವಾಗಿಡುವುದಕ್ಕೆ ಪುಟ್ಟ ಪುಟ್ಟ ತಂಡಗಳು ಹೇಗೆ ಮಾದರಿಯಾಗಬಹುದು ಎಂಬ ಸಾಧ್ಯತೆಯನ್ನು ತೆರೆದಿಡುತ್ತದೆ.

ಹನುಮಪ್ಪನನ್ನೇ ಕಳ್ಳತನ ಮಾಡಿರುವಂತ ವಿಚಾರ, ತನ್ನ ವಿಚಾರಧಾರೆಗಳಿಂದ ಊರೊಳಗೆ ಹುಚ್ಚ ಎನ್ನಿಸಿಕೊಂಡಂತ ಹುಚ್ಚಮಲ್ಲನಿಗೆ ತಿಳಿದು ‘ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?’ ಎಂದು ತನ್ನ ನಿಷ್ಠುರ ಪ್ರಶ್ನೆಯನ್ನು ಪ್ರೇಕ್ಷಕನ ಮುಂದೆ ಎಸೆಯುತ್ತಾನೆ. ಸಮಾಜದಲ್ಲಿನ ನಂಬಿಕೆಗಳನ್ನೇ ಬುಡಮೇಲು ಮಾಡಬಲ್ಲಂತ ಪ್ರಶ್ನೆಗಳನ್ನು ಎತ್ತಬಲ್ಲಂತ ‘ಹುಚ್ಚಮಲ್ಲ’ರಿಗೆ ನಮ್ಮ ಸಮಾಜ ಬುದ್ದಿಜೀವಿ ಎನ್ನುತ್ತಲೇ ಹಿಂದೆಯೇ ಹುಚ್ಚ ಅನ್ನುತ್ತದೆ. ಹುಚ್ಚಮಲ್ಲರಂತವರು ಎತ್ತುವಂತ ಪ್ರಶ್ನೆಗಳಿಗೆ ನಮ್ಮ ಸಮಾಜ ಉತ್ತರಿಸುವುದಿಲ್ಲ. ಒಂದುವೇಳೆ ಉತ್ತರಿಸಿದರೆ ದೇವರ ಅಸ್ಥಿತ್ವವೇ ಅಲುಗಾಡುತ್ತದೆ.

ವಜ್ರಮಟ್ಟಿಯಿಂದ ತುಡುಗು ಮಾಡಿಕೊಂಡು ಬಂದ ಹನುಮಪ್ಪನನ್ನು ಧರಗಟ್ಟಿಯ ಜನ ಭಕ್ತಿಯಿಂದ ಸೇವೆ ಮಾಡುತ್ತಾರೆ. ವಜ್ರಮಟ್ಟಿಯ ಪೂಜಾರಿಗೆ ಇದರಿಂದ ಕೆಲಸವಿಲ್ಲದಂತಾಗಿ ಆತ ಊರ ಜನರನ್ನು ದೇವರ ಹೆಸರಲ್ಲಿ ಬಡಿದೆಬ್ಬಿಸುತ್ತಾನೆ. ಊರ ನಡುವೆ ಹೊಡೆದಾಟವಾದರೂ ಸರಿ ಪೂಜಾರಿಗೆ ದೇವರು ಬೇಕು. ಊರ ಹಿರಿಯರ ಮದ್ಯಸ್ಥಿಕೆ ಕೆಲಸ ಮಾಡದೆ ಹಿರಿಯರು ತಟಸ್ಥರಾಗುತ್ತಾರೆ. ದೇವರ ವಿಚಾರವನ್ನು ಪುಂಡು ಹುಡುಗರು ಕೈಗೆ ತೆಗೆದುಕೊಂಡು ಹನುಮಪ್ಪನನ್ನ ಪೋಲಿಸರು ಎತ್ತಿಕೊಂಡು ಬಂದು ಠಾಣೆಯಲ್ಲಿಡುತ್ತಾರೆ. ಠಾಣೆಗೇ ಬರುವ ಭಕ್ತಕೋಟಿ ಠಾಣೆಯನ್ನೇ ದೇವಾಲಯ ಮಾಡಿಕೊಂಡು ಪೋಲಿಸರನ್ನು ಪೇಚಿಗೆ ಸಿಲುಕಿಸುವ ದೃಶ್ಯವಂತೂ ಪ್ರೇಕ್ಷಕನನ್ನು ನಕ್ಕೂ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. ಪೇದೆಯ ಗಿಲೀಟು ಇನ್ಸ್‍ಪೆಕ್ಟರ್ ಪರದಾಟ ನಗು ಹುಟ್ಟಿಸಿದರೆ ಠಾಣೆಯಲ್ಲಿಯೂ ಮಡಿ ಮಯ್ಲಿಗೆಯನ್ನು ಕಾಪಾಡಿಕೊಳ್ಳುವ ಪೂಜಾರಿಯ ಗೂಂಡಾಗಿರಿಗೆ ಪೋಲಿಸುತನವೇ ಮಂಕಾಗಿಬಿಡುವುದು ವಿಪರ್ಯಾಸ. ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರಿಂದ ಠಾಣೆಯೊಳಗೆ ಪ್ರಾಮಾಣಿಕನೂ ಕರ್ತವ್ಯನಿಷ್ಠನೂ ಖಡಕ್ ಮತ್ತು ಠಾಣೆಯಾಚೆಗೆ ಲಂಚ ಸ್ವೀಕರಿಸುವ ಮಹಾ ಲಂಪಟ ಪೇದೆಯಾಗಿ, ನಮ್ಮ ರಾಜಕೀಯ ಮತ್ತು ರಾಜಕಾರಣಿಗಳ ಅತ್ಯಂತ ಸಶಕ್ತ ವ್ಯಂಗ್ಯಚಿತ್ರದಂತೆ ಈ ನಾಟಕದಲ್ಲಿ ಬರುವ ಎಂ.ಎಲ್.ಎ., ಪಾತ್ರವನ್ನು ಮಾಡಿ ಪ್ರೇಕ್ಷಕರ ಕಣ್ಮಣಿಯಾಗಿದ್ದು ಮಹಾದೇವ ಹಡಪದ. ಬುದ್ದಿವಂತ ಸಮಾಜದ ಪ್ರತಿನಿಧಿಯಂತ ಹುಚ್ಚಮಲ್ಲ, ಪೋಲಿಸು ಅಧಿಕಾರಿಯ ಪಾತ್ರ ಮಾಡಿ ತನ್ನ ಅಭಿನಯ ಸಾಮಥ್ರ್ಯದ ವಿಭಿನ್ನ ಸಾಧ್ಯತೆಗಳನ್ನು ತೆರೆದಿಟ್ಟದ್ದು ಯತೀಶ ಕೊಳ್ಳೆಗಾಲ.
ಹೇಳಿ ಕೇಳಿ ಎರಡು ಊರ ನಡುವಿನ ಕಥಾಹಂದರ, ದೇವರು ಎಂಬ ಸೂಕ್ಷ್ಮ ವಿಚಾರ ಪ್ರಧಾನ ನಾಟಕ. ತಂಡದಲ್ಲಿರುವುದು ಎಂಟೇ ಮಂದಿ ಕಲಾವಿದರು. ತರಬೇತಾದ ನಟ ನಟಿಯರ ಪುಟ್ಟ ತಂಡವೊಂದು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಾ ಪ್ರೇಕ್ಷಕನನ್ನು ಮುಟ್ಟುವುದು ಆಟಮಾಟ ತಂಡಕ್ಕೆ ಸಾಧ್ಯವಾಗಿದೆ. ರಂಗಸಜ್ಜಿಕೆ ಎಂದರೆ ಸರಳವಾದ ಚಿತ್ರಪಟ ಅಷ್ಟೆ. ಇಡೀ ನಾಟಕದಲ್ಲಿ ಪ್ರಧಾನವಾಗಿರುವುದು ನಟ ಮತ್ತು ಅಭಿನಯ. ಧನಂಜಯ ರಂಗಸಮುದ್ರ, ಮಾರಪ್ಪ ಬಿ. ಆರ್. ಬೆಜ್ಜಿಹಳ್ಳಿ, ಉಮೇಶ ಪಾಟೀಲ, ಗೀತಾ ವಿ. ಮೋಹಿತೆ, ಅನಿಲ ರೇವೂರ ಮತ್ತು ಶಶಿಕಲ ಪುರುಟಿ ಈ ಕಲಾವಿದರು ಉತ್ತರ ಕರ್ನಾಟಕದ ಭಾಷೆಯಲ್ಲಿನ ನಾಟಕವನ್ನು ನಾಡಿನ ತುಂಬಾ ಮುಟ್ಟಿಸಿ ನಗಿಸುತ್ತಿರುವುದು ಅವರ ಅಭಿನಯದ ಹೆಚ್ಚುಗಾರಿಕೆಯೆ ಸರಿ. ಇತ್ತೀಚಿನ ದಿನಗಳಲ್ಲಿ  ತನ್ನ ಅಭಿನಯ ಸಾಮಥ್ರ್ಯದಿಂದಲೇ ಕನ್ನಡನಾಡಿನ ಜನರನ್ನು ನಕ್ಕು ನಲಿಸುತ್ತಿರುವ ಅಪರೂಪದ ನಾಟಕ “ಊರು ಸುಟ್ಟರೂ ಹನುಮಪ್ಪ ಹೊರಗ”.



ಈ ನಾಟಕದೊಳಗೊಂದು ದೃಶ್ಯ ಬರುತ್ತದೆ. ದೇವರಾದ ಹನುಮಪ್ಪನನ್ನ ಜೈಲಿನಲ್ಲಿ ಇಡಲಾಗಿದೆ. ಇದನ್ನು ಸುದ್ಧಿ ಮಾಡಲು ಬರುವ ವಾಹಿನಿಯೊಂದರ ವರದಿಗಾರ್ತಿ ಎರಡೂರ ನಡುವಿನ ದೇವರ ಜಗಳವನ್ನ ಬಂಡವಾಳ ಮಾಡಿಕೊಂಡು ಘಟನೆಯನ್ನು ತಿರುಚಲು ಯತ್ನಿಸುವುದಂತೂ ನಮ್ಮ ಸುದ್ದಿವಾಹಿನಿಗಳ ತಿಳುವಳಿಕೆ ಹೀನ, ವ್ಯಾಪಾರಿ ಮನೋಭಾವವನ್ನು ಪ್ರಕಟಪಡಿಸುತ್ತದೆ. ಆ ವರದಿಗಾರ್ತಿ ವಜ್ರಮಟ್ಟಿ ಧರಗಟ್ಟಿ ಊರ ಹನುಮಪ್ಪನನ್ನು ಪುರಾಣದ ಹನುಮನೊಂದಿಗೆ ತಾಳೆ ಹಾಕಿ ಸಮಾಜದಲ್ಲಿ ಕೋಲಾಹಲವೆಬ್ಬಿಸುವಂತೆ ಮಾಡುವ ಸುದ್ಧಿದಾಹಿಗಳ ಬಂಡವಾಳ ನಗೆಯುಕ್ಕಿಸುವ ಬದಲು ದಿಗಿಲು ಹುಟ್ಟಿಸುತ್ತದೆ. ಇದನ್ನೂ ಕಂಡು ಪ್ರೇಕ್ಷಕ ನಗುವಂತೆ ಮಾಡುತ್ತದೆ ನಾಟಕ.

ಉತ್ತರಕರ್ನಾಟಕದ ಎರಡು ಪುಟ್ಟ ಹಳ್ಳಿಗಳ ನಡುವಿನ ಜಗಳದ ಎಳೆಯನ್ನ ಹಿಡಿದು ನಮ್ಮ ಸಮಾಜದ ಕೈಗನ್ನಡಿಯಂತಹ ಊರು ಸುಟ್ಟರೂ ಹನುಮಪ್ಪ ಹೊರಗ ನಗೆ ನಾಟಕವನ್ನು ಕಟ್ಟಿದ ಹನುಮಂತ ಹಾಲಿಗೇರಿಯವರ ಆಶಯವನ್ನು ಆಟಮಾಟ ತಂಡ ಯತೀಶ ಕೊಳ್ಳೆಗಾಲ ಅವರ ನಿರ್ದೇಶನದಲ್ಲಿ ಕರುನಾಡಿನ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಎರಡು ಊರುಗಳು ದೇವರಿಗಾಗಿ ನ್ಯಾಯಾಲಯದಲ್ಲಿ ಮಾಡುವ ಹೋರಾಟ ಮತ್ತು ಈ ಹಳ್ಳಿಗರ ಮುಗ್ಧತೆಯನ್ನು ಹಣ ಪೀಕಿಸುವ ಕಾಯಕವನ್ನು ಮಾಡಿಕೊಂಡ ವಕೀಲರ ದುಷ್ಟತನವನ್ನು ನಿರೂಪಣೆಯಂತೆ ಆತುರದಲ್ಲಿ ಮುಗಿಸುತ್ತದೆ ನಾಟಕ. ವರ್ಷಾನುಗಟ್ಟಲೆ ಹಿಡಿಯುವ ನ್ಯಾಯ ವ್ಯವಸ್ಥೆ ಮತ್ತು ವಕೀಲರುಗಳ ಹಣದಾಹಕ್ಕೆ ಎಲ್ಲವನ್ನೂ ಕಳಕೊಂಡ ಎರಡೂರ ಜನ ದೇವರೇ ಬೇಡ ಎಂದು ಬಸವಣ್ಣನ ‘ಕಾಯಕವೇ ಕೈಲಾಸ’ ಎಂಬ ತತ್ವವ ನಂಬಿ ಊರುಬಿಟ್ಟು ಗುಳೆ ಹೋಗುವುದು ನಾಟಕದ ವಿಷಾದ. ಈ ದೃಶ್ಯಕ್ಕೆ ಇನ್ನಷ್ಟು ಮಹತ್ವ ನೀಡಿದ್ದರೆ ನಕ್ಕು ಹಣ್ಣಾದ ಪ್ರೇಕ್ಷಕನಿಗೆ ನಗೆಯಾಚೆಗಿನ ಚಿಂತನೆಗೆ ಒತ್ತುಕೊಟ್ಟಂತಾಗುತ್ತಿತ್ತು. ಬರಿಯ ನಗಿಸುವುದಷ್ಟೇ ಸಮಾಜಿಕ ಕಳಕಳಿ ಹೊಂದಿದ ರಂಗತಂಡದ ಧ್ಯೇಯವಾಗದೆ ಪ್ರೇಕ್ಷಕನಿಗೆ ತಾನು ಯಾಕೆ ನಕ್ಕಿದ್ದೇನೆ ಎಂಬ ವಿಚಾರಮಂಥನಕ್ಕೂ ಕಾರಣವಾಗಬೇಕು. ಆ ದೃಷ್ಠಿಯಲ್ಲಿ ತಂಡ ಕಡೆಯ ದೃಶ್ಯದ ವಿಷಾದವನ್ನು ಸ್ಪಷ್ಟವಾಗಿ ಪ್ರೇಕ್ಷಕನ ಮುಂದಿಡಲು ಯತ್ನಿಸಬೇಕು.

ಬಡತನ ಬರಗಾಲದ ನಡುವೆಯೂ ನಮ್ಮ ಜನಪದರಿಗೆ ದೇವರು ತಮ್ಮ ಕೇಡನ್ನು ಕ್ಷಣಹೊತ್ತು ಮರೆಯಲು ಆಸರೆ. ತಮ್ಮ ಊರ ಹನುಮಪ್ಪನ ಮೇಲಿನ ಹಕ್ಕಿಗಾಗಿ ಹೋರಾಡಿ ಮತ್ತಷ್ಟು ಬಡತನಕ್ಕೀಡಾದ ವಜ್ರಮಟ್ಟಿ ಮತ್ತು ಧರಗಟ್ಟಿಯ ಜನಪದರಿಗೆ ಆ ಹನುಮನೇ ತಮ್ಮ ಇಂದಿನ ಕೇಡಿಗೂ ಕಾರಣವಾಗಿದ್ದು ಅವರನ್ನು ಖಿನ್ನರನ್ನಾಗಿಸುತ್ತದೆ. ನಿಮ್ಮ ಹೋರಾಟಕ್ಕೆ ಜಯವಾಗಿದೆ ದೇವರನ್ನು ವಾಪಾಸ್ಸು ನಿಡುವುದಕ್ಕೆ ಬಂದರೆ ಗೆದ್ದವರಿಗೂ ಸೋತವರಿಬ್ಬರಿಗೂ ದೇವರು ಬೇಡ. ಬರಗಾಲ ಮತ್ತು ದೇವರ ಹಕ್ಕಿನ ಹೋರಾಟದಿಂದ ತತ್ತರಿಸಿದ ಊರುಗಳು ದುಡಿಮೆಯನ್ನು ಅರಸಿ ಗೋವಾ ಮುಂತಾದ ಕಡೆ ಗುಳೆಹೋಗುವುದು ಕಂಡರೆ ನಮ್ಮ ಹಳ್ಳಿಗಳು ಇಂದಿಗೂ ರಾಜಕಾರಣಿಗಳ ಸಾಂತ್ವನ ಕೇಂದ್ರಗಳಾಗಿಯೇ ಉಳಿದಿದೆ. ಹಳ್ಳಿಗರ ಬಡತನ ಅನಕ್ಷರತೆಯನ್ನು ಕಾಪಾಡಿಕೊಂಡು ಬರುವ ರಾಜಕಾರಣ ವಿಚಾರ ಮಾಡುವ ಶಕ್ತಿಯನ್ನೇ ನಾಶಮಾಡಿದೆ. ವಿಚಾರವಂತನಾದರೆ ಹುಚ್ಚಮಲ್ಲನಂತೆ ಹುಚ್ಚನ ಪಟ್ಟಕಟ್ಟಿ ನಗುವಂತೆ ಮಾಡಿದೆ. ಎರಡೂ ಊರಿಗೆ ಬೇಡವಾದ ಹನುಮಪ್ಪ ದಾರಿಯ ಮಧ್ಯೆ ನಿಂತಾಗ ಹುಚ್ಚಮಲ್ಲನ ಪ್ರಶ್ನೆಯೆ ಮತ್ತೆ ನೆನಪಾಗುತ್ತದೆ: “ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?”



ಸಂಪೂರ್ಣ ಉತ್ತರಕರ್ನಾಟಕದ ಜಾನಪದ ಪ್ರಕಾರಗಳನ್ನೇ ನಾಟಕದ ಓಘಕ್ಕೆ ಬಳಸಿಕೊಂಡ ತಂಡ, ರಂಗಕ್ರಿಯೆಯನ್ನು ಕಟ್ಟುವುದಕ್ಕಿರುವ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿರುವುದು ಅರಿವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪುಟ್ಟ ಪುಟ್ಟ ತಂಡಗಳು ಕನ್ನಡ ರಂಗಭೂಮಿಯ ಚಲನಶೀಲತೆಗೆ ತಮ್ಮ ಕಾಣಿಕೆಯನ್ನು ನೀಡುತ್ತಿವೆ ಮತ್ತು ಈ ತಂಡಗಳ ನಾಟಕಗಳ ಆಯ್ಕೆಗಳನ್ನು ಗಮನಿಸಿದರೆ ಒಂದು ಸಾಮಾಜಿಕ ಚಳವಳಿಯನ್ನು ಕಟ್ಟುವ ನಿಟ್ಟಿನಲ್ಲಿ ಸಾಗಿದೆ. ಬಹುತೇಕ ಯುವ ನಟ ನಟಿಯರೇ ಭಾಗಿಯಾಗಿರುವ ಈ ಧಾರೆಯಲ್ಲಿ ವಿಚಾರಗಳ ಹರಿತವೂ ಒಳಗೊಂಡಿರುವುದು ಹೊಸ ಭರವಸೆಯನ್ನು ಮೂಡಿಸಿದೆ.
ಆಟಮಾಟದಂತಹ ತಂಡಗಳು ಇನ್ನಷ್ಟು ಹೊಸ ಹೊಸ ರಂಗಪ್ರಸ್ತುತಿ ಮತ್ತು ರಂಗ ಸಾಧ್ಯತೆಗಳನ್ನು ನಾಡಿಗೆ ನೀಡಲಿ.

-ಸಂತೋಷ ಗುಡ್ಡಿಯಂಗಡಿ

No comments:

Post a Comment