Sunday, March 29, 2015

ಸರ್ಕಾರಿ ಶಾಲೆಯೊಳಗೊಬ್ಬ ಸಂತ; ಸ. ರಘುನಾಥ

(ಈ ಲೇಖನವನ್ನು ನಾನು ಬರೆದದ್ದು ಕಳೆದ ವರ್ಷ. ಆದರೆ ಪತ್ರಿಕೆಯೊಂದರಲ್ಲಿ ಇದು ಪ್ರಕಟಣೆಗೆ ಬರುವ ಹೊತ್ತಿಗೆ ಮೇಸ್ಟ್ರು ನಿವೃತ್ತರಾದ್ದರಿಂದ ಪ್ರಕಟವಾಗಿಲ್ಲ. ಈಗ ನಾನೇ ಇಲ್ಲಿ ಪ್ರಕಟಿಸುತ್ತಿರುವೆ.)



ಹಣ್ಣು ಕೊಡುವ ದೇವರು
ಒಂಟಿಕಾಲ ವ್ಯಕ್ತಿಯೊಬ್ಬರು ತನ್ನ ಗಾಡಿಯಿಂದ ಹಣ್ಣುಗಳನ್ನೆತ್ತಿ ಭಿಕ್ಷುಕರಿಗೆ ಕೊಡುತ್ತಿದ್ದರೆ ಗಾಡಿಯವ ಏನೂ ಮಾತಾನಾಡುವುದಿರುವುದ ಕಂಡು, ಆಚೀಚೆಯವರು ಗಾಡಿಯವನಿಗೆ ‘ಆತ ಹಣ್ಣು ತೆಗೆಯುತ್ತಿದ್ದಾನೆ ನೋಡು’ ಎಂದರೆ ‘ತೆಗೆಯಲಿ ಬಿಡಿ ಆತ ತನಗಾಗಿ ಹಣ್ಣು ತೆಗೆದುಕೊಳ್ಳುತ್ತಿಲ್ಲವಲ್ಲ ಆತ ದೇವರು’ ಎನ್ನುತ್ತಾನೆ ಶ್ರೀನಿವಾಸಪುರದ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರುವ ರಾಜ. ಆ ‘ದೇವರು’ ಹಣ್ಣು ಮುಟ್ಟದೆ ಹಾಗೆಯೇ ಕುಂಟಿಕೊಂಡು ಹೋದರೆ ‘ನಿಂಗೇನು ದಾಡಿ, ಹಣ್ಣು ಮುಟ್ಟದೆ ಹಾಗೇ ಹೋಗ್ತೀಯಲ್ಲ’ ಎಂದು ರಾಜ ಬಯ್ಯುತ್ತಾನೆ. ಆ ಒಂಟಿ ಕಾಲ ಮನುಷ್ಯ ರಾಜನ ಪ್ರೀತಿಯ ಸರ್ಕಾರಿ ಶಾಲಾ ಮೇಷ್ಟ್ರು.


ಆ ಮೇಷ್ಟ್ರು ಒಮ್ಮೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಬಂದ ಭಿಕ್ಷುಕಿಯೊಬ್ಬರು ತನ್ನ ಬಳಿಯಿದ್ದ ಹತ್ತು ರೂಪಾಯಿಗೆ 100ಗ್ರಾಂ ದ್ರಾಕ್ಷಿ ಕೊಂಡು ಮೇಸ್ಟ್ರಿಗೆ ಕೊಡುತ್ತಾಳೆ. ಬೇಡಮ್ಮ ನಿನ್ನ ಮಕ್ಕಳಿಗೆ ಕೊಡು ಎನ್ನುತ್ತಾರೆ ಮೇಸ್ಟ್ರು. ಆಕೆ ಇಲ್ಲ ನೀವು ತಿನ್ನಲೇಬೇಕು, ನಾನು ಗರ್ಭಿಣಿಯಾಗಿದ್ದಾಗ ಒಂದೂವರೆ ತಿಂಗಳು ನನ್ನನ್ನು ಸಾಕಿದ್ದೀರಿ ಎಂದಾಗ ಮೇಸ್ಟ್ರಿಗೆ ಮೂವತ್ತೈದು ವರ್ಷಗಳ ಹಿಂದಿನ ಘಟನೆ ನೆನಪಾಗುತ್ತದೆ. ಆಗ ಅವರ ಶಾಲೆಯ ಮುಂದಿನ ಮರದ ಕೆಳಗೊಬ್ಬ ಗರ್ಭಿಣಿ ಭಿಕ್ಷುಕಿ ಕುಳಿತಿರುತ್ತಿದ್ದಳು. ಮಕ್ಕಳಿಗೆ ಉಪ್ಪಿಟ್ಟು ಕೊಟ್ಟಾದ ಮೇಲೆ ಆಕೆಗೂ ಸ್ವಲ್ಪ ಉಪ್ಪಿಟ್ಟು ನೀಡುತ್ತಿದ್ದರು. ಆಕೆ ಆ ಮೇಷ್ಟ್ರರನ್ನು ದೇವರಂತೆ ಕಂಡಳು. ತನ್ನನ್ನು ತನ್ನ ಮಗುವನ್ನು ಸಾಕಿದ  ದೇವರಿಗೆ ದ್ರಾಕ್ಷಿ ನೀಡಿ ಸತ್ಕರಿಸಿದಳು.

ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಾದರೂ ಈ ಜಗತ್ತಿನಲ್ಲಿದೆಯೇ? ಎಂದು ಕೇಳುವ ಈ ಮೇಸ್ಟ್ರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಪಲ್ಲಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸ. ರಘುನಾಥ ಅವರು. ಸ. ರಘುನಾಥ ಮೇಸ್ಟ್ರು ಕೆಲಸ ಮಾಡಿದೆಡೆಯೆಲ್ಲ ಜನ ಅವರನ್ನು ದೇವರು ಎನ್ನುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೇಸ್ಟ್ರನ್ನು ದೇವರು ಅಂತ ಜನರು ಕರೆಯಬೇಕೆಂದರೆ ಅವರು ಮಾಡುವ ಪವಾಡಗಳು ಎಂತವು ಎಂದು ಹುಡುಕಿಕೊಂಡು ಹೋದರೆ ನೂರಾರು ಮಕ್ಕಳ ಬದುಕು ಬದಲಿಸಿದ ಕಥೆಗಳು, ನೂರಾರು ಜನರ ಹಸಿವು ನೀಗಿದ ಕಥೆಗಳು, ಸಾವಿರಾರು ಕಾಡು ಪ್ರಾಣಿ -ಪಕ್ಷಿಗಳು ಹೊಸ ಬದುಕನ್ನು ಕಂಡುಕೊಂಡ ಕಥೆಗಳು, ನೂರಾರು ಜನರ ಕಾಯಿಲೆಗಳು ಗುಣವಾದಂತ ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಇವು ಪವಾಡಗಳಲ್ಲ. ವ್ಯಕ್ತಿಯೊಬ್ಬ ತನ್ನ ಜೀವಿತವನ್ನು ಸಾಮಾಜಿಕ ಬದುಕನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದರ ಉದಾಹರಣೆ. ರಘುನಾಥ ಮೇಸ್ಟ್ರು ತನ್ನ ಬದುಕನ್ನ ಹೀಗೆ ರೂಪಿಸಿಕೊಳ್ಳುವ ಹಿಂದೊಂದು ಕ್ರೂರವಾದ ಹಸಿವಿನ ಕಥೆಯಿದೆ.

ಹನ್ನೆರಡು ಮಕ್ಕಳ ತುಂಬು ಕುಟುಂಬದಲ್ಲಿ ಜನಸಿದ ರಘುನಾಥ ಅವರ ಮನೆಯಲ್ಲಿ ತುತ್ತು ಅನ್ನಕ್ಕೂ ಕಷ್ಟ. ಅಜ್ಜ ಅಜ್ಜಿಯ ಆಶ್ರಯದಲ್ಲಿ ಒಂದಷ್ಟು ಕಾಲ ಬೆಳೆದರು. ಅಜ್ಜನ ಶ್ಯಾನುಭೋಗಿಕೆ ಹೋದ ಮೇಲೆ ಸಿದ್ಧಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಕಾಲೇಜು ಸೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಬೆಂಗಳೂರಿಗೆ ಬಂದು ಹೋಟೆಲಿನಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿಕೊಂಡರು. ಹೋಟೆಲ್ ಕೆಲಸ ಮತ್ತು ವಿದ್ಯಾಭ್ಯಾಸ ಎರಡೂ ಕೈಗೆಟುಕದೆ ಹಸಿವು ತನ್ನ ಭೀಕರ ಮುಖವನ್ನು ತೆರೆದುಕೊಂಡಿತ್ತು.

“ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕು ಮನೆಯ ಮುಂದೆ ನಿಂತು ತುತ್ತು ಅನ್ನ ಬೇಡಿದೆ ಗುರುವೆ, ಯಾರೂ ನೀಡಲಿಲ್ಲ. ಒಂದು ತುತ್ತು ಭಿಕ್ಷೆಗೂ ಯೋಗ್ಯನಲ್ಲ ನಾನು ಅನ್ನಿಸಿತು. ರೈಲು ಹಳಿಗಳ ಮೇಲೆ ನಡೆಯುತ್ತಾ ಸಾಗಿದೆ. ಸುತ್ತಲಿನ ಒಂದು ಸದ್ದು ನನಗೆ ಕೇಳಿಸಲಿಲ್ಲ. ಅವತ್ತಿನ ಆ ಕ್ಷಣದ ಏಕಾಗ್ರತೆ ಏನಾದರೂ ನನಗೆ ಇಂದು ಸಾಧ್ಯವಾಗಿದ್ದರೆ ಇಂದು ನನ್ನ ಸಾಹಿತ್ಯದ ದಿಕ್ಕೇ ಬದಲಾಗುತ್ತಿತ್ತು. ಎಚ್ಚರವಾದಾಗ ನಾನು ಬೌರಿಂಗ್ ಆಸ್ಪತ್ರೆಯಲ್ಲಿದ್ದೆ. ನಾನು ಕಾಲು ಕಳೆದುಕೊಂಡಿದ್ದೆ” ಅಂದು ಸಮಾಜ ಅವರಿಗೆ ಒಂದು ತುತ್ತು ಅನ್ನ ನೀಡದೆ ಕಾಲು ಬಲಿ ಪಡೆಯಿತು; ಆದರೆ ಆ ಕಾಲು ಕಳೆದಕೊಂಡ ಮನುಷ್ಯ ಇಂದು ಧಾವಂತದಲ್ಲಿ ಓಡುತ್ತಿರುವ ಅದೇ ಸಮಾಜದ ನಡುವೆ ಕುಂಟಿಕೊಂಡು ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆ ಪುಣ್ಯಾತ್ಮ ರೈಲು ಕಾಲನ್ನಷ್ಟೇ ಬಲಿ ಪಡೆದು ರಘುನಾಥ ಅವರನ್ನ ಈ ನಾಡಿಗೆ ನೀಡಿ ಸಾವಿರಾರು ಜನರ ಬದುಕಲ್ಲಿ ನಗೆಯರಳಲು ಹಾದಿ ಮಾಡಿಕೊಟ್ಟಿತು. ಅದೇ ರಘುನಾಥ ಮೇಸ್ಟ್ರು ಈ ಸಮಾಜದ ಬಗ್ಗೆ ಹೀಗೆ ಹೇಳುತ್ತಾರೆ “ ಈ ಸಮಾಜದಲ್ಲಿದ್ದು ಏನಾದರೂ ಮಾಡಬೇಕು ಅಂತಿದ್ದರೆ ನಷ್ಟ ಮತ್ತು ನೋವನ್ನು ಅನುಭವಿಸೋಕೆ ಸಿದ್ಧವಾಗಿರಬೇಕು. ಇದು ಅನುಭವ ಸಿದ್ಧಾಂತ. ಇದಕ್ಕಾಗಿ ಯಾರನ್ನೂ ದೂಷಿಸುವುದರಲ್ಲಿ ಅರ್ಥವಿಲ್ಲ. ಗಾಂಧಿ, ಏಸುವಿನಂತವರೇ ಈ ಸಮಾಜದಿಂದ ನೋವನ್ನ ತಿಂದಿದ್ದಾರೆ; ಇನ್ನು ನನ್ನಂತ ಚಿಕ್ಕವರು ಯಾವ ಲೆಕ್ಕ?”

ಮೊಲ ಸಾಕಾಣೆ ಮಾಡುವುದನ್ನು ಕಲಿಸುತ್ತಾ...

‘ತಾನೊಂದು ಮರದಂತೆ ಬದುಕಬೇಕು’ ಎಂದು ಬಯಸಿದ ಸ. ರಘುನಾಥ ಅವರಿಗೆ ಸರ್ಕಾರಿ ಶಾಲೆಯ ಮೇಸ್ಟ್ರಾಗಿ ಕೆಲಸ ಸಿಕ್ಕಿತು. ಮರವನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನ ಕಟ್ಟಿಕೊಳ್ಳಲು ಬಯಸಿದ ಮನಕ್ಕೆ ಸರ್ಕಾರಿ ಶಾಲೆ ವರದಾನವಾಯಿತು; ಅದು ರಘುನಾಥ ಮೇಸ್ಟ್ರಿಗಷ್ಟೇ ಆ ಶಾಲೆಗೆ ಕಲಿಯಲು ಬಂದ ಮಕ್ಕಳಿಗೂ. ರಘುನಾಥ ಮೇಸ್ಟ್ರಿರುವ ಶಾಲೆಯೆಂದರೆ ಅದು ಬರಿಯ ಶಾಲೆಯಷ್ಟೆ ಅಲ್ಲ, ಅದೊಂದು ಆಸ್ಪತ್ರೆ, ಅದೊಂದು ಪ್ರಾಣಿ ಸಂಗ್ರಹಾಲಯ, ಅದೊಂದು ಚೆಲುವಾದ ಕೈತೋಟದ ನಂದನವನ. ಗೌನಿಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿರುವ ಈ ಒಂಟಿ ಕಾಲ ಮೇಸ್ಟ್ರು ಶಾಲೆಗಷ್ಟೇ ಹೋಗಿ ಬಂದಿಲ್ಲ. ಶಾಲಾ ನಂತರದ ಸಮಯಗಳಲ್ಲಿ ಸುತ್ತ ಮುತ್ತಲ ಊರುಗಳಿಗೆ ಬೇಟಿ ನೀಡಿ ಬಡವರಿಗೆ ಅನಾಥರಿಗೆ ಉಚಿತವಾಗಿ ಔಷಧಿ ನೀಡುತ್ತಿದ್ದರು. ಅಲೆಮಾರಿಗಳ ಟೆಂಟುಗಳಿಗೆ ಬೇಟಿ ನೀಡಿ ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತಂದು ಓದಿಸುತ್ತಿದ್ದರು, ಅವರ ತಂದೆ ತಾಯಿಯರಿಗೆ ದಿನನಿತ್ಯದ ಊಟ ಉಪಹಾರಗಳಿಗೆ ಅಕ್ಕಿ ಸಾಮಾನುಗಳನ್ನು ತಾವೇ ಒದಗಿಸಿ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರುತ್ತಿದ್ದರು.

ನಮ್ಮ ಮಕ್ಕಳು

ಗಾಯಗೊಂಡ ಜಿಂಕೆಮರಿಯ ಆರೈಕೆಯಲ್ಲಿ...

ಶಾಲಾ ಸಮಯದ ನಂತರ ಊರೂರು ತಿರುಗಿ ಅಲೆಮಾರಿಗಳು ಅನಾಥರು ಭಿಕ್ಷುಕರನ್ನು ಬೇಟಿ ಮಾಡಿ ಅವರಿಗೆ ತಕ್ಷಣದ ಉಪಚಾರ ನೀಡುತ್ತಿದ್ದಾಗಲೇ ಅವರು ರೂಪಿಸಿದ್ದೆ “ನಮ್ಮ ಮಕ್ಕಳು”. ಇದೊಂದು ಸಂಘಟನೆಯೆಂದರೆ ತಪ್ಪಾದೀತು. ಅನಾಥರು ನಿರ್ಗತಿಕ ಮಕ್ಕಳಿಗೆ ಸಿಕ್ಕ ಆಸರೆ. ಈ ಮೇಸ್ಟ್ರು, ನಮ್ಮ ಮಕ್ಕಳು ಎಂಬ ತಾಯ್ತನದ ಮಡಿಲೊಳಗೆ ಸಲಹಿದ ಹಲವಾರು ಮಕ್ಕಳಿಂದು ಮೇಸ್ಟ್ರುಗಳಾಗಿದ್ದರೆ, ಬೇರೆ ಬೇರೆ ಉದ್ಯೋಗಗಳನ್ನು ಪಡೆದು ಹೊಸ ಜೀವನ ಆರಂಭಿಸಿದ್ದಾರೆ. ನಮ್ಮ ಮಕ್ಕಳ ವಿಶೇಷ ಎಂದರೆ ಭಿಕ್ಷೆ ಬೇಡುವವರ, ಬುಡಬುಡಿಕೆಯವರ, ಅಲೆಮಾರಿಗಳ ಮಕ್ಕಳೂ ಇಂದು ಶಿಕ್ಷಣ ಪಡೆದು ಮೇಸ್ಟ್ರುಗಳಾಗಿದ್ದಾರೆ ಎಂಬುದು!

ರಘುನಾಥ ಮೇಸ್ಟ್ರ ಅಪರೂಪದಲ್ಲಿ ಅಪರೂಪದ ಗುಣವೊಂದನ್ನು ಕುರಿತು ಹೇಳಲೇಬೇಕು. ನಮ್ಮ ಮಕ್ಕಳ ಮೂಲಕ ಶಿಕ್ಷಣ ಪಡೆದು ಉದ್ಯೋಗಸ್ತರಾದ ಮೇಲೆ ಅಂತವರ ಸಂಪೂರ್ಣ ಸಂಪರ್ಕವನ್ನೇ ಕಡಿದುಕೊಳ್ಳುತ್ತಾರೆ. ಅವರಿಂದ ಯಾವ ನೆರವನ್ನೂ ಬಯಸುವುದಿಲ್ಲ; ಮಾತನಾಡಿಸುವುದಿಲ್ಲ! ಯಾಕೆ ಸರ್ ಹೀಗೆ? ಎಂದರೆ: ‘ನೋಡು ಗುರುವೆ, ಅವರು ನನ್ನ ಮುಂದೆ ಕೈ ಕಟ್ಟಿಕೊಂಡು ನಿಂತು ನಿಮ್ಮಿಂದ ನಾನು ಹೀಗಾದೆ. ಎನ್ನುವುದನ್ನ ಕೇಳುವುದಕ್ಕೆ ಬೇಜಾರು. ಮತ್ತೆ ಅವರಿಗೆ ನಾನು ಮಾಡಬಹುದಾದ ಸಹಾಯ ಸಾಕಾಗಿದೆ. ಹಾಗಾಗಿ ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಟ್ಟುಕೊಂಡಿಲ್ಲ’ ಎನ್ನುವ ಅವರಿಗೆ ತನ್ನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಅಪಾರವಾದ ಹೆಮ್ಮೆ ಇದೆ. ಹೀಗೆಲ್ಲ ಹೇಳುವಾಗ ಅವರ ಆದರ್ಶದ ಮರದ ಕಥೆ ನೆನಪಾಗುತ್ತದೆ. ಅವರೇ ಹೇಳುವ ಹಾಗೆ “ಒಂದು ಮರ ಹಣ್ಣು ಬಿಡುತ್ತದೆ. ಆ ಹಣ್ಣನ್ನ ಒಳ್ಳೆಯವರು ಕೆಟ್ಟವರು ಹಕ್ಕಿಗಳು ಪ್ರಾಣಿಗಳು ಎಲ್ಲಾ ತಿನ್ನುತ್ತಾರೆ. ಮುದೊಂದು ದಿನ ಕಟುಕನೊಬ್ಬ ಬಂದು ಮರವನ್ನು ಕಡಿದು ನಾಶ ಮಾಡುತ್ತಾನೆ. ಆಮೇಲೆ ಅಲ್ಲಿ ಒಂದು ಮರ ಇತ್ತು ಎಂಬುದಕ್ಕೆ ಯಾವ ಕುರುಹೂ ಇರುವುದಿಲ್ಲ, ನಾನೂ ಕೂಡ ಆ ಮರದಂತೆ ಬದುಕಬೇಕು ಗುರುವೆ”
ಕಟುಕರಿದ್ದರು ಕುಂಟುವ ಕಾಲ ಬಳಿಯಲ್ಲೇ

ಗಾಯಗೊಂಡು ಸಿಕ್ಕಿದ ಕಾಡುಪಾಪದ ಮರಿ...

ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳಲಾರದ ಮನಸುಗಳು ನಮ್ಮ ಜೊತೆ ಜೊತೆಯಲ್ಲಿ ಇರುತ್ತವೆ. ರಘುನಾಥ ಮೇಸ್ಟ್ರ ಇಕ್ಕೆಲದಲ್ಲೂ ಅಂತಹ ಮನಸುಗಳಿದ್ದವು. ಅವರಿದ್ದ ಶಾಲೆ ನಂದನವನ ಎಂದು ಮೊದಲೇ ಪ್ರಸ್ತಾಪಿಸಿದ್ದೆ. ಹೌದು, ಅಲ್ಲಿ ಹಣ್ಣಿನ ಗಿಡಗಳು, ತರಕಾರಿಗಳು, ಹೂವಿನ ಗಿಡಗಳು, ಔಷಧಿ ಗಿಡಗಳನ್ನು ಮಕ್ಕಳ ಮೂಲಕ ನೆಟ್ಟು ಆರೈಕೆ ಮಾಡಿದ್ದರು. ಗಾಯಗೊಂಡು ನರಳುತ್ತಿರುವ ಕಾಡು ಪ್ರಾಣಿ ಪಕ್ಷಿಗಳನ್ನು ತಂದು ಪಂಜರಗಳಲ್ಲಿ ಚಿಕಿತ್ಸೆ ನೀಡಿ ಮಕ್ಕಳು ಸಾಕುತ್ತಾರೆ. ಗುಣವಾದ ಮೇಲೆ ಮತ್ತೆ ಕಾಡಿಗೆ ಬಿಡುತ್ತಾರೆ. ಹಾಗಾಗಿ ಮಕ್ಕಳು ಶಾಲೆಯ ಶಿಕ್ಷಣದ ಜೊತೆ ಜೊತೆಗೆ ಬದುಕಿನ ಪಾಠಗಳನ್ನ ಮಾನವೀಯ ಮೌಲ್ಯಗಳನ್ನ ಕಲಿಯುತ್ತಾರೆ. ಇಂತಹ ಗುಣಪಾಠಗಳನ್ನು ಕಲಿಸುವ ಗುರುವಿರುವಾಗ ಮಕ್ಕಳು ಸಹಜವಾಗಿ ಅವರ ಕಡೆಗೆ ಒಲಿಯುತ್ತಾರೆ ಇದು ಉಳಿದ ಶಿಕ್ಷಕರಿಗೆ ಅಸೂಯೆಯನ್ನ ಮೂಡಿಸುತ್ತದೆ.

ಒಂದು ದಿನ ರಾತ್ರಿ ಬೆಳಗಾಗುವುದರೊಳಗಾಗಿ ಸಂಪೂರ್ಣ ತೋಟವನ್ನು ಕೊಚ್ಚಿ ಕೊಚ್ಚಿ ನಾಶ ಮಾಡಲಾಗಿತ್ತು, ಪಂಜರದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಹೊರಬಿಟ್ಟು ನಿರ್ದಾಕ್ಷಿಣ್ಯವಾಗಿ ಸಾಯಿಸಲಾಗಿತ್ತು. ಬೆಳಿಗ್ಗೆ ಇದನ್ನು ನೋಡಿ ಯಾವತ್ತೂ ಅಳದ ನಾನು ಆ ತೋಟದ ನಡುವೆ ನಿಂತು ಗಳಗಳ ಅತ್ತುಬಿಟ್ಟಿದ್ದೆ; ಮಕ್ಕಳು ನನ್ನೊಡನೆ ಅತ್ತುಬಿಟ್ಟಿದ್ದರು. ಆ ಪುಟ್ಟ ಪುಟ್ಟ ಮಕ್ಕಳು ನನಗೆ ಧೈರ್ಯ ತುಂಬಿದರು “ಸರ್, ಇದೇ ಜಾಗದಲ್ಲಿ ಮತ್ತೆ ಹೀಗೆ ತೋಟ ಮಾಡುವ”; ಮಾಡಿ ತೋರಿಸಿದರು ನನ್ನ ವಿದ್ಯಾರ್ಥಿಗಳು. ಅವರು ನನ್ನ ವಿದ್ಯಾರ್ಥಿಗಳಲ್ಲ ನನ್ನ ಗುರುಗಳು, ಹಿತೈಷಿಗಳು, ಸ್ನೇಹಿತರು ಎಲ್ಲಾ. ಅವರಿಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಗುರುವೆ. ಶಾಲೆ ಮತ್ತು ಮಕ್ಕಳು ಎಂದರೆ ನನ್ನದೇ ಸ್ವರ್ಗ. ಬಸ್ಸಿನ ತನಕ ಬಂದು ಬಿಟ್ಟು ಕಂಡಕ್ಟರ್‍ಗೆ ಹೇಳಿ ಹೋಗುತ್ತಾರೆ “ಮೇಸ್ಟ್ರನ್ನ ಜೋಪಾನವಾಗಿ ತಲುಪಿಸು, ಸೀಟು ಮಾಡಿಕೊಡು” ಅಂತಾರೆ.

ಇತ್ತೀಚೆಗೆ ಗಾಯಗೊಂಡ ಮೊಲದ ಮರಿಯೊಂದು ರಘುನಾಥ ಮೇಸ್ಟ್ರನ್ನೇ ಹುಡುಕಿಕೊಂಡು ಬಂದಿದೆ. ಮಕ್ಕಳೊಡನೆ ಸೇರಿ ಅದಕ್ಕೆ ಉಪಚಾರ ಮಾಡಿದರು. ಆ ಮರಿಯನ್ನು ಕನ್ನಡದ ಅದ್ಭುತ ಪುಟಾಣಿ ಮುದ್ದು ತೀರ್ಥಹಳ್ಳಿಗೆ ಅರ್ಪಿಸಿ ಸಾಕಿ, ಚೇತರಿಸಿಕೊಂಡ ಮೇಲೆ ಕಾಡಿಗೆ ಬಿಟ್ಟಿದ್ದಾರೆ. ಇಂತಹ ಒಂದೂವರೆ ಸಾವಿರ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಪಾಪದ ಜೀವಿಗಳು ರಘುನಾಥ ಮೇಸ್ಟ್ರನ್ನ ಹುಡುಕಿಕೊಂಡು ಬರುವುದಲ್ಲ, ಅವುಗಳ ನೋವಿಗೆ ತುಡಿಯುವ ಜೀವ ಇವರಲ್ಲಿತ್ತು.

ಪ್ರಾಣಿಗಳಿಗಷ್ಟೇ ಅಲ್ಲ ಮನುಷ್ಯರ ಕಷ್ಟಗಳಿಗೂ ಮಿಡಿಯುತ್ತೆ ಈ ಮೇಸ್ಟ್ರ ಹೃದಯ. ಕ್ಯಾನ್ಸರ್, ಹೃದ್ರೋಗಿಗಳಿಗೆ ನಮ್ಮ ಮಕ್ಕಳು ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ನಾಟಿವೈದ್ಯವನ್ನು ಬಲ್ಲ ಇವರು ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ನೀಡುತ್ತಾರೆ. ಮಹಿಳೆಯರ ಬಿಳಿಸೆರಗಿಗೆ ಪರಿಣಾಮಕಾರಿ ಔಷಧಿ ನೀಡುವ ಇವರು ಈವರೆಗೆ ಸಾವಿರದ ಇನ್ನೂರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದಾರೆ. ಮಕ್ಕಳಿಗೆ ನಾಟಿವೈದ್ಯವನ್ನು ಕಲಿಸುತ್ತಾರೆ; ಗಿಡಮೂಲಿಕೆಗಳನ್ನು ಗುರುತಿಸುವುದು ಬೆಳೆಸುವುದು ಶಿಕ್ಷಣವನ್ನಾಗಿಸಿಕೊಂಡು. ಶಾಲೆಯಲ್ಲಿಯೇ ಔಷಧಾಲಯವನ್ನು ಸ್ಥಾಪಿಸಿಕೊಂಡಿದ್ದಾರೆ. ಬೆಂಗಳೂರಿನ ಸ್ನೇಹಿತರುಗಳು ಈ ಔಷಧಾಲಯಕ್ಕೆ ಉಚಿತವಾಗಿ ಔಷಧಿಗಳನ್ನು ತಂದುಕೊಡುತ್ತಾರೆ. ಸುತ್ತ ಮುತ್ತಲಿನ ಹಳ್ಳಿಯವರು ಶಾಲೆಗೆ ಬಂದು ಉಚಿತವಾಗಿ ಔಷಧಿ ಪಡೆಯುತ್ತಾರೆ. ಇತ್ತೀಚೆಗೆ ಗೆಳೆಯರೆಲ್ಲ ಸೇರಿಕೊಂಡು ನಾಲ್ಕು ಗಾಲಿಯ ಸ್ಕೂಟರ್ ಮಾಡಿಕೊಟ್ಟಿರುವುದರಿಂದ ಸುತ್ತ ಮುತ್ತಲಿನ ಊರುಗಳಿಗೆ ತಾವೇ ಹೋಗಿ ಉಚಿತವಾಗಿ ಚಿಕಿತ್ಸೆ ನೀಡಿ ಬರುತ್ತಿದ್ದಾರೆ. ತಿಂಗಳೊಂದಕ್ಕೆ ಎರಡುಸಾವಿರ ಕಿಲೋಮೀಟರ್ ಸುತ್ತುತ್ತಾರೆ, ಆದರೆ ಇದ್ಯಾವುದನ್ನೂ ರಘುನಾಥ ಮೇಸ್ಟ್ರು ಸಮಾಜಸೇವೆ ಅಂದುಕೊಳ್ಳುವುದಿಲ್ಲ; ಪ್ರಚಾರವನ್ನು ಬೇಡುವುದಿಲ್ಲ. ಹಾಗಾಗಿ ಅವರಿಗ್ಯಾವ ಪ್ರಶಸ್ತಿಗಳೂ ಬಂದಿಲ್ಲ ಬರುವುದೂ ಇಲ್ಲ.

ಸಾಹಿತಿ ಸ. ರಘುನಾಥ

ಸಾಹಿತ್ಯ ಕ್ಷೇತ್ರದಲ್ಲಿಯೂ ಈ ಒಂಟಿ ಕಾಲಿನ ಮೇಸ್ಟ್ರದ್ದು ಮಹತ್ವದ ಸ್ಥಾನ. ಕನ್ನಡ ಸಾಹಿತ್ಯಲೋಕಕ್ಕೆ 35ಕೃತಿಗಳನ್ನು ನೀಡಿದ್ದಾರೆ. ಕತೆ, ಕವನ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಜಾನಪದ ಸಂಶೋಧನೆ ಮುಂತಾದ ವಿಸ್ತಾರ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಘುನಾಥ ಮೇಸ್ಟ್ರು ಕನ್ನಡ ಮತ್ತು ತೆಲುಗು ಸಾಹಿತ್ಯ ಧಾರೆ ಸದಾ ಹರಿಯಲು ಸೇತುವಾದವರು. ಇನ್ನೂ ಹತ್ತು ಪುಸ್ತಕಗಳಿಗಾಗುವಷ್ಟು ಹಸ್ತಪ್ರತಿ ಹಿಡಿದು ಪ್ರಕಾಶಕರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.
ಒಂದು ಕಾಲಿನ ಮೇಲೆ ನಡೆಯುತ್ತಾ ಧಾವಂತದ ಸಮಾಜದ ನಡುವೆ ಆಮೆ ವೇಗದಲ್ಲಿ ಸಾಗುತ್ತಾ ಈಸಬೇಕು ಇದ್ದು ಜಯಿಸಬೇಕು ಎಂಬಂತೆ ತನ್ನ ಸುತ್ತಲಿನ ಜಗತ್ತಿನ ನೋವು ನಲಿವುಗಳಿಗೆ ತನ್ನನ್ನೇ ಅರ್ಪಿಸಿಕೊಂಡಿರುವ ರಘುನಾಥ ಮೇಸ್ಟ್ರನ್ನ ಅಕ್ಷರಗಳ ಅಂಕೆಯಲ್ಲಿ ಹಿಡಿದಿರಿಸುವುದೆಂದರೆ ಅದೊಂದು ಪಕ್ಷಿನೋಟವಾದೀತು ಅಷ್ಟೇ. ಸಣ್ಣ ಪುಟ್ಟ ಸ್ಟಂಟುಗಳನ್ನು ಮಾಡಿ ಸಮಾಜಸೇವೆ ಎಂದು ಕರೆಯಿಸಿಕೊಂಡು ಪೋಸು ನೀಡುತ್ತಾ ಇರಬರುವ ಪ್ರಶಸ್ತಿಗಳಿಗೆ ಅರ್ಜಿಹಾಕಿ ಪ್ರಶಸ್ತಿ ಪಡೆಯುವ ಕಿಡಿಗೇಡಿಗಳ ನಡುವೆ ಈ ಸರ್ಕಾರಿ ಶಾಲೆಯ ಮೇಸ್ಟ್ರು ಭಿನ್ನವಾಗಿ ಕಾಣಿಸುವುದಿಲ್ಲವೆ? ತಾನು ಮಾಡುತ್ತಿರುವುದು ಸಮಾಜಸೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಾನು ಬದುಕುವುದೇ ಹಾಗೆ ಎಂದು ನಂಬಿಕೊಂಡಿರುವವರು ಅವರು. ಹಾಗಾಗಿ ತಾನು ಮಾಡಿದ ಯಾವ ಕಾರ್ಯಕ್ಕೂ ದಾಖಲೆಗಳನ್ನು ಉಳಿಸಿಕೊಂಡಿಲ್ಲ. ಮರವೂ ಹಾಗೆ ತಾನು ಯಾರು ಯಾರಿಗೆ ಹಣ್ಣು ನೀಡಿದ್ದೇನೆ ಎಂದು ಬರೆದಿಡುವುದಿಲ್ಲ.

ಈ ಮೇಸ್ಟ್ರು ಇದೇ ವರ್ಷ(2014)ದ ಆಗಸ್ಟ್ ತಿಂಗಳಿನಲ್ಲಿ ಸರ್ಕಾರಿ ಸೇವೆಯಿಂದಷ್ಟೇ ನಿವೃತ್ತರಾಗುತ್ತಿದ್ದಾರೆ. ಈ ಕಡೆಗಾಲದಲ್ಲಿಯಾದರೂ ಸರ್ಕಾರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ತನ್ನ ಋಣವನ್ನು ತೀರಿಸಲಿ.

“ನಾನು ಕುಂಟಿದರೂ, ನನ್ನ ದಾರಿ ಕುಂಟುವುದಿಲ್ಲ” -ಸ. ರಘುನಾಥ
ಇತ್ತೀಚೆಗೆ ಬಂದ ಪ್ರಶಸ್ತಿ
ಶ್ರೀನಿವಾಸಪುರದಿಂದ ಬೆಂಗಳೂರಿಗೆ ಕೂಲಿಗೆ ಹೋಗುವ ಹೆಂಗಸೊಬ್ಬರು ಸೆರಗಿನಲ್ಲಿ ಒಂದೇ ಒಂದು ದಾಳಿಂಬೆ ಹಣ್ಣನ್ನು ತಂದು ಕೊಡುತ್ತಾರೆ. ನಿನ್ನ ಮಕ್ಕಳಿಗೆ ಕೊಡಮ್ಮ ಎಂದರೆ, “ಕಲಾಸಿಪಾಳ್ಯಕ್ಕೆ ಆಟೋದಲ್ಲಿ ಹೋಗಿ ಇದನ್ನ ನಿಮಗಂತ ತಂದಿದ್ದೇನೆ ಸರ್, ನೀವು ನನ್ನನ್ನು ಬದುಕಿಸಿದ್ದೀರಿ ನೀವು ತಿನ್ನಲೇಬೇಕು” ಎಂದು ಮೇಸ್ಟ್ರು ಹಣ್ಣು ತಿನ್ನುವುದನ್ನು ನೋಡಿ ಸಂತಸಪಟ್ಟು ಆ ಮಹಿಳೆ ಮರಳಿದರಂತೆ. ಅದಕ್ಕೆ ಸ. ರಘುನಾಥ ಮೇಸ್ಟ್ರು ಕೇಳುತ್ತಾರೆ “ಜಗತ್ತಿನ ಯಾವ ಮೇಸ್ಟ್ರಿಗೆ ಸಿಕ್ಕಿದೆ ಇಂತಹ ಪ್ರಶಸ್ತಿ ಗುರುವೆ? ಈ ನಾಡಿನ ನೂರಾರು ಜನರ ಋಣಭಾರವನ್ನು ಹೊತ್ತಿರುವ ನಾನೇ ಧನ್ಯ” ಎನ್ನುತ್ತಾರೆ ಅಭಿಮಾನದಿಂದ.
(ನಮ್ಮ ಮಕ್ಕಳಿಗೆ ಸಹಾಯ ಮಾಡಬಯಸುವವರಿಗಾಗಿ ಸ. ರಘುನಾಥ ಅವರ ದೂರವಾಣಿ ಸಂಖ್ಯೆ :9980593921)



ವಿದ್ಯಾರ್ಥಿಗಳ ಕಣ್ಣಲ್ಲಿ ರಘುನಾಥ ಮೇಸ್ಟ್ರು

ರಜಾಕ್ ಸಾಬ್

ರಜಾಕ್ ಸಾಬ್: ನಾವು ಆಂಧ್ರದಿಂದ ಬಂದು ಟೆಂಟುಗಳನ್ನ ಹಾಕ್ಕೊಂಡು ಗೌನಿಪಲ್ಲಿಯಲ್ಲಿ ವಾಸ ಇದ್ದಿದ್ವು. ನಮಗೆ ಮನೆ ಇರಲಿಲ್ಲ. ರಘುನಾಥ ಸರ್ ನಮ್ಮ ಟೆಂಟಿನ ಹತ್ತಿರ ಬಂದು ನಮಗೆ ಊಟ, ಬಟ್ಟೆ ಕೊಟ್ಟು ಶಾಲೆಗೆ ಸೇರಿಸಿಕೊಂಡ್ರು. ನಾವು ತುಂಬಾ ಬಡವರು ನಮಗೆ ಸೋಪು, ಬಟ್ಟೆ, ಪೇಸ್ಟಿಂದ ಹಿಡಿದು ಶಾಲೆಗೆ ಹೋಗೊದಕ್ಕೆ ಬೇಕಾದ ಎಲ್ಲವನ್ನೂ ಸರ್ ಕೊಡಿಸ್ತಿದ್ರು. ನಾನು ಹೈಸ್ಕೂಲಿನವರೆಗೆ ಓದಿದ್ದೆ. ನಮ್ಮ ಮಕ್ಕಳೂಗೆ ನಾನೇ ಮೊದಲನೆಯವನು. ನನಗೀಗ ಮದುವೆಯಾಗಿದೆ ಮಗುವಿದೆ. ನಾನೀಗ ಇಡೀ ಶ್ರೀನಿವಾಸಪರ ತಾಲೂಕಿಗೆ ಹೋಲ್‍ಸೇಲ್ ತೆಂಗಿನಕಾಯಿ ವ್ಯಾಪಾರಿ. ಆಗಾಗ ಹೋಗಿ ಸರ್ ಅವರನ್ನ ಮಾತಾಡಿಸಿಕೊಂಡು ಬರ್ತಾ ಇರ್ತೇನೆ. ಅಲೆಮಾರಿಯಾಗಿದ್ದ ನನ್ನ ಬದುಕನ್ನ ಬದಲಿಸಿದವರು ರಘುನಾಥ ಸರ್.

ನಂದಿನಿ


ನಂದಿನಿ: ನನ್ನ ಹೆಸರು ನಂದಿನಿ. ದ್ವಿತೀಯ ಬಿಎಸ್ಸಿ ಓದುತ್ತಾ ಇದ್ದೀನಿ. ನಾನೂ ನಮ್ಮ ಮಕ್ಕಳು ಬಳಗದಲ್ಲಿದ್ದೀನಿ. ನಾನಿಂದು ಬದುಕಿದ್ದೀನಿ ಅಂದ್ರೆ ಅದಕ್ಕೆ ರಘುನಾಥ ಸರ್ ಕಾರಣ. ನಾನು ಚಿಕ್ಕಂದಿನಲ್ಲೇ ಹೃದಯದ ಸಮಸ್ಯೆಯಿಂದ ಬಳಲುತ್ತಾ ಇದ್ದೆ. ನಮ್ಮಪ್ಪ ಬಡವರು, ಅವರಿಂದ ನನಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ನಾನೊಮ್ಮೆ ನೋವಿಂದ ತರಗತಿಯಲ್ಲಿ ಬಿದ್ದೋಗಿದ್ದೆ. ಆಗ ರಘುನಾಥ ಸರ್ಗೆ ನನ್ನ ಸಮಸ್ಯೆ ಗೊತ್ತಾಗಿ ನನಗೆ ಆಪರೇಷನ್ ಮಾಡಿಸಿದ್ರು. ನಮ್ಮಿಂದ ಒಂದ್ರೂಪಾಯಿ ಕೂಡ ತಗೊಂಡಿಲ್ಲ. ನನ್ನನ್ನ ಈಗಲೂ ಓದಿಸುತ್ತಾ ಇದ್ದಾರೆ. ನನಗೆ ಒಬ್ಬಳಿಗಲ್ಲ ನನ್ನಂತ ನೂರಾರು ಮಕ್ಕಳಿಗೆ ಅವರು ಓದುವುದಕ್ಕೆ ಬೇಕಾದ ಎಲ್ಲಾ ಸಹಾಯ ಮಾಡುತ್ತಾರೆ. ಈ ವರ್ಷ ಸರ್ ನಿವೃತ್ತಿಯಾಗುತ್ತಾರೆ ಎಂಬುದೇ ಬಹಳ ದುಃಳದ ಸಂಗತಿ. ನಮ್ಮಂತಹ ಮಕ್ಕಳಿಗೆ ಬಟ್ಟೆ ಪುಸ್ತಕ ಫೀಸ್ ಎಲ್ಲಾ ಕೊಟ್ಟು ಓದಿಸ್ತಾ ಇರ್ತಾರೆ. ನಮಗೆ ಹಣವನ್ನ ಜಾಗ್ರತೆಯಿಂದ ಖರ್ಚು ಮಾಡುವುದನ್ನ ಹೇಳಿಕೊಡ್ತಾರೆ. ಟೈಲರಿಂಗ್ ಕಲಿಸ್ತಾರೆ. ಬೇರೆ ಮೇಸ್ಟ್ರುಗಳು ಅವರ ಬದುಕನ್ನಷ್ಟೇ ನೋಡಿಕೊಳ್ತಾರೆ ಆದರೆ ರಘುನಾಥ ಸರ್ ಮಕ್ಕಳಿಗೋಸ್ಕರ ಬದುಕ್ತಾರೆ.

ಮಣಿಕಂಠ


ಮಣಿಕಂಠ : ನಾನು ಒಂಬತ್ತನೇ ತರಗತಿ ಓದುತ್ತಾ ಇದ್ದೀನಿ. ನಾನು ಐದನೇ ತರಗತಿಗೆ ಬಂದಾಗ ರಘುನಾಥ ಸರ್ ಅವರನನು ನೋಡಿ ತುಂಬಾ ಹೆದ್ರಿಕೋತಾ ಇದ್ದೆ. ಚನ್ನಾಗಿ ಓದದವರಿಗೆ ಅವರು ಹೊಡಿತಾರೆ ಅಂತ ಕೇಳಿದ್ದೆ. ಆಮೇಲೆ ಸರ್ ಅವರೇ ಕರೆದು ಯಾಕೆ ಹೆದ್ರಿಕೋತಾ ಇದ್ದೀಯಾ ನಾನೇನೂ ಮಾಡಲ್ಲ ಅಂದ್ರು. ನಮ್ಮ ಮನೆಯಲ್ಲಿ ತುಂಬಾ ಕಷ್ಟ. ಅಪ್ಪ ಅಮ್ಮ ಶಾಲೆಗೆ ಬಂದು ನನ್ನೂ ನನ್ನ ತಮ್ಮನ್ನೂ ಶಾಲೆ ಬಿಡಿಸುವುದಾಗಿ ಹೇಳಿದ್ರು. ಅದಕ್ಕೆ ರಘುನಾತ ಸರ್ ನೀವೇನೂ ಚಿಂತೆ ಮಾಡಬೇಡಿ ನಾನು ಓದಿಸ್ತೀನಿ ಮಕ್ಕಳನ್ನ ಅಂದ್ರು, ನಾವಿಬ್ರು ಅಲ್ದೆ ನಮ್ಮೂರಲ್ಲಿ ಹದಿನೈದು ಮಕ್ಕಳನ್ನ ಸರ್ ಓದಿಸ್ತಾ ಇದ್ದಾರೆ. ಶಾಲೆಯಲ್ಲಿ ನಾವು ಕೈತೋಟ ಮಾಡಿದ್ದೀವಿ. ಅಲೊವೇರಾದಿಂದ ಶಾಂಪು ತಯಾರಿಸ್ತೀವಿ. ಮೊಲ ಮತ್ತೆ ಜಿಂಕೆಮರಿಗಳನ್ನ ಸಾಕಿದ್ದೀವಿ. ಅವು ದೊಡ್ಡವಾದ ಮೇಲೆ ಕಾಡಿಗೆ ಬಿಟ್ಟುಬಂದಿದೀವಿ.

-ಸಂತೋಷ ಗುಡ್ಡಿಯಂಗಡಿ

2 comments:

  1. ನಮ್ಮ ಮೇಸ್ಟ್ರು ಕಾಲು ಕಳೆದುಕೊಂಡಿದ್ದು ಹೇಗೆ ಎಂಬುದನ್ವು ತಿಳಿಸಿಕೊಟ್ಟ ಬರಹಗಾರರಿಗೆ ಸಲಾಮು.
    ಅಡ್ಡಗಲ್ ಸರ್ಕಾರಿಶಾಲೆಯಲ್ಲಿ ಇವರ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ನನಗೆತುಂಬ ಕುತೂಹಲದಿಂದ ಅವರನ್ನೇ ಕೇಳಿದ್ದುಂಟು.ಆಗವರಿಂದ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ..
    ಅದಾದ ಮೇಲೆ ಹೈಸ್ಕೂಲ್ ವಿದ್ಯಾಭ್ಯಾಸದ ಸಲುವಾಗಿ ಚಿಂತಾಮಣಿ ತಾಲ್ಲೂಕಿಗೆ ನಮ್ಮ ಕುಟುಂಬ ವೇ ವರ್ಗವಾಗಿತ್ತು..
    ಇತ್ತೀಚೆಗೆ ಅವರನ್ನ ಬೇಟಿಯಾಗಿದ್ದೆ..ಅವರ ಒಂಟಿಕಾಲಿನ ಸಾದನೆಗಳು, ನಮ್ಮಂತವರನ್ನು ನಾಚಿಸುವಂತಿವೆ.. ಸಮಾಜಕ್ಕೆ ನಮ್ಮದೇನು ಉಡುಗೊರೆ?

    ReplyDelete
  2. I am Mallikarjuna v. From chintamani.. I was the student of him while 1978 ,at addagal

    ReplyDelete