Tuesday, March 31, 2015

ನಗಿಸುವ ಹನುಮಪ್ಪನ ಹೊಸ ರಂಗಸಾಧ್ಯತೆ

ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕ ವಿಮರ್ಶೆ


ನಮ್ಮ ಜನಪದರು ತಿರುಪತಿ ತಿಮ್ಮಪ್ಪನಿಗಿಂತ ಊರ ಮುಂದಿನ ಮಾರಮ್ಮನಿಗೆ, ಹನುಮಪ್ಪನಿಗೆ ಹೆದರುವುದೇ ಹೆಚ್ಚು. ಶ್ರೀಮಂತ ದೇವರು ಜನಪದರಿಗೆ ಸಿಗುವುದು ಬಹಳ ಅಪರೂಪ; ಮಂತ್ರಿ ಮಹೋದಯರ ತರ, ಸರ್ಕಾರದ ಸವಲತ್ತುಗಳ ತರ. ಅದೇ ಊರ ಮುಂದಿನ ಮಾರಮ್ಮನೋ ಹನುಮಪ್ಪನೋ ಅವರಿಗೆ ಯಾವಾಗಲೂ ಸಿಗುತ್ತಾರೆ. ಅವರ ಕಷ್ಟ ಸುಖಗಳನ್ನು ಕೇಳಿ ನೆಮ್ಮದಿಯನ್ನು ನೀಡುತ್ತಾರೆ. ಅವರೆಲ್ಲ ಜನಪದರಿಗೆ ಬಹಳ ಆಪ್ತವಾಗಲು ಕಾರಣ ಈ ದೇವರುಗಳು ಅವರ ಜೊತೆ ಜೊತೆಗೆ ಬದುಕುತ್ತಾರೆ. ಊರವರು ಸೇರಿ ಗುಡಿ ಕಟ್ಟಿಸಿದರೆ ಮಳೆ ಬಿಸಿಲಿಂದ ತಪ್ಪಿಸಿಕೊಂಡು ವರ್ಷಕ್ಕೊಮ್ಮೆ ಜಾತ್ರೆನೋ ಹಬ್ಬವೋ ಮಾಡಿಕೊಂಡು ಆರಾಮ ಬದುಕುತ್ತಾರೆ. ಗುಡಿ ಕಟ್ಟಿಸಿಕೊಟ್ಟಿಲ್ಲವೆಂದರೆ ಅಳ್ಳಿಮರದ ನೆರಳಿನಲ್ಲಿ ನೆಮ್ಮದಿಯಾಗಿ ಬದುಕುತ್ತಾ ಭಕ್ತರಿಗೆ ಒಳ್ಳೆಯದನ್ನು ಮಾಡುತ್ತಾ ಊರ ಕಾಪಾಡಿಕೊಂಡು ದೇವರಾಗಿ ಇರುತ್ತಾರೆ. ಯಾವಾಗದರೊಮ್ಮೆ ಭಯಂಕರ ಕೋಪ ಮಾಡಿಕೊಂಡು ಊರಂತ ಊರಿಗೇ ಸಾಂಕ್ರಾಮಿಕ ರೋಗಗಳನ್ನು ತಂದಿಕ್ಕಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಜನಪದರು ದೇವರನ್ನು ಊರ ಮುಂದೆ ತಂದಿರಿಸಿಕೊಂಡು ದೇವರನ್ನೂ ಕಾಪಾಡುತ್ತಾ ತಾವು ಬದುಕುತ್ತಾ ಬಂದಿದ್ದಾರೆ. ನಮ್ಮ ಜನಪದರು ತಮ್ಮ ಗ್ರಾಮ್ಯ ನುಡಿಗಳಲ್ಲಿಯೆ ತಮ್ಮ ಪ್ರೀತಿಯ ದೇವರನ್ನು ಬಯ್ಯುತ್ತಾರೆ ಹೊಗಳುತ್ತಾರೆ ತೆಗಳುತ್ತಾರೆ. ಅಷ್ಟು ನಂಬಿಕೆ ದೇವರಿಗೆ ಮತ್ತು ಭಕ್ತರಿಗೆ.

ಜನಪದವೇ ಹಾಗೆ ಅಲ್ಲಿ ಶೀಲ-ಅಶ್ಲೀಲದ ಮುಚ್ಚುಮರೆ ಇಲ್ಲ. ಒಡನಾಟ ನಂಬಿಕೆ, ಶ್ರದ್ಧೆ, ನಿಷ್ಠೆ, ನಿಷ್ಠುರತೆ, ರೂಢಿ, ಸರಳತೆ ಮುಂತಾದವೆ ಮುಖ್ಯ.
ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭೂತಗಳ ಪಾರಮ್ಯವಾದರೆ, ದಕ್ಷಿಣ ಕರುನಾಡಿನಲ್ಲಿ ಮಾರಮ್ಮನ ಪ್ರಭಾವ ಹೆಚ್ಚು. ಇನ್ನು ಉತ್ತರ ಕರ್ನಾಟಕದಲ್ಲಿ ಹನುಮಪ್ಪ ಅತ್ಯಂತ ಪಾಪ್ಯುಲರ್ ದೇವರು. ಊರ ಮುಂದಿನ ಅರಳೀಕಟ್ಟೆಯಲ್ಲಿಯೋ ಬೇವಿನಗಿಡದ ಬುಡದಲ್ಲಿಯೋ ಅವ ಇರಲೇಬೇಕು ಅಷ್ಟು ಜನಜನಿತ ಹನುಮಪ್ಪ. ಈ ಹನುಮನನ್ನು ಬಿಟ್ಟರೆ ಕನ್ನಡನಾಡಿನ ಬಹುತೇಕ ಊರದೇವರುಗಳು ಮಾಂಸಾಹಾರ ಪ್ರಿಯರು. ಅದಕ್ಕಾಗಿಯೆ ಇರಬೇಕು ಜನಪದರಿಗೆ ಸ್ಪಷ್ಟ ಆಕಾರವಿಲ್ಲದ, ರೂಪವಿಲ್ಲದ, ಆಭರಣಗಳನ್ನು ಇಷ್ಟಪಡದ, ಗುಡಿಯನ್ನೂ ಹೊಂದರಿದ, ಚಳಿ ಮಳೆ ಬಿಸಿಲು ಬೆಂಕಿಗೆ ಚೂರು ಭಯಪಡದ, ಹೆಚ್ಚೆಂದರೆ ವಾಂತಿಬೇಧಿಯನ್ನೋ, ಕಜ್ಜಿಯನ್ನೋ ಉಂಟುಮಾಡಿ ಸೇಡು ತೀರಿಸಿಕೊಳ್ಳುವ ಊರಿನ ಸಂಕಷ್ಟಗಳನ್ನೇ ಮೈವೆತ್ತಿ ನಿಂತಂತಹ ದೇವರುಗಳು ಇಷ್ಟವಾಗಿರುವುದು. ಅವರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವುದು.

ಇಂಥದ್ದೊಂದು ದೇವರು ಮತ್ತು ಭಕ್ತರ ನಡುವಿನ ಅವಿನಾಭಾವ ಸಂಬಂಧದ ಕಥೆ-ವ್ಯಥೆಯನ್ನು ಆಧರಿಸಿದ ಯುವ ನಾಟಕಕಾರ ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ಎಂಬ ವಾಸ್ತವದ ವಿಡಂಬನೆಯ ನಗೆನಾಟಕವನ್ನು ಧಾರವಾಡದ ‘ಆಟಮಾಟ’ ತಂಡ ಈ ವರ್ಷದ ತನ್ನ “ಅಡ್ಡ್ಯಾಟ”ದ ಮೂಲಕ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಉತ್ತರಕರ್ನಾಟಕದ ಜವಾರಿ ಭಾಷೆಯ ಮೂಲಕ ನಾಡಿನ ಜನರನ್ನು ನಗಿಸುತ್ತಾ ಸಾಗಿರುವ ಈ ನಾಟಕ ಒಂದು ಅಪ್ಪಟ ಜನಪದ ನಾಟಕ ಎಂಬುದರಲ್ಲಿ ಎರಡು ಮಾತಿಲ್ಲ.



ವಜ್ರಮಟ್ಟಿ ಮತ್ತು ಧರಗಟ್ಟಿ ಎಂಬುದು ಉತ್ತರಕರ್ನಾಟಕದ ಎಲ್ಲಾ ಸಮಸ್ಯೆಗಳನ್ನು ಹೊತ್ತುಕೊಂಡು ಬದುಕು ಸಾಗಿಸುತ್ತಿರುವ ಸೋದರ ಹಳ್ಳಿಗಳು. ಈ ಎರಡೂರ ಸೀಮೆ ದೇವರು ಹನುಮಪ್ಪ. ಈ ಹನುಮಪ್ಪನೇ ಈ ನಾಟಕದ ಮುಖ್ಯ ಪಾತ್ರ. ಅವನ ಸುತ್ತಲೇ ನಡೆಯುವ ನಾಟಕ ದೇವರನ್ನಿಟ್ಟುಕೊಂಡು ದಂಧೆ ಮಾಡುವವರ, ವಾರ್ತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವವರ, ಪೀಕಲಾಟದ ಪೊಲೀಸುತನದ, ವಶೀಲಿ ವಕೀಲಿತನದ, ಭ್ರಷ್ಟ ರಾಜಕಾರಣಿಗಳ ಮುಖವಾಡಗಳನ್ನು ಪ್ರೇಕ್ಷಕನ ಮುಂದೆ ಬೆತ್ತಲಾಗಿಸುತ್ತದೆ.

ಧರಗಟ್ಟಿ ದೈವಭಕ್ತರು ಹನುಮಪ್ಪನನ್ನು ಕಳ್ಳತನ ಮಾಡುವ ವಿವಾದದೊಂದಿಗೆ ಆರಂಭವಾಗುವ ನಾಟಕ ಆ ದೇವರಿಗಾಗಿ ಎರಡೂರ ದೈವಭಕ್ತರ ಹೊಲಮನೆಗಳನ್ನು ಕಾಲಿಯಾಗಿಸಿ  ಕಡೆಗೆ ದೇವರೇ ಬೇಡವೆನ್ನಿಸುವ ವಿಷಾದದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಟರ ಅಭಿನಯದ ತಾಕತ್ತನೇ ಬಲವಾಗಿ ಅದರಲ್ಲೂ ವಾಚಿಕಾಭಿನಯಕ್ಕೆ ಹೆಚ್ಚು ಒತ್ತು ನೀಡುವ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಕನ್ನಡ ರಂಗಭೂಮಿಯನ್ನು ಕ್ರಿಯಾಶೀಲವಾಗಿಡುವುದಕ್ಕೆ ಪುಟ್ಟ ಪುಟ್ಟ ತಂಡಗಳು ಹೇಗೆ ಮಾದರಿಯಾಗಬಹುದು ಎಂಬ ಸಾಧ್ಯತೆಯನ್ನು ತೆರೆದಿಡುತ್ತದೆ.

ಹನುಮಪ್ಪನನ್ನೇ ಕಳ್ಳತನ ಮಾಡಿರುವಂತ ವಿಚಾರ, ತನ್ನ ವಿಚಾರಧಾರೆಗಳಿಂದ ಊರೊಳಗೆ ಹುಚ್ಚ ಎನ್ನಿಸಿಕೊಂಡಂತ ಹುಚ್ಚಮಲ್ಲನಿಗೆ ತಿಳಿದು ‘ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?’ ಎಂದು ತನ್ನ ನಿಷ್ಠುರ ಪ್ರಶ್ನೆಯನ್ನು ಪ್ರೇಕ್ಷಕನ ಮುಂದೆ ಎಸೆಯುತ್ತಾನೆ. ಸಮಾಜದಲ್ಲಿನ ನಂಬಿಕೆಗಳನ್ನೇ ಬುಡಮೇಲು ಮಾಡಬಲ್ಲಂತ ಪ್ರಶ್ನೆಗಳನ್ನು ಎತ್ತಬಲ್ಲಂತ ‘ಹುಚ್ಚಮಲ್ಲ’ರಿಗೆ ನಮ್ಮ ಸಮಾಜ ಬುದ್ದಿಜೀವಿ ಎನ್ನುತ್ತಲೇ ಹಿಂದೆಯೇ ಹುಚ್ಚ ಅನ್ನುತ್ತದೆ. ಹುಚ್ಚಮಲ್ಲರಂತವರು ಎತ್ತುವಂತ ಪ್ರಶ್ನೆಗಳಿಗೆ ನಮ್ಮ ಸಮಾಜ ಉತ್ತರಿಸುವುದಿಲ್ಲ. ಒಂದುವೇಳೆ ಉತ್ತರಿಸಿದರೆ ದೇವರ ಅಸ್ಥಿತ್ವವೇ ಅಲುಗಾಡುತ್ತದೆ.

ವಜ್ರಮಟ್ಟಿಯಿಂದ ತುಡುಗು ಮಾಡಿಕೊಂಡು ಬಂದ ಹನುಮಪ್ಪನನ್ನು ಧರಗಟ್ಟಿಯ ಜನ ಭಕ್ತಿಯಿಂದ ಸೇವೆ ಮಾಡುತ್ತಾರೆ. ವಜ್ರಮಟ್ಟಿಯ ಪೂಜಾರಿಗೆ ಇದರಿಂದ ಕೆಲಸವಿಲ್ಲದಂತಾಗಿ ಆತ ಊರ ಜನರನ್ನು ದೇವರ ಹೆಸರಲ್ಲಿ ಬಡಿದೆಬ್ಬಿಸುತ್ತಾನೆ. ಊರ ನಡುವೆ ಹೊಡೆದಾಟವಾದರೂ ಸರಿ ಪೂಜಾರಿಗೆ ದೇವರು ಬೇಕು. ಊರ ಹಿರಿಯರ ಮದ್ಯಸ್ಥಿಕೆ ಕೆಲಸ ಮಾಡದೆ ಹಿರಿಯರು ತಟಸ್ಥರಾಗುತ್ತಾರೆ. ದೇವರ ವಿಚಾರವನ್ನು ಪುಂಡು ಹುಡುಗರು ಕೈಗೆ ತೆಗೆದುಕೊಂಡು ಹನುಮಪ್ಪನನ್ನ ಪೋಲಿಸರು ಎತ್ತಿಕೊಂಡು ಬಂದು ಠಾಣೆಯಲ್ಲಿಡುತ್ತಾರೆ. ಠಾಣೆಗೇ ಬರುವ ಭಕ್ತಕೋಟಿ ಠಾಣೆಯನ್ನೇ ದೇವಾಲಯ ಮಾಡಿಕೊಂಡು ಪೋಲಿಸರನ್ನು ಪೇಚಿಗೆ ಸಿಲುಕಿಸುವ ದೃಶ್ಯವಂತೂ ಪ್ರೇಕ್ಷಕನನ್ನು ನಕ್ಕೂ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. ಪೇದೆಯ ಗಿಲೀಟು ಇನ್ಸ್‍ಪೆಕ್ಟರ್ ಪರದಾಟ ನಗು ಹುಟ್ಟಿಸಿದರೆ ಠಾಣೆಯಲ್ಲಿಯೂ ಮಡಿ ಮಯ್ಲಿಗೆಯನ್ನು ಕಾಪಾಡಿಕೊಳ್ಳುವ ಪೂಜಾರಿಯ ಗೂಂಡಾಗಿರಿಗೆ ಪೋಲಿಸುತನವೇ ಮಂಕಾಗಿಬಿಡುವುದು ವಿಪರ್ಯಾಸ. ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರಿಂದ ಠಾಣೆಯೊಳಗೆ ಪ್ರಾಮಾಣಿಕನೂ ಕರ್ತವ್ಯನಿಷ್ಠನೂ ಖಡಕ್ ಮತ್ತು ಠಾಣೆಯಾಚೆಗೆ ಲಂಚ ಸ್ವೀಕರಿಸುವ ಮಹಾ ಲಂಪಟ ಪೇದೆಯಾಗಿ, ನಮ್ಮ ರಾಜಕೀಯ ಮತ್ತು ರಾಜಕಾರಣಿಗಳ ಅತ್ಯಂತ ಸಶಕ್ತ ವ್ಯಂಗ್ಯಚಿತ್ರದಂತೆ ಈ ನಾಟಕದಲ್ಲಿ ಬರುವ ಎಂ.ಎಲ್.ಎ., ಪಾತ್ರವನ್ನು ಮಾಡಿ ಪ್ರೇಕ್ಷಕರ ಕಣ್ಮಣಿಯಾಗಿದ್ದು ಮಹಾದೇವ ಹಡಪದ. ಬುದ್ದಿವಂತ ಸಮಾಜದ ಪ್ರತಿನಿಧಿಯಂತ ಹುಚ್ಚಮಲ್ಲ, ಪೋಲಿಸು ಅಧಿಕಾರಿಯ ಪಾತ್ರ ಮಾಡಿ ತನ್ನ ಅಭಿನಯ ಸಾಮಥ್ರ್ಯದ ವಿಭಿನ್ನ ಸಾಧ್ಯತೆಗಳನ್ನು ತೆರೆದಿಟ್ಟದ್ದು ಯತೀಶ ಕೊಳ್ಳೆಗಾಲ.
ಹೇಳಿ ಕೇಳಿ ಎರಡು ಊರ ನಡುವಿನ ಕಥಾಹಂದರ, ದೇವರು ಎಂಬ ಸೂಕ್ಷ್ಮ ವಿಚಾರ ಪ್ರಧಾನ ನಾಟಕ. ತಂಡದಲ್ಲಿರುವುದು ಎಂಟೇ ಮಂದಿ ಕಲಾವಿದರು. ತರಬೇತಾದ ನಟ ನಟಿಯರ ಪುಟ್ಟ ತಂಡವೊಂದು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಾ ಪ್ರೇಕ್ಷಕನನ್ನು ಮುಟ್ಟುವುದು ಆಟಮಾಟ ತಂಡಕ್ಕೆ ಸಾಧ್ಯವಾಗಿದೆ. ರಂಗಸಜ್ಜಿಕೆ ಎಂದರೆ ಸರಳವಾದ ಚಿತ್ರಪಟ ಅಷ್ಟೆ. ಇಡೀ ನಾಟಕದಲ್ಲಿ ಪ್ರಧಾನವಾಗಿರುವುದು ನಟ ಮತ್ತು ಅಭಿನಯ. ಧನಂಜಯ ರಂಗಸಮುದ್ರ, ಮಾರಪ್ಪ ಬಿ. ಆರ್. ಬೆಜ್ಜಿಹಳ್ಳಿ, ಉಮೇಶ ಪಾಟೀಲ, ಗೀತಾ ವಿ. ಮೋಹಿತೆ, ಅನಿಲ ರೇವೂರ ಮತ್ತು ಶಶಿಕಲ ಪುರುಟಿ ಈ ಕಲಾವಿದರು ಉತ್ತರ ಕರ್ನಾಟಕದ ಭಾಷೆಯಲ್ಲಿನ ನಾಟಕವನ್ನು ನಾಡಿನ ತುಂಬಾ ಮುಟ್ಟಿಸಿ ನಗಿಸುತ್ತಿರುವುದು ಅವರ ಅಭಿನಯದ ಹೆಚ್ಚುಗಾರಿಕೆಯೆ ಸರಿ. ಇತ್ತೀಚಿನ ದಿನಗಳಲ್ಲಿ  ತನ್ನ ಅಭಿನಯ ಸಾಮಥ್ರ್ಯದಿಂದಲೇ ಕನ್ನಡನಾಡಿನ ಜನರನ್ನು ನಕ್ಕು ನಲಿಸುತ್ತಿರುವ ಅಪರೂಪದ ನಾಟಕ “ಊರು ಸುಟ್ಟರೂ ಹನುಮಪ್ಪ ಹೊರಗ”.



ಈ ನಾಟಕದೊಳಗೊಂದು ದೃಶ್ಯ ಬರುತ್ತದೆ. ದೇವರಾದ ಹನುಮಪ್ಪನನ್ನ ಜೈಲಿನಲ್ಲಿ ಇಡಲಾಗಿದೆ. ಇದನ್ನು ಸುದ್ಧಿ ಮಾಡಲು ಬರುವ ವಾಹಿನಿಯೊಂದರ ವರದಿಗಾರ್ತಿ ಎರಡೂರ ನಡುವಿನ ದೇವರ ಜಗಳವನ್ನ ಬಂಡವಾಳ ಮಾಡಿಕೊಂಡು ಘಟನೆಯನ್ನು ತಿರುಚಲು ಯತ್ನಿಸುವುದಂತೂ ನಮ್ಮ ಸುದ್ದಿವಾಹಿನಿಗಳ ತಿಳುವಳಿಕೆ ಹೀನ, ವ್ಯಾಪಾರಿ ಮನೋಭಾವವನ್ನು ಪ್ರಕಟಪಡಿಸುತ್ತದೆ. ಆ ವರದಿಗಾರ್ತಿ ವಜ್ರಮಟ್ಟಿ ಧರಗಟ್ಟಿ ಊರ ಹನುಮಪ್ಪನನ್ನು ಪುರಾಣದ ಹನುಮನೊಂದಿಗೆ ತಾಳೆ ಹಾಕಿ ಸಮಾಜದಲ್ಲಿ ಕೋಲಾಹಲವೆಬ್ಬಿಸುವಂತೆ ಮಾಡುವ ಸುದ್ಧಿದಾಹಿಗಳ ಬಂಡವಾಳ ನಗೆಯುಕ್ಕಿಸುವ ಬದಲು ದಿಗಿಲು ಹುಟ್ಟಿಸುತ್ತದೆ. ಇದನ್ನೂ ಕಂಡು ಪ್ರೇಕ್ಷಕ ನಗುವಂತೆ ಮಾಡುತ್ತದೆ ನಾಟಕ.

ಉತ್ತರಕರ್ನಾಟಕದ ಎರಡು ಪುಟ್ಟ ಹಳ್ಳಿಗಳ ನಡುವಿನ ಜಗಳದ ಎಳೆಯನ್ನ ಹಿಡಿದು ನಮ್ಮ ಸಮಾಜದ ಕೈಗನ್ನಡಿಯಂತಹ ಊರು ಸುಟ್ಟರೂ ಹನುಮಪ್ಪ ಹೊರಗ ನಗೆ ನಾಟಕವನ್ನು ಕಟ್ಟಿದ ಹನುಮಂತ ಹಾಲಿಗೇರಿಯವರ ಆಶಯವನ್ನು ಆಟಮಾಟ ತಂಡ ಯತೀಶ ಕೊಳ್ಳೆಗಾಲ ಅವರ ನಿರ್ದೇಶನದಲ್ಲಿ ಕರುನಾಡಿನ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಎರಡು ಊರುಗಳು ದೇವರಿಗಾಗಿ ನ್ಯಾಯಾಲಯದಲ್ಲಿ ಮಾಡುವ ಹೋರಾಟ ಮತ್ತು ಈ ಹಳ್ಳಿಗರ ಮುಗ್ಧತೆಯನ್ನು ಹಣ ಪೀಕಿಸುವ ಕಾಯಕವನ್ನು ಮಾಡಿಕೊಂಡ ವಕೀಲರ ದುಷ್ಟತನವನ್ನು ನಿರೂಪಣೆಯಂತೆ ಆತುರದಲ್ಲಿ ಮುಗಿಸುತ್ತದೆ ನಾಟಕ. ವರ್ಷಾನುಗಟ್ಟಲೆ ಹಿಡಿಯುವ ನ್ಯಾಯ ವ್ಯವಸ್ಥೆ ಮತ್ತು ವಕೀಲರುಗಳ ಹಣದಾಹಕ್ಕೆ ಎಲ್ಲವನ್ನೂ ಕಳಕೊಂಡ ಎರಡೂರ ಜನ ದೇವರೇ ಬೇಡ ಎಂದು ಬಸವಣ್ಣನ ‘ಕಾಯಕವೇ ಕೈಲಾಸ’ ಎಂಬ ತತ್ವವ ನಂಬಿ ಊರುಬಿಟ್ಟು ಗುಳೆ ಹೋಗುವುದು ನಾಟಕದ ವಿಷಾದ. ಈ ದೃಶ್ಯಕ್ಕೆ ಇನ್ನಷ್ಟು ಮಹತ್ವ ನೀಡಿದ್ದರೆ ನಕ್ಕು ಹಣ್ಣಾದ ಪ್ರೇಕ್ಷಕನಿಗೆ ನಗೆಯಾಚೆಗಿನ ಚಿಂತನೆಗೆ ಒತ್ತುಕೊಟ್ಟಂತಾಗುತ್ತಿತ್ತು. ಬರಿಯ ನಗಿಸುವುದಷ್ಟೇ ಸಮಾಜಿಕ ಕಳಕಳಿ ಹೊಂದಿದ ರಂಗತಂಡದ ಧ್ಯೇಯವಾಗದೆ ಪ್ರೇಕ್ಷಕನಿಗೆ ತಾನು ಯಾಕೆ ನಕ್ಕಿದ್ದೇನೆ ಎಂಬ ವಿಚಾರಮಂಥನಕ್ಕೂ ಕಾರಣವಾಗಬೇಕು. ಆ ದೃಷ್ಠಿಯಲ್ಲಿ ತಂಡ ಕಡೆಯ ದೃಶ್ಯದ ವಿಷಾದವನ್ನು ಸ್ಪಷ್ಟವಾಗಿ ಪ್ರೇಕ್ಷಕನ ಮುಂದಿಡಲು ಯತ್ನಿಸಬೇಕು.

ಬಡತನ ಬರಗಾಲದ ನಡುವೆಯೂ ನಮ್ಮ ಜನಪದರಿಗೆ ದೇವರು ತಮ್ಮ ಕೇಡನ್ನು ಕ್ಷಣಹೊತ್ತು ಮರೆಯಲು ಆಸರೆ. ತಮ್ಮ ಊರ ಹನುಮಪ್ಪನ ಮೇಲಿನ ಹಕ್ಕಿಗಾಗಿ ಹೋರಾಡಿ ಮತ್ತಷ್ಟು ಬಡತನಕ್ಕೀಡಾದ ವಜ್ರಮಟ್ಟಿ ಮತ್ತು ಧರಗಟ್ಟಿಯ ಜನಪದರಿಗೆ ಆ ಹನುಮನೇ ತಮ್ಮ ಇಂದಿನ ಕೇಡಿಗೂ ಕಾರಣವಾಗಿದ್ದು ಅವರನ್ನು ಖಿನ್ನರನ್ನಾಗಿಸುತ್ತದೆ. ನಿಮ್ಮ ಹೋರಾಟಕ್ಕೆ ಜಯವಾಗಿದೆ ದೇವರನ್ನು ವಾಪಾಸ್ಸು ನಿಡುವುದಕ್ಕೆ ಬಂದರೆ ಗೆದ್ದವರಿಗೂ ಸೋತವರಿಬ್ಬರಿಗೂ ದೇವರು ಬೇಡ. ಬರಗಾಲ ಮತ್ತು ದೇವರ ಹಕ್ಕಿನ ಹೋರಾಟದಿಂದ ತತ್ತರಿಸಿದ ಊರುಗಳು ದುಡಿಮೆಯನ್ನು ಅರಸಿ ಗೋವಾ ಮುಂತಾದ ಕಡೆ ಗುಳೆಹೋಗುವುದು ಕಂಡರೆ ನಮ್ಮ ಹಳ್ಳಿಗಳು ಇಂದಿಗೂ ರಾಜಕಾರಣಿಗಳ ಸಾಂತ್ವನ ಕೇಂದ್ರಗಳಾಗಿಯೇ ಉಳಿದಿದೆ. ಹಳ್ಳಿಗರ ಬಡತನ ಅನಕ್ಷರತೆಯನ್ನು ಕಾಪಾಡಿಕೊಂಡು ಬರುವ ರಾಜಕಾರಣ ವಿಚಾರ ಮಾಡುವ ಶಕ್ತಿಯನ್ನೇ ನಾಶಮಾಡಿದೆ. ವಿಚಾರವಂತನಾದರೆ ಹುಚ್ಚಮಲ್ಲನಂತೆ ಹುಚ್ಚನ ಪಟ್ಟಕಟ್ಟಿ ನಗುವಂತೆ ಮಾಡಿದೆ. ಎರಡೂ ಊರಿಗೆ ಬೇಡವಾದ ಹನುಮಪ್ಪ ದಾರಿಯ ಮಧ್ಯೆ ನಿಂತಾಗ ಹುಚ್ಚಮಲ್ಲನ ಪ್ರಶ್ನೆಯೆ ಮತ್ತೆ ನೆನಪಾಗುತ್ತದೆ: “ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?”



ಸಂಪೂರ್ಣ ಉತ್ತರಕರ್ನಾಟಕದ ಜಾನಪದ ಪ್ರಕಾರಗಳನ್ನೇ ನಾಟಕದ ಓಘಕ್ಕೆ ಬಳಸಿಕೊಂಡ ತಂಡ, ರಂಗಕ್ರಿಯೆಯನ್ನು ಕಟ್ಟುವುದಕ್ಕಿರುವ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿರುವುದು ಅರಿವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪುಟ್ಟ ಪುಟ್ಟ ತಂಡಗಳು ಕನ್ನಡ ರಂಗಭೂಮಿಯ ಚಲನಶೀಲತೆಗೆ ತಮ್ಮ ಕಾಣಿಕೆಯನ್ನು ನೀಡುತ್ತಿವೆ ಮತ್ತು ಈ ತಂಡಗಳ ನಾಟಕಗಳ ಆಯ್ಕೆಗಳನ್ನು ಗಮನಿಸಿದರೆ ಒಂದು ಸಾಮಾಜಿಕ ಚಳವಳಿಯನ್ನು ಕಟ್ಟುವ ನಿಟ್ಟಿನಲ್ಲಿ ಸಾಗಿದೆ. ಬಹುತೇಕ ಯುವ ನಟ ನಟಿಯರೇ ಭಾಗಿಯಾಗಿರುವ ಈ ಧಾರೆಯಲ್ಲಿ ವಿಚಾರಗಳ ಹರಿತವೂ ಒಳಗೊಂಡಿರುವುದು ಹೊಸ ಭರವಸೆಯನ್ನು ಮೂಡಿಸಿದೆ.
ಆಟಮಾಟದಂತಹ ತಂಡಗಳು ಇನ್ನಷ್ಟು ಹೊಸ ಹೊಸ ರಂಗಪ್ರಸ್ತುತಿ ಮತ್ತು ರಂಗ ಸಾಧ್ಯತೆಗಳನ್ನು ನಾಡಿಗೆ ನೀಡಲಿ.

-ಸಂತೋಷ ಗುಡ್ಡಿಯಂಗಡಿ

Sunday, March 29, 2015

ಸರ್ಕಾರಿ ಶಾಲೆಯೊಳಗೊಬ್ಬ ಸಂತ; ಸ. ರಘುನಾಥ

(ಈ ಲೇಖನವನ್ನು ನಾನು ಬರೆದದ್ದು ಕಳೆದ ವರ್ಷ. ಆದರೆ ಪತ್ರಿಕೆಯೊಂದರಲ್ಲಿ ಇದು ಪ್ರಕಟಣೆಗೆ ಬರುವ ಹೊತ್ತಿಗೆ ಮೇಸ್ಟ್ರು ನಿವೃತ್ತರಾದ್ದರಿಂದ ಪ್ರಕಟವಾಗಿಲ್ಲ. ಈಗ ನಾನೇ ಇಲ್ಲಿ ಪ್ರಕಟಿಸುತ್ತಿರುವೆ.)



ಹಣ್ಣು ಕೊಡುವ ದೇವರು
ಒಂಟಿಕಾಲ ವ್ಯಕ್ತಿಯೊಬ್ಬರು ತನ್ನ ಗಾಡಿಯಿಂದ ಹಣ್ಣುಗಳನ್ನೆತ್ತಿ ಭಿಕ್ಷುಕರಿಗೆ ಕೊಡುತ್ತಿದ್ದರೆ ಗಾಡಿಯವ ಏನೂ ಮಾತಾನಾಡುವುದಿರುವುದ ಕಂಡು, ಆಚೀಚೆಯವರು ಗಾಡಿಯವನಿಗೆ ‘ಆತ ಹಣ್ಣು ತೆಗೆಯುತ್ತಿದ್ದಾನೆ ನೋಡು’ ಎಂದರೆ ‘ತೆಗೆಯಲಿ ಬಿಡಿ ಆತ ತನಗಾಗಿ ಹಣ್ಣು ತೆಗೆದುಕೊಳ್ಳುತ್ತಿಲ್ಲವಲ್ಲ ಆತ ದೇವರು’ ಎನ್ನುತ್ತಾನೆ ಶ್ರೀನಿವಾಸಪುರದ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರುವ ರಾಜ. ಆ ‘ದೇವರು’ ಹಣ್ಣು ಮುಟ್ಟದೆ ಹಾಗೆಯೇ ಕುಂಟಿಕೊಂಡು ಹೋದರೆ ‘ನಿಂಗೇನು ದಾಡಿ, ಹಣ್ಣು ಮುಟ್ಟದೆ ಹಾಗೇ ಹೋಗ್ತೀಯಲ್ಲ’ ಎಂದು ರಾಜ ಬಯ್ಯುತ್ತಾನೆ. ಆ ಒಂಟಿ ಕಾಲ ಮನುಷ್ಯ ರಾಜನ ಪ್ರೀತಿಯ ಸರ್ಕಾರಿ ಶಾಲಾ ಮೇಷ್ಟ್ರು.


ಆ ಮೇಷ್ಟ್ರು ಒಮ್ಮೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಬಂದ ಭಿಕ್ಷುಕಿಯೊಬ್ಬರು ತನ್ನ ಬಳಿಯಿದ್ದ ಹತ್ತು ರೂಪಾಯಿಗೆ 100ಗ್ರಾಂ ದ್ರಾಕ್ಷಿ ಕೊಂಡು ಮೇಸ್ಟ್ರಿಗೆ ಕೊಡುತ್ತಾಳೆ. ಬೇಡಮ್ಮ ನಿನ್ನ ಮಕ್ಕಳಿಗೆ ಕೊಡು ಎನ್ನುತ್ತಾರೆ ಮೇಸ್ಟ್ರು. ಆಕೆ ಇಲ್ಲ ನೀವು ತಿನ್ನಲೇಬೇಕು, ನಾನು ಗರ್ಭಿಣಿಯಾಗಿದ್ದಾಗ ಒಂದೂವರೆ ತಿಂಗಳು ನನ್ನನ್ನು ಸಾಕಿದ್ದೀರಿ ಎಂದಾಗ ಮೇಸ್ಟ್ರಿಗೆ ಮೂವತ್ತೈದು ವರ್ಷಗಳ ಹಿಂದಿನ ಘಟನೆ ನೆನಪಾಗುತ್ತದೆ. ಆಗ ಅವರ ಶಾಲೆಯ ಮುಂದಿನ ಮರದ ಕೆಳಗೊಬ್ಬ ಗರ್ಭಿಣಿ ಭಿಕ್ಷುಕಿ ಕುಳಿತಿರುತ್ತಿದ್ದಳು. ಮಕ್ಕಳಿಗೆ ಉಪ್ಪಿಟ್ಟು ಕೊಟ್ಟಾದ ಮೇಲೆ ಆಕೆಗೂ ಸ್ವಲ್ಪ ಉಪ್ಪಿಟ್ಟು ನೀಡುತ್ತಿದ್ದರು. ಆಕೆ ಆ ಮೇಷ್ಟ್ರರನ್ನು ದೇವರಂತೆ ಕಂಡಳು. ತನ್ನನ್ನು ತನ್ನ ಮಗುವನ್ನು ಸಾಕಿದ  ದೇವರಿಗೆ ದ್ರಾಕ್ಷಿ ನೀಡಿ ಸತ್ಕರಿಸಿದಳು.

ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಾದರೂ ಈ ಜಗತ್ತಿನಲ್ಲಿದೆಯೇ? ಎಂದು ಕೇಳುವ ಈ ಮೇಸ್ಟ್ರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಪಲ್ಲಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸ. ರಘುನಾಥ ಅವರು. ಸ. ರಘುನಾಥ ಮೇಸ್ಟ್ರು ಕೆಲಸ ಮಾಡಿದೆಡೆಯೆಲ್ಲ ಜನ ಅವರನ್ನು ದೇವರು ಎನ್ನುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೇಸ್ಟ್ರನ್ನು ದೇವರು ಅಂತ ಜನರು ಕರೆಯಬೇಕೆಂದರೆ ಅವರು ಮಾಡುವ ಪವಾಡಗಳು ಎಂತವು ಎಂದು ಹುಡುಕಿಕೊಂಡು ಹೋದರೆ ನೂರಾರು ಮಕ್ಕಳ ಬದುಕು ಬದಲಿಸಿದ ಕಥೆಗಳು, ನೂರಾರು ಜನರ ಹಸಿವು ನೀಗಿದ ಕಥೆಗಳು, ಸಾವಿರಾರು ಕಾಡು ಪ್ರಾಣಿ -ಪಕ್ಷಿಗಳು ಹೊಸ ಬದುಕನ್ನು ಕಂಡುಕೊಂಡ ಕಥೆಗಳು, ನೂರಾರು ಜನರ ಕಾಯಿಲೆಗಳು ಗುಣವಾದಂತ ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಇವು ಪವಾಡಗಳಲ್ಲ. ವ್ಯಕ್ತಿಯೊಬ್ಬ ತನ್ನ ಜೀವಿತವನ್ನು ಸಾಮಾಜಿಕ ಬದುಕನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದರ ಉದಾಹರಣೆ. ರಘುನಾಥ ಮೇಸ್ಟ್ರು ತನ್ನ ಬದುಕನ್ನ ಹೀಗೆ ರೂಪಿಸಿಕೊಳ್ಳುವ ಹಿಂದೊಂದು ಕ್ರೂರವಾದ ಹಸಿವಿನ ಕಥೆಯಿದೆ.

ಹನ್ನೆರಡು ಮಕ್ಕಳ ತುಂಬು ಕುಟುಂಬದಲ್ಲಿ ಜನಸಿದ ರಘುನಾಥ ಅವರ ಮನೆಯಲ್ಲಿ ತುತ್ತು ಅನ್ನಕ್ಕೂ ಕಷ್ಟ. ಅಜ್ಜ ಅಜ್ಜಿಯ ಆಶ್ರಯದಲ್ಲಿ ಒಂದಷ್ಟು ಕಾಲ ಬೆಳೆದರು. ಅಜ್ಜನ ಶ್ಯಾನುಭೋಗಿಕೆ ಹೋದ ಮೇಲೆ ಸಿದ್ಧಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಕಾಲೇಜು ಸೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಬೆಂಗಳೂರಿಗೆ ಬಂದು ಹೋಟೆಲಿನಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿಕೊಂಡರು. ಹೋಟೆಲ್ ಕೆಲಸ ಮತ್ತು ವಿದ್ಯಾಭ್ಯಾಸ ಎರಡೂ ಕೈಗೆಟುಕದೆ ಹಸಿವು ತನ್ನ ಭೀಕರ ಮುಖವನ್ನು ತೆರೆದುಕೊಂಡಿತ್ತು.

“ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕು ಮನೆಯ ಮುಂದೆ ನಿಂತು ತುತ್ತು ಅನ್ನ ಬೇಡಿದೆ ಗುರುವೆ, ಯಾರೂ ನೀಡಲಿಲ್ಲ. ಒಂದು ತುತ್ತು ಭಿಕ್ಷೆಗೂ ಯೋಗ್ಯನಲ್ಲ ನಾನು ಅನ್ನಿಸಿತು. ರೈಲು ಹಳಿಗಳ ಮೇಲೆ ನಡೆಯುತ್ತಾ ಸಾಗಿದೆ. ಸುತ್ತಲಿನ ಒಂದು ಸದ್ದು ನನಗೆ ಕೇಳಿಸಲಿಲ್ಲ. ಅವತ್ತಿನ ಆ ಕ್ಷಣದ ಏಕಾಗ್ರತೆ ಏನಾದರೂ ನನಗೆ ಇಂದು ಸಾಧ್ಯವಾಗಿದ್ದರೆ ಇಂದು ನನ್ನ ಸಾಹಿತ್ಯದ ದಿಕ್ಕೇ ಬದಲಾಗುತ್ತಿತ್ತು. ಎಚ್ಚರವಾದಾಗ ನಾನು ಬೌರಿಂಗ್ ಆಸ್ಪತ್ರೆಯಲ್ಲಿದ್ದೆ. ನಾನು ಕಾಲು ಕಳೆದುಕೊಂಡಿದ್ದೆ” ಅಂದು ಸಮಾಜ ಅವರಿಗೆ ಒಂದು ತುತ್ತು ಅನ್ನ ನೀಡದೆ ಕಾಲು ಬಲಿ ಪಡೆಯಿತು; ಆದರೆ ಆ ಕಾಲು ಕಳೆದಕೊಂಡ ಮನುಷ್ಯ ಇಂದು ಧಾವಂತದಲ್ಲಿ ಓಡುತ್ತಿರುವ ಅದೇ ಸಮಾಜದ ನಡುವೆ ಕುಂಟಿಕೊಂಡು ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆ ಪುಣ್ಯಾತ್ಮ ರೈಲು ಕಾಲನ್ನಷ್ಟೇ ಬಲಿ ಪಡೆದು ರಘುನಾಥ ಅವರನ್ನ ಈ ನಾಡಿಗೆ ನೀಡಿ ಸಾವಿರಾರು ಜನರ ಬದುಕಲ್ಲಿ ನಗೆಯರಳಲು ಹಾದಿ ಮಾಡಿಕೊಟ್ಟಿತು. ಅದೇ ರಘುನಾಥ ಮೇಸ್ಟ್ರು ಈ ಸಮಾಜದ ಬಗ್ಗೆ ಹೀಗೆ ಹೇಳುತ್ತಾರೆ “ ಈ ಸಮಾಜದಲ್ಲಿದ್ದು ಏನಾದರೂ ಮಾಡಬೇಕು ಅಂತಿದ್ದರೆ ನಷ್ಟ ಮತ್ತು ನೋವನ್ನು ಅನುಭವಿಸೋಕೆ ಸಿದ್ಧವಾಗಿರಬೇಕು. ಇದು ಅನುಭವ ಸಿದ್ಧಾಂತ. ಇದಕ್ಕಾಗಿ ಯಾರನ್ನೂ ದೂಷಿಸುವುದರಲ್ಲಿ ಅರ್ಥವಿಲ್ಲ. ಗಾಂಧಿ, ಏಸುವಿನಂತವರೇ ಈ ಸಮಾಜದಿಂದ ನೋವನ್ನ ತಿಂದಿದ್ದಾರೆ; ಇನ್ನು ನನ್ನಂತ ಚಿಕ್ಕವರು ಯಾವ ಲೆಕ್ಕ?”

ಮೊಲ ಸಾಕಾಣೆ ಮಾಡುವುದನ್ನು ಕಲಿಸುತ್ತಾ...

‘ತಾನೊಂದು ಮರದಂತೆ ಬದುಕಬೇಕು’ ಎಂದು ಬಯಸಿದ ಸ. ರಘುನಾಥ ಅವರಿಗೆ ಸರ್ಕಾರಿ ಶಾಲೆಯ ಮೇಸ್ಟ್ರಾಗಿ ಕೆಲಸ ಸಿಕ್ಕಿತು. ಮರವನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನ ಕಟ್ಟಿಕೊಳ್ಳಲು ಬಯಸಿದ ಮನಕ್ಕೆ ಸರ್ಕಾರಿ ಶಾಲೆ ವರದಾನವಾಯಿತು; ಅದು ರಘುನಾಥ ಮೇಸ್ಟ್ರಿಗಷ್ಟೇ ಆ ಶಾಲೆಗೆ ಕಲಿಯಲು ಬಂದ ಮಕ್ಕಳಿಗೂ. ರಘುನಾಥ ಮೇಸ್ಟ್ರಿರುವ ಶಾಲೆಯೆಂದರೆ ಅದು ಬರಿಯ ಶಾಲೆಯಷ್ಟೆ ಅಲ್ಲ, ಅದೊಂದು ಆಸ್ಪತ್ರೆ, ಅದೊಂದು ಪ್ರಾಣಿ ಸಂಗ್ರಹಾಲಯ, ಅದೊಂದು ಚೆಲುವಾದ ಕೈತೋಟದ ನಂದನವನ. ಗೌನಿಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿರುವ ಈ ಒಂಟಿ ಕಾಲ ಮೇಸ್ಟ್ರು ಶಾಲೆಗಷ್ಟೇ ಹೋಗಿ ಬಂದಿಲ್ಲ. ಶಾಲಾ ನಂತರದ ಸಮಯಗಳಲ್ಲಿ ಸುತ್ತ ಮುತ್ತಲ ಊರುಗಳಿಗೆ ಬೇಟಿ ನೀಡಿ ಬಡವರಿಗೆ ಅನಾಥರಿಗೆ ಉಚಿತವಾಗಿ ಔಷಧಿ ನೀಡುತ್ತಿದ್ದರು. ಅಲೆಮಾರಿಗಳ ಟೆಂಟುಗಳಿಗೆ ಬೇಟಿ ನೀಡಿ ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತಂದು ಓದಿಸುತ್ತಿದ್ದರು, ಅವರ ತಂದೆ ತಾಯಿಯರಿಗೆ ದಿನನಿತ್ಯದ ಊಟ ಉಪಹಾರಗಳಿಗೆ ಅಕ್ಕಿ ಸಾಮಾನುಗಳನ್ನು ತಾವೇ ಒದಗಿಸಿ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರುತ್ತಿದ್ದರು.

ನಮ್ಮ ಮಕ್ಕಳು

ಗಾಯಗೊಂಡ ಜಿಂಕೆಮರಿಯ ಆರೈಕೆಯಲ್ಲಿ...

ಶಾಲಾ ಸಮಯದ ನಂತರ ಊರೂರು ತಿರುಗಿ ಅಲೆಮಾರಿಗಳು ಅನಾಥರು ಭಿಕ್ಷುಕರನ್ನು ಬೇಟಿ ಮಾಡಿ ಅವರಿಗೆ ತಕ್ಷಣದ ಉಪಚಾರ ನೀಡುತ್ತಿದ್ದಾಗಲೇ ಅವರು ರೂಪಿಸಿದ್ದೆ “ನಮ್ಮ ಮಕ್ಕಳು”. ಇದೊಂದು ಸಂಘಟನೆಯೆಂದರೆ ತಪ್ಪಾದೀತು. ಅನಾಥರು ನಿರ್ಗತಿಕ ಮಕ್ಕಳಿಗೆ ಸಿಕ್ಕ ಆಸರೆ. ಈ ಮೇಸ್ಟ್ರು, ನಮ್ಮ ಮಕ್ಕಳು ಎಂಬ ತಾಯ್ತನದ ಮಡಿಲೊಳಗೆ ಸಲಹಿದ ಹಲವಾರು ಮಕ್ಕಳಿಂದು ಮೇಸ್ಟ್ರುಗಳಾಗಿದ್ದರೆ, ಬೇರೆ ಬೇರೆ ಉದ್ಯೋಗಗಳನ್ನು ಪಡೆದು ಹೊಸ ಜೀವನ ಆರಂಭಿಸಿದ್ದಾರೆ. ನಮ್ಮ ಮಕ್ಕಳ ವಿಶೇಷ ಎಂದರೆ ಭಿಕ್ಷೆ ಬೇಡುವವರ, ಬುಡಬುಡಿಕೆಯವರ, ಅಲೆಮಾರಿಗಳ ಮಕ್ಕಳೂ ಇಂದು ಶಿಕ್ಷಣ ಪಡೆದು ಮೇಸ್ಟ್ರುಗಳಾಗಿದ್ದಾರೆ ಎಂಬುದು!

ರಘುನಾಥ ಮೇಸ್ಟ್ರ ಅಪರೂಪದಲ್ಲಿ ಅಪರೂಪದ ಗುಣವೊಂದನ್ನು ಕುರಿತು ಹೇಳಲೇಬೇಕು. ನಮ್ಮ ಮಕ್ಕಳ ಮೂಲಕ ಶಿಕ್ಷಣ ಪಡೆದು ಉದ್ಯೋಗಸ್ತರಾದ ಮೇಲೆ ಅಂತವರ ಸಂಪೂರ್ಣ ಸಂಪರ್ಕವನ್ನೇ ಕಡಿದುಕೊಳ್ಳುತ್ತಾರೆ. ಅವರಿಂದ ಯಾವ ನೆರವನ್ನೂ ಬಯಸುವುದಿಲ್ಲ; ಮಾತನಾಡಿಸುವುದಿಲ್ಲ! ಯಾಕೆ ಸರ್ ಹೀಗೆ? ಎಂದರೆ: ‘ನೋಡು ಗುರುವೆ, ಅವರು ನನ್ನ ಮುಂದೆ ಕೈ ಕಟ್ಟಿಕೊಂಡು ನಿಂತು ನಿಮ್ಮಿಂದ ನಾನು ಹೀಗಾದೆ. ಎನ್ನುವುದನ್ನ ಕೇಳುವುದಕ್ಕೆ ಬೇಜಾರು. ಮತ್ತೆ ಅವರಿಗೆ ನಾನು ಮಾಡಬಹುದಾದ ಸಹಾಯ ಸಾಕಾಗಿದೆ. ಹಾಗಾಗಿ ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಟ್ಟುಕೊಂಡಿಲ್ಲ’ ಎನ್ನುವ ಅವರಿಗೆ ತನ್ನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಅಪಾರವಾದ ಹೆಮ್ಮೆ ಇದೆ. ಹೀಗೆಲ್ಲ ಹೇಳುವಾಗ ಅವರ ಆದರ್ಶದ ಮರದ ಕಥೆ ನೆನಪಾಗುತ್ತದೆ. ಅವರೇ ಹೇಳುವ ಹಾಗೆ “ಒಂದು ಮರ ಹಣ್ಣು ಬಿಡುತ್ತದೆ. ಆ ಹಣ್ಣನ್ನ ಒಳ್ಳೆಯವರು ಕೆಟ್ಟವರು ಹಕ್ಕಿಗಳು ಪ್ರಾಣಿಗಳು ಎಲ್ಲಾ ತಿನ್ನುತ್ತಾರೆ. ಮುದೊಂದು ದಿನ ಕಟುಕನೊಬ್ಬ ಬಂದು ಮರವನ್ನು ಕಡಿದು ನಾಶ ಮಾಡುತ್ತಾನೆ. ಆಮೇಲೆ ಅಲ್ಲಿ ಒಂದು ಮರ ಇತ್ತು ಎಂಬುದಕ್ಕೆ ಯಾವ ಕುರುಹೂ ಇರುವುದಿಲ್ಲ, ನಾನೂ ಕೂಡ ಆ ಮರದಂತೆ ಬದುಕಬೇಕು ಗುರುವೆ”
ಕಟುಕರಿದ್ದರು ಕುಂಟುವ ಕಾಲ ಬಳಿಯಲ್ಲೇ

ಗಾಯಗೊಂಡು ಸಿಕ್ಕಿದ ಕಾಡುಪಾಪದ ಮರಿ...

ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳಲಾರದ ಮನಸುಗಳು ನಮ್ಮ ಜೊತೆ ಜೊತೆಯಲ್ಲಿ ಇರುತ್ತವೆ. ರಘುನಾಥ ಮೇಸ್ಟ್ರ ಇಕ್ಕೆಲದಲ್ಲೂ ಅಂತಹ ಮನಸುಗಳಿದ್ದವು. ಅವರಿದ್ದ ಶಾಲೆ ನಂದನವನ ಎಂದು ಮೊದಲೇ ಪ್ರಸ್ತಾಪಿಸಿದ್ದೆ. ಹೌದು, ಅಲ್ಲಿ ಹಣ್ಣಿನ ಗಿಡಗಳು, ತರಕಾರಿಗಳು, ಹೂವಿನ ಗಿಡಗಳು, ಔಷಧಿ ಗಿಡಗಳನ್ನು ಮಕ್ಕಳ ಮೂಲಕ ನೆಟ್ಟು ಆರೈಕೆ ಮಾಡಿದ್ದರು. ಗಾಯಗೊಂಡು ನರಳುತ್ತಿರುವ ಕಾಡು ಪ್ರಾಣಿ ಪಕ್ಷಿಗಳನ್ನು ತಂದು ಪಂಜರಗಳಲ್ಲಿ ಚಿಕಿತ್ಸೆ ನೀಡಿ ಮಕ್ಕಳು ಸಾಕುತ್ತಾರೆ. ಗುಣವಾದ ಮೇಲೆ ಮತ್ತೆ ಕಾಡಿಗೆ ಬಿಡುತ್ತಾರೆ. ಹಾಗಾಗಿ ಮಕ್ಕಳು ಶಾಲೆಯ ಶಿಕ್ಷಣದ ಜೊತೆ ಜೊತೆಗೆ ಬದುಕಿನ ಪಾಠಗಳನ್ನ ಮಾನವೀಯ ಮೌಲ್ಯಗಳನ್ನ ಕಲಿಯುತ್ತಾರೆ. ಇಂತಹ ಗುಣಪಾಠಗಳನ್ನು ಕಲಿಸುವ ಗುರುವಿರುವಾಗ ಮಕ್ಕಳು ಸಹಜವಾಗಿ ಅವರ ಕಡೆಗೆ ಒಲಿಯುತ್ತಾರೆ ಇದು ಉಳಿದ ಶಿಕ್ಷಕರಿಗೆ ಅಸೂಯೆಯನ್ನ ಮೂಡಿಸುತ್ತದೆ.

ಒಂದು ದಿನ ರಾತ್ರಿ ಬೆಳಗಾಗುವುದರೊಳಗಾಗಿ ಸಂಪೂರ್ಣ ತೋಟವನ್ನು ಕೊಚ್ಚಿ ಕೊಚ್ಚಿ ನಾಶ ಮಾಡಲಾಗಿತ್ತು, ಪಂಜರದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಹೊರಬಿಟ್ಟು ನಿರ್ದಾಕ್ಷಿಣ್ಯವಾಗಿ ಸಾಯಿಸಲಾಗಿತ್ತು. ಬೆಳಿಗ್ಗೆ ಇದನ್ನು ನೋಡಿ ಯಾವತ್ತೂ ಅಳದ ನಾನು ಆ ತೋಟದ ನಡುವೆ ನಿಂತು ಗಳಗಳ ಅತ್ತುಬಿಟ್ಟಿದ್ದೆ; ಮಕ್ಕಳು ನನ್ನೊಡನೆ ಅತ್ತುಬಿಟ್ಟಿದ್ದರು. ಆ ಪುಟ್ಟ ಪುಟ್ಟ ಮಕ್ಕಳು ನನಗೆ ಧೈರ್ಯ ತುಂಬಿದರು “ಸರ್, ಇದೇ ಜಾಗದಲ್ಲಿ ಮತ್ತೆ ಹೀಗೆ ತೋಟ ಮಾಡುವ”; ಮಾಡಿ ತೋರಿಸಿದರು ನನ್ನ ವಿದ್ಯಾರ್ಥಿಗಳು. ಅವರು ನನ್ನ ವಿದ್ಯಾರ್ಥಿಗಳಲ್ಲ ನನ್ನ ಗುರುಗಳು, ಹಿತೈಷಿಗಳು, ಸ್ನೇಹಿತರು ಎಲ್ಲಾ. ಅವರಿಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಗುರುವೆ. ಶಾಲೆ ಮತ್ತು ಮಕ್ಕಳು ಎಂದರೆ ನನ್ನದೇ ಸ್ವರ್ಗ. ಬಸ್ಸಿನ ತನಕ ಬಂದು ಬಿಟ್ಟು ಕಂಡಕ್ಟರ್‍ಗೆ ಹೇಳಿ ಹೋಗುತ್ತಾರೆ “ಮೇಸ್ಟ್ರನ್ನ ಜೋಪಾನವಾಗಿ ತಲುಪಿಸು, ಸೀಟು ಮಾಡಿಕೊಡು” ಅಂತಾರೆ.

ಇತ್ತೀಚೆಗೆ ಗಾಯಗೊಂಡ ಮೊಲದ ಮರಿಯೊಂದು ರಘುನಾಥ ಮೇಸ್ಟ್ರನ್ನೇ ಹುಡುಕಿಕೊಂಡು ಬಂದಿದೆ. ಮಕ್ಕಳೊಡನೆ ಸೇರಿ ಅದಕ್ಕೆ ಉಪಚಾರ ಮಾಡಿದರು. ಆ ಮರಿಯನ್ನು ಕನ್ನಡದ ಅದ್ಭುತ ಪುಟಾಣಿ ಮುದ್ದು ತೀರ್ಥಹಳ್ಳಿಗೆ ಅರ್ಪಿಸಿ ಸಾಕಿ, ಚೇತರಿಸಿಕೊಂಡ ಮೇಲೆ ಕಾಡಿಗೆ ಬಿಟ್ಟಿದ್ದಾರೆ. ಇಂತಹ ಒಂದೂವರೆ ಸಾವಿರ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಪಾಪದ ಜೀವಿಗಳು ರಘುನಾಥ ಮೇಸ್ಟ್ರನ್ನ ಹುಡುಕಿಕೊಂಡು ಬರುವುದಲ್ಲ, ಅವುಗಳ ನೋವಿಗೆ ತುಡಿಯುವ ಜೀವ ಇವರಲ್ಲಿತ್ತು.

ಪ್ರಾಣಿಗಳಿಗಷ್ಟೇ ಅಲ್ಲ ಮನುಷ್ಯರ ಕಷ್ಟಗಳಿಗೂ ಮಿಡಿಯುತ್ತೆ ಈ ಮೇಸ್ಟ್ರ ಹೃದಯ. ಕ್ಯಾನ್ಸರ್, ಹೃದ್ರೋಗಿಗಳಿಗೆ ನಮ್ಮ ಮಕ್ಕಳು ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ನಾಟಿವೈದ್ಯವನ್ನು ಬಲ್ಲ ಇವರು ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ನೀಡುತ್ತಾರೆ. ಮಹಿಳೆಯರ ಬಿಳಿಸೆರಗಿಗೆ ಪರಿಣಾಮಕಾರಿ ಔಷಧಿ ನೀಡುವ ಇವರು ಈವರೆಗೆ ಸಾವಿರದ ಇನ್ನೂರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದಾರೆ. ಮಕ್ಕಳಿಗೆ ನಾಟಿವೈದ್ಯವನ್ನು ಕಲಿಸುತ್ತಾರೆ; ಗಿಡಮೂಲಿಕೆಗಳನ್ನು ಗುರುತಿಸುವುದು ಬೆಳೆಸುವುದು ಶಿಕ್ಷಣವನ್ನಾಗಿಸಿಕೊಂಡು. ಶಾಲೆಯಲ್ಲಿಯೇ ಔಷಧಾಲಯವನ್ನು ಸ್ಥಾಪಿಸಿಕೊಂಡಿದ್ದಾರೆ. ಬೆಂಗಳೂರಿನ ಸ್ನೇಹಿತರುಗಳು ಈ ಔಷಧಾಲಯಕ್ಕೆ ಉಚಿತವಾಗಿ ಔಷಧಿಗಳನ್ನು ತಂದುಕೊಡುತ್ತಾರೆ. ಸುತ್ತ ಮುತ್ತಲಿನ ಹಳ್ಳಿಯವರು ಶಾಲೆಗೆ ಬಂದು ಉಚಿತವಾಗಿ ಔಷಧಿ ಪಡೆಯುತ್ತಾರೆ. ಇತ್ತೀಚೆಗೆ ಗೆಳೆಯರೆಲ್ಲ ಸೇರಿಕೊಂಡು ನಾಲ್ಕು ಗಾಲಿಯ ಸ್ಕೂಟರ್ ಮಾಡಿಕೊಟ್ಟಿರುವುದರಿಂದ ಸುತ್ತ ಮುತ್ತಲಿನ ಊರುಗಳಿಗೆ ತಾವೇ ಹೋಗಿ ಉಚಿತವಾಗಿ ಚಿಕಿತ್ಸೆ ನೀಡಿ ಬರುತ್ತಿದ್ದಾರೆ. ತಿಂಗಳೊಂದಕ್ಕೆ ಎರಡುಸಾವಿರ ಕಿಲೋಮೀಟರ್ ಸುತ್ತುತ್ತಾರೆ, ಆದರೆ ಇದ್ಯಾವುದನ್ನೂ ರಘುನಾಥ ಮೇಸ್ಟ್ರು ಸಮಾಜಸೇವೆ ಅಂದುಕೊಳ್ಳುವುದಿಲ್ಲ; ಪ್ರಚಾರವನ್ನು ಬೇಡುವುದಿಲ್ಲ. ಹಾಗಾಗಿ ಅವರಿಗ್ಯಾವ ಪ್ರಶಸ್ತಿಗಳೂ ಬಂದಿಲ್ಲ ಬರುವುದೂ ಇಲ್ಲ.

ಸಾಹಿತಿ ಸ. ರಘುನಾಥ

ಸಾಹಿತ್ಯ ಕ್ಷೇತ್ರದಲ್ಲಿಯೂ ಈ ಒಂಟಿ ಕಾಲಿನ ಮೇಸ್ಟ್ರದ್ದು ಮಹತ್ವದ ಸ್ಥಾನ. ಕನ್ನಡ ಸಾಹಿತ್ಯಲೋಕಕ್ಕೆ 35ಕೃತಿಗಳನ್ನು ನೀಡಿದ್ದಾರೆ. ಕತೆ, ಕವನ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಜಾನಪದ ಸಂಶೋಧನೆ ಮುಂತಾದ ವಿಸ್ತಾರ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಘುನಾಥ ಮೇಸ್ಟ್ರು ಕನ್ನಡ ಮತ್ತು ತೆಲುಗು ಸಾಹಿತ್ಯ ಧಾರೆ ಸದಾ ಹರಿಯಲು ಸೇತುವಾದವರು. ಇನ್ನೂ ಹತ್ತು ಪುಸ್ತಕಗಳಿಗಾಗುವಷ್ಟು ಹಸ್ತಪ್ರತಿ ಹಿಡಿದು ಪ್ರಕಾಶಕರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.
ಒಂದು ಕಾಲಿನ ಮೇಲೆ ನಡೆಯುತ್ತಾ ಧಾವಂತದ ಸಮಾಜದ ನಡುವೆ ಆಮೆ ವೇಗದಲ್ಲಿ ಸಾಗುತ್ತಾ ಈಸಬೇಕು ಇದ್ದು ಜಯಿಸಬೇಕು ಎಂಬಂತೆ ತನ್ನ ಸುತ್ತಲಿನ ಜಗತ್ತಿನ ನೋವು ನಲಿವುಗಳಿಗೆ ತನ್ನನ್ನೇ ಅರ್ಪಿಸಿಕೊಂಡಿರುವ ರಘುನಾಥ ಮೇಸ್ಟ್ರನ್ನ ಅಕ್ಷರಗಳ ಅಂಕೆಯಲ್ಲಿ ಹಿಡಿದಿರಿಸುವುದೆಂದರೆ ಅದೊಂದು ಪಕ್ಷಿನೋಟವಾದೀತು ಅಷ್ಟೇ. ಸಣ್ಣ ಪುಟ್ಟ ಸ್ಟಂಟುಗಳನ್ನು ಮಾಡಿ ಸಮಾಜಸೇವೆ ಎಂದು ಕರೆಯಿಸಿಕೊಂಡು ಪೋಸು ನೀಡುತ್ತಾ ಇರಬರುವ ಪ್ರಶಸ್ತಿಗಳಿಗೆ ಅರ್ಜಿಹಾಕಿ ಪ್ರಶಸ್ತಿ ಪಡೆಯುವ ಕಿಡಿಗೇಡಿಗಳ ನಡುವೆ ಈ ಸರ್ಕಾರಿ ಶಾಲೆಯ ಮೇಸ್ಟ್ರು ಭಿನ್ನವಾಗಿ ಕಾಣಿಸುವುದಿಲ್ಲವೆ? ತಾನು ಮಾಡುತ್ತಿರುವುದು ಸಮಾಜಸೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಾನು ಬದುಕುವುದೇ ಹಾಗೆ ಎಂದು ನಂಬಿಕೊಂಡಿರುವವರು ಅವರು. ಹಾಗಾಗಿ ತಾನು ಮಾಡಿದ ಯಾವ ಕಾರ್ಯಕ್ಕೂ ದಾಖಲೆಗಳನ್ನು ಉಳಿಸಿಕೊಂಡಿಲ್ಲ. ಮರವೂ ಹಾಗೆ ತಾನು ಯಾರು ಯಾರಿಗೆ ಹಣ್ಣು ನೀಡಿದ್ದೇನೆ ಎಂದು ಬರೆದಿಡುವುದಿಲ್ಲ.

ಈ ಮೇಸ್ಟ್ರು ಇದೇ ವರ್ಷ(2014)ದ ಆಗಸ್ಟ್ ತಿಂಗಳಿನಲ್ಲಿ ಸರ್ಕಾರಿ ಸೇವೆಯಿಂದಷ್ಟೇ ನಿವೃತ್ತರಾಗುತ್ತಿದ್ದಾರೆ. ಈ ಕಡೆಗಾಲದಲ್ಲಿಯಾದರೂ ಸರ್ಕಾರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ತನ್ನ ಋಣವನ್ನು ತೀರಿಸಲಿ.

“ನಾನು ಕುಂಟಿದರೂ, ನನ್ನ ದಾರಿ ಕುಂಟುವುದಿಲ್ಲ” -ಸ. ರಘುನಾಥ
ಇತ್ತೀಚೆಗೆ ಬಂದ ಪ್ರಶಸ್ತಿ
ಶ್ರೀನಿವಾಸಪುರದಿಂದ ಬೆಂಗಳೂರಿಗೆ ಕೂಲಿಗೆ ಹೋಗುವ ಹೆಂಗಸೊಬ್ಬರು ಸೆರಗಿನಲ್ಲಿ ಒಂದೇ ಒಂದು ದಾಳಿಂಬೆ ಹಣ್ಣನ್ನು ತಂದು ಕೊಡುತ್ತಾರೆ. ನಿನ್ನ ಮಕ್ಕಳಿಗೆ ಕೊಡಮ್ಮ ಎಂದರೆ, “ಕಲಾಸಿಪಾಳ್ಯಕ್ಕೆ ಆಟೋದಲ್ಲಿ ಹೋಗಿ ಇದನ್ನ ನಿಮಗಂತ ತಂದಿದ್ದೇನೆ ಸರ್, ನೀವು ನನ್ನನ್ನು ಬದುಕಿಸಿದ್ದೀರಿ ನೀವು ತಿನ್ನಲೇಬೇಕು” ಎಂದು ಮೇಸ್ಟ್ರು ಹಣ್ಣು ತಿನ್ನುವುದನ್ನು ನೋಡಿ ಸಂತಸಪಟ್ಟು ಆ ಮಹಿಳೆ ಮರಳಿದರಂತೆ. ಅದಕ್ಕೆ ಸ. ರಘುನಾಥ ಮೇಸ್ಟ್ರು ಕೇಳುತ್ತಾರೆ “ಜಗತ್ತಿನ ಯಾವ ಮೇಸ್ಟ್ರಿಗೆ ಸಿಕ್ಕಿದೆ ಇಂತಹ ಪ್ರಶಸ್ತಿ ಗುರುವೆ? ಈ ನಾಡಿನ ನೂರಾರು ಜನರ ಋಣಭಾರವನ್ನು ಹೊತ್ತಿರುವ ನಾನೇ ಧನ್ಯ” ಎನ್ನುತ್ತಾರೆ ಅಭಿಮಾನದಿಂದ.
(ನಮ್ಮ ಮಕ್ಕಳಿಗೆ ಸಹಾಯ ಮಾಡಬಯಸುವವರಿಗಾಗಿ ಸ. ರಘುನಾಥ ಅವರ ದೂರವಾಣಿ ಸಂಖ್ಯೆ :9980593921)



ವಿದ್ಯಾರ್ಥಿಗಳ ಕಣ್ಣಲ್ಲಿ ರಘುನಾಥ ಮೇಸ್ಟ್ರು

ರಜಾಕ್ ಸಾಬ್

ರಜಾಕ್ ಸಾಬ್: ನಾವು ಆಂಧ್ರದಿಂದ ಬಂದು ಟೆಂಟುಗಳನ್ನ ಹಾಕ್ಕೊಂಡು ಗೌನಿಪಲ್ಲಿಯಲ್ಲಿ ವಾಸ ಇದ್ದಿದ್ವು. ನಮಗೆ ಮನೆ ಇರಲಿಲ್ಲ. ರಘುನಾಥ ಸರ್ ನಮ್ಮ ಟೆಂಟಿನ ಹತ್ತಿರ ಬಂದು ನಮಗೆ ಊಟ, ಬಟ್ಟೆ ಕೊಟ್ಟು ಶಾಲೆಗೆ ಸೇರಿಸಿಕೊಂಡ್ರು. ನಾವು ತುಂಬಾ ಬಡವರು ನಮಗೆ ಸೋಪು, ಬಟ್ಟೆ, ಪೇಸ್ಟಿಂದ ಹಿಡಿದು ಶಾಲೆಗೆ ಹೋಗೊದಕ್ಕೆ ಬೇಕಾದ ಎಲ್ಲವನ್ನೂ ಸರ್ ಕೊಡಿಸ್ತಿದ್ರು. ನಾನು ಹೈಸ್ಕೂಲಿನವರೆಗೆ ಓದಿದ್ದೆ. ನಮ್ಮ ಮಕ್ಕಳೂಗೆ ನಾನೇ ಮೊದಲನೆಯವನು. ನನಗೀಗ ಮದುವೆಯಾಗಿದೆ ಮಗುವಿದೆ. ನಾನೀಗ ಇಡೀ ಶ್ರೀನಿವಾಸಪರ ತಾಲೂಕಿಗೆ ಹೋಲ್‍ಸೇಲ್ ತೆಂಗಿನಕಾಯಿ ವ್ಯಾಪಾರಿ. ಆಗಾಗ ಹೋಗಿ ಸರ್ ಅವರನ್ನ ಮಾತಾಡಿಸಿಕೊಂಡು ಬರ್ತಾ ಇರ್ತೇನೆ. ಅಲೆಮಾರಿಯಾಗಿದ್ದ ನನ್ನ ಬದುಕನ್ನ ಬದಲಿಸಿದವರು ರಘುನಾಥ ಸರ್.

ನಂದಿನಿ


ನಂದಿನಿ: ನನ್ನ ಹೆಸರು ನಂದಿನಿ. ದ್ವಿತೀಯ ಬಿಎಸ್ಸಿ ಓದುತ್ತಾ ಇದ್ದೀನಿ. ನಾನೂ ನಮ್ಮ ಮಕ್ಕಳು ಬಳಗದಲ್ಲಿದ್ದೀನಿ. ನಾನಿಂದು ಬದುಕಿದ್ದೀನಿ ಅಂದ್ರೆ ಅದಕ್ಕೆ ರಘುನಾಥ ಸರ್ ಕಾರಣ. ನಾನು ಚಿಕ್ಕಂದಿನಲ್ಲೇ ಹೃದಯದ ಸಮಸ್ಯೆಯಿಂದ ಬಳಲುತ್ತಾ ಇದ್ದೆ. ನಮ್ಮಪ್ಪ ಬಡವರು, ಅವರಿಂದ ನನಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ನಾನೊಮ್ಮೆ ನೋವಿಂದ ತರಗತಿಯಲ್ಲಿ ಬಿದ್ದೋಗಿದ್ದೆ. ಆಗ ರಘುನಾಥ ಸರ್ಗೆ ನನ್ನ ಸಮಸ್ಯೆ ಗೊತ್ತಾಗಿ ನನಗೆ ಆಪರೇಷನ್ ಮಾಡಿಸಿದ್ರು. ನಮ್ಮಿಂದ ಒಂದ್ರೂಪಾಯಿ ಕೂಡ ತಗೊಂಡಿಲ್ಲ. ನನ್ನನ್ನ ಈಗಲೂ ಓದಿಸುತ್ತಾ ಇದ್ದಾರೆ. ನನಗೆ ಒಬ್ಬಳಿಗಲ್ಲ ನನ್ನಂತ ನೂರಾರು ಮಕ್ಕಳಿಗೆ ಅವರು ಓದುವುದಕ್ಕೆ ಬೇಕಾದ ಎಲ್ಲಾ ಸಹಾಯ ಮಾಡುತ್ತಾರೆ. ಈ ವರ್ಷ ಸರ್ ನಿವೃತ್ತಿಯಾಗುತ್ತಾರೆ ಎಂಬುದೇ ಬಹಳ ದುಃಳದ ಸಂಗತಿ. ನಮ್ಮಂತಹ ಮಕ್ಕಳಿಗೆ ಬಟ್ಟೆ ಪುಸ್ತಕ ಫೀಸ್ ಎಲ್ಲಾ ಕೊಟ್ಟು ಓದಿಸ್ತಾ ಇರ್ತಾರೆ. ನಮಗೆ ಹಣವನ್ನ ಜಾಗ್ರತೆಯಿಂದ ಖರ್ಚು ಮಾಡುವುದನ್ನ ಹೇಳಿಕೊಡ್ತಾರೆ. ಟೈಲರಿಂಗ್ ಕಲಿಸ್ತಾರೆ. ಬೇರೆ ಮೇಸ್ಟ್ರುಗಳು ಅವರ ಬದುಕನ್ನಷ್ಟೇ ನೋಡಿಕೊಳ್ತಾರೆ ಆದರೆ ರಘುನಾಥ ಸರ್ ಮಕ್ಕಳಿಗೋಸ್ಕರ ಬದುಕ್ತಾರೆ.

ಮಣಿಕಂಠ


ಮಣಿಕಂಠ : ನಾನು ಒಂಬತ್ತನೇ ತರಗತಿ ಓದುತ್ತಾ ಇದ್ದೀನಿ. ನಾನು ಐದನೇ ತರಗತಿಗೆ ಬಂದಾಗ ರಘುನಾಥ ಸರ್ ಅವರನನು ನೋಡಿ ತುಂಬಾ ಹೆದ್ರಿಕೋತಾ ಇದ್ದೆ. ಚನ್ನಾಗಿ ಓದದವರಿಗೆ ಅವರು ಹೊಡಿತಾರೆ ಅಂತ ಕೇಳಿದ್ದೆ. ಆಮೇಲೆ ಸರ್ ಅವರೇ ಕರೆದು ಯಾಕೆ ಹೆದ್ರಿಕೋತಾ ಇದ್ದೀಯಾ ನಾನೇನೂ ಮಾಡಲ್ಲ ಅಂದ್ರು. ನಮ್ಮ ಮನೆಯಲ್ಲಿ ತುಂಬಾ ಕಷ್ಟ. ಅಪ್ಪ ಅಮ್ಮ ಶಾಲೆಗೆ ಬಂದು ನನ್ನೂ ನನ್ನ ತಮ್ಮನ್ನೂ ಶಾಲೆ ಬಿಡಿಸುವುದಾಗಿ ಹೇಳಿದ್ರು. ಅದಕ್ಕೆ ರಘುನಾತ ಸರ್ ನೀವೇನೂ ಚಿಂತೆ ಮಾಡಬೇಡಿ ನಾನು ಓದಿಸ್ತೀನಿ ಮಕ್ಕಳನ್ನ ಅಂದ್ರು, ನಾವಿಬ್ರು ಅಲ್ದೆ ನಮ್ಮೂರಲ್ಲಿ ಹದಿನೈದು ಮಕ್ಕಳನ್ನ ಸರ್ ಓದಿಸ್ತಾ ಇದ್ದಾರೆ. ಶಾಲೆಯಲ್ಲಿ ನಾವು ಕೈತೋಟ ಮಾಡಿದ್ದೀವಿ. ಅಲೊವೇರಾದಿಂದ ಶಾಂಪು ತಯಾರಿಸ್ತೀವಿ. ಮೊಲ ಮತ್ತೆ ಜಿಂಕೆಮರಿಗಳನ್ನ ಸಾಕಿದ್ದೀವಿ. ಅವು ದೊಡ್ಡವಾದ ಮೇಲೆ ಕಾಡಿಗೆ ಬಿಟ್ಟುಬಂದಿದೀವಿ.

-ಸಂತೋಷ ಗುಡ್ಡಿಯಂಗಡಿ

Saturday, March 28, 2015

ಸರ್ಕಾರಿ ಶಾಲೆಗಳು ; ರಂಗಚಟುವಟಿಕೆಗಳು

(ಈ ಲೇಖನವು ನಾಗತೀಹಳ್ಳಿ ಹಬ್ಬದ ನೆನಪಿಗಾಗಿ ತಂದಿರುವ 'ಗ್ರಾಮಮುಖಿ' ನೆನಪಿನ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)
ಸರ್ಕಾರಿ ಪ್ರೌಢ ಶಾಲೆ ರಾಜಾಪುರ, ಗುಲ್ಬರ್ಗ ಜಿಲ್ಲೆಯ ಮಕ್ಕಳು

ಹೊಸದಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ಆಯ್ಕೆಗೊಂಡವರಿಗೆ ಮಯ್ಸೂರು ಡಯಟ್ ಏರ್ಪಡಿಸಿದ್ದ ಬುನಾದಿ ತರಬೇತಿಯಲ್ಲಿ “ಶಿಕ್ಷಣದಲ್ಲಿ ರಂಗಕಲೆ” ವಿಚಾರವಾಗಿ ಮಾತನಾಡುವ ಅವಕಾಶ ನನಗೆ ಒದಗಿ ಬಂತು. ಮೊದಲೇ ಅವರೆಲ್ಲ ಶಿಕ್ಷಕರಾಗಿ ಆಯ್ಕೆಗೊಂಡವರು. ಅವರ ಮುಂದೆ ನಾನು ನಿಲ್ಲಬೇಕೆಂದರೆ ಅವರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಿಲು ಸಮರ್ಥನಾಗಿರಬೇಕು ಎಂದು ಸಾಕಷ್ಟು ತಯಾರಾದೆ. ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ತಲಾ ಒಂದೊಂದು ಗದ್ಯ, ಪದ್ಯ ಪಾಠಗಳನ್ನು ಆಯ್ಕೆ ಮಾಡಿಕೊಂಡೆ. ಅವರ ಮುಂದೂ ನಿಂತೆ. ನನ್ನನ್ನು ಕಂಗೆಡಿಸುವಂತ ಒಂದೂ ಪ್ರಶ್ನೆ ಹುಟ್ಟಲಿಲ್ಲ ಅಲ್ಲಿ. ಮಕ್ಕಳೇ ನಮ್ಮನ್ನ ಆಗಾಗ ತಬ್ಬಿಬ್ಬುಗೊಳಿಸುತ್ತವಲ್ಲ ಎಂದುಕೊಂಡೆ! ನನ್ನ ತರಗತಿ ಮುಗಿದ ಮೇಲೆ ಆಯೋಜಕರು ಆ ಶಿಕ್ಷಕರಿಗೆಲ್ಲ ‘ಬೇರೆ ಶಿಕ್ಷಕರು, ಇವರು ಪಾಠ ಮಾಡುವುದು ಬಿಟ್ಟು ನಾಟಕ ಮಾಡುತ್ತಾರಲ್ಲ ಎಂದುಕೊಂಡರೂ ಪರವಾಗಿಲ್ಲ ನಿಮ್ಮ ತರಗತಿಗಳಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿ’ ಎಂದೂ, ಆಚೆ ಬಂದ ಮೇಲೆ ‘ಇವರೆಲ್ಲ ಹೊಸ ಶಿಕ್ಷಕರು ಇನ್ನೂ ಇಲಾಖೆಯ ಒಳಗೆ ಕಾಲಿರಿಸಿಲ್ಲ ಆಗಲೇ ಇವರಲ್ಲಿ ಬಹುತೇಕರಿಗೆ ಪಾಠ ಮಾಡುವ ಉತ್ಸಾಹವೇ ಇಲ್ಲ’ ಎಂದು ನಿರಾಶರಾಗುತ್ತಾರೆ ಆಯೋಜಕರು.

ನನಗೆ ಅನ್ನಿಸುವುದು, ಶಾಲೆಗಳಲ್ಲಿ ರಂಗಚಟುವಟಿಕೆ ಎಂದರೆ ಅಲ್ಲೊಬ್ಬ ನಾಟಕದ ಮೇಸ್ಟ್ರಿದ್ದು ಪ್ರತಿಭಾಕಾರಂಜಿಗೋ, ಶಾಲಾ ವಾರ್ಷಿಕೋತ್ಸವಕ್ಕೋ ಎರಡು ನಾಟಕಗಳನ್ನು ಆಡಿಸಿಕೊಂಡಿರುವುದೇ ರಂಗಚಟುವಟಿಕೆಯೇ? ಹಾಗಾದರೆ ಶಾಲೆಗಳಲ್ಲಿ ರಂಗಚಟುವಟಿಕೆಗಳು ಹೇಗಿರಬೇಕು? ಅದು ಮಕ್ಕಳ ಶಾಲಾ ಕಲಿಕೆಯೊಳಕ್ಕೆ ಹೇಗೆ ಸಂಬಂಧ ಹೊಂದಿರಬೇಕು? ಉಳಿದ ವಿಷಯಗಳು ಬೇರೆ ನಾಟಕವೇ ಬೇರೆ ಎಂತಾದರೆ ಶಿಕ್ಷಣದಲ್ಲಿ ರಂಗಕಲೆ ಎಂಬ ತರಬೇತಿ ಏಕೆ ಬೇಕು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತದೆ.

ಮಂಗಳೂರಿನ ಸ್ವರೂಪ ಸಂಸ್ಥೆ ಪ್ರೌಢ ಶಾಲಾ ಹಂತದ ಗಣಿತ, ವಿಜ್ಞಾನವನ್ನೂ ಒಳಗೊಂಡು ಎಲ್ಲಾ ವಿಷಯಗಳ  ಪಾಠಗಳನ್ನು ನಾಟಕವನ್ನಾಗಿ ರೂಪಾಂತರಿಸಿಕೊಂಡು ಆ ಮೂಲಕ ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡುತ್ತಿದೆ. ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ‘ಶಿಕ್ಷಣದಲ್ಲಿ ರಂಗಕಲೆ’ ಕಾರ್ಯಾಗಾರದಲ್ಲಿ ಗಣಿತದ ಶಿಕ್ಷಕರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಬಹಳ ವಿಶಿಷ್ಟವಾದದ್ದು: “ನಾನು ಇದುವರೆಗೆ ಗಣಿತ ಕಷ್ಟ ಎಂದುಕೊಂಡಿದ್ದೆ; ಈಗ ಗೊತ್ತಾಯಿತು ಗಣಿತ ಕಷ್ಟ ಅಲ್ಲ ಗಣಿತದ ಮೇಸ್ಟ್ರು ಕಷ್ಟ”. ಈ ಎರಡೂ ಉದಾಹರಣೆಯಲ್ಲಿ ‘ಕಷ್ಟ’ ಎನ್ನುವುದನ್ನು ಸುಲಭವಾಗಿಸಿಕೊಳ್ಳುವ ತಂತ್ರಕ್ಕೆ ರಂಗಕಲೆಯನ್ನು ಬಳಸಿಕೊಳ್ಳಲಾಗಿತ್ತು. ಅಂದರೆ ಶಾಲೆಯಲ್ಲಿ ಯಾವುದೋ ನಿರ್ದಿಷ್ಟÀ ಪಠ್ಯವನ್ನಾಯ್ದುಕೊಂಡು ನಾಟಕವಾಡುವುದೇ ರಂಗಚಟುವಟಿಕೆಯಲ್ಲ; ಒಬ್ಬ ಶಿಕ್ಷಕ ಪಾಠ ಮಾಡುವ ಪ್ರಕ್ರಿಯೆಯಲ್ಲಿ ತನ್ನನ್ನು ಸೃಜನಶೀಲವಾಗಿ ತೊಡಗಿಸುಕೊಳ್ಳುವುದೂ ರಂಗಚಟುವಟಿಕೆಯಾಗಬಹುದು. ಇದಕ್ಕಾಗಿಯೇ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ‘ಶಿಕ್ಷಣದಲ್ಲಿ ರಂಗಕಲೆ’ ಎಂಬ ತರಬೇತಿಯನ್ನು ಆಗಾಗ ನೀಡುತ್ತಿದೆ. ಆದರೆ ಶಿಕ್ಷಕರು ಇದನ್ನೊಂದು ಮಾಮೂಲಿ ತರಬೇತಿಯನ್ನಾಗಿ ಗಣಿಸಿದ್ದಾರೆಯೆ ಹೊರತು, ತಾನು ಮಕ್ಕಳ ಮುಂದೆ ಸೃಜನಶೀಲವಾಗಿ ತೆರೆದುಕೊಳ್ಳುವುದಕ್ಕಿರುವ ಮೆಟ್ಟಿಲು ಎಂದು ಭಾವಿಸಿಕೊಂಡಿಲ್ಲ. ಹಾಗಾಗಿ ಸರ್ಕಾರಿ ಶಾಲಾ ಮೇಸ್ಟ್ರುಗಳು ಮಕ್ಕಳಿಗೆ ಕಷ್ಟವಾಗುತ್ತಲೇ ಇದ್ದಾರೆ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಡ್ಲಘಟ್ಟ ಮಕ್ಕಳ ಶಾಮಂತಿ

ಶಿಕ್ಷಣದಲ್ಲಿ ರಂಗಕಲೆ ಎಂಬ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳದೆಯೇ ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ಇತ್ತೀಚೆಗೆ ನಿರಂತರವಾಗಿ ಸಾಗಿದೆ. ಇದಕ್ಕೆ ಕಾರಣ ಸರ್ಕಾರ ಐದು ವರ್ಷಗಳ ಹಿಂದೆ ಪ್ರೌಢ ಶಾಲೆಗಳಿಗೆ ನಾಟಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು. ಈ ಹಿಂದೆಯೂ ರಾಜ್ಯದ ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ನಾಟಕ ಶಿಕ್ಷಕರಿದ್ದರು. ನೀನಾಸಮ್ ಮುಂತಾದ ರಾಜ್ಯದ ಬೇರೆ ಬೇರೆ ರಂಗಶಾಲೆಗಳಲ್ಲಿ ಕಲಿತು ಬಂದ ಹೊಸ ಉತ್ಸಾಹಿ ಯುವಕ ಯುವತಿಯರ ಪಡೆ ರಂಗಶಿಕ್ಷಕರಾಗಿ ನೇಮಕಗೊಂಡು ಶಾಲೆಗಳಿಗೆ ತೆರಳಿ ಈ ಐದು ವರ್ಷಗಳಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆಂದು ಹೇಳಿಕೊಳ್ಳುವುದಕ್ಕೆ ಆಗದಿದ್ದರೂ, ಸರ್ಕಾರಿ ಶಾಲಾ ರಂಗಭೂಮಿ ಹೊಸ ಆಯಾಮ ಪಡೆಯುವುದು, ಮಕ್ಕಳ ಆಸಕ್ತಿಯ ಕ್ಷೇತ್ರಗಳ ಹುಡುಕಾಟ ಇದರಿಂದ ಸಾಧ್ಯವಾಗಿದೆ ಎಂದು ಧೈರ್ಯವಾಗಿ ಹೇಳಬಹುದು. ನಾಟಕ ಶಿಕ್ಷಕರಲ್ಲದಿದ್ದರೂ ಹಲವಾರು ಉತ್ಸಾಹಿ ಮೇಸ್ಟ್ರುಗಳು ಅಲ್ಲಲ್ಲಿ ರಂಗಕಲೆಯನ್ನು ಶಾಲೆಗಳಲ್ಲಿ ಜೀವಂತವಾಗಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹಲವಾರು ಜನ ಪ್ರಾಥಮಿಕ ಶಾಲಾ ಶಿಕ್ಷಕರು ಒಂದು ವರ್ಷದ ನಿಯೋಜನೆಯೊಂದಿಗೆ ನೀನಾಸಮ್ ಪದವಿ ಪಡೆದು ಬಂದು ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಉಡುಪಿ ಜಿಲ್ಲಾ ಪ್ರತಿಭಾಕಾರಂಜಿ ನಾಟಕ ಸ್ಪರ್ಧೆ ಎಂದರೆ ಅದೊಂದು ಮಕ್ಕಳ ನಾಟಕೋತ್ಸವದಂತೆಯೇ ಇರುತ್ತದೆ; ಅಷ್ಟು ಗುಣಮಟ್ಟದ ಮಕ್ಕಳ ನಾಟಕಗಳು ಅಲ್ಲಿ ತಯಾರಾಗುತ್ತಿವೆ.

ಕೋಲಾರ ಜಿಲ್ಲೆ ಕಶೆಟ್ಟಿಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೇಣು ಬರೆದ ತೇಜಸ್ವಿ ಚಿತ್ರ


ನಾಟಕದ ಮೇಸ್ಟ್ರು ಎಂದರೆ ನಾಟಕ ಮಾಡಿಕೊಂಡು ಸಂಬಳ ಪಡೆದು ತಮ್ಮ ತಮ್ಮ ಪಾಡಿಗೆ ಇದ್ದುಬಿಡುವುದು, ನಿಮಗೇನು ಯಾರೂ ಕೇಳುವುದಿಲ್ಲ ಯಾವ ದಾಖಲೆಯೂ ಇಡಬೇಕಾಗಿಲ್ಲ, ಅಥವಾ ಬಿಸಿಯೂಟದ ಖರ್ಚು ವೆಚ್ಚ ನೋಡಿಕೊಂಡೋ, ಗ್ರಂಥಾಲಯ ನೋಡಿಕೊಂಡೋ ಇದ್ದುಬಿಡುವುದು, ಹೀಗೆ ಸಂಬಳಕ್ಕೊಂದು ಜನ ಎಂಬಂತ ಮೂದಲಿಕೆಯನ್ನ ಹುಸಿ ಮಾಡುವಂತೆ ರಾಜ್ಯದ ನಾನಾ ಕಡೆಯಲ್ಲಿ ಕೆಲಸ ಮಾಡುತ್ತಿರುವ ರಂಗಶಿಕ್ಷಕರು ತಮ್ಮ ಸೃಜನಶೀಲತೆಯನ್ನು ತೋರ್ಪಡಿಸುತ್ತಿದ್ದಾರೆ.

ರಂಗಭೂಮಿ ಹೇಳಿಕೇಳಿ ಎಲ್ಲಾ ಕಲೆಗಳನ್ನೂ ಒಳಗೊಂಡ ಸಮಗ್ರ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ, ಚಿತ್ರಕಲೆ ಮುಂತಾದ ಲಲಿತಕಲೆಗಳ ಸಂಗಮ. ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳನ್ನು ನಡೆಸುತ್ತಿರುವ ಬಹುತೇಕ ರಂಗ ಗೆಳೆಯರು, ಅತ್ಯುತ್ಸಾಹದಲ್ಲಿ ಎರಡು ನಾಟಕಗಳನ್ನು ಮಾಡಿಸಿ ಆಮೇಲೆ ಸುಸ್ತಾಗಿ ಕುಳಿತಿಲ್ಲ. ಬದಲಾಗಿ ನಾಟಕ ಎಂದರೆ ಅಭಿನಯ ಚಾತುರ್ಯವನ್ನು ತೋರ್ಪಡಿಸುವ ಕಲೆಯಷ್ಟೇ ಅಲ್ಲ, ಅದೂ ಒಂದು ಕಲಿಕೆ. ಶಾಲಾ ಶೈಕ್ಷಣಿಕ ಶಿಸ್ತಿನ ಆವರಣದೊಳಕ್ಕೆ ನಾಟಕ ಮಾಡುವುದೆಂದರೆ ಅದೊಂದು ಶಿಕ್ಷಣದ ಭಾಗ ಎಂಬುದನ್ನು ದೃಢವಾಗಿ ಕಂಡುಕೊಂಡ ಈ ರಂಗಶಿಕ್ಷಕರು ತಮ್ಮ ತಮ್ಮ ಭಾಗದ ಮಕ್ಕಳ ಮನೋಭಾವವನ್ನು ಅರಿತುಕೊಂಡು ತಮ್ಮದೇ ಆದ ರೀತಿಯಲ್ಲಿ ಪಠ್ಯಕ್ರಮವನ್ನು ವಿನ್ಯಾಸ ಮಾಡಿಕೊಂಡು ಮಕ್ಕಳ ಮುಂದೆ ನಿಂತರು...

ಹಾಗೆ ನಿಂತ ಒಂದಷ್ಟು ಪ್ರಯೋಗಗಳು:

ಸರ್ಕಾರಿ ಪ್ರೌಢ ಶಾಲೆ, ಜಾಕನಪಲ್ಲಿ ಮಕ್ಕಳ ರಂಗತರಬೇತಿ

ಅಶೋಕ ತೊಟ್ನಳ್ಳಿ. ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ ಜಾಕನಪಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಟಕದ ಮೇಸ್ಟ್ರು. ಇವರ ರಂಗಚಟುವಟಿಕೆ ಶಾಲಾ ಆವರಣವನ್ನು ಮೀರಿ ಊರೊಳಗಿನ ಜಾತೀಯ ಕಟ್ಟಳೆಯನ್ನು ಒಡೆಯುವ ಪ್ರಯತ್ನದಲ್ಲಿ ಸಾಗಿದೆ. ಆ ನಿಟ್ಟಿನಲ್ಲಿ ಒಂದಷ್ಟು ಯಶಸ್ವಿಯೂ ಆಗಿದೆ. ಊರ ದೇವರ ಕಟ್ಟೆಯ ಮೇಲೆ ನಾಟಕವಾಡುವಂತಹ ಸನ್ನಿವೇಶ ನಿರ್ಮಾಣವಾದಾಗ ಕೆಳಜಾತಿಯ ಮಕ್ಕಳು ಕಟ್ಟೆಯ ಬಳಿ ಸುಳಿಯಲು ಹಿಂಜರಿದರು. ಮೇಲ್ಜಾತಿ ಮಕ್ಕಳು ಊರ ಗೌಡರನ್ನು ಒಪ್ಪಿಸಿ ನಾಟಕವಾಡಿಯೇ ತೀರಿದರು. ಅಂದಿನಿಂದ ಅಲ್ಲಿ ಎಲ್ಲಾ ಜಾತಿಯ ಮಕ್ಕಳು ಆಟವಾಡುವುದು ಸಾಗಿದೆ. ಅಶೋಕ ತಿಂಗಳಿಗೊಮ್ಮೆ ಊರವರನ್ನೆಲ್ಲಾ ಸೇರಿಸಿ ‘ತಿಂಗಳ ಸಂಜೆ’ ಎನ್ನುವ ಕಾರ್ಯಕ್ರಮವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಶಾಲಾ ವೇದಿಕೆಯಲ್ಲಿ ಹಳ್ಳಿಯ ಜನರು ತಾವು ಮರತೇ ಬಿಟ್ಟಿದ್ದ ಹಾಡು ಕುಣಿತ, ಕೋಲಾಟವನ್ನು ಮತ್ತೆ ಆಡುವುದಕ್ಕೆ ಆರಂಭಿಸಿದ್ದಾರೆ. ನಿರಂತರವಾದ ಚಟುವಟಿಕೆಯು ಶಾಲೆಯನ್ನು ಒಂದು ಸಾಂಸ್ಕøತಿಕ ಕೇಂದ್ರವನ್ನಾಗಿ ರೂಪಿಸುತ್ತಿದೆ. ಮಕ್ಕಳು ನಾಟಕದಲ್ಲಿ ಸತತ ಎರಡು ವರ್ಷಗಳಿಂದ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದು ಹೆಸರು ಮಾಡಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ ಕ್ಯಾಲ್ಕೊಂಡ ಮಕ್ಕಳ ನಾಟಕ

ಕೃಷ್ಣಮೂರ್ತಿ ಮೂಡಬಾಗಿಲು : ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕ್ಯಾಲ್ಕೊಂಡದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಕಳೆದ ಐದು ವರ್ಷಗಳಿಂದ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಈ ಸರ್ಕಾರಿ ಶಾಲೆಯ ಮಕ್ಕಳದ್ದೇ ಪಾರಮ್ಯ. ಅಭಿನಯವೇ ನಾಟಕ ಮತ್ತು ನಟನ ಬಹುಮುಖ್ಯ ಆಸ್ತಿ ಎಂಬುವುದನ್ನು ಸಾಬೀತು ಮಾಡುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೃಷ್ಣಮೂರ್ತಿ ರಂಗಸಜ್ಜಿಕೆ, ರಂಗಪರಿಕರ ಮುಂತಾದವುಗಳಿಗೆ ಆನಂತರದ ಸ್ಥಾನ ನೀಡುತ್ತಾರೆ. ರಂಗಶಾಲೆಯೊಂದರ ವಿದ್ಯಾರ್ಥಿಗಳಂತೆ ರಂಗಶಿಸ್ತನ್ನು ಮಕ್ಕಳಿಗೆ ಕಲಿಸುವ ಈ ಮೇಸ್ಟ್ರ ರಂಗಚಟುವಟಿಕೆಯ ಬೆಂಬಲಕ್ಕೆ ಇಡೀ ಊರು ಸದಾ ನಿಂತಿರುತ್ತದೆ.

ಹ್ಯಾಟಿ ರಮೇಶ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇವರು ಶಿಕ್ಷಕರಾದ ಆರಂಭದಲ್ಲಿ ಮೊದಲು ಮಾಡಿದ ಕೆಲಸ ವಿದ್ಯಾರ್ಥಿಗಳ ಹೆತ್ತವರಿಗೆ ರಂಗಭೂಮಿಯ ಮಹತ್ವದ ಕುರಿತು ಕಾರ್ಯಾಗಾರ ನಡೆಸಿದ್ದು. ನಿರಂತರವಾಗಿ ನಾಟಕದ ಚಟುವಟಿಕೆಯ ಜೊತೆ ಜೊತೆಗೆ “ಅರಳು ಮೊಗ್ಗು” ಮಕ್ಕಳ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ನಾಟಕ ಅನ್ನುವುದು ಮಕ್ಕಳ ಕಲಿಕೆಗೂ ಹೇಗೆ ನೆರವಾಗಬಲ್ಲುದು ಎಂಬ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ರಮೇಶ್, ಮಕ್ಕಳಲ್ಲಿನ ಏಕಾಗ್ರತೆ, ಕಲಿಕಾಸಕ್ತಿ ಬೆಳೆಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಗೋಪಾಲಕೃಷ್ಣ : ದಕ್ಷಿಣಕನ್ನಡ ಜಿಲ್ಲೆಯ ಅದ್ಯಪಾಡಿ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಚಿತ್ರಕಲೆ ಮತ್ತು ರಂಗಕಲೆ ಕಲಿಕೆಗೆ ಹೇಗೆ ಪೂರಕವಾಗಬಹುದು ಎಂಬುದನ್ನು ತನ್ನ ಅಪರೂಪದ ಕಲಿಕಾ ಕ್ರಮದ ಮೂಲಕ ಹುಡುಕಾಟದಲ್ಲಿ ತೊಡಗಿದ್ದಾರೆ. ಮಕ್ಕಳಿಗಾಗಿ ತಾನೇ ವಿನ್ಯಾಸ ಮಾಡಿಕೊಂಡ ಕಲಿಕಾ ಸಾಮಾಗ್ರಿ, ವಿಭಿನ್ನ ಪ್ರಶ್ನೆಪತ್ರಿಕೆಗಳು ಅವರ ಹುಡುಕಾಟಕ್ಕೆ ಸಾಕ್ಷಿ. ಮಕ್ಕಳಿಂದ ಕಥೆ, ಕವನ ಬರೆಯಿಸಿ ಅವುಗಳನ್ನು ರಂಗಕ್ಕೆ ಅಳವಡಿಸಿ ಶಾಲೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರತಿಭಾಕಾರಂಜಿಯಂತಹ ಸ್ಫರ್ಧೆಗಳಲ್ಲಿ ಬೇರೆ ಬೇರೆ ಶಾಲೆಯ ಮಕ್ಕಳು ಒಂದಾಗಿ ಸಹಕಾರ ಮನೋಭಾವದಿಂದ ಬೆರೆಯುವಂತಾಗಬೇಕು ಎಂದು ಮಕ್ಕಳನ್ನು ತಯಾರುಗೊಳಿಸಿರುವ ಗೋಪಾಲ್, ತಮ್ಮ ಮಕ್ಕಳು ಮಾತ್ರ ಬೇರೆ ಮಕ್ಕಳಿಗೆ ಸಹಾಯ ಮಾಡುತ್ತಾರೆ; ಉಳಿದೆಲ್ಲ ಮಕ್ಕಳು ಪ್ರತಿಭಾಕಾರಂಜಿಯನ್ನು ಮಕ್ಕಳ ನಡುವಿನ ಯುದ್ಧ ಅನ್ನುವ ಹಾಗೆ ಭಾವಿಸುತ್ತಾರೆ ಎಂದು ಸಂಕಟಪಡುತ್ತಾರೆ.

ಚಿತ್ರಾ ವಿ. : ಧಾರವಾಡ ಜಿಲ್ಲೆಯ ಮನುಗುಂಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕಿಯಾಗಿರುವ ಚಿತ್ರಾ, ರಂಗಭೂಮಿಯ ವಾತಾವರಣ ನಿರ್ಮಾಣ ಮಾಡಲು ಹೆಣಗಾಡಿ ಈಗೊಂದು ರೂಪಕ್ಕೆ ತಂದುನಿಲ್ಲಿಸಿ ಹೊಸ ಹೊಸ ರಂಗಪ್ರಯೋಗದಲ್ಲಿ ತೊಡಗಿಕೊಂಡಿದ್ದಾರೆ. ಕಿನ್ನರ ಮೇಳದಂತಹ ರಂಗತಂಡಗಳನ್ನು ಶಾಲೆಗೆ ಕರೆಯಿಸಿ ನಾಟಕಗಳನ್ನು ಮಕ್ಕಳಿಗೆ ತೋರಿಸಿದ್ದಾರೆ. ಗೋಕುಲ ನಿರ್ಗಮನ ಮುಂತಾದ ವಿಶಿಷ್ಟ ರಂಗಪ್ರಯೋಗಗಳು, ವಿಭಿನ್ನ ಚಲನಚಿತ್ರಗಳನ್ನು ಶಾಲೆಯ ಪ್ರೊಜೆಕ್ಟರ್ ಬಳಸಿ ಮಕ್ಕಳಿಗೆ ತೋರಿಸಿ ಹೊಸ ಹೊಸ ಅಭಿರುಚಿಗಳನ್ನು ಬೆಳೆಸಿದ್ದಾರೆ.

ಎಸ್. ಕಲಾಧರ್ ಮತ್ತು ದೇವರಾಜ್ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಈ ಜೋಡಿ ಸುತ್ತಮುತ್ತಲ ಶಾಲೆಯ ಮಕ್ಕಳನ್ನು ತಮ್ಮ ಶಾಲೆಗೆ ಆಹ್ವಾನಿಸಿ ಮಕ್ಕಳ ರಂಗೋತ್ಸವವನ್ನು ಆಚರಿಸಿ ಭಾಗವಹಿಸಿದ ಮಕ್ಕಳಿಗೆಲ್ಲ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಾರೆ. ಈ ಜೋಡಿಯ ಅಪರೂಪದ ಕೆಲಸಗಳು ಬೇರೆಯವರಲ್ಲಿ ಹೊಟ್ಟೆಯುರಿಯನ್ನು ತರಿಸಿ ಒಬ್ಬರನ್ನು ಶಾಲೆಯಿಂದ ವರ್ಗಾವಣೆ ಮಾಡಿಸಿಬಿಟ್ಟಿದೆ. ಆದರೂ ಛಲಬಿಡದ ಕಲಾಧರ್ ಶಾಲೆಯಲ್ಲಿದ್ದುಕೊಂಡೆ “ಶಾಮಂತಿ” ಎನ್ನುವ ಮಕ್ಕಳ ಬರಹಗಳ ಅಪರೂಪದ ಪುಸ್ತಕವನ್ನು ವರ್ಷಕ್ಕೊಮ್ಮೆ ಹೊರ ತರುತ್ತಿದ್ದಾರೆ.


ಸರ್ಕಾರಿ ಪ್ರೌಢ ಶಾಲೆ, ಹೆಮ್ಮರಗಾಲ ಶಾಲೆಯ ಮಕ್ಕಳ ಪತ್ರಿಕೆ

ಸದಾನಂದ ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕೋಣಿಯಲ್ಲಿ ಇಂಗ್ಲಿಶ್ ಮೇಸ್ಟ್ರು. ಒಂದು ವರ್ಷದ ನಿಯೋಜನೆಯ ಮೇರೆಗೆ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಮುಗಿಸಿಕೊಂಡು ಮರಳಿ ಶಾಲೆಗೆ ಬಂದು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂರಕವಾಗಿ “ಮಿಂಚು” ಎನ್ನುವ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಶ್ರೀಕಾಂತ್ ಕುಮಟಾ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಮಕ್ಕಳ ಜೊತೆ ಜೊತೆಗೆ ಮುಖವಾಡ ರಚಿಸಿಕೊಂಡು ಅವುಗಳನ್ನೇ ಪಾತ್ರವಾಗಿಸಿಕೊಂಡು ರಂಗಪ್ರಯೋಗಗಳನ್ನು ರೂಪಿಸುತ್ತಾ ಬಂದವರು. ಅವರ ರಂಗಪ್ರಯೋಗಗಳು ಜಾತಿವಾದಿಗಳ ನಿದ್ದೆಗೆಡಿಸಿದ್ದೂ ನಡೆದಿದೆ. ಆದರೆ ಇರುವುದನ್ನ ತೋರಿಸಿಕೊಡಬೇಕು ರಂಗಭೂಮಿ, ಅದು ಕೂಡ ಕಲಿಕೆ ಎಂದು ದೃಢವಾಗಿ ನಂಬಿದ್ದ ಶ್ರೀಕಾಂತ್ ನಾಲ್ಕು ತಿಂಗಳ ಹಿಂದೆ “ಮಲೆನಾಡ ಇಳೆ” ಎಂಬ ಮಕ್ಕಳ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಮಕ್ಕಳ ಪತ್ರಿಕೆ

ಶಿವಾನಂದ ಸ್ವಾಮಿ : ಮಯ್ಸೂರು ನಗರದ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ರಂಗಶಿಕ್ಷಕರಾಗಿರುವ ಇರುವ ಮಕ್ಕಳ ರಂಗಚಟುವಟಿಕೆಗಳ ಜೊತೆ ಜೊತೆಗೆ ಗೊಂಬೆಯಾಟವನ್ನೂ ಮಾಡಿಸುತ್ತಾ ಬಂದಿದ್ದಾರೆ.

ಗುರುರಾಜ್ ಹೊಸಪೇಟೆ : ಕೊಪ್ಪಳ ಜಿಲ್ಲೆ ಜಹಾಗೀರಗುಡದೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇರುವ ‘ಮಕ್ಕಳ ಹೆಜ್ಜೆ ಜಾನಪದದತ್ತ’ ಎಂಬ ಘೋಷಣೆಯೊಂದಿಗೆ ಶಾಲಾ ರಂಗಚಟುವಟಿಕೆಗೆ ಹೊಸ ಆಯಾಮ ನೀಡಿದ್ದಾರೆ. ಇವರೆಲ್ಲರ ಜೊತೆಗೆ ರಾಯಚೂರಿನ ಮಾನ್ವಿಯಲ್ಲಿ ರಾಮಣ್ಣ, ಬಳ್ಳಾರಿಯ ಹೂವಿನಹಡಗಲಿಯಲ್ಲಿ ಅನ್ನಪೂರ್ಣ ದೇಸಾಯಿ, ಅಕ್ಕಮ್ಮ, ಮಡಿಕೇರಿಯಲ್ಲಿ ಪ್ರವೀಣ್ ಕುಮಾರ್ ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸವಿತಾ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮೂಡಲಕೊಪ್ಪಲಿನಲ್ಲಿ ಶಾಂತಾಮಣಿ, ಕೊಟ್ಟೂರಿನಲ್ಲಿ ಶ್ರೀಕಾಂತ್ ದಾವಣಗೆರೆ, ಚನ್ನಗಿರಿಯಲ್ಲಿ ವೆಂಕಟೇಶ್ವರ, ಕುಂದಾಪುರದ ಗುಜ್ಜಾಡಿಯಲ್ಲಿ ವಾಸುದೇವ ಗಂಗೇರ, ಚಾಮರಾಜನಗರ ಜಿಲ್ಲೆಯ ಯಳಂದೂರಿನ ಗುಂಬಳ್ಳಿಯಲ್ಲಿ ಮಧುಕರ ಮಳವಳ್ಳಿ, ಧಾರವಾಡ ಕಲಘಟಗಿಯಲ್ಲಿ ಮಲ್ಲೇಶ ಪಾವಗಡ, ಧಾರವಾಡದಲ್ಲಿ ರಾಘವೇಂದ್ರ ಗುಂಡಬಾಳ, ಗುಲ್ಬರ್ಗದಲ್ಲಿ ರಾಘವೇಂದ್ರ ಹಳೇಪೇಟೆ, ಬೆಂಗಳೂರಿನ ಹೊಸಕೋಟೆಯಲ್ಲಿ ಶ್ಯಾಮಲ ಗುಡ್ಡಿಯಂಗಡಿ, ಭಾನುಪ್ರಕಾಶ್, ತುಮಕೂರಿನಲ್ಲಿ ಗೋಪಾಲಕೃಷ್ಣ, ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಶೇಖರಪ್ಪ, ಹಾನಗಲ್ಲ ತಾಲೂಕಿನಲ್ಲಿ ಈಡಿಗರ ವೆಂಕಟೇಶ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೀತಿ ಇನ್ನೂ ಹಲವಾರು ಜನ ಶಿಕ್ಷಕ ಶಿಕ್ಷಕಿಯರು ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕುಗ್ರಾಮಗಳಲ್ಲಿ ಎಂಬುದು.

ನನ್ನ ಚಟುವಟಿಕೆಯನ್ನೂ ಇಲ್ಲಿ ಪ್ರಸ್ತಾಪಿಸುತ್ತೇನೆ. ನಂಜನಗೂಡಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕನಾಗಿರುವ ನಾನು, ನಾಟಕವನ್ನು ಆಡುವುದೂ ಕಲಿಕೆ; ನಾಟಕವನ್ನು ನೋಡುವುದೂ ಕಲಿಕೆ ಎಂದು ಭಾವಿಸಿಕೊಂಡಿರುವವನು ಮತ್ತು ನನ್ನ ವಿದ್ಯಾರ್ಥಿಗಳ ರಂಗಚಟುವಟಿಕೆಗಳನ್ನು ಆ ನಿಟ್ಟಿನಲ್ಲಿ ವಿನ್ಯಾಸ ಮಾಡಿಕೊಂಡಿರುವವನು. ಮೇಲೆ ತಿಳಿಸಿರುವಂತಹ ಶಿಕ್ಷಕರೂ ಅಲ್ಲದೆ ಹೆಸರು ಸೂಚಿಸದ ಇನ್ನೂ ಅನೇಕ ಶಿಕ್ಷಕರು ಕೂಡ ಇದನ್ನೇ ನಂಬಿಕೊಂಡಿದ್ದಾರೆಂಬುದು ಅವರೊಡನೆ ಮಾತನಾಡಿದಾಗ ನನ್ನ ಅನುಭವಕ್ಕೆ ಬಂದಿದೆ. ಸಾಹಿತ್ಯ ಓದು, ಬರಹ ಕೂಡ ರಂಗಕಲಿಕೆಯ ಒಂದು ಭಾಗ ಎಂದು ನಂಬಿಕೊಂಡು ಬಂದಿರುವ ನಾನು ಮಕ್ಕಳಲ್ಲಿನ ಕಲ್ಪನಾ ಶಕ್ತಿ ಬೆಳೆಸುವುದಕ್ಕೆ ಸುಳ್ಳು ಕಥೆ ಬರೆಸುವುದು, ಕವಿತೆಗಳನ್ನು ಬರೆಸುವ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಮಕ್ಕಳ ಆ ಕಲಿಕೆಯ ಪ್ರದರ್ಶನಕ್ಕೆ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡು ಹಿಂದೆ “ಹೆಮ್ಮರ” ಈಗ “ಅಳ್ಳೀಮರ” ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೇನೆ. ಮತ್ತು ಶಾಲೆಯಲ್ಲಿ ಮಕ್ಕಳ ರಂಗಚಟುವಟಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟಮಾಡುವುದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಗಿದ್ದನ್ನು ಗಮನಿಸಿದ್ದೇನೆ. ಶಾಲೆಯ ರಜೆಯ ವೇಳೆಯಲ್ಲಿ ರಂಗಶಿಬಿರಗಳನ್ನು ನಡೆಸಿ ಮಕ್ಕಳಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವುದು ನನಗೆ ಸಾಧ್ಯವಾಗಿದೆ.

ರಂಗ ತರಬೇತಿ ಶಿಬಿರ ಎಂದರೆ ಅಲ್ಲಿ ಪೂರ್ಣವಾಗಿ ರಂಗಕ್ಕೆ ಸಂಬಂಧಿಸಿದ ಕಲಿಕೆಗೆ ಮಕ್ಕಳನ್ನು ತೊಡಗಿಸಬಹುದು. ಆದರೆ ಶಾಲೆಗಳಲ್ಲಿ ಅದು ಸಾಧ್ಯವಿಲ್ಲ. ಯಾಕೆಂದರೆ ಶಾಲೆಯ ಚೌಕಟ್ಟು ವಿಭಿನ್ನ ವಿಷಯಗಳ ಕಲಿಕಾವೇದಿಕೆ. ಅಲ್ಲಿ ರಂಗ ಕಲಿಕೆಗೆ ಮಕ್ಕಳನ್ನು ತಯಾರುಗೊಳಿಸಬೇಕೆಂದರೆ ಸಮಯದ ಮಿತಿ ಇದೆ. ಎಲ್ಲಾ ರಂಗಶಿಕ್ಷಕರ ಕೊರತೆ ಎಂದರೆ ಸಮಯದ ಮಿತಿ. ಆದರೆ ಈ ಎಲ್ಲಾ ಶಿಕ್ಷಕರು ಸಮಯದ ಮಿತಿಗೆ ತಮ್ಮನ್ನು ಮಿತಿಗೊಳಿಸಿಕೊಳ್ಳದೆ, ಅದನ್ನು ಮೀರಿ ಶಾಲಾ ಅವಧಿಯ ನಂತರವೂ ರಂಗತಾಲೀಮು ನಡೆಸುವುದರೊಂದಿಗೆ ಮಕ್ಕಳ ಅಭಿರುಚಿಯನ್ನು ಹಿಗ್ಗಿಸುವತ್ತ ಮುನ್ನಡೆದಿದ್ದಾರೆ. ರಂಗಚಟುವಟಿಕೆ ಎಂದರೆ ಅದು ಬರಿಯ ನಾಟಕದ ತಾಲೀಮು ಪ್ರದರ್ಶನವಲ್ಲ; ಬದಲಾಗಿ ಮಕ್ಕಳ ವ್ಯಕ್ತಿತ್ವವಿಕಸನದ ಹೆದ್ದಾರಿ ಎಂಬುದನ್ನು ಅರಿತಿರುವುದು ಅವರ ತರಗತಿಗಳ ವಿನ್ಯಾಸದ ರೂಪುರೇಷೆಗಳಲ್ಲಿ ವೇದ್ಯವಾಗುತ್ತದೆ. ನಾಟಕ ಶಿಕ್ಷಕ ಎಂಬ ಹುದ್ದೆಯನ್ನು ವಾರ್ಷಿಕೋತ್ಸವ, ರಾಷ್ಟ್ರೀಯ ಹಬ್ಬಗಳ ಸಾಂಸ್ಕøತಿಕ ಕಾರ್ಯಕ್ರಮಗಳ ತಯಾರಕ ಎಂಬುದಕ್ಕೆ ಸೀಮಿತಗೊಳಿಸಿಕೊಳ್ಳದೆ, ರಂಗಕಲೆಯ ಜೀವಂತಿಕೆಯ ಅರಿವನ್ನು ಮೂಡಿಸುವ ಪ್ರಯತ್ನ ಈ ಎಲ್ಲರ ಚಟುವಟಿಕೆಗಳಲ್ಲಿ ಎದ್ದು ಕಾಣುತ್ತದೆ. ಒಂದು ವೇಳೆ ಈ ಶಿಕ್ಷಕರು ತಮ್ಮ ಕರ್ತವ್ಯದಿಂದ ವಿಮುಖರಾಗಿಬಿಟ್ಟರೆ ತಮ್ಮ ಸಹೋದ್ಯೋಗಿಗಳ ಕಣ್ಣಲ್ಲಿ ಸಣ್ಣವರಾಗಬೇಕಾಗುತ್ತದೆ. ಆ ಎಚ್ಚರವನ್ನು ರಂಗ ಶಿಕ್ಷಕರು ಕಾಪಾಡಿಕೊಂಡರೆ ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳು ಜೀವಂತವಾಗಿರುತ್ತದೆ.

ಪ್ರತಿಭಾಕಾರಂಜಿ : ಇದು ಮಕ್ಕಳೊಳಗಿನ ಪ್ರತಿಭಾವಿಲಾಸವನ್ನು ತೆರೆದು ಕಾಣಿಸುವ ವೇದಿಕೆ. ಆದರೆ ಶಿಕ್ಷಕರ ಸಣ್ಣತನಗಳು ಮಕ್ಕಳ ಪ್ರತಿಭೆಯ ಕಗ್ಗೊಲೆಯನ್ನು ಮಾಡುತ್ತಿವೆ. ಪ್ರತಿಭಾವಂತ ಮಕ್ಕಳು ಕೆಳಹಂತದ ಸ್ಪರ್ಧೆಗಳಲ್ಲಿಯೆ ನಿರ್ಗಮಿಸುವಂತಾಗುತ್ತಿದೆ. ಮಕ್ಕಳ ಮಧ್ಯದ ಸ್ಪರ್ಧಾಮನೋಭಾವ ಸಂಘರ್ಷದ ರೂಪ ತಾಳಿ, ಬೇರೆ ಬೇರೆ ಶಾಲೆಗಳ ಮಕ್ಕಳು ಒಂದೆಡೆ ಸೇರಿದ್ದರೂ ಒಟ್ಟಿಗೆ ಬೆರೆಯುವುದು ಸಾಧ್ಯವಾಗುತ್ತಿಲ್ಲ. ಪ್ರತಿಭಾಕಾರಂಜಿಯಲ್ಲಿ ಅತಿದೊಡ್ಡ ಸ್ಪರ್ಧೆ ನಾಟಕ. ರಂಗಶಿಕ್ಷಕರಿರುವ ಶಾಲೆಗಳ ಮಕ್ಕಳ ನಾಟಕಗಳು ರಂಗಭೂಮಿಯ ಶಿಸ್ತಿನೊಂದಿಗೆ ರೂಪುಗೊಂಡು ಯಶಸ್ವಿಯಾಗಿದ್ದರೆ, ರಂಗ ಚಟುವಟಿಕೆಯ ಪರಿಚಯವಿಲ್ಲದೆಯೂ ಕೆಲ ಉತ್ಸಾಹಿ ಶಿಕ್ಷಕರು ನಾಟಕಗಳನ್ನು ತಯಾರುಮಾಡಿಕೊಂಡು ಭಾಗವಹಿಸುತ್ತಾರೆ. ಆದರೆ ಇಲ್ಲಿ ರಂಗಶಿಸ್ತಿನ ಯಾವುದೇ ಗಂಧಗಾಳಿಯಿಲ್ಲದ ನಾಟಕಗಳೆ ಮುಂದಿನ ಹಂತಕ್ಕೆ ಹೋಗುವಂತಾಗುತ್ತದೆ. ಕಾರಣ ಶಿಕ್ಷಕರ ಪ್ರಭಾವ. ಇದು ಹೆಚ್ಚಿನ ಎಲ್ಲಾ ಸ್ಪರ್ಧೆಗಳಲ್ಲೂ ಕಂಡು ಬಂದು ಮಕ್ಕಳು ಮಕ್ಕಳನ್ನೇ ದ್ವೇಷಿಸುವಂತಾಗುತ್ತದೆ. ಪ್ರತಿಭಾಕಾರಂಜಿಯಲ್ಲಿ ಮಕ್ಕಳ ನಾಟಕಗಳ ಸ್ಪರ್ಧೆಯನ್ನು ಮಾಡಿಸುವ ಬದಲು ಮಕ್ಕಳ ನಾಟಕೋತ್ಸವ ಮಾಡಿದರೆ ಬೇರೆ ಬೇರೆ ಜಿಲ್ಲೆಗಳ ಮಕ್ಕಳು ಪ್ರೀತಿಯಿಂದ ಬೆರೆತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಬಂಧುತ್ವವನ್ನು ಬೆಳೆಸಿಕೊಳ್ಳುತ್ತಾರೆ. ರಂಗಭೂಮಿಯ ಉದ್ದೇಶವು ಅದೆ. ಬದುಕನ್ನು ತಿಳಿಯುವುದು. ಹಾಗಾದಾಗ ನಮ್ಮ ನಡುವಿನ ಕ್ರೋಧವಳಿದು ಸೌಹಾರ್ದತೆ ಮನೆ ಮಾಡುತ್ತದೆ; ಅದು ಶಿಕ್ಷಣ. ಇಂತಹ ನಾಟಕೋತ್ಸವಗಳು ನಡೆದರೆ ಮಕ್ಕಳು ಬೇರೆ ಬೇರೆ ನಾಟಕಗಳನ್ನು ನೋಡುತ್ತಾರೆ. ನಾಟಕವನ್ನು ನೋಡುವುದು ಎಂದರೆ ಅದೇ ಒಂದು ಕಲಿಕೆ. ಗಂಟೆಗಟ್ಟಲೆ ನಿಂತು ಭಾಷಣವೋ ಉಪನ್ಯಾಸವೋ ಮಾಡಿ ಕಲಿಸುವ ಕ್ರಮಕ್ಕಿಂತಲೂ ನಾಟಕಗಳನ್ನು ಮಾಡಿ, ನೋಡಿ ಕಲಿಸುವ ಕಲಿಕೆ ಮಕ್ಕಳ ಮನೋಲೋಕವನ್ನು ಬಹುಬೇಗ ಪ್ರಭಾವಿಸುತ್ತವೆ.

ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ನಡೆಯುತ್ತವೆ. ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ರಂಗಶಿಕ್ಷಕರ ಚಟುವಟಿಕೆಗಳನ್ನು ಆಗಾಗ ರಾಜ್ಯದ ದೊಡ್ಡ ಪತ್ರಿಕೆಗಳು ಸುದ್ಧಿ ಮಾಡುತ್ತಿವೆ. ರಂಗಚಟುವಟಿಕೆ ನಡೆÀಸುವುದಕ್ಕೆ ಸಂಪನ್ಮೂಲವೂ ಅಗತ್ಯ. ಸಂಪನ್ಮೂಲವನ್ನು ಕ್ರೋಢೀಕರಿಸುವುದಕ್ಕೆ ಹಣದ ಅಗತ್ಯವು ಇರುತ್ತದೆ. ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಡೆಸುವ ಎಲ್ಲಾ ಶಿಕ್ಷಕರ ಅಳಲು ಒಂದೆ, ತಾವು ಏನೇ ಕಾರ್ಯಕ್ರಮ ನಡೆಸಿದರೂ ಅದಕ್ಕೆ ತಮ್ಮ ಜೇಬಿನಿಂದಲೇ ಹಣವನ್ನು ಭರಿಸಬೇಕಾಗುತ್ತದೆ ಎಂಬುದು! ಅದಕ್ಕೆ ಬಹುತೇಕ ರಂಗಶಿಕ್ಷಕರು ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ಕೂಡ! ಒಂದು ಒಳ್ಳೆಯ ಕಾರ್ಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ನಡೆಸುತ್ತಾರೆ ಎಂದರೆ ಅದರ ಕೀರ್ತಿ ಶಾಲೆಗೆ ಸಲ್ಲುವುದು. ತಮ್ಮದೆ ಸಂಬಳದಲ್ಲಿ ಶಾಲೆಯಲ್ಲಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಅದನ್ನು ತಮ್ಮ ಶಾಲೆಯ ಕಾರ್ಯಕ್ರಮ ಎಂದು ಹೆಮ್ಮೆಪಟ್ಟುಕೊಳ್ಳುವ ಈ ರಂಗಶಿಕ್ಷಕರು, ನಾಟಕೋತ್ಸಾಹಿ ಮೇಸ್ಟ್ರುಗಳ ಉತ್ಸಾಹ ಬತ್ತದೆ ಸದಾ ಉಳಿಯಲಿ. ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿ ಸಮರ್ಥವಾಗಿ ಬಳಕೆಯಾಗಲಿ.

ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ರಂಗಚಟುವಟಿಕೆಗಳು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಲಾಖೆ ನೀಡಿ ಗೌರವಿಸಿದೆ. ಆಯಾಯ ಜಿಲ್ಲಾ ಡಯಟ್ ಸಂಸ್ಥೆ ಈ ಶಿಕ್ಷಕರನ್ನು ಸಂಪನ್ಮೂಲವ್ಯಕ್ತಿಗಳನ್ನಾಗಿ ಬಳಸಿಕೊಳ್ಳುತ್ತಿದೆ. ಇಲಾಖೆಯ ಶಿಕ್ಷಣವಾರ್ತೆ ಪತ್ರಿಕೆ ಇವರ ರಂಗಚಟುವಟಿಕೆಗಳನ್ನು ಕುರಿತು ವಿವರವಾದ ಚಿತ್ರ ಲೇಖನಗಳನ್ನು ಪ್ರಕಟಿಸಿದೆ. ಸಂಘ ಸಂಸ್ಥೆಗಳು ನಿರಂತರವಾಗಿ ನಾಟಕಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರುಗಳನ್ನು, ವಿದ್ಯಾರ್ಥಿಗಳನ್ನು ಗೌರವಿಸಿದೆ. ಕಾಲೆಳೆಯುವ ಸಹೋದ್ಯೋಗಿಗಳ ನಡುವೆ ಬೆನ್ನುತಟ್ಟುವ ಸಹೋದ್ಯೋಗಿಗಳ ಸಂಖ್ಯೆಯು ಬೆಳೆಯುತ್ತಿದೆ. ನಾಟಕದ ಪರಿಣಾಮ ಉಳಿದ ಶಿಕ್ಷಕರಿಗೆ ಮನವರಿಕೆಯಾಗುತ್ತಿದೆ.

ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಕೊರತೆ ಎಂದರೆ ರಾಜ್ಯದಲ್ಲಿರುವ ಸಾವಿರಾರು ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ರಂಗಶಿಕ್ಷಕರಿರುವ ಶಾಲೆಗಳ ಸಂಖ್ಯೆ ನೂರನ್ನೂ ದಾಟುವುದಿಲ್ಲ. ರಂಗಕಲೆಯ ಪರಿಚಯ ಕೆಲವೇ ಕೆಲವು ಶಾಲೆಗಳ ಕೆಲವೇ ಕೆಲವು ಮಕ್ಕಳಿಗೆ ತಲುಪುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ರಂಗಚಟುವಟಿಕೆಗಳು ವಿಸ್ತಾರಗೊಳ್ಳಬೇಕಾದರೆ ಸರ್ಕಾರ ಇನ್ನಷ್ಟು ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇತರೆ ವಿಷಯಗಳ ಉತ್ಸಾಹಿ ಶಿಕ್ಷಕರಿಗೆ ಅವರ ಕಾರ್ಯದೊತ್ತಡದ ಮಿತಿಯಿರುತ್ತದೆ. ಹಾಗಾಗಿ ಮಕ್ಕಳಿಗೆ ರಂಗಕಲೆಯ ಸಮಗ್ರ ಪರಿಚಯವಾಗಬೇಕಾದರೆ ಪ್ರತೀ ಶಾಲೆಯಲ್ಲೂ ರಂಗಶಿಕ್ಷಕರಿರಬೇಕು. ರಂಗಚಟುವಟಿಕೆ ಎಂದರೆ ಪ್ರತಿಭಾಕಾರಂಜಿ, ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೆ ಅದೊಂದು ಕಲಿಕೆಯಾಗಬೇಕು. ಆ ನಿಟ್ಟಿನಲ್ಲಿ ಇಲಾಖೆ ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸಬೇಕು. ಆಗ ಶಾಲೆಯ ಉಳಿದ ಶಿಕ್ಷಕರು ಪಠ್ಯೇತರ ಎಂದು ಭಾವಿಸುವ ನಾಟಕ, ನೃತ್ಯ ಮುಂತಾದ ವಿಷಯಗಳಿಗೆ ಮಹತ್ವ ನೀಡಲು ತೊಡಗುತ್ತಾರೆ. ಇದು ಆಗಬೇಕಾದ ದರ್ದು. ಇಲ್ಲವಾದಲ್ಲಿ ರಂಗಚಟುವಟಿಕೆಗಳು ಉಳಿದ ಶಿಕ್ಷಕರಿಗೆ ಸಮಯ ವರ್ಥಮಾಡುವ ವಿಧಾನವಾಗಿ ಕಾಣುತ್ತದೆ.

ಶಾಲೆಯ ಚಟುವಟಿಕೆ ಎಂದರೆ ಅದೊಂದು ಸಮಾಜದ ಚಟುವಟಿಕೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಹಾಗಾಗುತ್ತಿಲ್ಲ. ಶಿಕ್ಷಕರು ಕೂಪಗಳಾಗಿ ತಮ್ಮ ವಿಷಯವೇ ಮೇಲು ಅದಕ್ಕೇ ಹೆಚ್ಚು ಮಹತ್ವ ನೀಡಬೇಕು. ಕ್ರೀಡೆ, ನಾಟಕ, ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಿಗೆ ಪರೀಕ್ಷೆಯಿಲ್ಲ ಹಾಗಾಗಿ ಅವನ್ನು ಕಲಿಯದಿದ್ದರೂ ನಡೆಯುತ್ತದೆ ಎಂಬ ಧೋರಣೆ ಹೊಂದಿದ್ದಾರೆ; ಇದು ಆರೋಪವಲ್ಲ ನಿಜ ಸ್ಥಿತಿ. ನಾಟಕ, ಚಿತ್ರಕಲೆ ಮುಂತಾದ ವಿಷಯಗಳ ಶಿಕ್ಷಕರು ಎಷ್ಟೇ ಅದ್ಭುತವಾಗಿ ಕೆಲಸ ನಿರ್ವಹಿಸಿದರೂ ಶಾಲೆಗಳಲ್ಲಿಯೆ ಅವರಿಗೆ ಬೆನ್ತಟ್ಟುವ ಕೆಲಸ ನಡೆಯುತ್ತಿಲ್ಲ. ನಾಟಕ ಮುಂತಾದ ಕಲೆಗಳು ಮಕ್ಕಳ ಬೆಳವಣಿಗೆಯಲ್ಲಿ, ಮನುಷ್ಯರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂಬ ಅರಿವಿಲ್ಲ. ತಮ್ಮ ದುರಂಹಕಾರದಿಂದಾಗಿ  ಉತ್ತಮ ಕಾರ್ಯಗಳನ್ನು ಕಡೆಗಣಿಸಿಯೋ, ಮುಖ್ಯಶಿಕ್ಷಕರಿಗೆ ಕಿವಿಚುಚ್ಚಿಯೋ ರಂಗಶಿಕ್ಷಕರ, ಉತ್ಸಾಹಿ ಶಿಕ್ಷಕರಿಗೆ ಅಡ್ಡಗಾಲಾಗುತ್ತಿದ್ದಾರೆ. ಇಂತವುಗಳು ನಿಂತರೆ ಸರ್ಕಾರಿ ಶಾಲೆಗಳು ಹೊಸ ಚೈತನ್ಯ ಪಡೆದುಕೊಳ್ಳುತ್ತವೆ. ತಾವೇ ಜ್ಞಾನಿಗಳು ಎಂಬ ಅಹಂಭಾವವನ್ನು ಬಿಟ್ಟು ಪ್ರತಿಭಾವಂತ ರಂಗಶಿಕ್ಷಕರು, ಸಂಗೀತ, ಚಿತ್ರಕಲಾ ಶಿಕ್ಷಕರು ಮುಂತಾದ ಶಿಕ್ಷಕರ ನೆರವನ್ನು ತಮ್ಮ ವಿಷಯಗಳಿಗೆ ಬಳಸಿಕೊಂಡರೆ ಶಾಲಾ ಕಲಿಕೆಯ ಹಳೆಯ ಮಾದರಿಗಳನ್ನು ಮುರಿದು ಹೊಸದಾಗಿ ಕಟ್ಟಬಹುದು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡಮಕ್ಕಳ ಬಾಳಿಗೆ ದೀಪವಾಗಬಹುದು. ಇದರ ಸಂಪೂರ್ಣ ಹೊಣೆಗಾರಿಕೆ ಶಿಕ್ಷಕರದ್ದು.
ಶಿಕ್ಷಣ ಎನ್ನುವುದು ಪಾಠಗಳನ್ನು ಮಾಡಿ ಅಂಕ ಗಳಿಸುವ ಯಂತ್ರಗಳನ್ನು ತಯಾರುಮಾಡುವ ಕಾರ್ಖಾನೆಯಲ್ಲ. ಅದು ಸಮಾಜದ ಸಜ್ಜನರನ್ನು ರೂಪುಗೊಳಿಸುವ ಪ್ರಯೋಗ ಶಾಲೆ. ಈ ಪ್ರಯೋಗ ಶಾಲೆಗೆ ಜೀವಂತಿಕೆಯ ಸ್ಪರ್ಶ ಬೇಕಾಗಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಈ ಜೀವಂತಿಕೆ ಕಳೆದು ಹೋಗಿದೆ. ರಂಗಕಲೆ ಅದನ್ನು ಹುಡುಕಿಕೊಡುವ ಸಾಮಥ್ರ್ಯ ಹೊಂದಿದೆ. ಬೇರೆ ಬೇರೆ ವಿಷಯಗಳ ಶಿಕ್ಷಕರು ರಂಗಕಲೆಯನ್ನು ತಮ್ಮ ಪಾಠ ಮಾಡುವ ಕ್ರಮಕ್ಕೆ ಅಳವಡಿಸಿಕೊಳ್ಳುವುದು ಕೂಡ ರಂಗಚಟುವಟಿಕೆಯೇ ಆಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ನಾಟಕಗಳನ್ನು ಆಡಿಸುವುದು ಮಾತ್ರ ರಂಗಚಟುವಟಿಕೆ ಎನಿಸಿಕೊಳ್ಳುವುದಿಲ್ಲ, ಶಾಲೆಯ ನಿರಂತರ ಪಾಠ ಪ್ರವಚನಗಳಲ್ಲಿ ರಂಗಕಲೆಯ ಅಳವಡಿಕೆ ಕೂಡ ರಂಗಚಟುವಟಿಕೆಯೆ ಎನಿಸಿಕೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ರಂಗಕಲೆಯ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಮತ್ತು ಅವರ ಬಳಕೆಯನ್ನು ಮಾಡಿಕೊಳ್ಳುವ ಕುರಿತಾಗಿ ಇಲಾಖೆಯೇ ನೀತಿಯೊಂದನ್ನು ರೂಪಿಸಿ ‘ಆದೇಶ’ ರೂಪದಲ್ಲಿ ಶಾಲೆಗಳಿಗೆ ದಯಪಾಲಿಸಿದರೆ ಮಕ್ಕಳನ್ನು ಕಲಿಕಾಯಂತ್ರಗಳನ್ನಾಗಿ ಜಡಗೊಳಿಸಿದ್ದ ವ್ಯವಸ್ಥೆಯೊಳಗೊಂದಷ್ಟು ಲವಲವಿಕೆ ಮೂಡಬಹುದು.

- ಸಂತೋಷ ಗುಡ್ಡಿಯಂಗಡಿ

Friday, March 27, 2015


ಪ್ರತಿಭಾಕಾರಂಜಿ; ಬೇಕಿದೆ ಸಾಂಸ್ಕೃತಿಕ ರೂಪುರೇಷೆ

(ರಾಜ್ಯಮಟ್ಟದ ಪ್ರತಿಭಾಕಾರಂಜಿಯ ನೆಪದಲ್ಲಿ ನಾನು ಬರೆದ ಬರಹ)

ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಕಂಡದ್ದು

ಮತ್ತೊಂದು ರಾಜ್ಯಮಟ್ಟದ ಪ್ರತಿಭಾಕಾರಂಜಿ ಮುಗಿದಿದೆ. ಒಂದಷ್ಟು ಮಕ್ಕಳು ಬಹುಮಾನಿತರಾಗಿ ಕುಷಿಯಿಂದ ತೆರಳಿದರೆ ಒಂದಷ್ಟು ಮಕ್ಕಳು ಬಹುಮಾನವಿಲ್ಲದೆ ಬೇಸರದಿಂದ ಹಿಂತಿರುಗಿದರೆ, ಇನ್ನೊಂದಷ್ಟು ಮಕ್ಕಳು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಳಕಿತರಾದರೆ, ಇನ್ನೂ ಒಂದಷ್ಟು ಮಕ್ಕಳು ಶಿಕ್ಷಕರು ಪೋಷಕರು ನಮಗೆ ಮೋಸ ಮಾಡಿದರು, ಅನ್ಯಾಯ ಮಾಡಿದರು ಎಂದು ಹಲುಬಿಕೊಂಡು ಮರಳಿದರು. ಒಟ್ಟಾರೆ ಪ್ರತಿಭಾಕಾರಂಜಿ ಎಂದಿನ ಕುಷಿ, ಬೇಸರ, ಸಂಕಟ, ಸಿಟ್ಟುಗಳ ನಡುವೆ ಮುಗಿದು ಹೋಗಿದೆ.

ಮಂಡ್ಯ ಜಿಲ್ಲೆಯ ವಿಶ್ವಮಾನವ ವಿದ್ಯಾಸಂಸ್ಥೆಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಬಾರಿಯ ರಾಜ್ಯಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ ಒಂದರ್ಥದಲ್ಲಿ ಯಶಸ್ವಿಯಾಗೆ ಮುಗಿಯಿತು. ಅಲ್ಲಿ ಆಗಮಿಸಿದ ಬೇರೆ ಬೇರೆ ಜಿಲ್ಲೆಗಳ ಶಿಕ್ಷಕರು ಮಕ್ಕಳು ಹಿಂದೆ ಬೇರೆ ಜಿಲ್ಲೆಗಳು ಆಯೋಜಿಸಿದ ಕಾರ್ಯಕ್ರಮಗಳಿಗೆ ಹೋಲಿಕೆ ಮಾಡಿ ಇಲ್ಲಿಯದು ಕಳಪೆ ಎಂಬರ್ಥದಲ್ಲೆ ಮಾತನಾಡುತ್ತಿದ್ದರು. ರಾಮನಗರ ಜಿಲ್ಲೆಯ ಶಿಕ್ಷಕರೊಬ್ಬರು ತೀರ್ಪುಗಾರರನ್ನ ಸರಿಯಾಗಿ ನೇಮಿಸಿಲ್ಲ ಎಂದು ಸಾರಾಸಗಟಾಗಿ ಎಲ್ಲಾ ತೀರ್ಪುಗಾರರನ್ನು ಹೀಗಳೆಯುತ್ತಾ, ವೇದಿಕೆಯಲ್ಲಿ ಮಕ್ಕಳು ಪ್ರದರ್ಶನ ನೀಡುತ್ತಿದ್ದಾಗ ತಾನೊಬ್ಬ ಶಿಕ್ಷಕ ಎನ್ನುವುದನ್ನೂ ಮರೆತು ತನ್ನ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಗಲಾಟೆ ಎಬ್ಬಿಸುತ್ತಿದ್ದರು. ಬೆಂಗಳೂರಿನಿಂದ ಬಂದಂತಹ ಶಿಕ್ಷಕಿಯೊಬ್ಬರು, ಕೋಲಾಟದ ತೀರ್ಪುಗಾರರೊಬ್ಬರು ಚೂಯಿಂಗ್ ಅಗೆಯುತ್ತಿರುವುದನ್ನು ಕಂಡು ವೇದಿಕೆ ಹತ್ತಿ ‘ರಾಜ್ಯಮಟ್ಟದ ಕಾರ್ಯಕ್ರಮದ ತೀರ್ಪುಗಾರರು ನೀವು, ವಿದ್ಯಾರ್ಥಿಗಳ ಮುಂದೆ ಶಿಸ್ತಿನಿಂದ ವರ್ತಿಸಬೇಕು’ ಎಂದು ಆಕ್ಷೇಪಿಸಿದರು. ಜಿಲ್ಲೆ ಮತ್ತು ಹೆಸರು ಹೇಳಿಕೊಳ್ಳಲು ಹಿಂಜರಿದ ಶಿಕ್ಷಕರೊಬ್ಬರು ಇಂತಹ ಕಾರ್ಯಕ್ರಮವನ್ನು ತಾನು ಒಂದೇ ದಿನದಲ್ಲಿ ಆಯೋಜನೆ ಮಾಡಿಕೊಳ್ಳಬಲ್ಲೆ ಎಂಬ ದುಹಂಕಾರದ ಮಾತನ್ನೂ ಆಡಿದರು.

ಇವುಗಳನ್ನೆಲ್ಲ ಮೀರಿ ಮೂರು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳು ವಯಕ್ತಿಕ ಹಾಗು ಗುಂಪು ಸ್ಪರ್ಧೆಗಳಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಮೆರೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಿರಸಿ, ಹಾವೇರಿ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಮಕ್ಕಳಂತೂ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದರು. ಆ ಜಿಲ್ಲೆಗಳ ಮಕ್ಕಳ ತಯಾರಿ, ಹೊಂದಾಣಿಕೆ, ಓದಿನಷ್ಟೆ ಸಾಂಸ್ಕøತಿಕ ಕಾರ್ಯಕ್ರಮಗಳ ಬಗೆಗಿನ ಆಸಕ್ತಿ ಅವರ ಪ್ರದರ್ಶನಗಳಲ್ಲಿ ಎದ್ದು ಕಾಣುತ್ತಿತ್ತು. ಈ ಜಿಲ್ಲೆಗಳ ಅಧಿಕಾರಿಗಳು ಕೂಡ ಮಕ್ಕಳ ಜೊತೆ ಜೊತೆಗೆ ಇದ್ದು ಅವರನ್ನು ಹುರಿದುಂಬಿಸುತ್ತಿರುವುದು ಕಾಣಿಸುತ್ತಿತ್ತು. ಕೆಲವೊಂದು ಜಿಲ್ಲೆಗಳ ಅಧಿಕಾರಿಗಳು, ಶಿಕ್ಷಕರು ತಮ್ಮ ಮಕ್ಕಳ ಜೊತೆ ಇರುವುದು ಹೋಗಲಿ, ತಮ್ಮ ತಂಡ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿ ಎಂದು ಕೋರಿಕೊಂಡರೂ ಅವರ ಪತ್ತೆಯಿರದೆ ಮಕ್ಕಳ ಬಗೆಗಿನ ನಿರ್ಲಕ್ಷ್ಯವೂ ಎದ್ದು ಕಾಣಿಸುತ್ತಿತ್ತು.

ಶಿಕ್ಷಕರು, ಅಧಿಕಾರಿಗಳು ಮಕ್ಕಳ ಬಗ್ಗೆ ಅಸಡ್ಡೆ ತೋರಿದಷ್ಟೂ ಅವರ ಪ್ರದರ್ಶನ ನೀರಸವಾಗುತ್ತದೆ. ತಮಗೆ ಬಹುಮಾನ ಬರದೇ ಇದ್ದಾಗ ತೀರ್ಪುಗಾರರು ಸರಿಯಿಲ್ಲ, ಮೋಸ ಮಾಡಿದರು ಎಂದೆಲ್ಲ ದೂರಿ ತಮ್ಮ ನಿರ್ಲಕ್ಷ್ಯವನ್ನು ಮುಚ್ಚಿಕೊಂಡು ಬಿಡಬಹುದು. ಇಲ್ಲಿ ಒಂದು ಸ್ವಾರಸ್ಯಕರ ಪ್ರಸಂಗವೂ ನಡೆಯಿತು. ತಮ್ಮ ಮಗುವಿಗೆ ಬಹುಮಾನ ಬರಲಿಲ್ಲವೆಂದು ಪೋಷಕರೊಬ್ಬರು ದೊಡ್ಡ ದನಿಯಲ್ಲಿ ಆಕ್ಷೇಪ ತೆಗೆದರು. ತೀರ್ಪುಗಾರರ ತೀರ್ಮಾನವೇ ಅಂತಿಮವೆಂದು ಘೋಷಿಸಿದಾಗ ವರಸೆ ಬದಲಿಸಿದ ಅವರು ನೀವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ದನಿ ಏರಿಸಿದರು. ಪೋಷಕರು ಗಮನಿಸಬೇಕು ಒಂದು ಬೆಟ್ಟಕ್ಕಿಂತ ಇನ್ನೊಂದು ದೊಡ್ಡದಿರುತ್ತದೆ. ತಮ್ಮ ಮಕ್ಕಳಷ್ಟೇ ಪ್ರತಿಭಾವಂತರು ಎಂಬ ಕುರುಡುತನವನ್ನು ಬಿಟ್ಟುಬಿಡಬೇಕು. ತೀರ್ಪು ಸರಿಯಿಲ್ಲವೆಂದರೆ ಇಲಾಖೆಯ ಮುಂದೆ ಬಂದು ಪ್ರತಿಭಟಿಸಬೇಕು. ಪ್ರತಿಭಾಕಾರಂಜಿಗೊಂದು ಸಮಗ್ರ ನೀತಿಯನ್ನು ರೂಪಿಸುವಂತೆ ಒತ್ತಾಯಿಸಬೇಕು. ಅದುಬಿಟ್ಟು ವೇದಿಕೆಯ ಮೇಲೆ ಬಂದು ಬೇರೆ ಮಕ್ಕಳ ಅವಕಾಶವನ್ನು ತಪ್ಪಿಸುವಂತೆ ಪ್ರತಿಭಟಿಸಬಾರದು.

ಜಾನಪದ ಕಲೆಯನ್ನು ಉಳಿಸುವ ಸೋಗು!

ಪ್ರತಿಭಾಕಾರಂಜಿಯಲ್ಲಿ ಅತ್ಯಂತ ಗೊಂದಲವಾಗುವುದು ಗುಂಪು ಸ್ಪರ್ಧೆಗಳಲ್ಲಿ. ವೇದಿಕೆಯಲ್ಲಿ ಪ್ರದರ್ಶನ ನೀಡುವ ಮಕ್ಕಳ ವಿಚಾರದಲ್ಲಿ ಅಲ್ಲ, ಅವರಿಗೆ ಹಿಮ್ಮೇಳದಲ್ಲಿ ಸಾತ್ ನೀಡುವ ಮಕ್ಕಳ ವಿಚಾರದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಗೊಂದಲವಿದೆ. ಕೋಲಾಟಕ್ಕೆ ಆರು ಜನ ಎಂದು ಸುತ್ತೋಲೆಯಲ್ಲಿ ಇರುತ್ತದೆ. ಕೆಲವು ಜಿಲ್ಲೆಗಳಲ್ಲಿ ಹಾಡುಗಾರರನ್ನು ಬಳಸಿಕೊಂಡರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಇವುಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಈ ಬಗ್ಗೆ ಇಲಾಖೆ ಶಿಕ್ಷಕರಿಗೆ ಸ್ಪಷ್ಟಪಡಿಸಬೇಕು. ಬಳಸಿಕೊಳ್ಳವುದಾದರೆ ಎಷ್ಟು ಮಕ್ಕಳನ್ನು ಎಂದು ನಿಗದಿಪಡಿಸಬೇಕು. ಇಲ್ಲವಾದರೆ ಆಡುವವರು ಆರು ಮಂದಿ ಆದರೆ ಹಿಮ್ಮೇಳದಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ ಉದಾಹರಣೆ ಕೋಲಾಟ, ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಕಂಡುಬಂದವು. ಛದ್ಮವೇಷ ಎಂದರೇನು? ಜಾನಪದ ನೃತ್ಯ ಎಂದರೆ ಯಾವುದು? ಕೋಲಾಟ ಎಂದರೆ ಏನು? ಇತ್ಯಾದಿಯಾಗಿ ಇಲಾಖೆ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಜನಪದ ಹಾಡಿಗೆ ಕುಣಿಯುವುದು ಜಾನಪದ ನೃತ್ಯವಾಗುತ್ತದೆ. ಕೋಲು ಹಿಡಿದುಕೊಂಡು ಯಾವುದೋ ಹಾಡನ್ನು ಹಾಡಿಕೊಂಡು ಸರ್ಕಸ್ ಮಾಡುವುದು ಕೋಲಾಟವಾಗುತ್ತದೆ. ಜಾನಪದದ ವೀರಗಾಸೆಯ ವೇಷವು ಛದ್ಮವೇಷವಾಗುತ್ತದೆ.

ಕನ್ನಡನಾಡಿನಲ್ಲಿ ಸಮೃದ್ಧವಾದ ಜಾನಪದ ಸಂಪತ್ತಿದೆ. ಹಲವಾರು ಜಾನಪದ ಪ್ರಕಾರಗಳಿವೆ. ಕೋಲಾಟದ ವಿಶಿಷ್ಟ ಪರಂಪರೆಯಿದೆ. ಹಾವೇರಿ ಜಿಲ್ಲೆಯ ಸ್ಪರ್ಧಿಗಳು ತೀರ್ಪುಗಾರರ ಮೇಲೆ ವಿಚಿತ್ರವಾದ ಹೇರಿಕೆಯೊಂದನ್ನು ಹೇರುವುದು ಕಂಡು ಬಂತು. ಜಾನಪದ ನೃತ್ಯ ಮತ್ತು ಕೋಲಾಟ ಸ್ಪರ್ಧೆಗಳಲ್ಲಿ “ಜಾನಪದ ಕಲೆಯನ್ನು ಉಳಿಸಿ” ಎಂಬ ಬ್ರಹತ್ ಪರದೆಗಳನ್ನು ತಮ್ಮ ಪ್ರದರ್ಶನದ ಕೊನೆಯಲ್ಲಿ ಹಿಡಿದು ಪ್ರೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸುತ್ತಿದ್ದರು. ಆದರೆ ಅವರೇ ಜಾನಪದ ವಾದ್ಯಗಳ ಜಾಗದಲ್ಲಿ ಕಾಂಗೋದಂತಹ ವಾದ್ಯಗಳನ್ನು ನುಡಿಸುತ್ತಿದ್ದರು. ಮಯ್ಸೂರು ಜಿಲ್ಲೆಯ ಮಕ್ಕಳು ಕೋಲಾಟಕ್ಕೆ ಹಾರ್ಮೋನಿಯಂ ತಬಲಾದಂತಹ ಶಾಸ್ತ್ರೀಯ ವಾದ್ಯಗಳನ್ನು ನುಡಿಸುತ್ತಿದ್ದರು.  ಇನ್ನು ಕೋಲಾಟಕ್ಕೆ ಕೋಲಿನಪದಗಳನ್ನು ಬಿಟ್ಟು ಗಿಮಿಕ್ಕಿನ ಹಾಡುಗಳನ್ನು ಹಾಡಿ, ಕೋಲಾಟವನ್ನೂ ಸರ್ಕಸ್ ಎಂಬಂತೆ ಆಡುವುದು ಕೋಲಾಟವಲ್ಲ ಎನ್ನುವುದನ್ನು ಅರಿಯಬೇಕು. ಹೀಗೆಲ್ಲ ಮಾಡಿ ಜಾನಪದ ಕಲೆಗಳನ್ನು ಉಳಿಸಲು ಆಗುವುದಿಲ್ಲ ಎನ್ನುವುದನ್ನು ಮನಗಾಣಬೇಕು. ತಮ್ಮದೆ ಜಿಲ್ಲೆಯ ಜಾನಪದಕಲೆಯನ್ನು ಅಧ್ಯಯನ ಮಾಡಿ ಅದನ್ನು ಪ್ರಸ್ತುತಪಡಿಸಿದರೆ ಅದು ಜಾನಪದದ ಉಳಿವು. ಇದರಿಂದ ಮಕ್ಕಳು ತಮ್ಮ ಜಿಲ್ಲೆಯ ಜಾನಪದ ಕಲೆಯನ್ನು ಪಠ್ಯೇತರವಾಗಿ ಕಲಿಯುತ್ತಾರೆ. ಗಿಮಿಕ್ಕು, ಸರ್ಕಸ್ ಮಾಡಿಕೊಂಡೂ ರಾಜ್ಯಮಟ್ಟವನ್ನು ತಲುಪುತ್ತಾರೆಂದರೆ ಒಂದೋ ಅಲ್ಲಿನ ಸ್ಪರ್ಧೆಗಳು ಇದಕ್ಕೂ ಕಳಪೆಮಟ್ಟದ್ದಾಗಿರಬೇಕು ಅಥವಾ ಕೆಟ್ಟ ತೀರ್ಪುಗಾರಿಕೆಯಿರಬೇಕು. ಇದು ಅಲ್ಲವಾದರೆ ಜಗಳ ತೆಗೆದು ಹೆದರಿಸಿಕೊಂಡು ಬಹುಮಾನ ಗಿಟ್ಟಿಸರಬೇಕು!

ಮಕ್ಕಳ ನಡುವೆ ರಂಗಭೂಮಿ ಬೆಳೆಯಲಿ

ಪ್ರತಿಭಾಕಾರಂಜಿಯಲ್ಲಿ ಬಹುದೊಡ್ಡ ಸ್ಪರ್ಧೆಯಾದ ನಾಟಕ ಸ್ಪರ್ಧೆಯಲ್ಲಿ ಮಕ್ಕಳ ನಾಟಕವೇ ನಾಪತ್ತೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಟಕ ಶಿಕ್ಷಕರೂ ಈ ಬಗ್ಗೆ ಗಮನ ಹರಿಸದಿರುವುದು ಆಶ್ಚರ್ಯ! ಬಹುಮಾನದ ಜಿದ್ದಿಗೆ ಬಿದ್ದಿರುವ ಶಿಕ್ಷಕರು ಒಂದು ಒಳ್ಳೆಯ ನಾಟಕ ಮಾಡಿ ಹೇಗಾದರೂ ರಾಜ್ಯಮಟ್ಟದ ಬಹುಮಾನ ಗಳಿಸಬೇಕು ಎಂಬುದಷ್ಟೇ ಗುರಿಯಾಗಿಟ್ಟುಕೊಂಡಂತೆ ಕಾಣುತ್ತದೆ. ನಾಟಕ ಶಿಕ್ಷಕರಾದರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಕ್ಕಳ ನಾಟಕಗಳನ್ನು ಆಡಿಸಿ ಹೊಸ ಅಭಿರುಚಿಯನ್ನು ಬೆಳೆಸಬಹುದು.

ಸರ್ಕಾರಿ ಪ್ರೌಢ ಶಾಲೆ, ಕ್ಯಾಲಕೊಂಡದ ಮಕ್ಕಳು ಪ್ರದರ್ಶಿಸಿದ ದೇವರ ಹೆಣ ನಾಟಕದ ದೃಶ್ಯ


ಇನ್ನೊಂದು ಬಹಳ ಮುಖ್ಯವಾದ ಸಂಗತಿಯೆಂದರೆ ತಮ್ಮ ಪ್ರದರ್ಶನದ ನಂತರ ಮಕ್ಕಳು ಬೇರೆ ಮಕ್ಕಳ ಪ್ರದರ್ಶನವನ್ನು ನೋಡದಿರುವುದು. ಹಲವು ರೀತಿಯ ಉತ್ತಮ ಪೈಪೋಟಿಯ ಪ್ರದರ್ಶನಗಳನ್ನು ಮಕ್ಕಳು ನೋಡಬೇಕು; ನೋಡುವಂತೆ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು. ತಮ್ಮದೇ ಶ್ರೇಷ್ಠವೆಂದುಕೊಂಡು ಇನ್ನೊಬ್ಬರ ಪ್ರದರ್ಶನವನ್ನು ತೆಗೆಳಿ ಅನ್ಯಾಯ ಮಾಡಿದ್ದಾರೆಂದು ಶಿಕ್ಷಕರೊಂದಿಗೆ ಮಕ್ಕಳೂ ಸೇರಿಕೊಂಡು ಧಿಕ್ಕಾರ ಕೂಗುವಂತಾಗುತ್ತದೆ.
ಸರ್ಕಾರಿ ಪ್ರೌಢ ಶಾಲೆ, ಕ್ಯಾಲಕೊಂಡದ ಮಕ್ಕಳು ಪ್ರದರ್ಶಿಸಿದ ದೇವರ ಹೆಣ ನಾಟಕದ ದೃಶ್ಯ

ಮಕ್ಕಳು ಸೈನಿಕರಲ್ಲ.

ಪ್ರತಿಭಾಕಾರಂಜಿಯ ನೆಪದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ಮಕ್ಕಳು ಮೂರು ದಿನಗಳ ಕಾಲ ಒಂದೆಡೆ ಸೇರುವ ಅಪೂರ್ವ ಅವಕಾಶ ವರ್ಷಕ್ಕೆ ಒಂದೇ ಬಾರಿ ಸಿಗುವುದು. ಆದರೆ ಅಲ್ಲಿ ಮಕ್ಕಳೆಲ್ಲ ಬಹುಮಾನ ಗೆಲ್ಲಲು ಬಂದ ಸೈನಿಕರಂತೆ ಕಾಣಿಸುತ್ತಾರೆ. ಅವರ ಪ್ರದಶನವಾದರೆ ಮುಗಿಯಿತು. ಆಮೇಲೆ ಬೇರೆಯವರ ಪ್ರದರ್ಶನ ನೋಡುವುದಿಲ್ಲ, ಬೇರೆ ಮಕ್ಕಳೊಂದಿಗೆ ಬೆರೆಯುವುದೇ ಇಲ್ಲ! ಮಕ್ಕಳು ಬಿಡಿ ಶಿಕ್ಷಕರೂ ಕೂಡ ಬೆರೆಯುವುದಿಲ್ಲ. ಸುಮ್ಮನೆ ಉಡುಪಿ ಜಿಲ್ಲೆಯ ಶಿಕ್ಷಕಿಯೊಬ್ಬರನ್ನು ಮಾತಾಡಿಸಿದರೆ ಅವರು ಮಾತಾಡಿದ್ದು ಒಂದೇ ಒಂದು ಶಬ್ದ. ಅದರಾಚೆಗೆ ಮಾತೇ ಆಡಲಿಲ್ಲ. ಇದು ನಮ್ಮೊಳಗೆ ಸೌಹಾರ್ದತೆಯನ್ನು ಮೂಡಿಸುವುದೇ? ಮಕ್ಕಳು ಸೈನಿಕರಲ್ಲ. ಅವರನ್ನು ಹಾಗೆ ತಯಾರುಗೊಳಿಸುವುದೇ ಅಕ್ಷಮ್ಯ. ಇನ್ನು ಬಹುಮಾನ ಬರದಿದ್ದಾಗ ಅಳುವುದು, ಮೋಸ ಮಾಡಿದರೆಂದು ಚೀರುವುದು ಏನನ್ನು ತೋರಿಸುತ್ತದೆ. ನನಗಿಂತ ಪ್ರತಿಭಾವಂತನೊಬ್ಬ ಬಹುಮಾನ ಪಡೆದಿದ್ದಾನೆ ಎಂದು ಸಮಾಧಾನಪಟ್ಟುಕೊಳ್ಳುವ, ಬಹುಮಾನ ಪಡೆದವನನ್ನು ಅಭಿನಂದಿಸಿದ ಮಕ್ಕಳೇ ಅಲ್ಲಿ ಕಾಣಸಿಗಲಿಲ್ಲ.
ಸರ್ಕಾರಿ ಪ್ರೌಢ ಶಾಲೆ, ರಾಜಾಪುರ ಗುಲ್ಬರ್ಗ ಜಿಲ್ಲೆಯ ಮಕ್ಕಳದೊಂದು ಗ್ರೂಪ್ ಫೋಟೋ


ಎಲ್ಲರಿಗೂ ಬಹುಮಾನ ಅಸಾಧ್ಯ. ಹಾಗೊಂದು ವೇಳೆ ಎಲ್ಲರಿಗೂ ಬಹುಮಾನ ನೀಡದೆ ಇದನ್ನೊಂದು ಮಕ್ಕಳ ಉತ್ಸವವನ್ನಾಗಿ ಪರಿವರ್ತಿಸಿದರೆ ಪ್ರತಿಭಾಕಾರಂಜಿ ಸಪ್ಪೆಯಾಗುವುದು ಖಂಡಿತ. ಮಕ್ಕಳ ಭಾಗವಹಿಸುವಿಕೆಯೆ ಕಡಿಮೆಯಾಗುತ್ತದೆ. ಸ್ಪರ್ಧೆ ಎಂದು ಒಪ್ಪಿಕೊಂಡ ಮೇಲೆ ಸೋಲಿಗೂ ತಯಾರಾಗಿರಬೇಕು. ಸೋಲು ಎಂದರೆ ಸೋಲಲ್ಲ; ತನಗಿಂತಲೂ ಪ್ರತಿಭಾವಂತನಿದ್ದಾನೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು. ಶಿಕ್ಷಕರು ಪೋಷಕರೂ ಕೂಡ ಮಕ್ಕಳನ್ನು ಆ ರೀತಿಯಲ್ಲಿ ಅಣಿಗೊಳಿಸಬೇಕು.  ಬಹುಮಾನ ಬರದಿದ್ದಾಗ ಹತಾಶರಾಗುವುದು ಅಳುವುದು ಇದು ಸ್ಪರ್ಧಿಯೊಬ್ಬನ ಲಕ್ಷಣವಲ್ಲ; ಪುಟಿದೆದ್ದು ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಅದು ಗುರಿಯತ್ತ ನಮ್ಮನ್ನು ಮುನ್ನಡೆಸುತ್ತದೆ.

ತೀರ್ಪುಗಾರಿಕೆ

ತೀರ್ಪುಗಾರಿಕೆಯಲ್ಲಿ ಲೋಪವಾಗುವುದಿಲ್ಲ ಎಂದಲ್ಲ. ಆಗುತ್ತದೆ. ಶಿಕ್ಷಕರೂ ಕೂಡ ಪ್ರಾಮಾಣಿಕವಾಗಿ ತೀರ್ಪುಗಾರಿಕೆಯನ್ನು ಮಾಡಬೇಕು. ತನಗೆ ಆ ವಿಷಯದಲ್ಲಿ ಅನುಭವವಿಲ್ಲದಿದ್ದರೆ ಅದರ ತೀರ್ಪುಗಾರಿಕೆಯನ್ನೇ ಒಪ್ಪಿಕೊಳ್ಳಬಾರದು. ಇಲಾಖೆ ಕೂಡ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಸಮಗ್ರವಾದ ನೀತಿಯೊಂದನ್ನು ರೂಪಿಸಬೇಕು. ಕೆಳಹಂತಗಳಲ್ಲೇ ಭಾರೀ ಅನ್ಯಾಯವಾಗುತ್ತದೆ, ಆಯಾಯ ಶಾಲೆಗಳ ಶಿಕ್ಷಕರು ತೀರ್ಪುಗಾರರಾಗಿ ತಮ್ಮ ಮಕ್ಕಳಿಗೆ ಬಹುಮಾನ ಬರುವಂತೆ ನೋಡಿಕೊಂಡು ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಮಾಡಿರುತ್ತಾರೆ. ಇದು ರಾಜ್ಯದ ಎಲ್ಲಾ ಕಡೆಯೂ ನಡೆಯುತ್ತದೆ. ಎಷ್ಟೋ ಉನ್ನತ ಪ್ರತಿಭೆಗಳು ಕ್ಲಸ್ಟರ್ ಹಂತದಲ್ಲಿಯೇ ನಿರ್ಗಮಿಸಿರುತ್ತವೆ. ತಮ್ಮ ಶಾಲೆಯ ಮೇಲಿನ ಮಮಕಾರ ಒಂದು ಅತ್ಯುತ್ತಮ ಪ್ರತಿಭೆಗೆ ಅನ್ಯಾಯವಾಗುವಂತೆ ಮಾಡುತ್ತದೆ. ಶಿಕ್ಷಕರು ಇಂತಹ ಸಣ್ಣತನಗಳನ್ನು ಬಿಟ್ಟು ಮಕ್ಕಳ ಪ್ರತಿಭೆಗಳನ್ನು ಗೌರವಿಸಬೇಕು.
ತೀರ್ಪುಗಾರನಾಗಿ ಭಾಗವಹಿಸಿದ ನಾನು

ಪ್ರತಿಭಾಕಾರಂಜಿ ರಾಜ್ಯದ ಮಕ್ಕಳ ಪ್ರತಿಭೆಗಳನ್ನು ಹೊರತರುವುದಕ್ಕೆ ಹೇಗೆ ಶ್ರಮಿಸುವುದೋ ಹಾಗೆ ನಾಡಿನ ಜಾನಪದ ಕಲೆಗಳನ್ನು ಉಳಿಸುವುದಕ್ಕೂ ಕಾರಣವಾಗಬೇಕು. ಈ ನೆಪದಲ್ಲಿ ತಮ್ಮ ತಮ್ಮ ಜಿಲ್ಲೆಯ ಜಾನಪದ ಕಲೆಗಳನ್ನು ಅಧ್ಯಯನ ಮಾಡಿ ರಾಜ್ಯಮಟ್ಟದಲ್ಲಿ ಅವುಗಳನ್ನು ಪ್ರದರ್ಶಿಸಬೇಕು. ರಾಜ್ಯಮಟ್ಟದ ಪ್ರತಿಭಾಕಾರಂಜಿಯೆಂದರೆ ಅದೊಂದು ನಾಡಿನ ಬಹುವೈವಿಧ್ಯತೆಯ ಜಾನಪದ ಹಬ್ಬವಾಗಬೇಕು. ಮಕ್ಕಳು ಬಹುಮಾನ ಪಡೆಯುವ ಜೊತೆ ಜೊತೆಯಲ್ಲಿಯೇ ನಾಡಿನ ಸಂಸ್ಕøತಿಯ ಅಧ್ಯಯನವನ್ನೂ ಮಾಡುವಂತಾಗಬೇಕು. ಶಿಕ್ಷಕರೇ ಮಕ್ಕಳನ್ನು ಅಂಕಗಳಿಸುವ ಮತ್ತು ಬಹುಮಾನ ಗಳಿಸುವ ಯಂತ್ರಗಳನ್ನಾಗಿ ರೂಪಿಸಬೇಡಿ, ಅವರು ಮಕ್ಕಳು. ಅವರಂತೆಯೆ ಇರುವ ಮಕ್ಕಳೊಂದಿಗೆ ಪ್ರೀತಿಯಿಂದ ಬೆರಯುವಂತೆ, ಲವಲವಿಕೆಯಿಂದ ಬಾಳುವಂತೆ ರೂಪಿಸಿ. ಹಾಗಾದಲ್ಲಿ ನಮ್ಮ ಸಂಸ್ಕøತಿಯೂ ಉಳಿಯುತ್ತದೆ ನಮ್ಮ ಸಮಾಜವೂ ಆರೋಗ್ಯಪೂರ್ಣವಾಗಿರುತ್ತದೆ.

-ಸಂತೋಷ ಗುಡ್ಡಿಯಂಗಡಿ

ನನ್ನ ಬರಹ ಹಾಗೂ ನನ್ನ ಬಗ್ಗೆ ಬಂದಿರುವ ಪತ್ರಿಕಾ ತುಣುಕುಗಳು

ಧನ್ಯವಾದಗಳು ಪ್ರಜಾವಾಣಿ, ಕಾಮನಬಿಲ್ಲು, ವಿಜಯವಾಣಿ, ವಿಜಯnext, karavalikarnataka.com












Wednesday, March 25, 2015

ಹಿರಿಯರಾದ ಪ್ರೊ. ಶಿವರಾಮಯ್ಯ ಅವರು 'ಕೊರಬಾಡು' ಓದಿ ಪ್ರತಿಕ್ರಿಯಿಸಿದ್ದು

ಅಯ್ ಸಂತೋಸು,
ನಿನ್ನ ಕೊರಬಾಡು ಸಂಗ್ರಹದ ಕತಾತರ ಕತೆಗಳನ್ನ ಜಿನಾ ಒಂದರಂತೆ ಬರಿತಾ ಹೋಗು- ಬರದು ಬರದೂ ಬಿಸಾಕ ಕೂಸು- ಅವು ಕಪಿಲಾ ಕನ್ನಡ ದೇಶದಲ್ಲಿ ಬದುಕಿ ಉಳದವು ಉಳಿಲಿ, ಆಗದವು ಕಪಿಲಾ ಪ್ರವಾಹದಲ್ಲಿ ತೇಲಿ ಹೋಗಲಿ ಕನ! ವಸ್ತು ಬಾಸೆ ಚೆನ್ನ ಕುಸುಮರ ಪ್ರೇಮದಂತೆ ಬೆರೆತಿರಬೇಕು ಕನುಡಾ! ನಂಜುಂಡ ಬೆಟ್ಟದ ಚಾಮುಂಡಿ ಲವ್ ಕತೆಗಳು ಎಂದ್ರೆ ಆದಿಮ ಜನಪದರ ಕತೆಗಳು. ಅವು ನಿಂಗೆ ಸ್ಫೂರ್ತಿ ಆಗಲಿ. ಆ ಗಣಿಯ ಬಗದೂ ಬಗದೂ ಬರೀತಾ ಹೋಗು. ಆಗ ನೀನ್ ದೊಡಡ ಕತೆಗಾರ ಆಗಬಹುದು ಮಗಾ! ದೇವನೂರ್ರು ಕೂಡ ಮೆಚ್ಚಿ 'ಅಹುದು ಅಹುದು' ಅನ್ನಬೇಕು- ಹಾಗ್ ಬರಿ

ಆದರೆ ನೆನಪಿರಲಿ, ಆಗ ಸಹಿಸಲಾರದವು ತಮಿಳಿನ ಆ ಪೆರುಮಾಳರಿಗೆ ಫೇಸ್ಬುಕ್ ಸಾವಿನಂತ ಸಾವಿಗೆ ವತ್ತಡ ಹಾಕಬಹುದು. ಅದಕ್ಕೆಲ್ಲ ಕೇರ್ ಮಾಡಬೇಡ. ಆ ಅಡ್ಡಗಾಲು ಬ್ರೇಕು ಝಾಡ್ಸಿ ಒದ್ದು ಮುಂದಕ್ಕೋಡು. ದೇವ್ರು, ಧರ್ಮ, ರಾಜಕಾರಣ ಯಾವತ್ತೂ ಬಿಟ್ಟಿದ್ದಲ್ಲ. ಅವುಗಳಲ್ಲಿರುವ ಜೀವ ವಿರೋಧಿ ಸಂಗತಿಗಳನ್ನು ಬಯಲು ಮಾಡೋದೆ ಸಾಹಿತ್ಯ. ಕಡೆಗೆ ಸತ್ಯಾನೆ ಗೆಲ್ಲೋದು. ನಿಂಗೆ ಒಳ್ಳೇದಾಗಲಿ

ನಿನ್ನ ಪ್ರೀತಿಯ
ಶಿವರಾಮಯ್ಯ

'ಕೊರಬಾಡು' ಬಿಡುಗಡೆ ಕುರಿತು ಪ್ರಜಾವಾಣಿ ವರದಿ

ಭಾಷೆ ವಿಘಟಿಸುವ ಶಿಕ್ಷಣ : ಕೆವಿಎನ್ ಬೇಸರ


ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ 'ಬಳಗ'ದ ವತಿಯಿಂದ ಸಂತೋಷ ಗುಡ್ಡಿಯಂಗಡಿ (ಬಲತುದಿ) ಅವರ 'ಕೊರಬಾಡು' ಕಥಾಸಂಕಲನವನ್ನು ಶೇಂಗಾ ಬುಟ್ಟಿಯಿಂದ ತೆಗೆಯುವ ಮೂಲಕ ವಿದ್ಯಾರ್ಥಿನಿ ಎಸ್. ಸುಪ್ರಿಯಾ ಲೋಕಾರ್ಪಣೆ ಮಾಡಿದರು. ಸಾಹಿತಿ ಡಾ. ನೀಲಗಿರಿ ಎಂ. ತಳವಾರ, ಭಾಷಾತಜ್ಞ ಡಾ. ಕೆ. ವಿ. ನಾರಾಯಣ ಇದ್ದಾರೆ





ಮೈಸೂರು: ಮಕ್ಕಳ ಮಾತಿನ ಲಯಗಾರಿಕೆಯನ್ನು ಕಿತ್ತುಕೊಳ್ಳುತ್ತಿರುವ ಶಿಕ್ಷಣ, ಕಣ್ಣು ಮತ್ತು ಕಿವಿಯ ಭಾಷೆಯನ್ನು ಒಂದಾಗಿಸುವ ಬದಲು ವಿಘಟಿಸುತ್ತಿದೆ ಎಂದು ಭಾಷಾತಜ್ಞ ಡಾ.ಕೆ.ವಿ. ನಾರಾಯಣ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ‘ಬಳಗ’ದ ವತಿಯಿಂದ ಏರ್ಪಡಿಸಿದ್ದ ಸಂತೋಷ ಗುಡ್ಡಿಯಂಗಡಿ ಅವರ ‘ಕೊರಬಾಡು’ ಕಥಾ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಕಥೆಗಳ ಕುರಿತು ಅವರು ಮಾತನಾಡಿದರು.

ಶಿಕ್ಷಣ ವ್ಯವಸ್ಥೆ ಕಣ್ಣಿನ (ಶಿಷ್ಟ ಭಾಷೆ) ಕನ್ನಡಕ್ಕೆ ಮಕ್ಕಳನ್ನು ಸೀಮಿತಗೊಳಿಸುತ್ತಿದೆ. ಕಿವಿಯ (ಆಡು ಭಾಷೆ) ಕನ್ನಡಕ್ಕೆ ಅವರು ತೆರೆದುಕೊಳ್ಳುವುದಕ್ಕೆ ಅಡ್ಡಿಯಾಗಿದೆ. ಇದರಿಂದ ಕನ್ನಡದ ಜೀವಂತಿಕೆಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಭಾಷೆಯ ಲಯಗಾರಿಕೆಯನ್ನು ಶಿಕ್ಷಕರು ದುಡಿಸಿಕೊಳ್ಳಬೇಕು. ಇದು ವ್ಯಕ್ತಿಗತ ನೆಲೆಯಲ್ಲಿ ಸಾಧ್ಯವಾದರೂ ಬದಲಾವಣೆ ಕಷ್ಟ. ಭಾಷೆಯ ಲಯಗಾರಿಕೆ ಉಳಿಸಿಕೊಳ್ಳಲು ಶಿಕ್ಷಣ ಕ್ರಮದಲ್ಲಿ ದೊಡ್ಡ ಪಲ್ಲಟವಾಗಬೇಕು. ಕಳೆದುಹೋಗುತ್ತಿರುವ ಕನ್ನಡದ ಜೀವಂತಿಕೆಯನ್ನು ಅರಿಯಬೇಕು ಎಂದು ಸಲಹೆ ನೀಡಿದರು.

ಕಥೆ, ಕವಿತೆಯಲ್ಲಿ ಭಾಷೆ ಅರ್ಥ ಸಂವಹನಕ್ಕೆ ಸೀಮಿತವಾಗುವುದಿಲ್ಲ. ಕೃತಿಯು ಓದುಗರೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಮಹಾಕಾವ್ಯಗಳಂತೆ ಕಥೆಯು ಕಣ್ಣು ಮತ್ತು ಕಿವಿಯ ಓದುಗಾರಿಕೆಯಾಗಿ ಉಳಿದಿಲ್ಲ. ಕಥೆಯಲ್ಲಿ ಈ ಲಯಗಾರಿಕೆಯನ್ನು ಇಟ್ಟುಕೊಂಡು ಯಶಸ್ವಿಯಾದವರು ದೇವನೂರ ಮಹದೇವ ಮಾತ್ರ. ಹೊಸ ತಲೆಮಾರಿನ ಕಥೆಗಾರರು ಕಥೆಯ ಭಾಷೆಯನ್ನು ಈ ನಿಟ್ಟಿನಲ್ಲಿ ದುಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸೇರಿದಂತೆ 1980ರ ದಶಕದವರೆಗಿನ ಎಲ್ಲ ಕಥೆಗಾರರ ನೆಲೆ ಒಂದೇ ಆಗಿತ್ತು. ಕಥೆಗಾರ ತನ್ನೊಳಗಿನ ಭಾವನೆಯನ್ನು ಹಂಚಿಕೊಳ್ಳಲು, ಓದುಗರಿಗೆ ಹೊಸದನ್ನು ಹೇಳಲು ಕಥೆಯನ್ನು ಮಾಧ್ಯವನ್ನಾಗಿ ಮಾಡಿಕೊಂಡಿದ್ದ. ಆದರೆ, ಹೊಸ ತಲೆಮಾರಿನ ಕಥೆಗಾರರ ನೆಲೆಯೇ ಬೇರೆ. ಸಾಂಸ್ಕೃತಿಕ ವ್ಯಕ್ತಿತ್ವ ಕಂಡುಕೊಳ್ಳುವ ಉದ್ದೇಶಕ್ಕಾಗಿ ಅನೇಕರು ಕಥೆ ರಚಿಸುತ್ತಿದ್ದಾರೆ. ಸ್ವಂತಿಕೆಯ ಹುಡುಕಾಟದಲ್ಲಿ ಮಹಿಳಾ ಸಾಹಿತ್ಯ ಹುಟ್ಟಿದಂತೆಯೇ, ಯುವ ತಲೆಮಾರಿನ ಸಾಹಿತ್ಯವೂ ರಚನೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಿದರು.

ಹೊಸ ತಲೆಮಾರಿನ ಕಥೆಗಾರರನ್ನು ಸಾಹಿತ್ಯ ಪರಂಪರೆಯಲ್ಲಿ ತುಲನೆ ಮಾಡುವುದು ತಪ್ಪು. ಹೊಸಬರು ಸಮಾಜವನ್ನು ನೋಡುವ ದೃಷ್ಟಿಕೋನ ವಿಭಿನ್ನ. ಕಥೆಯ ಸಾಮಗ್ರಿಗಾಗಿ ಮಾತ್ರ ಅವರು ಹುಡುಕಾಟ ನಡೆಸುವುದಿಲ್ಲ. ಅಲ್ಲದೇ, ಕಥೆಗಾರರು ಶೋಧಕರಾಗಿಯೂ ಕಾಣುತ್ತಿಲ್ಲ. ಅವರ ತಾಕಲಾಟ ಮತ್ತು ಅಸ್ತಿತ್ವದ ಹುಡುಕಾಟದಲ್ಲಿ ಪ್ರಜ್ಞಾವಂತಿಕೆ ಇರುತ್ತದೆ ಎಂದು ಹೇಳಲಾಗದು ಎಂದರು.

5ನೇ ತರಗತಿಯ ವಿದ್ಯಾರ್ಥಿನಿ ಎಸ್‌. ಸುಪ್ರಿಯಾ ‘ಕೃತಿ ಲೋಕಾರ್ಪಣೆ’ ಮಾಡಿದರು. ಸಾಹಿತಿ ಡಾ.ನೀಲಗಿರಿ ಎಂ. ತಳವಾರ, ‘ಬಳಗ’ದ ಸಂಚಾಲಕ ಶಿವಕುಮಾರ ಕಾರೇಪುರ ಇದ್ದರು.
ಕೃಪೆ : ಪ್ರಜಾವಾಣಿ

Tuesday, March 24, 2015

ನಿವೇದನೆಯ ಭಿನ್ನತೆಯೂ; ನಿರೂಪಣೆಯ ಆಪ್ತತೆಯೂ...

-ರೂಪ ಕೋಟೇಶ್ವರ




ಮನೋ ಸಾಗರದಲ್ಲಿ ಸದಾ ಭರತ- ಇಳಿತ. ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ, ಬಣ್ಣ, ಧರ್ಮ, ಲಿಂಗ ಹಾಗೂ ವೃತ್ತಿ ಎಂಬ ಪದಗಳು ಕೇವಲ ನಿಮಿತ್ತ ಮಾತ್ರ. ಇವುಗಳ ಸುತ್ತ ಮೇಲು-ಕೀಳಿನ ಕಲ್ಪನೆಗಳು ಸುಳಿದಾಡದೇ ಹೋದರೆ, ಈ ಎಲ್ಲ ಪದಗಳು ನಿರ್ಜೀವವೇ ಸರಿ.
 ಎಲ್ಲೆಲ್ಲಿ ಮನುಷ್ಯ ಎಂಬ ಪ್ರಾಣಿ ಹೆಜ್ಜೆ ಊರಿದ್ದಾನೋ, ಆ ಭಾಗಗಳಲ್ಲಿ ಯಾವುದೋ ರೂಪದಲ್ಲಿಯಾದರೂ ಮಹಾನ್ಕಂದಕಗಳು, ಕುಳಿಗಳು ಬಿದ್ದಿವೆ. ಇದನ್ನು ಕೇವಲ ಸಾಮಾಜಿಕ ನೆಲೆಯಲ್ಲಷ್ಟೇ ನೋಡದೇ, ಮನಃಶಾಸ್ತ್ರೀಯ ದೃಷ್ಟಿಕೋನದಿಂದಕಂಡಾಗಷ್ಟೇ ಧ್ರುವೀಕರಣಗೊಳ್ಳದ ಸತ್ಯಗಳು ಬಯಲಾಗುತ್ತವೆ. ಆಗಷ್ಟೆ ಆಂತರ್ಯದ ಅರಿವನ್ನು ಆಗುಮಾಡಿಕೊಳ್ಳಬಹುದು. ಇವುಗಳ ಸತತ ಅನ್ವೇಷಣೆಯಿಂದ, ತಥಾಕಥಿತ ‘ಸಂಶೋಧನೆಯ’ ಉತ್ತರಗಳು ದೊರೆಯದೇ ಹೋಗಬಹುದು. ಆದರೆ, ಈ ಅನ್ವೇಷಣೆ ನಮ್ಮೊಳಗೆ ನಿಜವಾದ ಅರಿವನ್ನು, ಅಂತಃಸತ್ವವನ್ನು ಉಂಟುಮಾಡುತ್ತದೆ.


ಜಾತಿ ಹಾಗೂ ಬಣ್ಣ ಹುಟ್ಟಿಸಿದ ತಾತ್ಸಾರ, ಒಳತೋಟಿ ದೊಡ್ಡದು. ಜಾತಿ ಹಾಗೂ ಬಣ್ಣದ ವ್ಯಾಖ್ಯಾನ ಸಾಂಸ್ಕೃತಿಕ ಚಹರೆಯಲ್ಲಿ ಸೇರಿಹೋಗಿದೆ.ಇದು ಸಂಸ್ಕೃತಿಯ ನೀರಿನಲ್ಲಿ ಮಲಿನತೆಯ ರೂಪಕವಾಗಿ ಸೇರಿ ಹಲವು ಶತಮಾನಗಳೇ ಕಳೆದಿವೆ. ಮನುಷ್ಯ ತನಗೆ ತಾನೇ ಹೆಣೆದುಕೊಂಡ ನೂರಾರು ಮುಖವಾಡದೊಳಗೆ ಒಮ್ಮೆ ಇಣುಕುವಂತಾದರೆ, ಹಾಗೇ ಇಣುಕಲು, ನಮ್ಮ ಸ್ವೋಪಜ್ಞತೆ ಅವಕಾಶ ಮಾಡಿಕೊಟ್ಟರೆ. ಅದೇ ಅಕ್ಷರದ ಬಹುದೊಡ್ಡ ಸಾರ್ಥಕತೆ.


ಈಚೆಗೆ ಬಿಡುಗಡೆಯಾದ ಸಂತೋಷ ಗುಡ್ಡಿಯಂಗಡಿ ಅವರ ಮೊದಲ ಕಥಾ ಸಂಕಲನ “ಕೊರಬಾಡು’ ಅಪಾರ ಕಥಾ ಎಳೆಗಳನ್ನು ಓದುಗರ ಮುಂದಿಡುತ್ತದೆ. ಹಾಗೇಯೇ ಜಾತಿ, ವರ್ಗ ಹಾಗೂ ಬಣ್ಣ ಸಂಘರ್ಷದ ಅಮಾನವೀಯ ಮುಖವನ್ನು ತೆರೆದಿಡುತ್ತದೆ. ಕುಂದಾಪ್ರದ ವರಾಹಿ ನದಿ ತೀರದಿಂದ ನಂಜನಗೂಡಿನ ಕಪಿಲಾ ನದಿ ತೀರದವರೆಗೆ ಕಂಡ ನೂರಾರು ಪಾತ್ರಗಳು ಬಹಳ ಸೊಗಸಾಗಿ ಮಾತನಾಡುತ್ತವೆ. ಹುಟ್ಟಿದ ಹಾಗೂ ಬದುಕು ಕೊಟ್ಟ ನೆಲದ ಸಾಂಸ್ಕೃತಿಕ ಚೈತನ್ಯದ ವಿನ್ಯಾಸವನ್ನು ಅದಿರುವ ಹಾಗೇ ಗ್ರಹಿಸಿ, ಅದರಲ್ಲಿ ಕಥೆಯನ್ನು ಮಥಿಸುವುದು ಅಷ್ಟು ಸುಲಭದ ಸಂಗತಿಯಲ್ಲ.ಅದಕ್ಕೆ ಸೂಕ್ಮ ಸಂವೇದನೆ ಅತ್ಯಗತ್ಯ. ಅದನ್ನು ಸಂತೋಷ ಗುಡ್ಡಿಯಂಗಡಿ ಅವರು ಬಹಳ ಸಲೀಸೆಂಬಂತೆ ಪ್ರಸ್ತುತ ಪಡಿಸಿದ್ದಾರೆ.


ಕುಂದಾಪ್ರ ನೆಲದಲ್ಲಿ ಹುಟ್ಟಿ, ವೃತ್ತಿಯ ಸಲುವಾಗಿ ನಂಜನಗೂಡಿನಲ್ಲಿದ್ದರೂ ಎರಡು ಪ್ರದೇಶಗಳ ಭಾಷೆ, ಸಂಸ್ಕೃತಿ, ಜನರ ಬದುಕು, ಬವಣೆಗಳನ್ನು ಒಳಗಣ್ಣಿನಿಂದ ನೋಡಲು ಸಾಧ್ಯವಾಗಿರುವುದರಿಂದಲೋ ಏನೋ, ಭಾಷೆಯ ಹಂಗಿಲ್ಲದೇ ಅವರ ಕತೆಗಳು ಇಷ್ಟವಾಗುತ್ತ ಹೋಗುತ್ತದೆ. ಕುಂದಾಪ್ರ ಕನ್ನಡ ಹಾಗೂ ನಂಜನಗೂಡಿನ ಗ್ರಾಮ್ಯ ಭಾಷೆಗಳೆರಡು ಇಲ್ಲಿ ಮಾತಾಗಿವೆ.ಅವು ಗ್ರಾಮ್ಯಕ್ಕಿರುವ ಮಿತಿಯನ್ನು ಮೀರಿ, ಓದಿಸಿಕೊಂಡು ಹೋಗುವ ಗುಣವನ್ನು ಸಹಜವಾಗಿಯೇ ಪಡೆದುಕೊಂಡಿವೆ ಎನ್ನಲು ಅಡ್ಡಿಯಿಲ್ಲ.


ಸಂತೋಷ ಗುಡ್ಡಿಯಂಗಡಿ ಅವರು ಮೇಷ್ಟ್ರಾಗಿರುವುದರಿಂದಲೇನೋ ಮಕ್ಕಳನ್ನು ಮೆಲು ಮಾತಿನಿಂದ, ಮಾತನಾಡಿಸಿ,ಕಲಿಸುವಂತೆ, ಸುತ್ತಮುತ್ತ ನಡೆಯುವ ಸೂಕ್ಷ್ಮ ಸಂಗತಿಗಳನ್ನು ತಟ್ಟಿ ಮಾತನಾಡಿಸಿ, ಪಾತ್ರವಾಗಿಸಿದ್ದಾರೆ. ಅವರ ಕಥಾ ವಸ್ತುವಿನ ಹುಡುಕಾಟಗಳೆಲ್ಲವೂ, ಅಕ್ಷರ ಅಷ್ಟಾಗಿ ಹತ್ತದ ಕೊನೆಯ ಬೆಂಚಿನ ಹಿಂದುಳಿದ ಹುಡುಗರ ಕುರಿತದ್ದೇ ಆಗಿದೆ. ಕತೆಯ,ಪಾತ್ರಗಳೆಲ್ಲವೂ ದೀನ ದಲಿತರು, ನಿರ್ಗತಿಕರು ಹಾಗೂ ಅಸಹಾಯಕರ ಸುತ್ತವೇ ಹೆಣೆಯಲಾಗಿದೆ ಎಂಬುದು ಇಲ್ಲಿನ ವೈಶಿಷ್ಯ.


ದುರ್ಗಿ, ಕೊರ್ಗು, ದೇವಿ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಪಾತ್ರಗಳಾಗಿಯೇ ಹೊಮ್ಮಿವೆ. ಅಷ್ಟೆಕೇ ಕಥಾ ಸಂಕಲನದ ಅಷ್ಟೂ ಕತೆಗಳಲ್ಲಿ ಬರುವ ಹೆಣ್ಣಿನ ಪಾತ್ರಗಳು ದಿಟ್ಟತನದ ಪ್ರತೀಕ. ಹೆಂಗರುಳಿನ ಸಂತೋಷ ಅವರು ಕತೆಗಾರನಾಗಿ ಸೃಷ್ಟಿಸಿದ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಬಿಂಬಗಳು, ಬದುಕು ಪ್ರೀತಿಸಿದ ಬಡವರ ಮಕ್ಕಳು ಹಾಗೂ ಸುಂದರಿಯ ಕಾಟ ಕತೆಗಳು ಒಟ್ಟು ಅತಾರ್ಕಿಕ ವ್ಯವಸ್ಥೆಯೆಡೆಗಿನ ಮುಗ್ಧ ಪ್ರಶ್ನೆಗಳಿಂದಲೇ ಸೆಳೆಯುತ್ತದೆ. ದುರ್ಗಿ ಮಗ ದಿಲ್ಲಿಗ್ಹೋಯ್ಬಂದ ಕತೆಯ ಶೀರ್ಷಿಕೆಯು ನೆರೆಮನೆಯ ಹೆಂಗಸರೆಲ್ಲ ಬಾವಿ ಕಟ್ಟೆಯಲ್ಲಿ ಸಹಜವಾಗಿ ಆಡಬಹುದಾದ ಮಾತನ್ನೇ ಶೀರ್ಷಿಕೆಯಾಗಿಸಿ, ಅಲ್ಲಿಯೇ ಒಂದು ಕತೆಯ ಹೃಸ್ವವನ್ನು ಹುಟ್ಟುಹಾಕಿದ್ದಾರೆ.


ಗುಡ್ಡಿಯಂಗಡಿ ಅವರ ಬಹುತೇಕ ಕತೆಗಳಲ್ಲಿ ಕಾವ್ಯ –ಕಥನದ ಮಾದರಿಯಿದೆ. ಕತೆಗಳನ್ನು ಓದುತ್ತಿರುವಾಗಲೇ ಕಾವ್ಯದ ಲಹರಿಯೊಂದು ಓದುಗರ ಹಿಡಿತಕ್ಕೆ ದಕ್ಕುವಂತೆ ಭಾಸವಾಗುತ್ತದೆ. ಆದರೆ ಕತೆಗಳನ್ನು ನಾಟಕೀಯ ನೆಲೆಯಲ್ಲಿಯೇ ಆರಂಭಿಸುವ ಅಥವಾ ಸಮಾಪ್ತಿಗೊಳಿಸುವ ಉಮೇದು ಸಂತೋಷ ಅವರಲ್ಲಿ ತುಸು ಹೆಚ್ಚೇ ಎನ್ನುವಂತಿದೆ.


ಅಜ್ಜಿ ಅಂಗಡಿ ಕತೆಯಲ್ಲಿ ಬರುವ ಚಿಕ್ತಾಯಮ್ಮನ ಪಾತ್ರವೂ ‘ಸಾಕವ್ವ’ ಪಾತ್ರದ ದೂರದ ಸಂಬಂಧಿಯೆನುವಷ್ಟರ ಮಟ್ಟಿಗೆ ಆಪ್ತವಾಗುತ್ತದೆ. ದೇವನೂರ ಮಹಾದೇವ ಅವರ ಪ್ರಭಾವಕ್ಕೆ ತೀವ್ರತರದಲ್ಲಿ ಒಳಗಾಗಿದ್ದರೂ, ಸ್ವಂತಿಕೆಯಲ್ಲಿಯೂ,ನಿರೂಪಣೆಯಲ್ಲಿಯೂ, ಕತೆಯನ್ನು ನಿವೇದಿಸಿಕೊಳ್ಳುವುದರಲ್ಲಿಯೂ ಭಿನ್ನವಾಗಿ ನಿಲ್ಲುವ ಮೂಲಕ ಕತೆಗಾರನಾಗಿ ಓದುಗರಿಗೆ ಹತ್ತಿರವಾಗುತ್ತಾರೆ.


ಕುಂದ್ರಾಪ ನೆಲದಲ್ಲಿನ ಸಾಂಸ್ಕೃತಿಕ ವಿನ್ಯಾಸಕ್ಕೆ ಮೆರುಗು ತಂದ ಭೂತಾರಾಧನೆ, ದೈವಾರಾಧನೆ, ಅದು ಹುದುಗಿಸಿಟ್ಟುಕೊಂಡ ಜಾತಿ ಹಾಗೂ ವರ್ಗ ತರತಮಗಳನ್ನು ಬಿಚ್ಚಿಡುತ್ತಲೇ, ಅದರ ಸುತ್ತವೇ ಕತೆ ಹೆಣೆಯುವ ಮಟ್ಟಿಗೆ ಅವರ ಸೃಜನಶೀಲತೆ ಪಕ್ವವಾಗಿರುವುದನ್ನು ಮೊದಲ ಸಂಕಲನದಲ್ಲಿಯೇ ಕಾಣಬಹುದು.


ಜಾಗತೀಕರಣದ ಪ್ರಭಾವದಿಂದಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ವಿದ್ಯೆ ಹಾಗೂ ಉದ್ಯೋಗದಿಂದಾದಬದಲಾವಣೆಯ ಬೀಸುಗಾಳಿ ಹಳ್ಳಿಗಳನ್ನು ತಲುಪಿ ಹಲವು ವರುಷಗಳೇ ಸಂದಿವೆ. ಅದು ಸೃಷ್ಟಿಸಿದ ಬದಲಾವಣೆ, ತಲ್ಲಣ ಬೇರೆ ಬೇರೆ ಸ್ವರೂಪ ಪಡೆದು, ಹೊಸ ಕಥಾ ಲೋಕವನ್ನು ತೆರೆದಿಟ್ಟಿದೆ. ಈ ಬದಲಾವಣೆ, ತಲ್ಲಣಗಳ ಜಾಡು ಹಿಡಿದು ಕತೆಯಾಗಿಸಲು ಸದ್ಯ ಸೋತಿರುವ ಕತೆಗಾರ, ಮುಂದಿನ ಪ್ರಯತ್ನದಲ್ಲಿ ಗೆಲ್ಲಲಿ.,

ಕೃಪೆ : roopakoteshwara.blogspot.com