Saturday, March 28, 2015

ಸರ್ಕಾರಿ ಶಾಲೆಗಳು ; ರಂಗಚಟುವಟಿಕೆಗಳು

(ಈ ಲೇಖನವು ನಾಗತೀಹಳ್ಳಿ ಹಬ್ಬದ ನೆನಪಿಗಾಗಿ ತಂದಿರುವ 'ಗ್ರಾಮಮುಖಿ' ನೆನಪಿನ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)
ಸರ್ಕಾರಿ ಪ್ರೌಢ ಶಾಲೆ ರಾಜಾಪುರ, ಗುಲ್ಬರ್ಗ ಜಿಲ್ಲೆಯ ಮಕ್ಕಳು

ಹೊಸದಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ಆಯ್ಕೆಗೊಂಡವರಿಗೆ ಮಯ್ಸೂರು ಡಯಟ್ ಏರ್ಪಡಿಸಿದ್ದ ಬುನಾದಿ ತರಬೇತಿಯಲ್ಲಿ “ಶಿಕ್ಷಣದಲ್ಲಿ ರಂಗಕಲೆ” ವಿಚಾರವಾಗಿ ಮಾತನಾಡುವ ಅವಕಾಶ ನನಗೆ ಒದಗಿ ಬಂತು. ಮೊದಲೇ ಅವರೆಲ್ಲ ಶಿಕ್ಷಕರಾಗಿ ಆಯ್ಕೆಗೊಂಡವರು. ಅವರ ಮುಂದೆ ನಾನು ನಿಲ್ಲಬೇಕೆಂದರೆ ಅವರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಿಲು ಸಮರ್ಥನಾಗಿರಬೇಕು ಎಂದು ಸಾಕಷ್ಟು ತಯಾರಾದೆ. ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ತಲಾ ಒಂದೊಂದು ಗದ್ಯ, ಪದ್ಯ ಪಾಠಗಳನ್ನು ಆಯ್ಕೆ ಮಾಡಿಕೊಂಡೆ. ಅವರ ಮುಂದೂ ನಿಂತೆ. ನನ್ನನ್ನು ಕಂಗೆಡಿಸುವಂತ ಒಂದೂ ಪ್ರಶ್ನೆ ಹುಟ್ಟಲಿಲ್ಲ ಅಲ್ಲಿ. ಮಕ್ಕಳೇ ನಮ್ಮನ್ನ ಆಗಾಗ ತಬ್ಬಿಬ್ಬುಗೊಳಿಸುತ್ತವಲ್ಲ ಎಂದುಕೊಂಡೆ! ನನ್ನ ತರಗತಿ ಮುಗಿದ ಮೇಲೆ ಆಯೋಜಕರು ಆ ಶಿಕ್ಷಕರಿಗೆಲ್ಲ ‘ಬೇರೆ ಶಿಕ್ಷಕರು, ಇವರು ಪಾಠ ಮಾಡುವುದು ಬಿಟ್ಟು ನಾಟಕ ಮಾಡುತ್ತಾರಲ್ಲ ಎಂದುಕೊಂಡರೂ ಪರವಾಗಿಲ್ಲ ನಿಮ್ಮ ತರಗತಿಗಳಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿ’ ಎಂದೂ, ಆಚೆ ಬಂದ ಮೇಲೆ ‘ಇವರೆಲ್ಲ ಹೊಸ ಶಿಕ್ಷಕರು ಇನ್ನೂ ಇಲಾಖೆಯ ಒಳಗೆ ಕಾಲಿರಿಸಿಲ್ಲ ಆಗಲೇ ಇವರಲ್ಲಿ ಬಹುತೇಕರಿಗೆ ಪಾಠ ಮಾಡುವ ಉತ್ಸಾಹವೇ ಇಲ್ಲ’ ಎಂದು ನಿರಾಶರಾಗುತ್ತಾರೆ ಆಯೋಜಕರು.

ನನಗೆ ಅನ್ನಿಸುವುದು, ಶಾಲೆಗಳಲ್ಲಿ ರಂಗಚಟುವಟಿಕೆ ಎಂದರೆ ಅಲ್ಲೊಬ್ಬ ನಾಟಕದ ಮೇಸ್ಟ್ರಿದ್ದು ಪ್ರತಿಭಾಕಾರಂಜಿಗೋ, ಶಾಲಾ ವಾರ್ಷಿಕೋತ್ಸವಕ್ಕೋ ಎರಡು ನಾಟಕಗಳನ್ನು ಆಡಿಸಿಕೊಂಡಿರುವುದೇ ರಂಗಚಟುವಟಿಕೆಯೇ? ಹಾಗಾದರೆ ಶಾಲೆಗಳಲ್ಲಿ ರಂಗಚಟುವಟಿಕೆಗಳು ಹೇಗಿರಬೇಕು? ಅದು ಮಕ್ಕಳ ಶಾಲಾ ಕಲಿಕೆಯೊಳಕ್ಕೆ ಹೇಗೆ ಸಂಬಂಧ ಹೊಂದಿರಬೇಕು? ಉಳಿದ ವಿಷಯಗಳು ಬೇರೆ ನಾಟಕವೇ ಬೇರೆ ಎಂತಾದರೆ ಶಿಕ್ಷಣದಲ್ಲಿ ರಂಗಕಲೆ ಎಂಬ ತರಬೇತಿ ಏಕೆ ಬೇಕು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತದೆ.

ಮಂಗಳೂರಿನ ಸ್ವರೂಪ ಸಂಸ್ಥೆ ಪ್ರೌಢ ಶಾಲಾ ಹಂತದ ಗಣಿತ, ವಿಜ್ಞಾನವನ್ನೂ ಒಳಗೊಂಡು ಎಲ್ಲಾ ವಿಷಯಗಳ  ಪಾಠಗಳನ್ನು ನಾಟಕವನ್ನಾಗಿ ರೂಪಾಂತರಿಸಿಕೊಂಡು ಆ ಮೂಲಕ ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡುತ್ತಿದೆ. ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ‘ಶಿಕ್ಷಣದಲ್ಲಿ ರಂಗಕಲೆ’ ಕಾರ್ಯಾಗಾರದಲ್ಲಿ ಗಣಿತದ ಶಿಕ್ಷಕರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಬಹಳ ವಿಶಿಷ್ಟವಾದದ್ದು: “ನಾನು ಇದುವರೆಗೆ ಗಣಿತ ಕಷ್ಟ ಎಂದುಕೊಂಡಿದ್ದೆ; ಈಗ ಗೊತ್ತಾಯಿತು ಗಣಿತ ಕಷ್ಟ ಅಲ್ಲ ಗಣಿತದ ಮೇಸ್ಟ್ರು ಕಷ್ಟ”. ಈ ಎರಡೂ ಉದಾಹರಣೆಯಲ್ಲಿ ‘ಕಷ್ಟ’ ಎನ್ನುವುದನ್ನು ಸುಲಭವಾಗಿಸಿಕೊಳ್ಳುವ ತಂತ್ರಕ್ಕೆ ರಂಗಕಲೆಯನ್ನು ಬಳಸಿಕೊಳ್ಳಲಾಗಿತ್ತು. ಅಂದರೆ ಶಾಲೆಯಲ್ಲಿ ಯಾವುದೋ ನಿರ್ದಿಷ್ಟÀ ಪಠ್ಯವನ್ನಾಯ್ದುಕೊಂಡು ನಾಟಕವಾಡುವುದೇ ರಂಗಚಟುವಟಿಕೆಯಲ್ಲ; ಒಬ್ಬ ಶಿಕ್ಷಕ ಪಾಠ ಮಾಡುವ ಪ್ರಕ್ರಿಯೆಯಲ್ಲಿ ತನ್ನನ್ನು ಸೃಜನಶೀಲವಾಗಿ ತೊಡಗಿಸುಕೊಳ್ಳುವುದೂ ರಂಗಚಟುವಟಿಕೆಯಾಗಬಹುದು. ಇದಕ್ಕಾಗಿಯೇ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ‘ಶಿಕ್ಷಣದಲ್ಲಿ ರಂಗಕಲೆ’ ಎಂಬ ತರಬೇತಿಯನ್ನು ಆಗಾಗ ನೀಡುತ್ತಿದೆ. ಆದರೆ ಶಿಕ್ಷಕರು ಇದನ್ನೊಂದು ಮಾಮೂಲಿ ತರಬೇತಿಯನ್ನಾಗಿ ಗಣಿಸಿದ್ದಾರೆಯೆ ಹೊರತು, ತಾನು ಮಕ್ಕಳ ಮುಂದೆ ಸೃಜನಶೀಲವಾಗಿ ತೆರೆದುಕೊಳ್ಳುವುದಕ್ಕಿರುವ ಮೆಟ್ಟಿಲು ಎಂದು ಭಾವಿಸಿಕೊಂಡಿಲ್ಲ. ಹಾಗಾಗಿ ಸರ್ಕಾರಿ ಶಾಲಾ ಮೇಸ್ಟ್ರುಗಳು ಮಕ್ಕಳಿಗೆ ಕಷ್ಟವಾಗುತ್ತಲೇ ಇದ್ದಾರೆ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಡ್ಲಘಟ್ಟ ಮಕ್ಕಳ ಶಾಮಂತಿ

ಶಿಕ್ಷಣದಲ್ಲಿ ರಂಗಕಲೆ ಎಂಬ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳದೆಯೇ ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ಇತ್ತೀಚೆಗೆ ನಿರಂತರವಾಗಿ ಸಾಗಿದೆ. ಇದಕ್ಕೆ ಕಾರಣ ಸರ್ಕಾರ ಐದು ವರ್ಷಗಳ ಹಿಂದೆ ಪ್ರೌಢ ಶಾಲೆಗಳಿಗೆ ನಾಟಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು. ಈ ಹಿಂದೆಯೂ ರಾಜ್ಯದ ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ನಾಟಕ ಶಿಕ್ಷಕರಿದ್ದರು. ನೀನಾಸಮ್ ಮುಂತಾದ ರಾಜ್ಯದ ಬೇರೆ ಬೇರೆ ರಂಗಶಾಲೆಗಳಲ್ಲಿ ಕಲಿತು ಬಂದ ಹೊಸ ಉತ್ಸಾಹಿ ಯುವಕ ಯುವತಿಯರ ಪಡೆ ರಂಗಶಿಕ್ಷಕರಾಗಿ ನೇಮಕಗೊಂಡು ಶಾಲೆಗಳಿಗೆ ತೆರಳಿ ಈ ಐದು ವರ್ಷಗಳಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆಂದು ಹೇಳಿಕೊಳ್ಳುವುದಕ್ಕೆ ಆಗದಿದ್ದರೂ, ಸರ್ಕಾರಿ ಶಾಲಾ ರಂಗಭೂಮಿ ಹೊಸ ಆಯಾಮ ಪಡೆಯುವುದು, ಮಕ್ಕಳ ಆಸಕ್ತಿಯ ಕ್ಷೇತ್ರಗಳ ಹುಡುಕಾಟ ಇದರಿಂದ ಸಾಧ್ಯವಾಗಿದೆ ಎಂದು ಧೈರ್ಯವಾಗಿ ಹೇಳಬಹುದು. ನಾಟಕ ಶಿಕ್ಷಕರಲ್ಲದಿದ್ದರೂ ಹಲವಾರು ಉತ್ಸಾಹಿ ಮೇಸ್ಟ್ರುಗಳು ಅಲ್ಲಲ್ಲಿ ರಂಗಕಲೆಯನ್ನು ಶಾಲೆಗಳಲ್ಲಿ ಜೀವಂತವಾಗಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹಲವಾರು ಜನ ಪ್ರಾಥಮಿಕ ಶಾಲಾ ಶಿಕ್ಷಕರು ಒಂದು ವರ್ಷದ ನಿಯೋಜನೆಯೊಂದಿಗೆ ನೀನಾಸಮ್ ಪದವಿ ಪಡೆದು ಬಂದು ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಉಡುಪಿ ಜಿಲ್ಲಾ ಪ್ರತಿಭಾಕಾರಂಜಿ ನಾಟಕ ಸ್ಪರ್ಧೆ ಎಂದರೆ ಅದೊಂದು ಮಕ್ಕಳ ನಾಟಕೋತ್ಸವದಂತೆಯೇ ಇರುತ್ತದೆ; ಅಷ್ಟು ಗುಣಮಟ್ಟದ ಮಕ್ಕಳ ನಾಟಕಗಳು ಅಲ್ಲಿ ತಯಾರಾಗುತ್ತಿವೆ.

ಕೋಲಾರ ಜಿಲ್ಲೆ ಕಶೆಟ್ಟಿಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೇಣು ಬರೆದ ತೇಜಸ್ವಿ ಚಿತ್ರ


ನಾಟಕದ ಮೇಸ್ಟ್ರು ಎಂದರೆ ನಾಟಕ ಮಾಡಿಕೊಂಡು ಸಂಬಳ ಪಡೆದು ತಮ್ಮ ತಮ್ಮ ಪಾಡಿಗೆ ಇದ್ದುಬಿಡುವುದು, ನಿಮಗೇನು ಯಾರೂ ಕೇಳುವುದಿಲ್ಲ ಯಾವ ದಾಖಲೆಯೂ ಇಡಬೇಕಾಗಿಲ್ಲ, ಅಥವಾ ಬಿಸಿಯೂಟದ ಖರ್ಚು ವೆಚ್ಚ ನೋಡಿಕೊಂಡೋ, ಗ್ರಂಥಾಲಯ ನೋಡಿಕೊಂಡೋ ಇದ್ದುಬಿಡುವುದು, ಹೀಗೆ ಸಂಬಳಕ್ಕೊಂದು ಜನ ಎಂಬಂತ ಮೂದಲಿಕೆಯನ್ನ ಹುಸಿ ಮಾಡುವಂತೆ ರಾಜ್ಯದ ನಾನಾ ಕಡೆಯಲ್ಲಿ ಕೆಲಸ ಮಾಡುತ್ತಿರುವ ರಂಗಶಿಕ್ಷಕರು ತಮ್ಮ ಸೃಜನಶೀಲತೆಯನ್ನು ತೋರ್ಪಡಿಸುತ್ತಿದ್ದಾರೆ.

ರಂಗಭೂಮಿ ಹೇಳಿಕೇಳಿ ಎಲ್ಲಾ ಕಲೆಗಳನ್ನೂ ಒಳಗೊಂಡ ಸಮಗ್ರ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ, ಚಿತ್ರಕಲೆ ಮುಂತಾದ ಲಲಿತಕಲೆಗಳ ಸಂಗಮ. ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳನ್ನು ನಡೆಸುತ್ತಿರುವ ಬಹುತೇಕ ರಂಗ ಗೆಳೆಯರು, ಅತ್ಯುತ್ಸಾಹದಲ್ಲಿ ಎರಡು ನಾಟಕಗಳನ್ನು ಮಾಡಿಸಿ ಆಮೇಲೆ ಸುಸ್ತಾಗಿ ಕುಳಿತಿಲ್ಲ. ಬದಲಾಗಿ ನಾಟಕ ಎಂದರೆ ಅಭಿನಯ ಚಾತುರ್ಯವನ್ನು ತೋರ್ಪಡಿಸುವ ಕಲೆಯಷ್ಟೇ ಅಲ್ಲ, ಅದೂ ಒಂದು ಕಲಿಕೆ. ಶಾಲಾ ಶೈಕ್ಷಣಿಕ ಶಿಸ್ತಿನ ಆವರಣದೊಳಕ್ಕೆ ನಾಟಕ ಮಾಡುವುದೆಂದರೆ ಅದೊಂದು ಶಿಕ್ಷಣದ ಭಾಗ ಎಂಬುದನ್ನು ದೃಢವಾಗಿ ಕಂಡುಕೊಂಡ ಈ ರಂಗಶಿಕ್ಷಕರು ತಮ್ಮ ತಮ್ಮ ಭಾಗದ ಮಕ್ಕಳ ಮನೋಭಾವವನ್ನು ಅರಿತುಕೊಂಡು ತಮ್ಮದೇ ಆದ ರೀತಿಯಲ್ಲಿ ಪಠ್ಯಕ್ರಮವನ್ನು ವಿನ್ಯಾಸ ಮಾಡಿಕೊಂಡು ಮಕ್ಕಳ ಮುಂದೆ ನಿಂತರು...

ಹಾಗೆ ನಿಂತ ಒಂದಷ್ಟು ಪ್ರಯೋಗಗಳು:

ಸರ್ಕಾರಿ ಪ್ರೌಢ ಶಾಲೆ, ಜಾಕನಪಲ್ಲಿ ಮಕ್ಕಳ ರಂಗತರಬೇತಿ

ಅಶೋಕ ತೊಟ್ನಳ್ಳಿ. ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ ಜಾಕನಪಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಟಕದ ಮೇಸ್ಟ್ರು. ಇವರ ರಂಗಚಟುವಟಿಕೆ ಶಾಲಾ ಆವರಣವನ್ನು ಮೀರಿ ಊರೊಳಗಿನ ಜಾತೀಯ ಕಟ್ಟಳೆಯನ್ನು ಒಡೆಯುವ ಪ್ರಯತ್ನದಲ್ಲಿ ಸಾಗಿದೆ. ಆ ನಿಟ್ಟಿನಲ್ಲಿ ಒಂದಷ್ಟು ಯಶಸ್ವಿಯೂ ಆಗಿದೆ. ಊರ ದೇವರ ಕಟ್ಟೆಯ ಮೇಲೆ ನಾಟಕವಾಡುವಂತಹ ಸನ್ನಿವೇಶ ನಿರ್ಮಾಣವಾದಾಗ ಕೆಳಜಾತಿಯ ಮಕ್ಕಳು ಕಟ್ಟೆಯ ಬಳಿ ಸುಳಿಯಲು ಹಿಂಜರಿದರು. ಮೇಲ್ಜಾತಿ ಮಕ್ಕಳು ಊರ ಗೌಡರನ್ನು ಒಪ್ಪಿಸಿ ನಾಟಕವಾಡಿಯೇ ತೀರಿದರು. ಅಂದಿನಿಂದ ಅಲ್ಲಿ ಎಲ್ಲಾ ಜಾತಿಯ ಮಕ್ಕಳು ಆಟವಾಡುವುದು ಸಾಗಿದೆ. ಅಶೋಕ ತಿಂಗಳಿಗೊಮ್ಮೆ ಊರವರನ್ನೆಲ್ಲಾ ಸೇರಿಸಿ ‘ತಿಂಗಳ ಸಂಜೆ’ ಎನ್ನುವ ಕಾರ್ಯಕ್ರಮವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಶಾಲಾ ವೇದಿಕೆಯಲ್ಲಿ ಹಳ್ಳಿಯ ಜನರು ತಾವು ಮರತೇ ಬಿಟ್ಟಿದ್ದ ಹಾಡು ಕುಣಿತ, ಕೋಲಾಟವನ್ನು ಮತ್ತೆ ಆಡುವುದಕ್ಕೆ ಆರಂಭಿಸಿದ್ದಾರೆ. ನಿರಂತರವಾದ ಚಟುವಟಿಕೆಯು ಶಾಲೆಯನ್ನು ಒಂದು ಸಾಂಸ್ಕøತಿಕ ಕೇಂದ್ರವನ್ನಾಗಿ ರೂಪಿಸುತ್ತಿದೆ. ಮಕ್ಕಳು ನಾಟಕದಲ್ಲಿ ಸತತ ಎರಡು ವರ್ಷಗಳಿಂದ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದು ಹೆಸರು ಮಾಡಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ ಕ್ಯಾಲ್ಕೊಂಡ ಮಕ್ಕಳ ನಾಟಕ

ಕೃಷ್ಣಮೂರ್ತಿ ಮೂಡಬಾಗಿಲು : ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕ್ಯಾಲ್ಕೊಂಡದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಕಳೆದ ಐದು ವರ್ಷಗಳಿಂದ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಈ ಸರ್ಕಾರಿ ಶಾಲೆಯ ಮಕ್ಕಳದ್ದೇ ಪಾರಮ್ಯ. ಅಭಿನಯವೇ ನಾಟಕ ಮತ್ತು ನಟನ ಬಹುಮುಖ್ಯ ಆಸ್ತಿ ಎಂಬುವುದನ್ನು ಸಾಬೀತು ಮಾಡುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೃಷ್ಣಮೂರ್ತಿ ರಂಗಸಜ್ಜಿಕೆ, ರಂಗಪರಿಕರ ಮುಂತಾದವುಗಳಿಗೆ ಆನಂತರದ ಸ್ಥಾನ ನೀಡುತ್ತಾರೆ. ರಂಗಶಾಲೆಯೊಂದರ ವಿದ್ಯಾರ್ಥಿಗಳಂತೆ ರಂಗಶಿಸ್ತನ್ನು ಮಕ್ಕಳಿಗೆ ಕಲಿಸುವ ಈ ಮೇಸ್ಟ್ರ ರಂಗಚಟುವಟಿಕೆಯ ಬೆಂಬಲಕ್ಕೆ ಇಡೀ ಊರು ಸದಾ ನಿಂತಿರುತ್ತದೆ.

ಹ್ಯಾಟಿ ರಮೇಶ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇವರು ಶಿಕ್ಷಕರಾದ ಆರಂಭದಲ್ಲಿ ಮೊದಲು ಮಾಡಿದ ಕೆಲಸ ವಿದ್ಯಾರ್ಥಿಗಳ ಹೆತ್ತವರಿಗೆ ರಂಗಭೂಮಿಯ ಮಹತ್ವದ ಕುರಿತು ಕಾರ್ಯಾಗಾರ ನಡೆಸಿದ್ದು. ನಿರಂತರವಾಗಿ ನಾಟಕದ ಚಟುವಟಿಕೆಯ ಜೊತೆ ಜೊತೆಗೆ “ಅರಳು ಮೊಗ್ಗು” ಮಕ್ಕಳ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ನಾಟಕ ಅನ್ನುವುದು ಮಕ್ಕಳ ಕಲಿಕೆಗೂ ಹೇಗೆ ನೆರವಾಗಬಲ್ಲುದು ಎಂಬ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ರಮೇಶ್, ಮಕ್ಕಳಲ್ಲಿನ ಏಕಾಗ್ರತೆ, ಕಲಿಕಾಸಕ್ತಿ ಬೆಳೆಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಗೋಪಾಲಕೃಷ್ಣ : ದಕ್ಷಿಣಕನ್ನಡ ಜಿಲ್ಲೆಯ ಅದ್ಯಪಾಡಿ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಚಿತ್ರಕಲೆ ಮತ್ತು ರಂಗಕಲೆ ಕಲಿಕೆಗೆ ಹೇಗೆ ಪೂರಕವಾಗಬಹುದು ಎಂಬುದನ್ನು ತನ್ನ ಅಪರೂಪದ ಕಲಿಕಾ ಕ್ರಮದ ಮೂಲಕ ಹುಡುಕಾಟದಲ್ಲಿ ತೊಡಗಿದ್ದಾರೆ. ಮಕ್ಕಳಿಗಾಗಿ ತಾನೇ ವಿನ್ಯಾಸ ಮಾಡಿಕೊಂಡ ಕಲಿಕಾ ಸಾಮಾಗ್ರಿ, ವಿಭಿನ್ನ ಪ್ರಶ್ನೆಪತ್ರಿಕೆಗಳು ಅವರ ಹುಡುಕಾಟಕ್ಕೆ ಸಾಕ್ಷಿ. ಮಕ್ಕಳಿಂದ ಕಥೆ, ಕವನ ಬರೆಯಿಸಿ ಅವುಗಳನ್ನು ರಂಗಕ್ಕೆ ಅಳವಡಿಸಿ ಶಾಲೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರತಿಭಾಕಾರಂಜಿಯಂತಹ ಸ್ಫರ್ಧೆಗಳಲ್ಲಿ ಬೇರೆ ಬೇರೆ ಶಾಲೆಯ ಮಕ್ಕಳು ಒಂದಾಗಿ ಸಹಕಾರ ಮನೋಭಾವದಿಂದ ಬೆರೆಯುವಂತಾಗಬೇಕು ಎಂದು ಮಕ್ಕಳನ್ನು ತಯಾರುಗೊಳಿಸಿರುವ ಗೋಪಾಲ್, ತಮ್ಮ ಮಕ್ಕಳು ಮಾತ್ರ ಬೇರೆ ಮಕ್ಕಳಿಗೆ ಸಹಾಯ ಮಾಡುತ್ತಾರೆ; ಉಳಿದೆಲ್ಲ ಮಕ್ಕಳು ಪ್ರತಿಭಾಕಾರಂಜಿಯನ್ನು ಮಕ್ಕಳ ನಡುವಿನ ಯುದ್ಧ ಅನ್ನುವ ಹಾಗೆ ಭಾವಿಸುತ್ತಾರೆ ಎಂದು ಸಂಕಟಪಡುತ್ತಾರೆ.

ಚಿತ್ರಾ ವಿ. : ಧಾರವಾಡ ಜಿಲ್ಲೆಯ ಮನುಗುಂಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕಿಯಾಗಿರುವ ಚಿತ್ರಾ, ರಂಗಭೂಮಿಯ ವಾತಾವರಣ ನಿರ್ಮಾಣ ಮಾಡಲು ಹೆಣಗಾಡಿ ಈಗೊಂದು ರೂಪಕ್ಕೆ ತಂದುನಿಲ್ಲಿಸಿ ಹೊಸ ಹೊಸ ರಂಗಪ್ರಯೋಗದಲ್ಲಿ ತೊಡಗಿಕೊಂಡಿದ್ದಾರೆ. ಕಿನ್ನರ ಮೇಳದಂತಹ ರಂಗತಂಡಗಳನ್ನು ಶಾಲೆಗೆ ಕರೆಯಿಸಿ ನಾಟಕಗಳನ್ನು ಮಕ್ಕಳಿಗೆ ತೋರಿಸಿದ್ದಾರೆ. ಗೋಕುಲ ನಿರ್ಗಮನ ಮುಂತಾದ ವಿಶಿಷ್ಟ ರಂಗಪ್ರಯೋಗಗಳು, ವಿಭಿನ್ನ ಚಲನಚಿತ್ರಗಳನ್ನು ಶಾಲೆಯ ಪ್ರೊಜೆಕ್ಟರ್ ಬಳಸಿ ಮಕ್ಕಳಿಗೆ ತೋರಿಸಿ ಹೊಸ ಹೊಸ ಅಭಿರುಚಿಗಳನ್ನು ಬೆಳೆಸಿದ್ದಾರೆ.

ಎಸ್. ಕಲಾಧರ್ ಮತ್ತು ದೇವರಾಜ್ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಈ ಜೋಡಿ ಸುತ್ತಮುತ್ತಲ ಶಾಲೆಯ ಮಕ್ಕಳನ್ನು ತಮ್ಮ ಶಾಲೆಗೆ ಆಹ್ವಾನಿಸಿ ಮಕ್ಕಳ ರಂಗೋತ್ಸವವನ್ನು ಆಚರಿಸಿ ಭಾಗವಹಿಸಿದ ಮಕ್ಕಳಿಗೆಲ್ಲ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಾರೆ. ಈ ಜೋಡಿಯ ಅಪರೂಪದ ಕೆಲಸಗಳು ಬೇರೆಯವರಲ್ಲಿ ಹೊಟ್ಟೆಯುರಿಯನ್ನು ತರಿಸಿ ಒಬ್ಬರನ್ನು ಶಾಲೆಯಿಂದ ವರ್ಗಾವಣೆ ಮಾಡಿಸಿಬಿಟ್ಟಿದೆ. ಆದರೂ ಛಲಬಿಡದ ಕಲಾಧರ್ ಶಾಲೆಯಲ್ಲಿದ್ದುಕೊಂಡೆ “ಶಾಮಂತಿ” ಎನ್ನುವ ಮಕ್ಕಳ ಬರಹಗಳ ಅಪರೂಪದ ಪುಸ್ತಕವನ್ನು ವರ್ಷಕ್ಕೊಮ್ಮೆ ಹೊರ ತರುತ್ತಿದ್ದಾರೆ.


ಸರ್ಕಾರಿ ಪ್ರೌಢ ಶಾಲೆ, ಹೆಮ್ಮರಗಾಲ ಶಾಲೆಯ ಮಕ್ಕಳ ಪತ್ರಿಕೆ

ಸದಾನಂದ ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕೋಣಿಯಲ್ಲಿ ಇಂಗ್ಲಿಶ್ ಮೇಸ್ಟ್ರು. ಒಂದು ವರ್ಷದ ನಿಯೋಜನೆಯ ಮೇರೆಗೆ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಮುಗಿಸಿಕೊಂಡು ಮರಳಿ ಶಾಲೆಗೆ ಬಂದು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂರಕವಾಗಿ “ಮಿಂಚು” ಎನ್ನುವ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಶ್ರೀಕಾಂತ್ ಕುಮಟಾ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಮಕ್ಕಳ ಜೊತೆ ಜೊತೆಗೆ ಮುಖವಾಡ ರಚಿಸಿಕೊಂಡು ಅವುಗಳನ್ನೇ ಪಾತ್ರವಾಗಿಸಿಕೊಂಡು ರಂಗಪ್ರಯೋಗಗಳನ್ನು ರೂಪಿಸುತ್ತಾ ಬಂದವರು. ಅವರ ರಂಗಪ್ರಯೋಗಗಳು ಜಾತಿವಾದಿಗಳ ನಿದ್ದೆಗೆಡಿಸಿದ್ದೂ ನಡೆದಿದೆ. ಆದರೆ ಇರುವುದನ್ನ ತೋರಿಸಿಕೊಡಬೇಕು ರಂಗಭೂಮಿ, ಅದು ಕೂಡ ಕಲಿಕೆ ಎಂದು ದೃಢವಾಗಿ ನಂಬಿದ್ದ ಶ್ರೀಕಾಂತ್ ನಾಲ್ಕು ತಿಂಗಳ ಹಿಂದೆ “ಮಲೆನಾಡ ಇಳೆ” ಎಂಬ ಮಕ್ಕಳ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಮಕ್ಕಳ ಪತ್ರಿಕೆ

ಶಿವಾನಂದ ಸ್ವಾಮಿ : ಮಯ್ಸೂರು ನಗರದ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ರಂಗಶಿಕ್ಷಕರಾಗಿರುವ ಇರುವ ಮಕ್ಕಳ ರಂಗಚಟುವಟಿಕೆಗಳ ಜೊತೆ ಜೊತೆಗೆ ಗೊಂಬೆಯಾಟವನ್ನೂ ಮಾಡಿಸುತ್ತಾ ಬಂದಿದ್ದಾರೆ.

ಗುರುರಾಜ್ ಹೊಸಪೇಟೆ : ಕೊಪ್ಪಳ ಜಿಲ್ಲೆ ಜಹಾಗೀರಗುಡದೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇರುವ ‘ಮಕ್ಕಳ ಹೆಜ್ಜೆ ಜಾನಪದದತ್ತ’ ಎಂಬ ಘೋಷಣೆಯೊಂದಿಗೆ ಶಾಲಾ ರಂಗಚಟುವಟಿಕೆಗೆ ಹೊಸ ಆಯಾಮ ನೀಡಿದ್ದಾರೆ. ಇವರೆಲ್ಲರ ಜೊತೆಗೆ ರಾಯಚೂರಿನ ಮಾನ್ವಿಯಲ್ಲಿ ರಾಮಣ್ಣ, ಬಳ್ಳಾರಿಯ ಹೂವಿನಹಡಗಲಿಯಲ್ಲಿ ಅನ್ನಪೂರ್ಣ ದೇಸಾಯಿ, ಅಕ್ಕಮ್ಮ, ಮಡಿಕೇರಿಯಲ್ಲಿ ಪ್ರವೀಣ್ ಕುಮಾರ್ ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸವಿತಾ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮೂಡಲಕೊಪ್ಪಲಿನಲ್ಲಿ ಶಾಂತಾಮಣಿ, ಕೊಟ್ಟೂರಿನಲ್ಲಿ ಶ್ರೀಕಾಂತ್ ದಾವಣಗೆರೆ, ಚನ್ನಗಿರಿಯಲ್ಲಿ ವೆಂಕಟೇಶ್ವರ, ಕುಂದಾಪುರದ ಗುಜ್ಜಾಡಿಯಲ್ಲಿ ವಾಸುದೇವ ಗಂಗೇರ, ಚಾಮರಾಜನಗರ ಜಿಲ್ಲೆಯ ಯಳಂದೂರಿನ ಗುಂಬಳ್ಳಿಯಲ್ಲಿ ಮಧುಕರ ಮಳವಳ್ಳಿ, ಧಾರವಾಡ ಕಲಘಟಗಿಯಲ್ಲಿ ಮಲ್ಲೇಶ ಪಾವಗಡ, ಧಾರವಾಡದಲ್ಲಿ ರಾಘವೇಂದ್ರ ಗುಂಡಬಾಳ, ಗುಲ್ಬರ್ಗದಲ್ಲಿ ರಾಘವೇಂದ್ರ ಹಳೇಪೇಟೆ, ಬೆಂಗಳೂರಿನ ಹೊಸಕೋಟೆಯಲ್ಲಿ ಶ್ಯಾಮಲ ಗುಡ್ಡಿಯಂಗಡಿ, ಭಾನುಪ್ರಕಾಶ್, ತುಮಕೂರಿನಲ್ಲಿ ಗೋಪಾಲಕೃಷ್ಣ, ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಶೇಖರಪ್ಪ, ಹಾನಗಲ್ಲ ತಾಲೂಕಿನಲ್ಲಿ ಈಡಿಗರ ವೆಂಕಟೇಶ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೀತಿ ಇನ್ನೂ ಹಲವಾರು ಜನ ಶಿಕ್ಷಕ ಶಿಕ್ಷಕಿಯರು ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕುಗ್ರಾಮಗಳಲ್ಲಿ ಎಂಬುದು.

ನನ್ನ ಚಟುವಟಿಕೆಯನ್ನೂ ಇಲ್ಲಿ ಪ್ರಸ್ತಾಪಿಸುತ್ತೇನೆ. ನಂಜನಗೂಡಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕನಾಗಿರುವ ನಾನು, ನಾಟಕವನ್ನು ಆಡುವುದೂ ಕಲಿಕೆ; ನಾಟಕವನ್ನು ನೋಡುವುದೂ ಕಲಿಕೆ ಎಂದು ಭಾವಿಸಿಕೊಂಡಿರುವವನು ಮತ್ತು ನನ್ನ ವಿದ್ಯಾರ್ಥಿಗಳ ರಂಗಚಟುವಟಿಕೆಗಳನ್ನು ಆ ನಿಟ್ಟಿನಲ್ಲಿ ವಿನ್ಯಾಸ ಮಾಡಿಕೊಂಡಿರುವವನು. ಮೇಲೆ ತಿಳಿಸಿರುವಂತಹ ಶಿಕ್ಷಕರೂ ಅಲ್ಲದೆ ಹೆಸರು ಸೂಚಿಸದ ಇನ್ನೂ ಅನೇಕ ಶಿಕ್ಷಕರು ಕೂಡ ಇದನ್ನೇ ನಂಬಿಕೊಂಡಿದ್ದಾರೆಂಬುದು ಅವರೊಡನೆ ಮಾತನಾಡಿದಾಗ ನನ್ನ ಅನುಭವಕ್ಕೆ ಬಂದಿದೆ. ಸಾಹಿತ್ಯ ಓದು, ಬರಹ ಕೂಡ ರಂಗಕಲಿಕೆಯ ಒಂದು ಭಾಗ ಎಂದು ನಂಬಿಕೊಂಡು ಬಂದಿರುವ ನಾನು ಮಕ್ಕಳಲ್ಲಿನ ಕಲ್ಪನಾ ಶಕ್ತಿ ಬೆಳೆಸುವುದಕ್ಕೆ ಸುಳ್ಳು ಕಥೆ ಬರೆಸುವುದು, ಕವಿತೆಗಳನ್ನು ಬರೆಸುವ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಮಕ್ಕಳ ಆ ಕಲಿಕೆಯ ಪ್ರದರ್ಶನಕ್ಕೆ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡು ಹಿಂದೆ “ಹೆಮ್ಮರ” ಈಗ “ಅಳ್ಳೀಮರ” ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೇನೆ. ಮತ್ತು ಶಾಲೆಯಲ್ಲಿ ಮಕ್ಕಳ ರಂಗಚಟುವಟಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟಮಾಡುವುದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಗಿದ್ದನ್ನು ಗಮನಿಸಿದ್ದೇನೆ. ಶಾಲೆಯ ರಜೆಯ ವೇಳೆಯಲ್ಲಿ ರಂಗಶಿಬಿರಗಳನ್ನು ನಡೆಸಿ ಮಕ್ಕಳಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವುದು ನನಗೆ ಸಾಧ್ಯವಾಗಿದೆ.

ರಂಗ ತರಬೇತಿ ಶಿಬಿರ ಎಂದರೆ ಅಲ್ಲಿ ಪೂರ್ಣವಾಗಿ ರಂಗಕ್ಕೆ ಸಂಬಂಧಿಸಿದ ಕಲಿಕೆಗೆ ಮಕ್ಕಳನ್ನು ತೊಡಗಿಸಬಹುದು. ಆದರೆ ಶಾಲೆಗಳಲ್ಲಿ ಅದು ಸಾಧ್ಯವಿಲ್ಲ. ಯಾಕೆಂದರೆ ಶಾಲೆಯ ಚೌಕಟ್ಟು ವಿಭಿನ್ನ ವಿಷಯಗಳ ಕಲಿಕಾವೇದಿಕೆ. ಅಲ್ಲಿ ರಂಗ ಕಲಿಕೆಗೆ ಮಕ್ಕಳನ್ನು ತಯಾರುಗೊಳಿಸಬೇಕೆಂದರೆ ಸಮಯದ ಮಿತಿ ಇದೆ. ಎಲ್ಲಾ ರಂಗಶಿಕ್ಷಕರ ಕೊರತೆ ಎಂದರೆ ಸಮಯದ ಮಿತಿ. ಆದರೆ ಈ ಎಲ್ಲಾ ಶಿಕ್ಷಕರು ಸಮಯದ ಮಿತಿಗೆ ತಮ್ಮನ್ನು ಮಿತಿಗೊಳಿಸಿಕೊಳ್ಳದೆ, ಅದನ್ನು ಮೀರಿ ಶಾಲಾ ಅವಧಿಯ ನಂತರವೂ ರಂಗತಾಲೀಮು ನಡೆಸುವುದರೊಂದಿಗೆ ಮಕ್ಕಳ ಅಭಿರುಚಿಯನ್ನು ಹಿಗ್ಗಿಸುವತ್ತ ಮುನ್ನಡೆದಿದ್ದಾರೆ. ರಂಗಚಟುವಟಿಕೆ ಎಂದರೆ ಅದು ಬರಿಯ ನಾಟಕದ ತಾಲೀಮು ಪ್ರದರ್ಶನವಲ್ಲ; ಬದಲಾಗಿ ಮಕ್ಕಳ ವ್ಯಕ್ತಿತ್ವವಿಕಸನದ ಹೆದ್ದಾರಿ ಎಂಬುದನ್ನು ಅರಿತಿರುವುದು ಅವರ ತರಗತಿಗಳ ವಿನ್ಯಾಸದ ರೂಪುರೇಷೆಗಳಲ್ಲಿ ವೇದ್ಯವಾಗುತ್ತದೆ. ನಾಟಕ ಶಿಕ್ಷಕ ಎಂಬ ಹುದ್ದೆಯನ್ನು ವಾರ್ಷಿಕೋತ್ಸವ, ರಾಷ್ಟ್ರೀಯ ಹಬ್ಬಗಳ ಸಾಂಸ್ಕøತಿಕ ಕಾರ್ಯಕ್ರಮಗಳ ತಯಾರಕ ಎಂಬುದಕ್ಕೆ ಸೀಮಿತಗೊಳಿಸಿಕೊಳ್ಳದೆ, ರಂಗಕಲೆಯ ಜೀವಂತಿಕೆಯ ಅರಿವನ್ನು ಮೂಡಿಸುವ ಪ್ರಯತ್ನ ಈ ಎಲ್ಲರ ಚಟುವಟಿಕೆಗಳಲ್ಲಿ ಎದ್ದು ಕಾಣುತ್ತದೆ. ಒಂದು ವೇಳೆ ಈ ಶಿಕ್ಷಕರು ತಮ್ಮ ಕರ್ತವ್ಯದಿಂದ ವಿಮುಖರಾಗಿಬಿಟ್ಟರೆ ತಮ್ಮ ಸಹೋದ್ಯೋಗಿಗಳ ಕಣ್ಣಲ್ಲಿ ಸಣ್ಣವರಾಗಬೇಕಾಗುತ್ತದೆ. ಆ ಎಚ್ಚರವನ್ನು ರಂಗ ಶಿಕ್ಷಕರು ಕಾಪಾಡಿಕೊಂಡರೆ ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳು ಜೀವಂತವಾಗಿರುತ್ತದೆ.

ಪ್ರತಿಭಾಕಾರಂಜಿ : ಇದು ಮಕ್ಕಳೊಳಗಿನ ಪ್ರತಿಭಾವಿಲಾಸವನ್ನು ತೆರೆದು ಕಾಣಿಸುವ ವೇದಿಕೆ. ಆದರೆ ಶಿಕ್ಷಕರ ಸಣ್ಣತನಗಳು ಮಕ್ಕಳ ಪ್ರತಿಭೆಯ ಕಗ್ಗೊಲೆಯನ್ನು ಮಾಡುತ್ತಿವೆ. ಪ್ರತಿಭಾವಂತ ಮಕ್ಕಳು ಕೆಳಹಂತದ ಸ್ಪರ್ಧೆಗಳಲ್ಲಿಯೆ ನಿರ್ಗಮಿಸುವಂತಾಗುತ್ತಿದೆ. ಮಕ್ಕಳ ಮಧ್ಯದ ಸ್ಪರ್ಧಾಮನೋಭಾವ ಸಂಘರ್ಷದ ರೂಪ ತಾಳಿ, ಬೇರೆ ಬೇರೆ ಶಾಲೆಗಳ ಮಕ್ಕಳು ಒಂದೆಡೆ ಸೇರಿದ್ದರೂ ಒಟ್ಟಿಗೆ ಬೆರೆಯುವುದು ಸಾಧ್ಯವಾಗುತ್ತಿಲ್ಲ. ಪ್ರತಿಭಾಕಾರಂಜಿಯಲ್ಲಿ ಅತಿದೊಡ್ಡ ಸ್ಪರ್ಧೆ ನಾಟಕ. ರಂಗಶಿಕ್ಷಕರಿರುವ ಶಾಲೆಗಳ ಮಕ್ಕಳ ನಾಟಕಗಳು ರಂಗಭೂಮಿಯ ಶಿಸ್ತಿನೊಂದಿಗೆ ರೂಪುಗೊಂಡು ಯಶಸ್ವಿಯಾಗಿದ್ದರೆ, ರಂಗ ಚಟುವಟಿಕೆಯ ಪರಿಚಯವಿಲ್ಲದೆಯೂ ಕೆಲ ಉತ್ಸಾಹಿ ಶಿಕ್ಷಕರು ನಾಟಕಗಳನ್ನು ತಯಾರುಮಾಡಿಕೊಂಡು ಭಾಗವಹಿಸುತ್ತಾರೆ. ಆದರೆ ಇಲ್ಲಿ ರಂಗಶಿಸ್ತಿನ ಯಾವುದೇ ಗಂಧಗಾಳಿಯಿಲ್ಲದ ನಾಟಕಗಳೆ ಮುಂದಿನ ಹಂತಕ್ಕೆ ಹೋಗುವಂತಾಗುತ್ತದೆ. ಕಾರಣ ಶಿಕ್ಷಕರ ಪ್ರಭಾವ. ಇದು ಹೆಚ್ಚಿನ ಎಲ್ಲಾ ಸ್ಪರ್ಧೆಗಳಲ್ಲೂ ಕಂಡು ಬಂದು ಮಕ್ಕಳು ಮಕ್ಕಳನ್ನೇ ದ್ವೇಷಿಸುವಂತಾಗುತ್ತದೆ. ಪ್ರತಿಭಾಕಾರಂಜಿಯಲ್ಲಿ ಮಕ್ಕಳ ನಾಟಕಗಳ ಸ್ಪರ್ಧೆಯನ್ನು ಮಾಡಿಸುವ ಬದಲು ಮಕ್ಕಳ ನಾಟಕೋತ್ಸವ ಮಾಡಿದರೆ ಬೇರೆ ಬೇರೆ ಜಿಲ್ಲೆಗಳ ಮಕ್ಕಳು ಪ್ರೀತಿಯಿಂದ ಬೆರೆತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಬಂಧುತ್ವವನ್ನು ಬೆಳೆಸಿಕೊಳ್ಳುತ್ತಾರೆ. ರಂಗಭೂಮಿಯ ಉದ್ದೇಶವು ಅದೆ. ಬದುಕನ್ನು ತಿಳಿಯುವುದು. ಹಾಗಾದಾಗ ನಮ್ಮ ನಡುವಿನ ಕ್ರೋಧವಳಿದು ಸೌಹಾರ್ದತೆ ಮನೆ ಮಾಡುತ್ತದೆ; ಅದು ಶಿಕ್ಷಣ. ಇಂತಹ ನಾಟಕೋತ್ಸವಗಳು ನಡೆದರೆ ಮಕ್ಕಳು ಬೇರೆ ಬೇರೆ ನಾಟಕಗಳನ್ನು ನೋಡುತ್ತಾರೆ. ನಾಟಕವನ್ನು ನೋಡುವುದು ಎಂದರೆ ಅದೇ ಒಂದು ಕಲಿಕೆ. ಗಂಟೆಗಟ್ಟಲೆ ನಿಂತು ಭಾಷಣವೋ ಉಪನ್ಯಾಸವೋ ಮಾಡಿ ಕಲಿಸುವ ಕ್ರಮಕ್ಕಿಂತಲೂ ನಾಟಕಗಳನ್ನು ಮಾಡಿ, ನೋಡಿ ಕಲಿಸುವ ಕಲಿಕೆ ಮಕ್ಕಳ ಮನೋಲೋಕವನ್ನು ಬಹುಬೇಗ ಪ್ರಭಾವಿಸುತ್ತವೆ.

ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ನಡೆಯುತ್ತವೆ. ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ರಂಗಶಿಕ್ಷಕರ ಚಟುವಟಿಕೆಗಳನ್ನು ಆಗಾಗ ರಾಜ್ಯದ ದೊಡ್ಡ ಪತ್ರಿಕೆಗಳು ಸುದ್ಧಿ ಮಾಡುತ್ತಿವೆ. ರಂಗಚಟುವಟಿಕೆ ನಡೆÀಸುವುದಕ್ಕೆ ಸಂಪನ್ಮೂಲವೂ ಅಗತ್ಯ. ಸಂಪನ್ಮೂಲವನ್ನು ಕ್ರೋಢೀಕರಿಸುವುದಕ್ಕೆ ಹಣದ ಅಗತ್ಯವು ಇರುತ್ತದೆ. ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಡೆಸುವ ಎಲ್ಲಾ ಶಿಕ್ಷಕರ ಅಳಲು ಒಂದೆ, ತಾವು ಏನೇ ಕಾರ್ಯಕ್ರಮ ನಡೆಸಿದರೂ ಅದಕ್ಕೆ ತಮ್ಮ ಜೇಬಿನಿಂದಲೇ ಹಣವನ್ನು ಭರಿಸಬೇಕಾಗುತ್ತದೆ ಎಂಬುದು! ಅದಕ್ಕೆ ಬಹುತೇಕ ರಂಗಶಿಕ್ಷಕರು ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ಕೂಡ! ಒಂದು ಒಳ್ಳೆಯ ಕಾರ್ಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ನಡೆಸುತ್ತಾರೆ ಎಂದರೆ ಅದರ ಕೀರ್ತಿ ಶಾಲೆಗೆ ಸಲ್ಲುವುದು. ತಮ್ಮದೆ ಸಂಬಳದಲ್ಲಿ ಶಾಲೆಯಲ್ಲಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಅದನ್ನು ತಮ್ಮ ಶಾಲೆಯ ಕಾರ್ಯಕ್ರಮ ಎಂದು ಹೆಮ್ಮೆಪಟ್ಟುಕೊಳ್ಳುವ ಈ ರಂಗಶಿಕ್ಷಕರು, ನಾಟಕೋತ್ಸಾಹಿ ಮೇಸ್ಟ್ರುಗಳ ಉತ್ಸಾಹ ಬತ್ತದೆ ಸದಾ ಉಳಿಯಲಿ. ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿ ಸಮರ್ಥವಾಗಿ ಬಳಕೆಯಾಗಲಿ.

ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ರಂಗಚಟುವಟಿಕೆಗಳು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಲಾಖೆ ನೀಡಿ ಗೌರವಿಸಿದೆ. ಆಯಾಯ ಜಿಲ್ಲಾ ಡಯಟ್ ಸಂಸ್ಥೆ ಈ ಶಿಕ್ಷಕರನ್ನು ಸಂಪನ್ಮೂಲವ್ಯಕ್ತಿಗಳನ್ನಾಗಿ ಬಳಸಿಕೊಳ್ಳುತ್ತಿದೆ. ಇಲಾಖೆಯ ಶಿಕ್ಷಣವಾರ್ತೆ ಪತ್ರಿಕೆ ಇವರ ರಂಗಚಟುವಟಿಕೆಗಳನ್ನು ಕುರಿತು ವಿವರವಾದ ಚಿತ್ರ ಲೇಖನಗಳನ್ನು ಪ್ರಕಟಿಸಿದೆ. ಸಂಘ ಸಂಸ್ಥೆಗಳು ನಿರಂತರವಾಗಿ ನಾಟಕಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರುಗಳನ್ನು, ವಿದ್ಯಾರ್ಥಿಗಳನ್ನು ಗೌರವಿಸಿದೆ. ಕಾಲೆಳೆಯುವ ಸಹೋದ್ಯೋಗಿಗಳ ನಡುವೆ ಬೆನ್ನುತಟ್ಟುವ ಸಹೋದ್ಯೋಗಿಗಳ ಸಂಖ್ಯೆಯು ಬೆಳೆಯುತ್ತಿದೆ. ನಾಟಕದ ಪರಿಣಾಮ ಉಳಿದ ಶಿಕ್ಷಕರಿಗೆ ಮನವರಿಕೆಯಾಗುತ್ತಿದೆ.

ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಕೊರತೆ ಎಂದರೆ ರಾಜ್ಯದಲ್ಲಿರುವ ಸಾವಿರಾರು ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ರಂಗಶಿಕ್ಷಕರಿರುವ ಶಾಲೆಗಳ ಸಂಖ್ಯೆ ನೂರನ್ನೂ ದಾಟುವುದಿಲ್ಲ. ರಂಗಕಲೆಯ ಪರಿಚಯ ಕೆಲವೇ ಕೆಲವು ಶಾಲೆಗಳ ಕೆಲವೇ ಕೆಲವು ಮಕ್ಕಳಿಗೆ ತಲುಪುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ರಂಗಚಟುವಟಿಕೆಗಳು ವಿಸ್ತಾರಗೊಳ್ಳಬೇಕಾದರೆ ಸರ್ಕಾರ ಇನ್ನಷ್ಟು ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇತರೆ ವಿಷಯಗಳ ಉತ್ಸಾಹಿ ಶಿಕ್ಷಕರಿಗೆ ಅವರ ಕಾರ್ಯದೊತ್ತಡದ ಮಿತಿಯಿರುತ್ತದೆ. ಹಾಗಾಗಿ ಮಕ್ಕಳಿಗೆ ರಂಗಕಲೆಯ ಸಮಗ್ರ ಪರಿಚಯವಾಗಬೇಕಾದರೆ ಪ್ರತೀ ಶಾಲೆಯಲ್ಲೂ ರಂಗಶಿಕ್ಷಕರಿರಬೇಕು. ರಂಗಚಟುವಟಿಕೆ ಎಂದರೆ ಪ್ರತಿಭಾಕಾರಂಜಿ, ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೆ ಅದೊಂದು ಕಲಿಕೆಯಾಗಬೇಕು. ಆ ನಿಟ್ಟಿನಲ್ಲಿ ಇಲಾಖೆ ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸಬೇಕು. ಆಗ ಶಾಲೆಯ ಉಳಿದ ಶಿಕ್ಷಕರು ಪಠ್ಯೇತರ ಎಂದು ಭಾವಿಸುವ ನಾಟಕ, ನೃತ್ಯ ಮುಂತಾದ ವಿಷಯಗಳಿಗೆ ಮಹತ್ವ ನೀಡಲು ತೊಡಗುತ್ತಾರೆ. ಇದು ಆಗಬೇಕಾದ ದರ್ದು. ಇಲ್ಲವಾದಲ್ಲಿ ರಂಗಚಟುವಟಿಕೆಗಳು ಉಳಿದ ಶಿಕ್ಷಕರಿಗೆ ಸಮಯ ವರ್ಥಮಾಡುವ ವಿಧಾನವಾಗಿ ಕಾಣುತ್ತದೆ.

ಶಾಲೆಯ ಚಟುವಟಿಕೆ ಎಂದರೆ ಅದೊಂದು ಸಮಾಜದ ಚಟುವಟಿಕೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಹಾಗಾಗುತ್ತಿಲ್ಲ. ಶಿಕ್ಷಕರು ಕೂಪಗಳಾಗಿ ತಮ್ಮ ವಿಷಯವೇ ಮೇಲು ಅದಕ್ಕೇ ಹೆಚ್ಚು ಮಹತ್ವ ನೀಡಬೇಕು. ಕ್ರೀಡೆ, ನಾಟಕ, ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಿಗೆ ಪರೀಕ್ಷೆಯಿಲ್ಲ ಹಾಗಾಗಿ ಅವನ್ನು ಕಲಿಯದಿದ್ದರೂ ನಡೆಯುತ್ತದೆ ಎಂಬ ಧೋರಣೆ ಹೊಂದಿದ್ದಾರೆ; ಇದು ಆರೋಪವಲ್ಲ ನಿಜ ಸ್ಥಿತಿ. ನಾಟಕ, ಚಿತ್ರಕಲೆ ಮುಂತಾದ ವಿಷಯಗಳ ಶಿಕ್ಷಕರು ಎಷ್ಟೇ ಅದ್ಭುತವಾಗಿ ಕೆಲಸ ನಿರ್ವಹಿಸಿದರೂ ಶಾಲೆಗಳಲ್ಲಿಯೆ ಅವರಿಗೆ ಬೆನ್ತಟ್ಟುವ ಕೆಲಸ ನಡೆಯುತ್ತಿಲ್ಲ. ನಾಟಕ ಮುಂತಾದ ಕಲೆಗಳು ಮಕ್ಕಳ ಬೆಳವಣಿಗೆಯಲ್ಲಿ, ಮನುಷ್ಯರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂಬ ಅರಿವಿಲ್ಲ. ತಮ್ಮ ದುರಂಹಕಾರದಿಂದಾಗಿ  ಉತ್ತಮ ಕಾರ್ಯಗಳನ್ನು ಕಡೆಗಣಿಸಿಯೋ, ಮುಖ್ಯಶಿಕ್ಷಕರಿಗೆ ಕಿವಿಚುಚ್ಚಿಯೋ ರಂಗಶಿಕ್ಷಕರ, ಉತ್ಸಾಹಿ ಶಿಕ್ಷಕರಿಗೆ ಅಡ್ಡಗಾಲಾಗುತ್ತಿದ್ದಾರೆ. ಇಂತವುಗಳು ನಿಂತರೆ ಸರ್ಕಾರಿ ಶಾಲೆಗಳು ಹೊಸ ಚೈತನ್ಯ ಪಡೆದುಕೊಳ್ಳುತ್ತವೆ. ತಾವೇ ಜ್ಞಾನಿಗಳು ಎಂಬ ಅಹಂಭಾವವನ್ನು ಬಿಟ್ಟು ಪ್ರತಿಭಾವಂತ ರಂಗಶಿಕ್ಷಕರು, ಸಂಗೀತ, ಚಿತ್ರಕಲಾ ಶಿಕ್ಷಕರು ಮುಂತಾದ ಶಿಕ್ಷಕರ ನೆರವನ್ನು ತಮ್ಮ ವಿಷಯಗಳಿಗೆ ಬಳಸಿಕೊಂಡರೆ ಶಾಲಾ ಕಲಿಕೆಯ ಹಳೆಯ ಮಾದರಿಗಳನ್ನು ಮುರಿದು ಹೊಸದಾಗಿ ಕಟ್ಟಬಹುದು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡಮಕ್ಕಳ ಬಾಳಿಗೆ ದೀಪವಾಗಬಹುದು. ಇದರ ಸಂಪೂರ್ಣ ಹೊಣೆಗಾರಿಕೆ ಶಿಕ್ಷಕರದ್ದು.
ಶಿಕ್ಷಣ ಎನ್ನುವುದು ಪಾಠಗಳನ್ನು ಮಾಡಿ ಅಂಕ ಗಳಿಸುವ ಯಂತ್ರಗಳನ್ನು ತಯಾರುಮಾಡುವ ಕಾರ್ಖಾನೆಯಲ್ಲ. ಅದು ಸಮಾಜದ ಸಜ್ಜನರನ್ನು ರೂಪುಗೊಳಿಸುವ ಪ್ರಯೋಗ ಶಾಲೆ. ಈ ಪ್ರಯೋಗ ಶಾಲೆಗೆ ಜೀವಂತಿಕೆಯ ಸ್ಪರ್ಶ ಬೇಕಾಗಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಈ ಜೀವಂತಿಕೆ ಕಳೆದು ಹೋಗಿದೆ. ರಂಗಕಲೆ ಅದನ್ನು ಹುಡುಕಿಕೊಡುವ ಸಾಮಥ್ರ್ಯ ಹೊಂದಿದೆ. ಬೇರೆ ಬೇರೆ ವಿಷಯಗಳ ಶಿಕ್ಷಕರು ರಂಗಕಲೆಯನ್ನು ತಮ್ಮ ಪಾಠ ಮಾಡುವ ಕ್ರಮಕ್ಕೆ ಅಳವಡಿಸಿಕೊಳ್ಳುವುದು ಕೂಡ ರಂಗಚಟುವಟಿಕೆಯೇ ಆಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ನಾಟಕಗಳನ್ನು ಆಡಿಸುವುದು ಮಾತ್ರ ರಂಗಚಟುವಟಿಕೆ ಎನಿಸಿಕೊಳ್ಳುವುದಿಲ್ಲ, ಶಾಲೆಯ ನಿರಂತರ ಪಾಠ ಪ್ರವಚನಗಳಲ್ಲಿ ರಂಗಕಲೆಯ ಅಳವಡಿಕೆ ಕೂಡ ರಂಗಚಟುವಟಿಕೆಯೆ ಎನಿಸಿಕೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ರಂಗಕಲೆಯ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಮತ್ತು ಅವರ ಬಳಕೆಯನ್ನು ಮಾಡಿಕೊಳ್ಳುವ ಕುರಿತಾಗಿ ಇಲಾಖೆಯೇ ನೀತಿಯೊಂದನ್ನು ರೂಪಿಸಿ ‘ಆದೇಶ’ ರೂಪದಲ್ಲಿ ಶಾಲೆಗಳಿಗೆ ದಯಪಾಲಿಸಿದರೆ ಮಕ್ಕಳನ್ನು ಕಲಿಕಾಯಂತ್ರಗಳನ್ನಾಗಿ ಜಡಗೊಳಿಸಿದ್ದ ವ್ಯವಸ್ಥೆಯೊಳಗೊಂದಷ್ಟು ಲವಲವಿಕೆ ಮೂಡಬಹುದು.

- ಸಂತೋಷ ಗುಡ್ಡಿಯಂಗಡಿ

No comments:

Post a Comment