Saturday, November 21, 2015


ತುಂಬಾ ದಿನಗಳ ನಂತರ ಬರೆದ ಪದ್ಯ


ಕಂಬಾಲಪಲ್ಲಿಯ ಬೇಯ್ಸಿದರೋ
ಖೈರ್ಲಾಂಜಿ ಬೆತ್ತಲೆ ಮಾಡಿದರೋ
ಬೆಲ್ಚಿ ಅಂದು ಬದನ್ವಾಳಲಿ ಕೊಂದು
ಮೊನ್ನೆ ಉತ್ತರ ನಿನ್ನೆ ಹರ್ಯಾಣದಿಹಾಲು ಹಸುಳೆಗಳ ಸುಟ್ಟರೋನಮ್ಮಜ್ಜಗೆ ಕೊಳ್ಳಿ ಇಟ್ಟರೋ...||ದಲಿತರ ಬೆನ್ನು ಬಿದ್ದರೋ
ಶತಮಾನಗಳೆಲ್ಲ ಒದ್ದರೋ....||
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ದುಡಿಮೆಗೆ ಬಿದ್ದು ಮೈ ಕಪ್ಪಾಯಿತು
ಆದರೂ ರಕ್ತವು ಕೆಂಪೇ ಇತ್ತು
ಗುಂಪು ಜೀವನ ಮಾಡುವ ‘ಮನು’ಜ
ದಲಿತನ ಮಾತ್ರ ಹೊರಗೆ ಇಟ್ಟ
ದಲಿತರ ಬೆನ್ನು ಬಿದ್ದರೋ
ಶತಮಾನಗಳೆಲ್ಲ ಒದ್ದರೋ....||
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ಮಳೆಗಾಳಿಯಲಿ ನೊಂದು ಬೆಂದರೂ
ದೇವರು ಮಾತ್ರ ಮುಟ್ಟಿಸಿಕೊಳ್ಳನು- ಇವರ
ದೇವರು ಧರ್ಮದ ರಕ್ಷಣೆಯಿಲ್ಲದೆ
ಬದುಕಲಿಲ್ಲವೆ ಶತ ಶತಮಾನ?
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ಅಂಬೇಡ್ಕರರು ಬಿತ್ತಿದ ಅಕ್ಷರ
ನಮ್ಮ ಕೇರಿಯೊಳಗರಳಿತು ಹೂವು
ಅರಳಿದ ಹೂವನು ಹೊಸಕಿ ಹಾಕಲು
ಅಲ್ಲಿಲ್ಲೆಲ್ಲಾ ಕಾದಿಹರಯ್ಯೋ...
ಎದ್ದೇಳ್ ದಲಿತ.. ಮೊಳಗಲಿ ಭೋರ್ಗರೆತ
ಓ ಕಲಿತ ದಲಿತ... ನಿನಗ್ಯಾಕ್ ಹಿಂಜರೆತ?

Saturday, September 12, 2015








ಪ್ಲಾಸ್ಟಿಕ್ ಭೂತ
ಪರಿಸರ ಜಾಗೃತಿಗಾಗಿ ನಂಜನಗೂಡು ತಾಲೂಕು 
ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳ ನಾಟಕ

ರಚನೆ: ಸಂತೋಷ ಗುಡ್ಡಿಯಂಗಡಿ




ಸಲಹೆ ಮಾರ್ಗದರ್ಶನ: ಶ್ರೀ ನಾಗೇಶ ಹೆಗಡೆ, ವಿಜ್ಞಾನ ಬರಹಗಾರರು ಬೆಂಗಳೂರು
ವಂದನೆಗಳು: “ಒಂದೂರಿನಲ್ಲಿ” ಎಂಬ ತಮ್ಮ ಕವನ ಬಳಸಿಕೊಳ್ಳಲು ಅನುಮತಿ ನೀಡಿದ  
ಕವಿ ಶ್ರೀ ಜಿ.ಪಿ.ಬಸವರಾಜು, ಮಯ್ಸೂರು






ಪಾತ್ರಗಳು:
ಸೂತ್ರಧಾರರು
ಪ್ಲಾಸ್ಟಿಕ್ ರಾಕ್ಷಸ
ಮುದುಕ
ಹುಡುಗ 1
ಹುಡುಗ 2
ಹುಡುಗ 3
ಹಕ್ಕಿ ಮರಿ
ವಿಜ್ಞಾನಿ 1
ವಿಜ್ಞಾನಿ 2
ವಿಜ್ಞಾನಿ 3
ಹೆಂಗಸು
ಗಂಡಸು
ಆತ್ಮಗಳು
ಮೊದಲನೇ ಪ್ರದರ್ಶನದಲ್ಲಿ ಪಾತ್ರವಹಿಸಿದ ಮಕ್ಕಳು:
ರೋಹಿತ್ ಕುಮಾರ್ ಹೆಚ್. ಎಂ.
ಸಂದೇಶ ಹೆಚ್. ಎಂ.
ಮಹದೇವ ಸ್ವಾಮಿ ಹೆಚ್. ಎನ್.
ಅಮೃತ ಹೆಚ್. ಎಸ್.
ಮಮತಾ ಹೆಚ್. ಎನ್.
ಆಶಾ ಹೆಚ್. ಹೆಚ್.
ಸಂಜನಾ ಹೆಚ್. ಆರ್.
ರಾಕೇಶ ವಿ.

ಹಿನ್ನೆಲೆ ಸಂಗೀತಗಾರರು:
ಮಂಜುಳ ಬಿ. ಎಸ್.
ಮಾಲತಿ ಹೆಚ್. ಎನ್.
ಪ್ರಿಯಾಂಕ ಎಸ್.
ಪ್ರತಿಮಾ ಬಿ. ಎಸ್.
ಕಾವ್ಯ ಬಿ. ಎನ್.
ಮನುಕುಮಾರ್ ಹೆಚ್. ಆರ್.

ಹಾಡು:
ಗಿಳಿಯು ಪಂಜರದೊಳಿಲ್ಲ | ರಾಮ
ಗಿಳಿಯು ಪಂಜರದೊಳಿಲ್ಲ ||
ಅಕ್ಕ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ||
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೋ......
ಗಿಳಿಯು ಪಂಜರದೊಳಿಲ್ಲ | ರಾಮ
ಗಿಳಿಯು...
(ಹಾಡು ನಡೆಯುತ್ತಿರುವಾಗ ಮುದುಕನೊಬ್ಬ ನಿಧಾನವಾಗಿ ರಂಗದ ಮೇಲೆ ಬರುವನು. ಹಿನ್ನೆಲೆಯಲ್ಲಿ “ಕಲಾ ಪ್ರೇಕ್ಷಕರೇ...., ಕಲಾ ಬಾಂಧವರೇ...., ಕಲಾ ರಸಿಕರೇ....,” ಎಂಬ ದನಿ ಜೋರಾಗಿ ಕೇಳುವುದು. ಅದರ ಬೆನ್ನಲ್ಲೇ ಹುಡುಗರಿಬ್ಬರು ಓಡುತ್ತಾ ಬರುವರು.)
ಸೂತ್ರಧಾರ(1): ಅಯ್ಯಾ ಕಲಾಭಿಮಾನಿಗಳೇ
ಒಂದೂರಿನಲ್ಲಿ ಒಂದಾನೆಯಿತ್ತು
ಒಂದು ಒಂಟೆಯಿತ್ತು ಒಂದು ಕುದುರೆಯಿತ್ತು
ಒಂದು ಕತ್ತೆಯಿತ್ತು ಒಂದು ನಾಯಿಯಿತ್ತು
ಒಂದೂರಿನಲ್ಲಿ
ಸೂತ್ರಧಾರ (2): ಅಯ್ಯಾ ಸಹೃದಯರೇ,
ಒಂದೂರಿನಲ್ಲಿ ಒಂದು ಬೆಟ್ಟವಿತ್ತು
ಒಂದು ನದಿಯಿತ್ತು ಒಂದು ಕಾಡಿತ್ತು
ಪ್ರಾಣಿಪಕ್ಷಿಗಳಿದ್ದವು....
ಒಂದೂರಿನಲ್ಲಿ
ಮುದುಕ: ಹೌದು ಮಗು ನಿನ್ನಿಂದ ನಾನೀಗ ಈ
ಕತೆಯನ್ನು ಕಲಿಯಬೇಕು
ಸೂತ್ರಧಾರ (1): ಅಯ್ಯಾ ತಾತಪ್ಪ ಕೇಳು,
ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ
ಅವನ ಬಳಿ ಬಿಲ್ಲು ಬಾಣಗಳಿದ್ದವು
ಕತ್ತಿ ಗುರಾಣಿಗಳಿದ್ದವು ಮತ್ತೆ ಯಂತ್ರ
ಮಂತ್ರ ತಂತ್ರಗಳೂ ಇದ್ದವು
ಒಂದೂರಿನಲ್ಲಿ
ಸೂತ್ರಧಾರ (2): ಒಂದು ದಿನ ಅವನು ಬಿಲ್ಲಿಂದ ಒಂದು
ಹಕ್ಕಿಯ ಕೊಂದ, ತಿಂದ; ಮತ್ತೆ ಒಂದೊಂದೇ
ಪ್ರಾಣಿಗಳ ಕೊಂದ ತಿಂದ
ಒಂದೂರಿನಲ್ಲಿ
ಮುದುಕ: ಹೌದು ಮಗು ನಿನ್ನಿಂದ ನಾನೀಗ ಈ ಕತೆಯನ್ನು ಕಲಿಯಬೇಕು
ಸೂತ್ರಧಾರರಿಬ್ಬರೂ: ಅಯ್ಯಾ ಬುದ್ಧಿವಂತ ಕಲಾ ರಸಿಕರೇ....
“ಆ ಮನುಷ್ಯನ ಹಸಿವು ತೀರಲೇ ಇಲ್ಲ”
(ಹಿನ್ನೆಲೆಯಲ್ಲಿ ಘೋರವಾದ ಕೂಗು ಕೇಳುವುದು. ಆ ಅಬ್ಬರಕ್ಕೆ ಹುಡುಗರಿಬ್ಬರೂ ಅಂಜಿ ಓಡಿ ಹೋಗುವರು. ಪ್ಲಾಸ್ಟಿಕ್ ರಾಕ್ಷಸ ಲಯ ಬದ್ಧವಾಗಿ ಹೆಜ್ಜೆ ಹಾಕುತ್ತಾ ಬರುವನು. ಮುದುಕ ಅಲ್ಲೆ ಮರೆಗೆ ನಿಂತು ನೋಡುವನು.)
ಪ್ಲಾಸ್ಟಿಕ್ ರಾಕ್ಷಸ: ಎಲವೋ.........
ಬುದ್ಧಿವಂತರೇ, ಬುದ್ಧಿವಿಹೀನರೇ
ಮುದ್ದುಗಳೇ, ಬುದ್ದುಗಳೇ ನಾನ್ಯಾರೆಂದು ಬಲ್ಲಿರಾ?
ನಾನು...... ನಾನು...... ಯಾರೆಂದೂ......ಹೇಳುವುದಿಲ್ಲ.
ನೀವೇ ಅರಿತುಕೊಳ್ಳಿ. ನಿಮ್ಮ ವೈಭೋಗ ನಿಮ್ಮ ದುರಾಸೆಯೇ ನನ್ನ ಜನನಕ್ಕೆ ಕಾರಣ.ದುಷ್ಟ ಮಾನವರೇ... ಛೇ|| ಹಾಗನ್ನಬಾರದು
ನನ್ನ ಹುಟ್ಟಿಗೆ ಕಾರಣರಾದ ಜನಕರೇ, ನಿಮ್ಮಷ್ಟು ಇತಿಹಾಸ ನನಗಿಲ್ಲ. ಆದರೆ,ನಿಮ್ಮ ಭವಿಷ್ಯ ಘೋರವಾಗಬಲ್ಲಷ್ಟು ನನಗೊಳ್ಳೆಯ ಭವಿಷ್ಯವಿದೆ.
ನಿಮ್ಮ ಬದುಕಿನ ತುಂಬಾ ಪಾಲು ನೀಡಿದ ನಿಮಗೆ ವಂದನೆಗಳು
ಮುದುಕ: ಅಯ್ಯಾ ನೀನ್ಯಾರು?
ಪ್ಲಾಸ್ಟಿಕ್ ರಾಕ್ಷಸ: ಯಾರದು? ಓ ಮುದುಕನೋ ನಾನ್ಯಾರೆಂದು ನೀನು ತಿಳಿಯುವುದು ಬೇಡ.
ಮುದುಕ: ಎಲ್ಲಿಯವನು ನೀನು?
ಪ್ಲಾಸ್ಟಿಕ್ ರಾಕ್ಷಸ: ನಿಮ್ಮವನೆ. ನಿಮ್ಮ ಮನೆಯ ಮಗ ನಿಮ್ಮ ಮಗು ತಿನ್ನುವ ತಿಂಡಿ, ಕುಡಿಯುವ ಜ್ಯೂಸು,ಮನೆಯೊಳಗಿನ ಸಾಮಾನು, ಎ.ಸಿ., ಟಿವಿ, ಫ್ರಿಜ್ಜು, ಪೆನ್ನು, ಮೊಬಯ್ಲು ಎಲ್ಲ ಎಲ್ಲಾ ಕಡೆ ನಾನಿದ್ದೀನಿ
ಮುದುಕ: ನಿನಗೇನು ಬೇಕಪ್ಪಾ?
ಪ್ಲಾಸ್ಟಿಕ್ ರಾಕ್ಷಸ: ಬಲಿ ಬೇಕು ಬಲಿ. ಕೊಡುವೆಯಾ?
ಮುದುಕ: ಅಯ್ಯೋ ಪಾಪಿ ನಿನಗೆ ಬಲಿ ಬೇಕಾ. ಈ ಕೋಲು ನೋಡು
ಇದರಿಂದ ಬಡಿದು ನಿನ್ನ ಬಲಿ ತೆಗೆಯುತ್ತೇನೆ.
ಪ್ಲಾಸ್ಟಿಕ್ ರಾಕ್ಷಸ: ಪಾಪಿ ಮುದುಕ ನನಗೇ ಹೆದರಿಸುವೆಯಾ? ನನ್ನ ಶಕ್ತಿ ನೋಡು.
(ಪ್ಲಾಸ್ಟಿಕ್ ರಾಕ್ಷಸ ಮುದುಕನ ಸುತ್ತ ಗಾಳಿಯೂದುವನು. ಮುದುಕ “ನನಗೆ ಉಸಿರಾಡಲು ಆಗುತ್ತಿಲ್ಲ” ಎನ್ನುತ್ತಾ ಬಿದ್ದು ಹೋಗುವನು. ಪ್ಲಾಸ್ಟಿಕ್ ರಾಕ್ಷಸ ಅದನ್ನು ನೋಡಿ ನಗುತ್ತಿರುವಾಗ, ದೂರದಲ್ಲಿ ಮಕ್ಕಳು ಹಾಡುತ್ತಾ ಬರುವುದು ಕೇಳಿಸಿ ಮರೆಯಾಗುವನು)

ಹಿನ್ನೆಲೆ ಹಾಡು: ಚಟ್ ಪಟ್ ಚಂಗ್ಯಾ
ಚಂಯ್ ಪಂಯ್ ಮಂಗ್ಯಾ
ಬೂಟು ಟೊಪ್ಪಿಗೆ ಹಾಕ್ಕೊ
ಮಡ್ಡಮ್ಮನ ಕೈ ಹಿಡ್ಕೋ.....
(ಮೂವರು ಮಕ್ಕಳು ಆಡುತ್ತಾ ಬರುವರು. ಅವರ ಕಯ್ಗಳಲ್ಲಿ ಲಾಲಿಪಾಪ್ ಇದೆ. ಅದನ್ನು ನೋಡುತ್ತಾ ಬಂದವರಿಗೆ ಬಿದ್ದಿರುವ ಮುದುಕ ಕಾಣಿಸುತ್ತಾನೆ. ಅವನ ಸುತ್ತಲೂ ನೆರೆದು)
ಅಮೃತ: ಡೇ, ನೋಡುಡಾ ತಾತ ಮಲ್ಗವನೆ.
ಮಾದೇವ ಸ್ವಾಮಿ: ಅದ್ಯಾಕುಡಾ ಇಲ್ಲಿ ಮಲ್ಗವನೆ?
ಮಮತ: ನಿನ್ನೆ ಚನ್ನಾಗಿ ಕುಡ್ದಿರಬೇಕು ಕಯ್ಯಾ, ಇನ್ನೂವಿ ಗ್ಯಾನನೇ
ಬಂದಿಲ್ಲಕುಡಾ. ತಾತೋ.. ಬೆಳ್ಗಾತುಕಯ್ಯಾ ಎದ್ದೇಳು.
(ಅಮೃತ ಮುದುಕನನ್ನು ಅಲುಗಾಡಿಸುವಳು. ಮುದುಕ ಏಳುವುದಿಲ್ಲ.)
ಮಾದೇವ ಸ್ವಾಮಿ: ಅಮೃತ ನೀರ್ತಂದು ಮುಕಕ್ಕ ಹಾಕಿದ್ರ ಎದ್ದೇಳ್ತಾನ ತಕ್ಕ
(ಓಡಿ ನೀರು ತಂದು ಮುದುಕನಿಗೆ ಸಿಂಪಡಿಸುವಳು, ಮುದುಕ ನಿಧಾನ ಅಲುಗಾಡಿ ಏಳುವನು. ಸುತ್ತಲೂ ನೋಡುವನು ರಾಕ್ಷಸನಿಗಾಗಿ. ಅವನು ಹುಡುಕುವುದನ್ನು ಕಂಡು)
ಮಮತ: ಅದ್ಯಾಕಜ್ಜ ಹಂಗೆ ನೋಡ್ದಯಿ, ಭೂತ ಬಂದಿದ್ದಾ ನಿನ್ನ ಕನಸಾಗೆ
ಮುದುಕ: ಎಲ್ಲಿ ಹೋದ ಅವನು.
ಮಾದೇವ ಸ್ವಾಮಿ: ಇಲ್ಲವ್ನಿ ಕಯ್ಯೋ
ಅಮೃತ: ಯಾರಜ್ಜ?
ಮಮತ: ಭೂ.....ತ ಅಲ್ವಜ್ಜಾ?
ಮುದುಕ: ಹೂಂ ಭೂತ. ಅವನು ಗಾಳಿಯೂದಿದ್ದೆ ನಾನು ಬಿದ್ದೋದೆ.
ಮಾದೇವ ಸ್ವಾಮಿ: ಪುರ್ ಪುರ್ ಅಂತ ಗಾಳಿ ಹಾಕಿದ್ನಾ ಭೂತಪ್ಪ. (ನಗುವರು)
ಅಮೃತ: ಅವನನ್ನು ನೀನು ನಿಜವಾಗ್ಲೂ ಕಂಡೆಯಾ?
ಮುದುಕ: ಹೌದು ಮಗು ಕಂಡೆ. ಭಯಂಕರವಾಗಿದ್ದ. ನಾನು ನಿಮ್ಮ
ಮನೆಯ ಮಗ ಅಂದ. ಮಕ್ಕಳು ತಿನ್ನುವ ತಿಂಡಿ, ಜ್ಯೂಸು
ಎಲ್ಲಾ ಕಡೆ ನಾನಿದ್ದೀನಿ ಅಂದ.
ಮಾದೇವ ಸ್ವಾಮಿ: ನನ್ನ ಹತ್ರವಿ ತಿಂಡಿ ಅದ. ಆದ್ರ ಭೂತಪ್ಪ ಇಲ್ವಲ್ಲ ಅಜ್ಜ!
ಮುದುಕ: ಅದೆ ನನಗೂ ಅರ್ಥವಾಗಿಲ್ಲ.
ಮಮತ: ಬಿಡಕಯ್ಯ ತಾತ ಕನಸು ಕಂಡು ಬೆಚ್ಗಂಡನ. ನಾನು ಲಾಲಿಪಾಪ್ ತಿಂತೀನಿ.
(ಮೂವರೂ ಲಾಲಿಪಾಪ್‍ಗೆ ಸುತ್ತಿದ್ದ ಪ್ಲಾಸ್ಟಿಕ್ ಕವರನ್ನು ತೆಗೆದು ಎಸೆದು, ತಿನ್ನುವರು)
ಮಾದೇವ ಸ್ವಾಮಿ: ನಿಂಗೂ ಬೇಕಾ ತಾತ?
ಮಮತ: ಅವಗ ಸಾರಾಯಿ ಇದ್ರ ಬೇಕು ಅಲ್ವಾ ಅಜ್ಜಾ? (ಮುದುಕ ನಗುವನು)
ಅಮೃತ: ಅಜ್ಜ ನಿಂಗೊಂದು ಮ್ಯಾಜಿಕ್ ತೋರಿಸ್ತೀನಿ ನೋಡ್ಕ
(ಅವನು ಅಲ್ಲಿ ಎಸೆದಿದ್ದ ಕವರುಗಳಿಗೆ ಬೆಂಕಿ ಹಚ್ಚುವನು ಅದರಿಂದ ಬಣ್ಣದ ಬೆಂಕಿ ಬರುವುದು)
ಅಮೃತ: ನೋಡ್ಕ ತಾತೋ ಬಣ್ಣದ ಬೆಂಕಿ
ಮಕ್ಕಳು ಹಾಡುವರು: ಚಟ್ ಪಟ್ ಚಂಗ್ಯಾ
ಚಂಯ್ ಪಂಯ್ ಮಂಗ್ಯಾ
ಬೂಟು ಟೊಪ್ಪಿಗೆ ಹಾಕ್ಕೊ
ಮಡ್ಡಮ್ಮನ ಕೈ ಹಿಡ್ಕೋ.....
(ಪ್ಲಾಸ್ಟಿಕ್ ರಾಕ್ಷಸ ಬರುವನು. ಮಕ್ಕಳು ಹೆದರಿ ಓಡುವರು.ಅವರು ಓಡಿದನ್ನು ನೋಡಿ ರಾಕ್ಷಸ ನಗುವನು. ನಗುತ್ತಾ ಹೋಗುವನು.)
ಹೊಸ ದೃಶ್ಯ
(ಹಕ್ಕಿಮರಿಯೊಂದು ಕುಂಟುತ್ತಾ ಹಾಡುತ್ತಾ ಬರುವುದು.)
ಹಾಡು: ಹಕ್ಕಿ ಬಂತೊಂದ್ ಹಕ್ಕಿ
ಮಯ್ಮೇಲೆಲ್ಲಾ ಚುಕ್ಕಿ
ಕುಂಟುತಾ ಬಂದ ಹಕ್ಕಿ
ಹಾರದು ರೆಕ್ಕೆಯ ಬಿಚ್ಚಿ
(ಒಡನೆಯೇ ಬೇಟೆಗಾರ ಬಂದೂಕು ಹಿಡಿದುಕೊಂಡು ನಿಧಾನ ಬರುವನು. ಅವನು ಹಕ್ಕಿಯ ಬೇಟೆಯಾಡಲು ಮುಂದಾದಾಗ ಪ್ಲಾಸ್ಟಿಕ್ ರಾಕ್ಷಸ ಕೈ ಹಿಡಿದುಕೊಳ್ಳುವನು.)
ಬೇಟೆಗಾರ: ಬಿಡು ಬಿಡು ಕೈ ನೋಯ್ತದೆ. ಬಿಟ್ರೆ ಹಕ್ಕಿ ಹಾರಿ ಹೋಯ್ತದೆ.
ಪ್ಲಾಸ್ಟಿಕ್ ರಾಕ್ಷಸ: ನೀನ್ಯಾಕೆ ಹಕ್ಕಿಯನ್ನು ಕೊಲ್ಲಬೇಕು?
ಬೇಟೆಗಾರ: ಕೈ ಬಿಡು ಹೇಳ್ತಿನಿ.
ಪ್ಲಾಸ್ಟಿಕ್ ರಾಕ್ಷಸ: (ಕೈ ಬಿಟ್ಟು) ಹೇಳು.
ಬೇಟೆಗಾರ: ಯಾಕೆಂದರೆ ಯಾಕೆಂದರೆ ಅದನ್ನು ನಾನು ತಿನ್ನಬೇಕು.
ಪ್ಲಾಸ್ಟಿಕ್ ರಾಕ್ಷಸ: ನಾನು ಬಿಡುವುದಿಲ್ಲ
ಬೇಟೆಗಾರ: (ಬಂದೂಕು ತೋರಿಸಿ) ಇದೇನು ಗೊತ್ತಾ?
ಪ್ಲಾಸ್ಟಿಕ್ ರಾಕ್ಷಸ: ಅಯ್ಯೋ ಪೆದ್ದ, ನಾನ್ಯಾರು ಗೊತ್ತಾ ಸುಟ್ಟರೂ ಸಾಯದವ.
ಕೊಲ್ಲುವೆಯಾ? ನೀನು ನನ್ನ ಕೊಂದರೆ ಅದು ನಿನ್ನದೇ ಸಾವು.
(ಪ್ಲಾಸ್ಟಿಕ್ ರಾಕ್ಷಸ ಬೇಟೆಗಾರನನ್ನು ಹಿಡಿದು ಅವನ ಮೇಲೆ ವಿಷಗಾಳಿ ಪ್ರಯೋಗಿಸುತ್ತಾನೆ. ಬೇಟೆಗಾರ ಉಸಿರಾಡಲು ಆಗದೆ ಕೂಗುತ್ತಾ ಓಡಿ ಹೋಗುವನು. ಹಕ್ಕಿಯೂ ಉಸಿರಾಡಲು ಆಗದೆ ಒದ್ದಾಡುವುದನ್ನು ಕಂಡು)
ಪ್ಲಾಸ್ಟಿಕ್ ರಾಕ್ಷಸ: ಅಯ್ಯೋ ಹಕ್ಕಿಮರಿ, ಕೋಪದ ಭರದಲ್ಲಿ ನಾನು ವಿಷಕಾರಿ
ಎಂಬುದನ್ನೇ ಮರೆತುಬಿಟ್ಟೆ. ಕ್ಷಮಿಸಿಬಿಡು.
ಹಕ್ಕಿಮರಿ: ಕ್ಷಮಿಸಬೇಕಾದ್ದು ನಾನಲ್ಲ ಭೂತ; ಇಡೀಯ ಜೀವಸಂಕುಲ.
ನೋಡು ನಿನ್ನ ವಿರುದ್ಧ ಅದೆಷ್ಟು ಕೂಗು ಕೇಳಿಸುತ್ತಿದೆ.
(ಹಿನ್ನೆಲೆಯಲ್ಲಿ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಘೋಷಣೆ ಕೇಳುವುದು)
ಪ್ಲಾಸ್ಟಿಕ್ ರಾಕ್ಷಸ: ಹೌದು ಹಕ್ಕಿಮರಿ, ಇತ್ತೀಚಿನ ದಿನಗಳಲ್ಲಿ ನಾನಿಂತಹ
ಕೂಗುಗಳನ್ನು ಕೇಳುತ್ತಲೇ ಇದ್ದೇನೆ. ನನಗೆ ಈ ಮದುಕು
ಸಾಕಾಗಿ ಹೋಗಿದೆ. ಸಾಯಬೇಕೆಂದರೂ ಸಾಧ್ಯವಾಗುತ್ತಿಲ್ಲ.
ಹಕ್ಕಿಮರಿ: ಸಾಯುವ ಮಾತಲ್ಲ ಮಿತ್ರ. ನೀನು ಈ ಪರಿಸರದ ಸ್ನೇಹಿತನಾಗಬೇಕು.
ಪ್ಲಾಸ್ಟಿಕ್ ರಾಕ್ಷಸ: ಆದರೆ ಹೇಗೆ? ಚಿಕ್ಕ ಮಗುವೂ ಹೇಳುತ್ತದೆ ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕಗಳಿಂದ ತಯಾರಾಗುತ್ತದೆ ಎಂದು. ಆದರೆ ಅದೇ ಮಗು ಪ್ಲಾಸ್ಟಿಕ್‍ನಲ್ಲಿ ಸುತ್ತಿಟ್ಟ ತಿಂಡಿಯನ್ನೇ ಇಷ್ಟಪಡುತ್ತದೆ ಹಕ್ಕಿಮರಿ.
ಹಕ್ಕಿಮರಿ: ಹೌದು ಈ ಮಾನವರಿಗೆ ದುರಾಸೆಯೇ ಹೆಚ್ಚು. ಇನ್ನೊಬ್ಬರ
ಬಗ್ಗೆ ಯೋಚಿಸುವುದೇ ಇಲ್ಲ.
ಪ್ಲಾಸ್ಟಿಕ್ ರಾಕ್ಷಸ: ಇನ್ನೊಬ್ಬರ ಬಗ್ಗೆ ಯಾಕೆ ನನ್ನ ಬಗ್ಗಯೇ ಯೋಚಿಸುವುದಿಲ್ಲ.
ನಾನು ವಿಷಕಾರಿ ಎಂದು ಗೊತ್ತಿದ್ದರೂ ಹೆಚ್ಚು ಹೆಚ್ಚು ಉತ್ಪಾದಿಸುತ್ತಾರೆ;
ಎಲ್ಲೆಂದರಲ್ಲಿ ಎಸೆಯುತ್ತಾರೆ; ಮತ್ತೆ ಸುಟ್ಟು ಹಾಕುತ್ತಾರೆ.
ಹಕ್ಕಿಮರಿ: ಮನುಷ್ಯ ಏನೇ ಅನಾಹುತಗಳನ್ನು ಸೃಷ್ಠಿಸಿದರೂ ಬಲಿಯಾಗುವವರು ಮಾತ್ರ ನಾವುಗಳು.
ಪ್ಲಾಸ್ಟಿಕ್ ರಾಕ್ಷಸ: ನಾನೂ ಬಲಿಯಾಗಬೇಕು. ಇಲ್ಲವೆ ನಿಮ್ಮೆಲ್ಲರ ಪ್ರೀತಿಗೆ
ಪಾತ್ರನಾಗಬೇಕು. ಈ ಪರಿಸರದ ಮಿತ್ರನಾಗಬೇಕು. ಮಾನವರೇ ನನ್ನನ್ನು ಬದಲಾಯಿಸಿ ಇಲ್ಲವೇ ನಿಮ್ಮ ಅಂತ್ಯಕ್ಕೆ ಸಿದ್ಧರಾಗಿ.
(ಹಕ್ಕಿಮರಿ ಮತ್ತು ರಾಕ್ಷಸ ನಿರ್ಗಮಿಸುವರು)
ಹೊಸ ದೃಶ್ಯ
(ಇಬ್ಬರು ವಿಜ್ಞಾನಿಗಳು ಬಹಳ ಗಂಭೀರವಾಗಿ ಯೋಚನೆ ಮಾಡುತ್ತಾ ಬರುವರು.)
ವಿಜ್ಞಾನಿ (1): ಈ ಪ್ಲಾಸ್ಟಿಕ್ ಸುಟ್ಟರೂ ಅಪಾಯ
ವಿಜ್ಞಾನಿ (2): ಬಿಟ್ಟರೂ ಅಪಾಯ
(ಮತ್ತೆ ಯೋಚಿಸುತ್ತಾ ನಡೆಯುವರು, ಮತ್ತೆ ನಿಂತು)
ವಿಜ್ಞಾನಿ (1): ನೋಡಿ ಈ ಪ್ಲಾಸ್ಟಿಕ್ ಕೊಳೆಯದ ವಸ್ತು ಮತ್ತು ಮಣ್ಣಿನೊಂದಿಗೂ ಸೇರುವುದಿಲ್ಲ. ಅದು ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಮುಖ್ಯವೋ... ಹಾಗೆಯೇ ಅದು ಈ ಪರಿಸರಕ್ಕೆ ಅಷ್ಟೇ ಅಪಾಯಕಾರಿ.
ವಿಜ್ಞಾನಿ (2): ಪರಿಸರಕ್ಕೆ ಅಷ್ಟೇ ಅಲ್ಲ, ಸುಟ್ಟರೆ ಅದರಲ್ಲಿ ತಿನ್ನುವ
ಪದಾರ್ಥಗಳನ್ನು ಸುತ್ತಿಟ್ಟರೆ ಅದೂ ಅಪಾಯಕಾರಿ.
(ಮಕ್ಕಳಿಬ್ಬರೂ ಕುರ್ಕುರೆ ತಿನ್ನುತ್ತಾ ಸಿನಿಮಾ ಹಾಡು ಹಾಡುತ್ತಾ ಬಂದು ಕವರುಗಳನ್ನು ಎಸೆದು ಹೋಗುವರು. ವಿಜ್ಞಾನಿಗಳು ಮಕ್ಕಳನ್ನು ಹಿಂಬಾಲಿಸುವರು.)
ಹೊಸ ದೃಶ್ಯ
(ಆತ್ಮಗಳು ಕಯ್ಯಲ್ಲಿ ಗೊಂಬೆಗಳನ್ನು ಹಿಡಿದು ನಿದ್ದೆಯಲ್ಲಿ ನಡೆಯುವಂತೆ ಬರುವರು
ಜೋಗುಳದ ಹಾಡು ಹಿನ್ನೆಲೆಯಲ್ಲಿ ಕೇಳಿಸುವುದು.)
ಆತ್ಮ (1) ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ
ಆ ಮನುಷ್ಯನ ಹಸಿವು ತೀರಲೇ ಇಲ್ಲ
ಪ್ರಾಣಿ ಪಕ್ಷಿ ಗಿಡ ಮರ ಗುಡ್ಡ ಬೆಟ್ಟ
ಎಲ್ಲವನ್ನೂ ತಿಂದ; ನದಿ ಕೆರೆ ಕೊಳ
ಸಮುದ್ರಗಳ ನೀರನ್ನೆಲ್ಲ ಕುಡಿದು
ಖಾಲಿ ಮಾಡಿದ; ನೆಲ ಬಗೆದ
ಮಣ್ಣು ಕಲ್ಲು ಕಲ್ಲಿದ್ದಲು ಕಬ್ಬಿಣ
ಎಲ್ಲವನ್ನೂ ಅಗಿದಗಿದು ಉಗಿದ
ಒಂದೂರಿನಲ್ಲಿ...
(ಮತ್ತೆ ಜೋಗುಳದ ಹಾಡು)
ಆತ್ಮ(2) ಆ ಮನುಷ್ಯ ಆಕಾಶಕ್ಕೆ ಕೈಚಾಚಿದ
ಪಾತಾಳಕ್ಕೆ ಕೈಚಾಚಿದ, ಭೂಮಂಡಲವನ್ನೆ
ದೋಚಿದ, ನಭೋಮಂಡಲವನ್ನು ನಡುಗಿಸಿದ
ಗುಡಾಣದ ಹೊಟ್ಟೆಯನ್ನು ಗುಡುಗಿಸಿದ
ಒಂದೂರಿನಲ್ಲಿ...
(ಮತ್ತೆ ಜೋಗುಳದ ಹಾಡು)
ಆತ್ಮ (1-2) ಕೊನೆಗವನು ಕರಕರ ಜಗಿದು ಉಗಿದದ್ದರಲ್ಲಿ
ಕಂಡದ್ದು ಎಳೆ ಕಂದಮ್ಮನ ಕಿವಿಯ ತುಂಡು
ಇನ್ನೂ ಆಕಾರ ಪಡೆಯದ ಭ್ರೂಣಗಳ
ಗೋಜಲು ಗೋಜಲು ಮುದ್ದೆ ಮುದ್ದೆ ಮಾಂಸ
(ಮತ್ತೆ ಜೋಗುಳದ ಹಾಡು. ಆತ್ಮಗಳು ಹೊರಟು ಹೋಗುವರು.)

ಹೊಸ ದೃಶ್ಯ
(ಹೆಂಗಸೊಬ್ಬಳು ಕಸವನ್ನು ತಂದು ಎಸೆಯುವಳು)
ಗಂಡಸು: ಅಮ್ಮೋ ಯಾಕಮ್ಮ ತಿಪ್ಗ ಸುರಿಯೋದ್ಬುಟ್ಟು ನನ್ನ ಹಟ್ಟಿ
ಮುಂದ ಕಸ ಹಾಕ್ತೀಯಾ? ನಿಂಗ ಬುದ್ಧಿ ಗಿದ್ದಿ ಇದ್ಯೋ ಇಲ್ಲೋ...
ಹೆಂಗಸು: ಯಾವನಪ್ಪ ಗಂಡ್ಸು ಅದು? ನಿನ್ನ ಹಟ್ಟಿ ಮುಂದ್ಕೆಲ್ಲಿ
ಹಾಕಿದೀನಿ. ನಾನು ರೋಡ್ಗ ಸುರ್ದೀರಾದು.
ಗಂಡಸು: ರೋಡ್ಗ ಸುರ್ದಿದ್ರೂವಿ ಗಾಳಿಗ ತೂರ್ಕಂಡು ಬರಾಕಿಲ್ವ?
ಹೆಂಗಸು: ಬಂದ್ರ ಬರ್ಲಿಬುಡು. ಗಾಳಿ ಎನ್ ನಾ ಬಿಟ್ಟಿದಾನಾ?
ತೂರ್ಕಬಂದ್ರ ಎತ್ತಿ ಆ ಕಡಗ ಎಸ್ದುಬುಡು.
ಗಂಡಸು: ಮಾದಪ್ಪನ ಹಟ್ಟಿಗ ನಾ ಎಸಿಯೋದೆ?
ಹೆಂಗಸು: ಎಸ್ದುಬುಡು. ನಿಮ್ಮಪ್ಪನ ಮನಿಂದಾ ಇಲ್ಲ ನಮ್ಮಪ್ಪನ ಮನಿಂದಾ?
(ಬಿದ್ದಿರುವ ಕಸವನ್ನು ಆಯುತ್ತಾ ವಿಜ್ಞಾನಿ (2) ಬರುವನು. ಹೆಂಗಸು ಕಸವನ್ನು ಕಸಿದು)
ಹೆಂಗಸು: ಯಾವೂರ ದಾಸಯ್ಯ ನೀನು? ಈ ಕಸಕ್ಕ ಇಷ್ಟೋತ್ಗಂಟ ಈವಯ್ಯನ ಜೊತ್ಗ ಜಗಳಾಡಿದ್ದು ಸಾಕು. ಬಿಡಯ್ಯ ಬಿಡು ಬಿಂಕಿ ಕೊಡ್ತೀನಿ ಅದಕ್ಕ.
ಗಂಡಸು: ನಾನೇ ಬಿಂಕಿ ಕೊಡ್ತೀನಿ ತಕ್ಕ, ನಿನ್ನೂವಿ ಸೇರ್ಸಿ.
ವಿಜ್ಞಾನಿ (2): (ವಿಜ್ಞಾನಿ ತಡೆದು)ಅಯ್ಯೋ ನಿಲ್ಲಿಸ್ರಪ್ಪ
ನೋಡಯ್ಯ ಇದು ಪ್ಲಾಸ್ಟಿಕ್ ಕಸ. ಇದನ್ನ ಸುಡಬಾರದು.
(ಹಿನ್ನೆಲೆಯಲ್ಲಿ ರಾಕ್ಷಸ “ಸುಟ್ಟರೂ ನಾ ಸಾಯುವುದಿಲ್ಲ” ಎಂದು ಕೂಗುವನು.)
ಹೆಂಗಸು: ಅಯ್ಯ ಯಾನ ಮಾತೂ ಅಂತ ಆಡ್ತೀಯಪ್ಪ. ನಮ್ಮೂರಲ್ಲಿ
ಎಲ್ರೂವಿ ಸುಟ್ಟೇ ಹಾಕದು.
ಗಂಡಸು: ಸುಡ್ದಿದ್ರ ಗಾಳಿಗ ತೂರ್ಕಂಡೋಯ್ತದಲ್ಲ?
ವಿಜ್ಞಾನಿ (2): ನೋಡಿ ಪ್ಲಾಸ್ಟಿಕನ್ನ ಸುಡಲೂಬಾರದು. ಹಾಗೆಲ್ಲ ಗಾಳಿಗೆ
ಎಸೆಯಲೂಬಾರದು. ಒಮ್ಮೆ ತಂದ ಕವರನ್ನು ಮತ್ತೆ ಮತ್ತೆ ಬಳಸಿ.
ಹೆಂಗಸು: ಅಲ್ಲ ಸ್ವಾಮಿ, ಊಟ ತಿಂಡಿ ಕಟ್ಟಸ್ಕೊಂಡು ಬಂದ ಕವರನ್ನ
ಮತ್ತೆ ಬಳಸಕ್ಕಾದ್ದಾ?
ವಿಜ್ಞಾನಿ (2): ಆಗುತ್ತೆ. ಆದ್ರೆ ನೀವೇನ್ಮಾಡ್ತೀರಿ? ಊಟ ತಿಂಡಿ ಉಳ್ಸಿದ ಕವರನ್ನೇ ಎಸೆದುಬಿಡ್ತೀರಿ. ಪಾಪದ ಮೂಕ ಪ್ರಾಣಿಗಳು ಆಸೆಯಿಂದ ಪ್ಲಾಸ್ಟಿಕ್ ಸಮೇತ ತಿಂದುಬಿಡ್ತವೆ. ಆಮೇಲೆ ಹೊಟ್ಟೆ ನೋವಿಂದ ನರಳಿ ನರಳಿ ಸಾಯ್ತವೆ.
ಗಂಡಸು: ಹಂಗಾರೆ ಈ ಕವರನ್ನ ಏನ್ಮಾಡ್ಬೇಕು?
ವಿಜ್ಞಾನಿ (2): ನೀವು ಪೇಟೆಗೆ ಹೋಗುವಾಗ ಮನೆಯಿಂದಲೇ ಚೀಲ ತೆಗೆದುಕೊಂಡು ಹೋಗಿ. ನಿಮ್ಮ ಮನೆಗೆ ಬರುವ ಪ್ಲಾಸ್ಟಿಕ್ ಕಡಿಮೆ ಆಗುವಂತೆ ನೋಡಿಕೊಳ್ಳಿ.
ಹೆಂಗಸು: ಆದ್ರೂವಿ ಪ್ಲಾಸ್ಟಿಕ್ ಬತ್ತದಲ್ಲ?
ವಿಜ್ಞಾನಿ (2): ಬಂದದ್ದನ್ನ ಎಸೆಯಬೇಡಿ. ಸುಡಬೇಡಿ. ಒಂದು
ಮೂಲೆಯಲ್ಲಿ ಸಣ್ಣ ಗುಂಡಿ ತೆಗೆದು ಅದರಲ್ಲಿ ಹಾಕಿ.
(ಅಷ್ಟರಲ್ಲಿ ಇನ್ನೊಬ್ಬ ವಿಜ್ಞಾನಿ ಮಕ್ಕಳೊಂದಿಗೆ ಬರುವನು)
ವಿಜ್ಞಾನಿ (1): ಮಕ್ಕಳೆ ತಿಂಡಿ ತಿಂದ ಮೇಲೆ ಕವರನ್ನು ಎಲ್ಲೆಂದರಲ್ಲಿ ಎಸೆಯಬಾರದು.
ಹುಡುಗ: ಎಸಿತೀವಿ.
ವಿಜ್ಞಾನಿ (1): ನೋಡಿ ಇದು ಪ್ಲಾಸ್ಟಿಕ್. ಇದನ್ನು ವಿಷಕಾರಿ
ರಾಸಾಯನಿಕಗಳಿಂದ ಮಾಡಿರುತ್ತಾರೆ. ಇದರಲ್ಲಿ ಸುತ್ತಿಟ್ಟ
ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ರೋಗಗಳು ಬರುತ್ತವೆ.
ಹುಡುಗ: ಹೌದಾ?
ವಿಜ್ಞಾನಿ (2): ಹೌದು. ಬೇಕಿದ್ದರೆ ನಿಮ್ಮ ಮೇಸ್ಟ್ರನ್ನು ಕೇಳಿ.
ಹುಡುಗ: ಹುಂ. ಕೇಳ್ತೀನಿ.
ಹೆಂಗಸು: ಹಂಗಾರೆ ಈ ಪ್ಲಾಸ್ಟಿಕನ್ನು ಏನ್ ಮಾಡೋದು?
ವಿಜ್ಞಾನಿ (3): (ಬಂದು) ಅದನ್ನು ಕರಗಿಸಿ ಡಾಂಬರಿನೊಂದಿಗೆ ಬಳಸಿ ರಸ್ತೆ ಮಾಡಬಹುದು.
ಗಂಡಸು: ಪ್ಲಾಸ್ಟಿಕ್ಕು ಇಲ್ದೆ ಹೋದ್ರ ನಮ್ಗ ಕಷ್ಟ ಆಯ್ತದಲ್ಲ ಸ್ವಾಮಿ?
ವಿಜ್ಞಾನಿ (3): ಹೌದು, ಪ್ಲಾಸ್ಟಿಕ್ ನಮಗೆ ಬೇಕೇ ಬೇಕು.
ವಿಜ್ಞಾನಿ (2): ನಿಮಗೆ ಗೊತ್ತಾ, ಮರಗಿಡಗಳಿಂದಲೂ ಪ್ಲಾಸ್ಟಿಕ್ ತಯಾರಿಸಬಹುದು. ಅದನ್ನು ಜೈವಿಕ ಪ್ಲಾಸ್ಟಿಕ್ ಎನ್ನುತ್ತಾರೆ. ಜೈವಿಕ ಪ್ಲಾಸ್ಟಿಕ್ ಕೊಳೆತು ಗೊಬ್ಬರವಾಗುತ್ತದೆ.
(ಪ್ಲಾಸ್ಟಿಕ್ ರಾಕ್ಷಸ ಅಬ್ಬರಿಸುತ್ತಾ ಪ್ರವೇಶಿಸುವನು. ಹೆಂಗಸು ಗಂಡಸು ಹುಡುಗ ಹೆದರಿ ಓಡಿ ಹೋಗುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ವಿಜ್ಞಾನಿಗಳೇ ನೀವು ಏನೇ ಮಾಡಿದರೂ ನಾನು ಮತ್ತೆ ಬದುಕುತ್ತೇನೆ. ನಾನು ಬಡವರ ಮಿತ್ರ; ಅವರು ನನ್ನನ್ನು ಸಾಕಿ ಸಲಹುತ್ತಾರೆ. ನಾನು ಸಾಯಲಾರೆ.
ವಿಜ್ಞಾನಿ (1): ಲೋ ಪ್ಲಾಸ್ಟಿಕ್ ಭೂತವೇ ನೀನು ನಮ್ಮ ಮಗ್ಗುಲ ಮುಳ್ಳೆಂಬುದು ನೀನು ಹುಟ್ಟಿದಾಗಲೇ ತಿಳಿದಿತ್ತು.
ಪ್ಲಾಸ್ಟಿಕ್ ರಾಕ್ಷಸ: (ನಕ್ಕು) ನನ್ನ ಬಗ್ಗೆ ಭಯ ಇರಲಿ.
ವಿಜ್ಞಾನಿ (1): ಭಯವಿಲ್ಲ ನಮಗೆ. ನಮ್ಮ ಜನರು ತಿಳಿದುಕೊಂಡರೆ ನಿನ್ನ ಅವಸಾನ ಖಂಡಿತ.
ಪ್ಲಾಸ್ಟಿಕ್ ರಾಕ್ಷಸ: ವಿಜ್ಞಾನಿಗಳೇ ನಿಮ್ಮ ಜನರು ಅಜ್ಞಾನಿಗಳು. ಕೆಟ್ಟದ್ದನ್ನು ಉಳಿಸಿಕೊಂಡು ಬರುವುದೇ ಅವರ ಒಳ್ಳೆಯ ಗುಣ.
ವಿಜ್ಞಾನಿ (2): ನಿನ್ನ ಅವಸಾನಕ್ಕೆ ಒಂದೇ ದಾರಿ. ಜನರಿಗೆ ಅರಿವು ಮೂಡಿಸುವುದು.
ವಿಜ್ಞಾನಿ (3): ಪ್ಲಾಸ್ಟಿಕ್ ರಾಕ್ಷಸ
ಪಳಗಿಸಿದರೆ ಸ್ನೇಹಿತ
ಬಳಕೆ ಕಡಿಮೆ ಮಾಡಿದರೆ
ನಮ್ಮ ಪರಿಸರ ಸುರಕ್ಷಿತ.
(ಈ ಮಾತುಗಳನ್ನು ಉಳಿದ ವಿಜ್ಞಾನಿಗಳು ಪುನರುಚ್ಚರಿಸುತ್ತಾರೆ. ರಾಕ್ಷಸ ಕಿರುಚಿ ಅವರ ಮೇಲೆರುಗುತ್ತಾನೆ. ವಿಜ್ಞಾನಿಗಳು ಸುತ್ತುವರಿದು ಹಿಡಿಯುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ಇಲ್ಲ ನಾನು ಸಾಯುವುದಿಲ್ಲ
ಸುಟ್ಟರೂ ನಾ ಸಾಯುವುದಿಲ್ಲ
ಬಚ್ಚಿಟ್ಟರೂ ನಾ ಸಾಯುವುದಿಲ್ಲ
ವಿಜ್ಞಾನಿಗಳು: ಸಾಯಿಸಲಾರೆವು ನಿನ್ನ
ಆದರೆ, ಓ ಪ್ಲಾಸ್ಟಿಕ್ ರಾಕ್ಷಸನೇ
ನೀನು ಮಣ್ಣಲ್ಲಿ ಮಣ್ಣಾಗು
(ನಾಲ್ಕು ಜನ ಕಸವ ಹೊತ್ತುಕೊಂಡು ಬರುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ಆಗುತ್ತೇನೆ ಆಗುತ್ತೇನೆ ಆಗುತ್ತೇನೆ (ಕುಸಿಯುತ್ತಾನೆ.)
ವಿಜ್ಞಾನಿ (3): ಸ್ನೇಹಿತರೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.
ಎಲ್ಲರೂ: ಕಡಿಮೆ ಮಾಡಿ
ವಿಜ್ಞಾನಿ (2): ಒಂದೇ ಕವರನ್ನು ಮತ್ತೆ ಮತ್ತೆ ಬಳಸಿ
ಎಲ್ಲರೂ: ಮತ್ತೆ ಮತ್ತೆ ಬಳಸಿ.
ವಿಜ್ಞಾನಿ (1): ದಯವಿಟ್ಟು ಪ್ಲಾಸ್ಟಿಕ ಸುಡಬೇಡಿ.
ಎಲ್ಲರೂ: ಪ್ಲಾಸ್ಟಿಕ್ ಸುಡಬೇಡಿ.
ಗಂಡಸು: ಹೊಲ ಗದ್ದೆಗಳಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ
ಎಲ್ಲರೂ: ಎಸೆಯಬೇಡಿ.
ಹೆಂಗಸು: ನಾವು ಪ್ಲಾಸ್ಟಿಕ್ ಬಗ್ಗೆ ತಿಳಿಯುತ್ತಿದ್ದೇವೆ.
ಎಲ್ಲರೂ: ನಾವು ಪ್ಲಾಸ್ಟಿಕ್ ಬಗ್ಗೆ ತಿಳಿಯುತ್ತಿದ್ದೇವೆ, ನೀವು?
ಪ್ಲಾಸ್ಟಿಕ್ ರಾಕ್ಷಸ: (ಎದ್ದು) ನಿಮ್ಮನ್ನೇ ಒಂದು ಸಲ ನೋಡಿಕೊಳ್ಳಿ ಎಷ್ಟೊಂದು ಪ್ಲಾಸ್ಟಿಕ್?
ಎಲ್ಲರೂ: ಎಷ್ಟೊಂದು ಪ್ಲಾಸ್ಟಿಕ್? ಅಲ್ಲಿ ನೋಡಿ, ಇಲ್ಲಿ ನೋಡಿ
ಹಾಡು. ಅಲ್ಲಿ ನೋಡಿ ಇಲ್ಲಿ ನೋಡಿ | ಎಲ್ಲೆಲ್ಲೂ ನೋಡಿರಣ್ಣ
ಅಲ್ಲಿ ನೋಡಿ ಇಲ್ಲಿ ನೋಡಿ | ಎಲ್ಲೆಲ್ಲೂ ನೋಡಿರಕ್ಕ
ಪ್ಲಾ..... ಸ್ಟಿಕ್  ಪ್ಲಾ..... ಸ್ಟಿಕ್||

ಸುಟ್ಟರದು ಸಾಯಂಗಿಲ್ಲ | ಬಿಟ್ಟರದು ಬಿಡಂಗಿಲ್ಲ
ಬೆಟ್ಟ ಗುಡ್ಡ ನದಿ ತೊರೆ | ಎಲ್ಲ ಕಡೆ ಪ್ಲಾಸ್ಟಿಕ್
ತಿಂಡಿ ತೀರ್ಥ ಮನೆ ಮಠ | ಎಲ್ಲ ಕಡೆ ಪ್ಲಾಸ್ಟಿಕ್
ಪ್ಲಾ..... ಸ್ಟಿಕ್ ಪ್ಲಾ..... ಸ್ಟಿಕ್||

ಹೇಳಿದ್ರದು ಮುಗಿಯೋದಿಲ್ಲ | ನಾವು ಸತ್ಯ ತಿಳಿಬೇಕಲ್ಲ |
ಭೂಮಿ ಗಾಳಿ ಉಳಿಬೇಕಲ್ಲ | ನಾವು ನೀವು ಬದುಕ್ಬೇಕಲ್ಲ
ಒiಟಿಜ iಣ ಒiಟಿಜ  iಣ ||

(ಮುಗಿಯಿತು)

ವಿಷಯ: ಚುನಾವಣೆಯಲ್ಲಿ ಹಣದ ಪ್ರಭಾವ.
ನಾಟಕ 

ಝಣ ಝಣ ಚುನಾವಣೆ

ರಚನೆ: ಸಂತೋಷ ಗುಡ್ಡಿಯಂಗಡಿ

ದೃಶ್ಯ-1.
(ಆರು ಜನ ಪತ್ರಿಕೆ ಓದುತ್ತಿರುವಾಗ ಹಿನ್ನೆಲೆಯಲ್ಲಿ ಕುರ್ಚಿ ಮಾರುವ ಹೆಂಗಸಿನ ಸದ್ದು ಕೇಳಿಸುವುದು.)
ಧ್ವನಿ: ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಎಲ್ಲರು: ಹಾಂ ಕುರ್ಚಿ?
ನಿರೂಪಕಿ: ಮಂತ್ರಿ ಆಗೋಕೆ ಬೇಕು ಕುರ್ಚಿ, ಎಮ್ಮೆಲ್ಲೆ ಆಗೋಕೆ ಬೇಕು ಕುರ್ಚಿ, ಅಧ್ಯಕ್ಷ
ಆಗೋಕೆ ಬೇಕು ಕುರ್ಚಿ, ಪಂಚಾಯ್ತಿ ಮೆಂಬರಾಗೋಕೆ ಬೇಕು ಕುರ್ಚಿ,ಲಂಚ
ತಗೊಳ್ಳೋಕೆ ಬೇಕು ಕುರ್ಚಿ, ಅಷ್ಟೇ ಅಲ್ಲ ಕಣ್ರೀ ಮೊಳೆ ಹೊಡಿಯೋಕೆಬೇಕೂ
ಕುರ್ಚಿ. ಇದು ಅಂತಿಂಥ ಕುರ್ಚಿ ಅಲ್ಲ ಕೂತ್ರೆ ಸಿಗುತ್ತೆ ತಿಜೋರಿ, ಬಿಟ್ರೆ ಬೀದಿ
ಭಿಕಾರಿ.
(ಎಲ್ಲರು “ಕುರ್ಚಿ ನನಗೆ ಬೇಕು ನನಗೆ ಬೇಕು” ಎನ್ನುವರು)
ನಿರೂಪಕಿ: ನೋಡುದ್ರಾ ಕುರ್ಚಿ ಇಲ್ದೆ ನಮ್ಮ ಜನ ಬದುಕಲ್ಲ. ಅದ್ರಲ್ಲೂ ರಾಜಕಾರಣಿಗಳನ್ನು ಕೇಳ್ಬೇಕೇ? ಎಷ್ಟ್ ಕೋಡ್ತೀರಿ ಕುರ್ಚಿಗೆ?
(ಗುಂಪಿಂದ 1ಕೋಟಿ 2ಕೋಟಿ 4ಕೋಟಿ 6ಕೋಟಿ 8ಕೋಟಿ 10ಕೋಟಿ ಎಂದು ಕೇಳಿ ಬರುವುದು.)
ನಿರೂಪಕಿ:   ನೋಡುದ್ರಾ ಕುರ್ಚಿಗೆ ಡಿಮ್ಯಾಂಡು? ಕುರ್ಚಿ ಮಾರಾಟಕ್ಕಿದೆ ಕುರ್ಚಿ
(ಎಲ್ಲರು ಬಂದು ನನಗೆ ನನಗೆ ಎಂದು ಕುರ್ಚಿಯನ್ನು ಎಳೆದಾಡುವರು. ಮುದುಕಿ ಒಬ್ಬಳು ಭಿಕ್ಷೆ ಬೇಡುತ್ತಾ ಬರುವಳು.)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ...... ಏನಾದ್ರೂ ತಿನ್ನಾಕ ಕೊಡ್ರವ್ವಾ......ಅಣ್ಣಾ ಏನಾದ್ರೂ ತಿನ್ನಾಕ ಕೊಡ್ರವ್ವಾ......
ಎಲ್ಲರು: ನಮಗೆ ಕುರ್ಚಿ ಬೇಕು ಕುರ್ಚಿ
(ಮುದುಕಿ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುವಳು.)
ನಿರೂಪಕಿ: ನೋಡಿದ್ರ ನಮ್ಮ ದೇಶ
ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡೋರು ಒಂದ್ಕಡೆ. ಕುರ್ಚಿಗಾಗಿ ಕಿತ್ತಾಡೋರು ಇನ್ನೊಂದ್ಕಡೆ. ಯಾರಿಗ್ ಬಂತ್ರೀ ಎಲ್ಲಿಗ್ ಬಂತ್ರೀ?
ಎಲ್ಲರು: ಏನು?
ನಿರೂಪಕಿ: ನಲವತ್ತೇಳರ ಸ್ವಾತಂತ್ರ್ಯ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ನಮ್ಮದು ಚಿಲ್ರೆ ಪಕ್ಷ. ಝಣ ಝಣ ಕಾಂಚಾಣದ ಪಕ್ಷ. ನಮಗೂ ಬಂದಿದೆ ಸ್ವಾತಂತ್ರ್ಯ
ನೋಟಿನ ಪಕ್ಷ: ನಾವು ನೋಟಿನ ಪಕ್ಷದವರು. ನಮಗೂ ಬಂದಿದೆ ನೋಡಿ ಸ್ವಾತಂತ್ರ್ಯ
ನಮ್ಮ  ಹತ್ರ ಚಿಲ್ರೆ ಮಾತೇ ಇಲ್ಲ. ನೋಟು ಗರಿ ಗರಿ ನೋಟು. ನೋಟಿನ ಪಕ್ಷ ಕಣ್ರೀ ನಮ್ದು ನೋಟಿನ ಪಕ್ಷ ಕಣ್ರೀ
ಚಿಲ್ರೆ ಪಕ್ಷ: ನಾವು ಚಿಲ್ರೆ ಪಕ್ಷದವರಾದ್ರೂ, ಚಿಲ್ರೆ ವ್ಯವಹಾರನೇ ಇಲ್ಲರೀ. ದೊಡ್ಡ ದೊಡ್ಡದ್ದನ್ನೆಲ್ಲ ಚಕಾಚಕ್ ಮಾಡಿ ಮುಗಿಸ್ತೀವಿ. ಈಗ ನೋಡಿ ದೇಶದ ತುಂಬಾ ಚಿಲ್ರೇದೇ ಮಾತು. ಚಿಲ್ರೆಚಿಲ್ರೆ ಸೇರಿನೇ ನೋಟಾಗೋದು ನೆನಪಿರಲಿ.
ನೋಟಿನ ಪಕ್ಷ: ಚಿಲ್ರೇನ ಇಟ್ಕೋಳ್ಳೋದು ಕಷ್ಟ ಕಣ್ರೀ. ಭಿಕ್ಷೆ ಹಾಕೋಕಷ್ಟೇ ಚಿಲ್ರೆ. ಈಗ
ನೋಟಿದ್ರೇನೆ ಕೆಲಸ ನಡೆಯೋದು.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ಅಜ್ಜೀ ನೆನಪಿಟ್ಕೋ ನಿಂಗೆ ಮನೆ ಕಟ್ಟಿಸಿಕೊಡ್ತೀವಿ. ನಮಗೆ ಓಟಾಕ್ಬೇಕು. ನಮ್ದು ಚಿಲ್ರೆ ಪಕ್ಷ. ಒಂದ್ರೂಪಾಯಿ ಕಾಯಿನ್ ನಮ್ಮ ಚಿಹ್ನೆ ನೆನಪಿಟ್ಕೋ. (ಹೋಗುವರು)
ನೋಟಿನಪಕ್ಷ: ಅಜ್ಜೀ ನಿಂಗೆ ವೃದ್ಧಾಪ್ಯವೇತನ ವಿಧವಾವೇತನ ಬರೋ ಹಂಗೆ ಮಾಡ್ತೀವಿ ನಮಗೆ ಓಟಾಕು. ನಮ್ದು ನೋಟಿನ ಪಕ್ಷ. ಒಂದರ ಮುಂದೆ ಮೂರು ಸೊನ್ನೆ.
ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ನೆನಪಿರ್ಲಿ. (ಹೋಗುವರು)
ಮುದುಕಿ: ಅಯ್ಯೋ ಮುಂಡೆಮಕ್ಳ. ತಿನ್ನೋಕೆ ಅನ್ನ ಕೊಡ್ರೋ ಅಂತ ಬೇಡಿದ್ರೆ ಆ ವೇತನ ಈವೇತನ ಅಂತೀರಲ್ಲಾ! ಥೂ ನಿಮ್ಮ ಭಂಡಬಾಳಿಗ್ ಬೆಂಕಿ ಹಾಕ.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ದೃಶ್ಯ-2.
(ಚುನಾವಣಾ ಪ್ರಚಾರ)
ಚಿಲ್ರೆ ಪಕ್ಷ: ಮಾನ್ಯ ಮತದಾರ ಬಂಧುಗಳೇ ಇದು ಚಿಲ್ರೆ ಪಕ್ಷದ ಚುನಾವಣಾ ಪ್ರಚಾರ.  ಬಂಧುಗಳೇ ನೀವಿವತ್ತು ಮಾಲ್‍ಗಳಿಗೆ ಹೋಗ್ತೀರಿ, ನಿಮಗೆ ಬೇಕ್ಬೇಕಾದ್ದನ್ನ ತಗೋತೀರಿ ಅಂತಾದ್ರೆ ಅದಕ್ಕೆ ನಮ್ಮ ಪಕ್ಷ ಕಾರಣ. ಚಿಲ್ರೆ ಸಾಮಾನಿಗಾಗಿ ಅಲೆದಾಡೋದನ್ನ ತಪ್ಪಿಸಿದ್ದೀವಿ ಎಲ್ಲಾನೂ ಒಂದೇ ಕಡೆ ಸಿಗೋ ಹಾಗೆ ಮಾಡಿದ್ದು ನಮ್ಮ ಪಕ್ಷದ ಸಾಧನೆ. ಈ ಬಾರಿ ನೀವೇನಾದರೂ ನಮ್ಮ ಪಕ್ಷಕ್ಕೆ ಬಹುಮತ ತಂದ್ಕೊಟ್ಟರೆ ನಿಮ್ಮ ಬದುಕು ಬಂಗಾರ ಮಾಡ್ತೀವಿ. ಚಿಲ್ರೆ ಚಿಲ್ರೆಯಾಗಿದ್ದ ನಿಮ್ಮ ಬದುಕು ಝಣ ಝಣ ಕಾಂಚಾಣ ಮಾಡ್ತೀವಿ.
ಬಂಧುಗಳೇ ನೆನಪಿರ್ಲಿ ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ. (ಹೋಗುವರು)
ನೋಟಿನಪಕ್ಷ: ಇದು ನೋಟಿನ ಪಕ್ಷದ ಚುನಾವಣಾ ಪ್ರಚಾರ ಬಂಧುಗಳೇ
ತಾಯಂದಿರೇ ಅಕ್ಕಂದಿರೇ ನಾವು ನಿಮಗೆ ಸೀರೆ ಕೊಡಿಸ್ತೀವಿ. ಮೈತುಂಬಾ ಸೀರೆ ಉಟ್ಕಳ್ಳಿ ಅಕ್ಕಂದಿರೇ. ನಾವು ಅಧಿಕಾರಕ್ಕೆ ಬಂದರೆ ನಿಮಗೆ ಟೀವಿ ಕೊಡಿಸ್ತೀವಿ ಮನೆ ಮನೆಗೂ ಟೀವಿ ಬಂದ್ರೆ ಹೆಂಗಸರೆಲ್ಲ ಮನೇಲೆ ಉಳಿತಾರೆ. ಹೆಂಗಸರು ಒಳಗೇ ಉಳಿದ್ರೆ ಅತ್ಯಾಚಾರಗಳು ನಡಿಯಲ್ಲ ತಾಯಂದಿರೇ. ಅದಕ್ಕೆ ನಾವು ಟೀವಿ ಕೊಡ್ತೀವಿ. ನೀವು ನಮಗೆ ಓಟು ಕೊಡಿ.
ನಿಮ್ಮ ಮಾನ ರಕ್ಷಣೆ ನಮ್ಮ ಪಕ್ಷದ ಹೊಣೆ
ನೆನಪಿರಲಿ ಅಕ್ಕಂದಿರೇ ಒಂದರ ಮುಂದೆ ಮೂರು ಸೊನ್ನೆ
ಸಾವಿರ ರೂಪಾಯಿ ನೋಟು ನಮ್ಮ ಪಕ್ಷದ ಚಿಹ್ನೆ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು(ಹೋಗುವರು)

ದೃಶ್ಯ-3.
(ಮುದುಕಿ ಭಿಕ್ಷೆ ಬೇಡುತ್ತಾ ಮನೆ ಮನೆಗೆ ಬರುವಳು)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ... ಏನಾದ್ರೂ ತಿನ್ನಾಕ ಕೊಡ್ರವ್ವಾ......
ಮನೆಯಾಕೆ1.: ಅಯ್ಯ ನಮ್ಮಟ್ಟಿ ಮೂದೇವಿ ಅದ್ಯಾನೋ ಚಿಲ್ರೆ ನೋಟು ಅಂದ್ಕಂಡು ಓಟ್ನವರ ಹಿಂದ್ಕ ಅಲಿತವ್ನ. ಹಟ್ಯಾಗ ಗೆಯ್ಯಾಕ ಹೋಗೋರೆ ಯಾರೂವಿ ಇಲ್ಲಕವ್ವ. ಹೀಂಗ ಆದ್ರ ನಾನೂವಿ ನನ್ನ ಮಕ್ಕಮರಿ ಕಟ್ಕಂಡು ನಿನ್ನಂಗ ಬೇಡಾಕ ಹೋಗ್ಬೇಕು. ಈ ವೋಟು ಯಾವಾಗಾರ ಮುಗಿತೈತೋ ಏನೋ
ಮನೆಯಾಕೆ2: ಯಾಕ ಸಾಕವ್ವಾ, ವೋಟ್ನೋರ ಹಿಂದ್ಕ ವೋದ್ರ ಅದ್ಯಾನೋ ದುಡ್ಡು ಕಾಸು
ಕೊಡೋರಂತಲ್ಲ. ಜೊತ್ಗ ವೋಟ್ಲಾಗ ಉಣ್ಣಾಕೂ ಕೊಡ್ತಾರಂತಲ್ಲವ್ವಾ? ಶಿವಣ್ಣಗ ಬರ್ತ ಕಟ್ಟಸ್ಗಂಡು ಬರಾಕೇಳು.
ಮನೆಯಾಕೆ1.: ಕಟ್ಟಸ್ಗಂಡು ಬರಾದು ಇರ್ಲಿ ಆ ಮೂದೇವಿನೇ ಹಟ್ಟಿಗ ಬರಲ್ಲ ಅಂತೀನಿ. ಚನ್ನಾಗಿ ತಿಂದು ಕುಡ್ದು ಎಲ್ಲೋ ದಾರೀಲಿ ಬೀಳ್ತಾನ. ಅದ್ಕ ಈ ವೋಟು ಯಾವಾಗಾರ ಮುಗಿತೈತೋ ಅಂತ ಕಾಯ್ತವ್ನಿ. ಎಲ್ಲಾರೂ ಕೂಲಿ ಮಾಡಾವ ಅಂದ್ರ ಮಳ ಇಲ್ದ ಯಾರ ಹಟ್ಟೀಲೂ ಗದ್ದಾಲೂ ಕೆಲಸಾನೇ ಇಲ್ಲ ಕನವ್ವ.
ಮುದುಕಿ: ಅವ್ವ ಹೊಟ್ಟಗ ಬೆಂಕಿ ಬಿದ್ದೈತ್ರವ್ವ ಸಟಗಾ ನೀರಾದ್ರೂ ಕೊಡ್ರವ್ವ. ನಡಿಯಾಕ ಸಗ್ತೀನೇ ಇಲ್ಲಕವ್ವ
ಮನೆಯಾಕೆ2: ನಮ್ಮಟ್ಟಿಯಾಗ ಚೂರು ತಂಗ್ಳವ ಕೊಡ್ತಿನಿ ಇರು (ತಂದು ಕೊಡುವಳು)
ಮುದುಕಿ: ನಿಂಗ ದೇವ್ರು ಚನ್ನಾಗಿಟ್ಟಿರ್ಲಿ.
(ಮುದುಕಿ ಮೂಲೆಯಲ್ಲಿ ಕುಳಿತು ತಿನ್ನುತ್ತಿರುವಳು. 1ನೇ ಮನೆಗೆ ಚಿಲ್ರೆ ಪಕ್ಷದವರು ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಯಾರಿದ್ದೀರಮ್ಮ ಮನೆಯಾಗೆ?
ಮನೆಯಾಕೆ1: ಮನೆಯವರು ಇದ್ದೀವಿ ಕಣಮ್ಮ. ಓ ನೀವಾ?
ಕಾರ್ಯಕರ್ತರು: ನಾವೇ ನಾವು ಚಿಲ್ರೆ ಪಕ್ಷದವರು, ಝಣ ಝಣ ಕಾಂಚಾಣದವರು.
ಮನೆಯಾಕೆ1: ಕಾಂಚಾಣದವ್ರೋ ಕಾಡುಮನಸ್ರೋ. ನೀವೇನು ಹೇಳ್ಬೇಕು ಅದ್ನ ಹೇಳ್ಬುಟ್ಟು
ಹೊಂಟೋಗಿ. ನಂಗ ಮಾಡಾಕ ಕೆಲ್ಸ ಅದ.
ಚಿನ್ನಮ್ಮ: ಹಾಗೆಲ್ಲ ಅರ್ಜೆಂಟ್ ಮಾಡಿದರೆ ಹೆಂಗಮ್ಮ? ನೋಡು ಈ ಸಲ ನೀನು ನನಗೇ
ಓಟಾಕು. ನಾನೆಲ್ಲಾದ್ರು ಗೆದ್ದು ಬಂದ್ರೆ ನಿಮಗೆ ಏನೇನು ಬೇಕೋ ಅದನ್ನ ಮಾಡಿ ಕೊಡ್ತೀನಿ.
ಕಾರ್ಯಕರ್ತರು: ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ನೋಡವ್ವ ನಿಮ್ಮ ಮನೇಲಿ ವೋಟಿನ ಲೀಸ್ಟಿಗೆ ಸೇರೋರಿದ್ರೆ ತಿಳಿಸು ನಾವೇ ಸೇರಿಸ್ತೀವಿ.
ಮನೆಯಾಕೆ1: ಮೊನ್ನೆ ಹುಟ್ಟಿದ ಮಗ ಐತೆ ಸೇರಿಸ್ಗತೀಯಾ? ನಿಂ ಕೆಲ್ಸ ಆದ್ರ ಕಡ್ದೋಗಿ.
ಚಿನ್ನಮ್ಮ: ಅಯ್ಯೋ ಹಾಗಲ್ಲ ನೋಡು ಒಂದೋಟಿಗೆ ಐನೂರು ರೂಪಾಯಿ ಕೋಡ್ತೀನಿ ಕಣವ್ವ
ಮನೆಯಾಕೆ1: ಅಯ್ಯೋ ಹೌದಾ?
ಕಾರ್ಯಕರ್ತರು: ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ಹುಂ. ತಗೋ ನಮಗೇನೇ ವೋಟಾಕ್ಬೇಕು ತಿಳೀತಾ
ಕಾರ್ಯಕರ್ತರು: ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್.
ಮನೆಯಾಕೆ1: ಆಯ್ತು ಕಣಮ್ಮ. ನಂ ಐಕ ಇನ್ನೂವಿ ಚಿಕ್ಕವು ಇಲ್ಲಂದ್ರ ನಾಕ್ಜನ ಆಗ್ತಿದ್ದೋ.
ಚಿನ್ನಮ್ಮ: ನಂ ಜನ ಹ್ಯಾಗೆ ದಾರಿಗ ಬರ್ತಾರೆ ನೋಡಿದ್ರ?
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
(ಕೂಗುತ್ತಾ ಹೋಗುವರು. 2ನೇ ಮನೆಗೆ ನೋಟಿನ ಪಕ್ಷದವರು ಬರುವರು)

ಕಾರ್ಯಕರ್ತರು: ನೋಟಿನ ಪಕ್ಷಕ್ಕೇ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಮನೆಯಾಕೆ2: ಓ ವೋಟ್ನೋರು ಬನ್ನಿ. ಈಗ ನಾವೆಲ್ಲ ಬದ್ಕಿದ್ದೋ ಅಂತ ಗೆಪ್ತಿಗೆ ಬಂತಾ?
ನಂಜುಂಡಪ್ಪ: ನೋಡಮ್ಮ ನಮ್ಮ ನೋಟಿನ ಪಕ್ಷ ಅಧಿಕಾರಕ್ಕೆ ಬಂದ್ರೆ ಕೋಟಿ ಖರ್ಚಾದ್ರೂ ಸರಿ ನಿಮ್ಗೆಲ್ಲ ಟೀವಿ ಕೊಡ್ತೀವಿ
ಮನೆಯಾಕೆ2: ಟಿವಿ ಬ್ಯಾಡಕಯ್ಯ ಉಣ್ಣಾಕ ಹಿಟ್ಟು ಗೆಯ್ಯಾಕ ಕೆಲ್ಸ ಕೊಡು
ನಂಜುಂಡಪ್ಪ: ಕೊಡ್ತೀವಿ ಕೊಡ್ತೀವಿ ನಮ್ದು ನೋಟಿನ ಪಕ್ಷ. ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ಮನಿಯಾಗೆ ಯಾರೆಲ್ಲ ಇದ್ದೀರಿ?
ಮನೆಯಾಕೆ2: ಯಾಕಪ್ಪ ಹೀಂಗೆ ಕೇಳ್ತೀರಿ? ನಮ್ಮ ಸಂಸಾರ ಅಷ್ಟೂವಿ ನಮ್ಮನಿಯಾಗೇ  
ಇರೋದು
ನಂಜುಂಡಪ್ಪ: ಹಾಗಲ್ಲ ಕಣವ್ವ ನಮ್ದು ಮರ್ಯಾದಸ್ಥರ ಪಕ್ಷ. ದೊಡ್ಡವರೆಷ್ಟು ಚಿಕ್ಕವರೆಷ್ಟು ಅಂತ?
ಮನೆಯಾಕೆ2: ಹೋ ಹಂಗೆ. ದೊಡ್ಡೋರು ಆರ್ಜನ ಐಕ ಎಂಟವೆ.
ನಂಜುಂಡಪ್ಪ: ಹಂಗಾರೆ ಈ ಆರ್ನೋಟು ಮಡಿಕ ಒಂದೋಟ್ಗ ಒಂದ ಸಾವಿರ. ನಮ್ಗೆ ಓಟಾಕ್ಬೇಕು ತಿಳೀತಾ. ನಮ್ಮ ಚಿಹ್ನೆ ಇದೇ.
ಮನೆಯಾಕೆ2: ಐಕಳಿಗೆ ಐನೂರಾರ ಕೊಡಿ ಬುದ್ಧಿ.
ನಂಜುಂಡಪ್ಪ: ನೋಡಿ ನಂ ಜನ. ಎಷ್ಟು ಕೊಟ್ರು ಸಾಕಾಗಲ್ಲ. ನಾವು ಅವರೇ ತಾನೇ!
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
(ಕೂಗುತ್ತಾ ಮುದುಕಿಯ ಬಳಿ ಬರುವರು.)
ನಂಜುಂಡಪ್ಪ: ಅಜ್ಜೀ ಅಜ್ಜೀ ನೀನು ನಮಗೆ ವೋಟಾಕ್ಬೇಕು. ನೋಡು ಸಾವಿರ ರೂಪಾಯಿ ನೋಟು ನಂ ಚಿಹ್ನೆ. ತಕಾ ಮಡಿಕೋ ಈ ನೋಟು. ಇದ್ಕೆ ಓಟಾಕು.
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು
(ಅವರು ಹೋಗಿದ್ದೇ ಚಿಲ್ರೆ ಪಕ್ಷದವರು ಮುದುಕಿಯ ಹತ್ತಿರ ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಚಿನ್ನಮ್ಮ: ಅಯ್ಯೋ ಅಯ್ಯೋ ಅಜ್ಜೀ ದಾರಿಯಲ್ಲಿ ಮಲಗೋದೆ. ಛೇ! ಛೇ! ನೀನು ನಮಗೆ ಓಟಾಕು. ನಿಂಗೆ ಮನೆ ಕಟ್ಟಸಿಕೊಡ್ತೀವಿ. ತಕ ಮಡಿಕ ಈ ಐನೂರರ ನೋಟು. ಒಂದ್ರೂಪಾಯಿ ಕಾಯಿನ್ ನಂ ಚಿಹ್ನೆ
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ.
ಮುದುಕಿ: ಅವ್ವಾ ಇದ್ನ ಮಡಿಕಂಡು ಯಾರಾದ್ರು ತಿನ್ನಾಕ ಕೊಡ್ರವ್ವ.
ನಿರೂಪಕಿ: ನೋಡಿ (ಮುದುಕಿಯನ್ನು ತೋರಿಸಿ) ಈ ಭಾರತದ ಹೊಟ್ಟೆ ಖಾಲಿ ಮಾಡಿನೇ
ನೂರಾರು ಆಸೆಗಳನ್ನು ತೋರಿಸುವ ಚುನಾವಣೆ ಬರೋದು.
ಮುದುಕಿ: ಮಗಾ, ಈ ನೋಟ್ನ ಮಡಿಕಂಡು ಏನಾದ್ರೂ ತಿನ್ನೋದು ಕೊಡು.
ನಿರೂಪಕಿ: ಈ ದುಡ್ಡನ್ನ ನಿನ್ನ ಮಕ್ಕಳಿಗೆ ಕೊಡು.
ಮುದುಕಿ: ಅಯ್ಯೋ ನಂಗೆ ಯಾರೂ ಇಲ್ಲಕವ್ವ. ಓಟಿಲ್ದ ನಂಗ ಓಟಾಕು ಅಂತಾರ ಈ
ಮುಂಡೆಮಕ್ಳು.
ನಿರೂಪಕಿ: ಅಯ್ಯೋ ನಮ್ಮ ಭಾರತವೇ, ಈ ಬಡವರ ಭಾರವ ಹೇಗೆ ಹೊರುವೆ?
(ಹಿನ್ನೆಲೆಯಲ್ಲಿ “ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಭಾರತದಲ್ಲಿ ಬಡವರ ನಿರ್ಮೂಲನೆ ಮಾಡ್ತೀವಿ”
“ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಬಡವರಿಗೆ ವಿಶೇಷ ಪ್ಯಾಕೇಜ್ ತರ್ತೀವಿ”
ನಿರೂಪಕಿ: ಇವರು ಬಡತನ ನಿರ್ಮೂಲನೆ ಮಾಡುವುದಿಲ್ಲ, ಬಡವರನ್ನೇ ನಿರ್ಮೂಲನೆ ಮಾಡುತ್ತಾರೆ. ಬಾ ಅಜ್ಜೀ ನಿಂಗೆ ತಿನ್ನೋಕೆ ಕೊಡ್ತೀನಿ.

ದೃಶ್ಯ-4
ಶಿಷ್ಯ: (ಓಡಿಬಂದು) ಸ್ವಾಮಿಗಳು ಬರುತ್ತಿದ್ದಾರೆ
ಗಬ್ಬೂರು ಗದ್ದಿಗೆ ಮಠದ
ಶ್ರೀ ಶ್ರೀ ಶ್ರೀ ಮಿಷ್ಟಿಕಾನಂದ ಮಹಾಸ್ವಾಮಿಗಳು ಬರುತ್ತಿದ್ದಾರೆ.
ಸ್ವಾಮಿ: (ಸ್ವಾಮಿಗಳು ಬಂದು) ಶಿಷ್ಯ ನಮ್ಮ ಇಂದಿನ ಕಾರ್ಯ ಕ್ರಮವೇನು?
ಶಿಷ್ಯ: ಚಿಲ್ರೆ ಪಕ್ಷ ಮತ್ತು ನೋಟಿನ ಪಕ್ಷದವರು ತಮ್ಮ ಭೇಟಿಗಾಗಿ ಕಾಯುತ್ತಿದ್ದಾರೆ.
ಸ್ವಾಮಿ: ಒಬ್ಬೊಬ್ಬರನ್ನೇ ಕರೆಯಿಸು
ಶಿಷ್ಯ: ಆಗಲಿ ಮಹಾಸ್ವಾಮಿ. ಚಿನ್ನಮ್ಮ (ಚಿನ್ನಮ್ಮ ಓಡಿ ಬಂದು ಅಡ್ಡಬಿದ್ದು)
ಚಿನ್ನಮ್ಮ: ಅಡ್ಡಬಿದ್ದೆ ಬುದ್ಧಿ. ನಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ಮಠಕ್ಕೆ ಒಂದು ಮೆಡಿಕಲ್ ಕಾಲೇಜು, ಬೆಂಗ್ಳೂರಲ್ಲಿ ಒಂದು ಮಾಲ್ ಮಾಡಿಸಿಕೊಡ್ತೀವಿ. ನಿಮ್ಮ ಸಮಾಜದವರಿಗೆ ನೀವು ತಿಳಿಸಿ ಹೇಳ್ಬೇಕು ಬುದ್ಧಿ.
ಸ್ವಾಮಿ: ನೋಡಿ ನಾವು ಮಠಕ್ಕೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ ಕಡಿಮೆ ಬೀಳುತ್ತೆ
ಚಿನ್ನಮ್ಮ: ಈಗ ತುರ್ತಿಗೆ ಅಂತ 5ಕೋಟಿ ಕೊಡ್ತೀವಿ. ಮುಂದೆ ಅಧಿಕಾರಕ್ಕೆ ಬಂದ್ಮೇಲೆ
ಎಲ್ಲಾ ನಾವೇ ಕೊಡ್ತೀವಿ ಬುದ್ಧಿ.
ಸ್ವಾಮಿ: ಆಯ್ತು ನಮ್ಮ ಕೃಪೆ ನಿಮ್ಮ ಮೇಲಿದೆ. ಹೋಗಿ ಬನ್ನಿ. (ಚಿನ್ನಮ್ಮ ಹೋಗುವಳು)
ಶಿಷ್ಯ, 25ಕೋಟಿ ಆಟ ನಡೆಯಲ್ಲ ಅನ್ಸುತ್ತೆ.
ಶಿಷ್ಯ: ಹೌದು ಬುದ್ಧಿ ಸ್ವಲ್ಪ ಕಡಿಮೆ ಮಾಡಿ.
ಸ್ವಾಮಿ: ಆಯ್ತು. 20ಕೋಟಿ?
ಶಿಷ್ಯ: ಇದೂ ಜಾಸ್ತಿನೇ ಬುದ್ಧಿ.
ಸ್ವಾಮಿ: ಹೌದಾ? ನನ್ನ ವ್ಯವಹಾರ ಜ್ಞಾನ ಇಷ್ಟು ಇಳಿದು ಹೋಗಿದೆಯೇ! 15ಕೋಟಿ?
ಶಿಷ್ಯ: ಆಗಬಹುದು ಆಡಿ ನೋಡುವಾ. ಕರೀತೇನೆ. ನಂಜುಂಡಪ್ಪಾ...        
ನಂಜುಂಡಪ್ಪ: (ಬಂದು) ಅಡ್ಡಬಿದ್ದೆ ಬುದ್ಧಿ. ನಾನು ನಿಮ್ಮ ಸಮಾಜದವನೇ
ಸ್ವಾಮಿ: ಅದು ನಮ್ಮ ಗಮನಕ್ಕೆ ಬಂದಿದೆ.
ನಂಜುಂಡಪ್ಪ: ಬುದ್ಧಿ ನಾವು ಅಧಿಕಾರಕ್ಕೆ ಬಂದ್ರೆ ನಿಮ್ಮ ಕಣ್ಣು ಬಿದ್ದಿರುವ ಜಾಗನೆಲ್ಲಾ
ಡಿನೋಟಿಫಿಕೇಷನ್ ಮಾಡಿಕೊಡ್ತೀವಿ. ಆಮೇಲೆ.....
ಸ್ವಾಮಿ: ನಾವೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ
ಶಿಷ್ಯ: 15ಕೋಟಿ
ಸ್ವಾಮಿ: ಹಾಂ. ಹೌದು 15ಕೋಟಿ ಕಡಿಮೆ ಬೀಳುತ್ತೆ.
ನಂಜುಂಡಪ್ಪ: ಈಗ ತುರ್ತಿಗೆ ಅಂತ ಪಾರ್ಟಿಯಿಂದ 10ಕೋಟಿ ಕೋಡ್ತೀವಿ ಆದರೆ ಓಟೂ...
ಸ್ವಾಮಿ: (ತಟ್ಟನೆ ನಿಂತು) ಆಗಲಿ ನಮ್ಮ ಸಂಪೂರ್ಣ ಕೃಪೆ ನಿಮ್ಮ ಮೇಲಿದೆ ಹೋಗಿ ಬನ್ನಿ.
(ನಂಜುಂಡಪ್ಪ ಹೋಗುವನು.)
ಸ್ವಾಮಿ: ಶಿಷ್ಯ ಇಂದು ನಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಬಪ್ಪರೆ 15ಕೋಟಿ
ಸಂಪಾದನೆ.
ಶಿಷ್ಯ: ಬುದ್ಧೀ ಕೊಳ್ತೂರಲ್ಲಿ 25 ಜೋಡಿ ಸಾಮೂಹಿಕ ವಿವಾಹ ನೀವೇ ಮಾಡ್ತೀನಿ...
ಸ್ವಾಮಿ: ಮದುವೆ ನೀನೇ ಮಾಡಿಸು. ನಮಗೆ ವಿಶ್ರಾಂತಿ ಬೇಕಿದೆ.            
(ಹೋಗುವನು, ಹಿಂದೆಯೇ ಶಿಷ್ಯ ಹೋಗುವನು.)

ದೃಶ್ಯ-5
(ನಿರೂಪಕಿ ಹಾಡುತ್ತಾ ಬರುವಳು)
ಹಾಡು: ಹಣವೂ ಹೆಂಡ ಕಂಡದ ಜೊತೆಯಲಿ
ಬರುವುದು ನಮ್ಮಯ ಚುನಾವಣೆ
ಋಣದಲಿ ಬಿದ್ದು ನಮ್ಮಯ ಜನತೆ
ಮಾರಿಕೊಳ್ಳುವರು ಮತವನ್ನೆ!!

ಕಳ್ಳ ಬಂದರೂ ವೋಟ ಕೊಡುವರು
ಸೀಟು ಇಡುವರು ಸುಳ್ಳರಿಗೂ
ಮಳ್ಳ ಜನಗಳು ಮತವನು ಮಾರಿ
ಐದು ವರ್ಷಗಳು ಮರುಗುವರು.

ನಿರೂಪಕಿ :ನಮ್ಮ ದೇಶದಲ್ಲಿ ಇಂದು ಚುನಾವಣೆ ಒಂದು ಉದ್ಯಮದಂತೆ ಬೆಳೆದಿದೆ.
ಚುನಾವಣಾ ಸಮಯದಲ್ಲಿ ಬಂಡವಾಳ ಹಾಕಿ ಗೆದ್ದು ಬಂದು ಲಾಭ
ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಜೈಲಿನಲ್ಲಿದ್ದೂ ಗೆಲ್ಲುತ್ತಾರೆಂದರೆ, ಅದು
ವ್ಯಕ್ತಿಯ ವರ್ಚಸ್ಸಲ್ಲ ಹಣದ ಪ್ರಭಾವ. ಗೆಲ್ಲುವುದಕ್ಕಾಗಿ ಹಣದ ಹೊಳೆಯನ್ನೇ
ಹರಿಸುತ್ತಾರೆ, ಗೆದ್ದು ಭ್ರಷ್ಟಾಚಾರ ಮಾಡುತ್ತಾರೆ.

(ಬೇರೆ ಬೇರೆ ಪಕ್ಷದವರು ಪ್ರಚಾರ ಮಾಡುತ್ತಾ ಓಡಾಡುತ್ತಾರೆ. ನಾನಾ ತರಹದ ಆಮಿಷಗಳು ಕೇಳಿ ಬರುತ್ತವೆ.)
ಹಾಡು :ಝಣ ಝಣ ಚುನಾವಣೆ
ಹಣ ಹಣ ಚಿತಾವಣೆ
ದುಡ್ಡಿಗುಂಟು ಓಟು
ಮುಗ್ಧ ಜನಗಳಿಗೇಟು


Monday, September 7, 2015

ಪ್ರಜಾವಾಣಿಯ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾದ ಪ್ರಬಂಧ






Tuesday, March 31, 2015

ನಗಿಸುವ ಹನುಮಪ್ಪನ ಹೊಸ ರಂಗಸಾಧ್ಯತೆ

ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕ ವಿಮರ್ಶೆ


ನಮ್ಮ ಜನಪದರು ತಿರುಪತಿ ತಿಮ್ಮಪ್ಪನಿಗಿಂತ ಊರ ಮುಂದಿನ ಮಾರಮ್ಮನಿಗೆ, ಹನುಮಪ್ಪನಿಗೆ ಹೆದರುವುದೇ ಹೆಚ್ಚು. ಶ್ರೀಮಂತ ದೇವರು ಜನಪದರಿಗೆ ಸಿಗುವುದು ಬಹಳ ಅಪರೂಪ; ಮಂತ್ರಿ ಮಹೋದಯರ ತರ, ಸರ್ಕಾರದ ಸವಲತ್ತುಗಳ ತರ. ಅದೇ ಊರ ಮುಂದಿನ ಮಾರಮ್ಮನೋ ಹನುಮಪ್ಪನೋ ಅವರಿಗೆ ಯಾವಾಗಲೂ ಸಿಗುತ್ತಾರೆ. ಅವರ ಕಷ್ಟ ಸುಖಗಳನ್ನು ಕೇಳಿ ನೆಮ್ಮದಿಯನ್ನು ನೀಡುತ್ತಾರೆ. ಅವರೆಲ್ಲ ಜನಪದರಿಗೆ ಬಹಳ ಆಪ್ತವಾಗಲು ಕಾರಣ ಈ ದೇವರುಗಳು ಅವರ ಜೊತೆ ಜೊತೆಗೆ ಬದುಕುತ್ತಾರೆ. ಊರವರು ಸೇರಿ ಗುಡಿ ಕಟ್ಟಿಸಿದರೆ ಮಳೆ ಬಿಸಿಲಿಂದ ತಪ್ಪಿಸಿಕೊಂಡು ವರ್ಷಕ್ಕೊಮ್ಮೆ ಜಾತ್ರೆನೋ ಹಬ್ಬವೋ ಮಾಡಿಕೊಂಡು ಆರಾಮ ಬದುಕುತ್ತಾರೆ. ಗುಡಿ ಕಟ್ಟಿಸಿಕೊಟ್ಟಿಲ್ಲವೆಂದರೆ ಅಳ್ಳಿಮರದ ನೆರಳಿನಲ್ಲಿ ನೆಮ್ಮದಿಯಾಗಿ ಬದುಕುತ್ತಾ ಭಕ್ತರಿಗೆ ಒಳ್ಳೆಯದನ್ನು ಮಾಡುತ್ತಾ ಊರ ಕಾಪಾಡಿಕೊಂಡು ದೇವರಾಗಿ ಇರುತ್ತಾರೆ. ಯಾವಾಗದರೊಮ್ಮೆ ಭಯಂಕರ ಕೋಪ ಮಾಡಿಕೊಂಡು ಊರಂತ ಊರಿಗೇ ಸಾಂಕ್ರಾಮಿಕ ರೋಗಗಳನ್ನು ತಂದಿಕ್ಕಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಜನಪದರು ದೇವರನ್ನು ಊರ ಮುಂದೆ ತಂದಿರಿಸಿಕೊಂಡು ದೇವರನ್ನೂ ಕಾಪಾಡುತ್ತಾ ತಾವು ಬದುಕುತ್ತಾ ಬಂದಿದ್ದಾರೆ. ನಮ್ಮ ಜನಪದರು ತಮ್ಮ ಗ್ರಾಮ್ಯ ನುಡಿಗಳಲ್ಲಿಯೆ ತಮ್ಮ ಪ್ರೀತಿಯ ದೇವರನ್ನು ಬಯ್ಯುತ್ತಾರೆ ಹೊಗಳುತ್ತಾರೆ ತೆಗಳುತ್ತಾರೆ. ಅಷ್ಟು ನಂಬಿಕೆ ದೇವರಿಗೆ ಮತ್ತು ಭಕ್ತರಿಗೆ.

ಜನಪದವೇ ಹಾಗೆ ಅಲ್ಲಿ ಶೀಲ-ಅಶ್ಲೀಲದ ಮುಚ್ಚುಮರೆ ಇಲ್ಲ. ಒಡನಾಟ ನಂಬಿಕೆ, ಶ್ರದ್ಧೆ, ನಿಷ್ಠೆ, ನಿಷ್ಠುರತೆ, ರೂಢಿ, ಸರಳತೆ ಮುಂತಾದವೆ ಮುಖ್ಯ.
ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭೂತಗಳ ಪಾರಮ್ಯವಾದರೆ, ದಕ್ಷಿಣ ಕರುನಾಡಿನಲ್ಲಿ ಮಾರಮ್ಮನ ಪ್ರಭಾವ ಹೆಚ್ಚು. ಇನ್ನು ಉತ್ತರ ಕರ್ನಾಟಕದಲ್ಲಿ ಹನುಮಪ್ಪ ಅತ್ಯಂತ ಪಾಪ್ಯುಲರ್ ದೇವರು. ಊರ ಮುಂದಿನ ಅರಳೀಕಟ್ಟೆಯಲ್ಲಿಯೋ ಬೇವಿನಗಿಡದ ಬುಡದಲ್ಲಿಯೋ ಅವ ಇರಲೇಬೇಕು ಅಷ್ಟು ಜನಜನಿತ ಹನುಮಪ್ಪ. ಈ ಹನುಮನನ್ನು ಬಿಟ್ಟರೆ ಕನ್ನಡನಾಡಿನ ಬಹುತೇಕ ಊರದೇವರುಗಳು ಮಾಂಸಾಹಾರ ಪ್ರಿಯರು. ಅದಕ್ಕಾಗಿಯೆ ಇರಬೇಕು ಜನಪದರಿಗೆ ಸ್ಪಷ್ಟ ಆಕಾರವಿಲ್ಲದ, ರೂಪವಿಲ್ಲದ, ಆಭರಣಗಳನ್ನು ಇಷ್ಟಪಡದ, ಗುಡಿಯನ್ನೂ ಹೊಂದರಿದ, ಚಳಿ ಮಳೆ ಬಿಸಿಲು ಬೆಂಕಿಗೆ ಚೂರು ಭಯಪಡದ, ಹೆಚ್ಚೆಂದರೆ ವಾಂತಿಬೇಧಿಯನ್ನೋ, ಕಜ್ಜಿಯನ್ನೋ ಉಂಟುಮಾಡಿ ಸೇಡು ತೀರಿಸಿಕೊಳ್ಳುವ ಊರಿನ ಸಂಕಷ್ಟಗಳನ್ನೇ ಮೈವೆತ್ತಿ ನಿಂತಂತಹ ದೇವರುಗಳು ಇಷ್ಟವಾಗಿರುವುದು. ಅವರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವುದು.

ಇಂಥದ್ದೊಂದು ದೇವರು ಮತ್ತು ಭಕ್ತರ ನಡುವಿನ ಅವಿನಾಭಾವ ಸಂಬಂಧದ ಕಥೆ-ವ್ಯಥೆಯನ್ನು ಆಧರಿಸಿದ ಯುವ ನಾಟಕಕಾರ ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ಎಂಬ ವಾಸ್ತವದ ವಿಡಂಬನೆಯ ನಗೆನಾಟಕವನ್ನು ಧಾರವಾಡದ ‘ಆಟಮಾಟ’ ತಂಡ ಈ ವರ್ಷದ ತನ್ನ “ಅಡ್ಡ್ಯಾಟ”ದ ಮೂಲಕ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಉತ್ತರಕರ್ನಾಟಕದ ಜವಾರಿ ಭಾಷೆಯ ಮೂಲಕ ನಾಡಿನ ಜನರನ್ನು ನಗಿಸುತ್ತಾ ಸಾಗಿರುವ ಈ ನಾಟಕ ಒಂದು ಅಪ್ಪಟ ಜನಪದ ನಾಟಕ ಎಂಬುದರಲ್ಲಿ ಎರಡು ಮಾತಿಲ್ಲ.



ವಜ್ರಮಟ್ಟಿ ಮತ್ತು ಧರಗಟ್ಟಿ ಎಂಬುದು ಉತ್ತರಕರ್ನಾಟಕದ ಎಲ್ಲಾ ಸಮಸ್ಯೆಗಳನ್ನು ಹೊತ್ತುಕೊಂಡು ಬದುಕು ಸಾಗಿಸುತ್ತಿರುವ ಸೋದರ ಹಳ್ಳಿಗಳು. ಈ ಎರಡೂರ ಸೀಮೆ ದೇವರು ಹನುಮಪ್ಪ. ಈ ಹನುಮಪ್ಪನೇ ಈ ನಾಟಕದ ಮುಖ್ಯ ಪಾತ್ರ. ಅವನ ಸುತ್ತಲೇ ನಡೆಯುವ ನಾಟಕ ದೇವರನ್ನಿಟ್ಟುಕೊಂಡು ದಂಧೆ ಮಾಡುವವರ, ವಾರ್ತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವವರ, ಪೀಕಲಾಟದ ಪೊಲೀಸುತನದ, ವಶೀಲಿ ವಕೀಲಿತನದ, ಭ್ರಷ್ಟ ರಾಜಕಾರಣಿಗಳ ಮುಖವಾಡಗಳನ್ನು ಪ್ರೇಕ್ಷಕನ ಮುಂದೆ ಬೆತ್ತಲಾಗಿಸುತ್ತದೆ.

ಧರಗಟ್ಟಿ ದೈವಭಕ್ತರು ಹನುಮಪ್ಪನನ್ನು ಕಳ್ಳತನ ಮಾಡುವ ವಿವಾದದೊಂದಿಗೆ ಆರಂಭವಾಗುವ ನಾಟಕ ಆ ದೇವರಿಗಾಗಿ ಎರಡೂರ ದೈವಭಕ್ತರ ಹೊಲಮನೆಗಳನ್ನು ಕಾಲಿಯಾಗಿಸಿ  ಕಡೆಗೆ ದೇವರೇ ಬೇಡವೆನ್ನಿಸುವ ವಿಷಾದದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಟರ ಅಭಿನಯದ ತಾಕತ್ತನೇ ಬಲವಾಗಿ ಅದರಲ್ಲೂ ವಾಚಿಕಾಭಿನಯಕ್ಕೆ ಹೆಚ್ಚು ಒತ್ತು ನೀಡುವ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಕನ್ನಡ ರಂಗಭೂಮಿಯನ್ನು ಕ್ರಿಯಾಶೀಲವಾಗಿಡುವುದಕ್ಕೆ ಪುಟ್ಟ ಪುಟ್ಟ ತಂಡಗಳು ಹೇಗೆ ಮಾದರಿಯಾಗಬಹುದು ಎಂಬ ಸಾಧ್ಯತೆಯನ್ನು ತೆರೆದಿಡುತ್ತದೆ.

ಹನುಮಪ್ಪನನ್ನೇ ಕಳ್ಳತನ ಮಾಡಿರುವಂತ ವಿಚಾರ, ತನ್ನ ವಿಚಾರಧಾರೆಗಳಿಂದ ಊರೊಳಗೆ ಹುಚ್ಚ ಎನ್ನಿಸಿಕೊಂಡಂತ ಹುಚ್ಚಮಲ್ಲನಿಗೆ ತಿಳಿದು ‘ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?’ ಎಂದು ತನ್ನ ನಿಷ್ಠುರ ಪ್ರಶ್ನೆಯನ್ನು ಪ್ರೇಕ್ಷಕನ ಮುಂದೆ ಎಸೆಯುತ್ತಾನೆ. ಸಮಾಜದಲ್ಲಿನ ನಂಬಿಕೆಗಳನ್ನೇ ಬುಡಮೇಲು ಮಾಡಬಲ್ಲಂತ ಪ್ರಶ್ನೆಗಳನ್ನು ಎತ್ತಬಲ್ಲಂತ ‘ಹುಚ್ಚಮಲ್ಲ’ರಿಗೆ ನಮ್ಮ ಸಮಾಜ ಬುದ್ದಿಜೀವಿ ಎನ್ನುತ್ತಲೇ ಹಿಂದೆಯೇ ಹುಚ್ಚ ಅನ್ನುತ್ತದೆ. ಹುಚ್ಚಮಲ್ಲರಂತವರು ಎತ್ತುವಂತ ಪ್ರಶ್ನೆಗಳಿಗೆ ನಮ್ಮ ಸಮಾಜ ಉತ್ತರಿಸುವುದಿಲ್ಲ. ಒಂದುವೇಳೆ ಉತ್ತರಿಸಿದರೆ ದೇವರ ಅಸ್ಥಿತ್ವವೇ ಅಲುಗಾಡುತ್ತದೆ.

ವಜ್ರಮಟ್ಟಿಯಿಂದ ತುಡುಗು ಮಾಡಿಕೊಂಡು ಬಂದ ಹನುಮಪ್ಪನನ್ನು ಧರಗಟ್ಟಿಯ ಜನ ಭಕ್ತಿಯಿಂದ ಸೇವೆ ಮಾಡುತ್ತಾರೆ. ವಜ್ರಮಟ್ಟಿಯ ಪೂಜಾರಿಗೆ ಇದರಿಂದ ಕೆಲಸವಿಲ್ಲದಂತಾಗಿ ಆತ ಊರ ಜನರನ್ನು ದೇವರ ಹೆಸರಲ್ಲಿ ಬಡಿದೆಬ್ಬಿಸುತ್ತಾನೆ. ಊರ ನಡುವೆ ಹೊಡೆದಾಟವಾದರೂ ಸರಿ ಪೂಜಾರಿಗೆ ದೇವರು ಬೇಕು. ಊರ ಹಿರಿಯರ ಮದ್ಯಸ್ಥಿಕೆ ಕೆಲಸ ಮಾಡದೆ ಹಿರಿಯರು ತಟಸ್ಥರಾಗುತ್ತಾರೆ. ದೇವರ ವಿಚಾರವನ್ನು ಪುಂಡು ಹುಡುಗರು ಕೈಗೆ ತೆಗೆದುಕೊಂಡು ಹನುಮಪ್ಪನನ್ನ ಪೋಲಿಸರು ಎತ್ತಿಕೊಂಡು ಬಂದು ಠಾಣೆಯಲ್ಲಿಡುತ್ತಾರೆ. ಠಾಣೆಗೇ ಬರುವ ಭಕ್ತಕೋಟಿ ಠಾಣೆಯನ್ನೇ ದೇವಾಲಯ ಮಾಡಿಕೊಂಡು ಪೋಲಿಸರನ್ನು ಪೇಚಿಗೆ ಸಿಲುಕಿಸುವ ದೃಶ್ಯವಂತೂ ಪ್ರೇಕ್ಷಕನನ್ನು ನಕ್ಕೂ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. ಪೇದೆಯ ಗಿಲೀಟು ಇನ್ಸ್‍ಪೆಕ್ಟರ್ ಪರದಾಟ ನಗು ಹುಟ್ಟಿಸಿದರೆ ಠಾಣೆಯಲ್ಲಿಯೂ ಮಡಿ ಮಯ್ಲಿಗೆಯನ್ನು ಕಾಪಾಡಿಕೊಳ್ಳುವ ಪೂಜಾರಿಯ ಗೂಂಡಾಗಿರಿಗೆ ಪೋಲಿಸುತನವೇ ಮಂಕಾಗಿಬಿಡುವುದು ವಿಪರ್ಯಾಸ. ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರಿಂದ ಠಾಣೆಯೊಳಗೆ ಪ್ರಾಮಾಣಿಕನೂ ಕರ್ತವ್ಯನಿಷ್ಠನೂ ಖಡಕ್ ಮತ್ತು ಠಾಣೆಯಾಚೆಗೆ ಲಂಚ ಸ್ವೀಕರಿಸುವ ಮಹಾ ಲಂಪಟ ಪೇದೆಯಾಗಿ, ನಮ್ಮ ರಾಜಕೀಯ ಮತ್ತು ರಾಜಕಾರಣಿಗಳ ಅತ್ಯಂತ ಸಶಕ್ತ ವ್ಯಂಗ್ಯಚಿತ್ರದಂತೆ ಈ ನಾಟಕದಲ್ಲಿ ಬರುವ ಎಂ.ಎಲ್.ಎ., ಪಾತ್ರವನ್ನು ಮಾಡಿ ಪ್ರೇಕ್ಷಕರ ಕಣ್ಮಣಿಯಾಗಿದ್ದು ಮಹಾದೇವ ಹಡಪದ. ಬುದ್ದಿವಂತ ಸಮಾಜದ ಪ್ರತಿನಿಧಿಯಂತ ಹುಚ್ಚಮಲ್ಲ, ಪೋಲಿಸು ಅಧಿಕಾರಿಯ ಪಾತ್ರ ಮಾಡಿ ತನ್ನ ಅಭಿನಯ ಸಾಮಥ್ರ್ಯದ ವಿಭಿನ್ನ ಸಾಧ್ಯತೆಗಳನ್ನು ತೆರೆದಿಟ್ಟದ್ದು ಯತೀಶ ಕೊಳ್ಳೆಗಾಲ.
ಹೇಳಿ ಕೇಳಿ ಎರಡು ಊರ ನಡುವಿನ ಕಥಾಹಂದರ, ದೇವರು ಎಂಬ ಸೂಕ್ಷ್ಮ ವಿಚಾರ ಪ್ರಧಾನ ನಾಟಕ. ತಂಡದಲ್ಲಿರುವುದು ಎಂಟೇ ಮಂದಿ ಕಲಾವಿದರು. ತರಬೇತಾದ ನಟ ನಟಿಯರ ಪುಟ್ಟ ತಂಡವೊಂದು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಾ ಪ್ರೇಕ್ಷಕನನ್ನು ಮುಟ್ಟುವುದು ಆಟಮಾಟ ತಂಡಕ್ಕೆ ಸಾಧ್ಯವಾಗಿದೆ. ರಂಗಸಜ್ಜಿಕೆ ಎಂದರೆ ಸರಳವಾದ ಚಿತ್ರಪಟ ಅಷ್ಟೆ. ಇಡೀ ನಾಟಕದಲ್ಲಿ ಪ್ರಧಾನವಾಗಿರುವುದು ನಟ ಮತ್ತು ಅಭಿನಯ. ಧನಂಜಯ ರಂಗಸಮುದ್ರ, ಮಾರಪ್ಪ ಬಿ. ಆರ್. ಬೆಜ್ಜಿಹಳ್ಳಿ, ಉಮೇಶ ಪಾಟೀಲ, ಗೀತಾ ವಿ. ಮೋಹಿತೆ, ಅನಿಲ ರೇವೂರ ಮತ್ತು ಶಶಿಕಲ ಪುರುಟಿ ಈ ಕಲಾವಿದರು ಉತ್ತರ ಕರ್ನಾಟಕದ ಭಾಷೆಯಲ್ಲಿನ ನಾಟಕವನ್ನು ನಾಡಿನ ತುಂಬಾ ಮುಟ್ಟಿಸಿ ನಗಿಸುತ್ತಿರುವುದು ಅವರ ಅಭಿನಯದ ಹೆಚ್ಚುಗಾರಿಕೆಯೆ ಸರಿ. ಇತ್ತೀಚಿನ ದಿನಗಳಲ್ಲಿ  ತನ್ನ ಅಭಿನಯ ಸಾಮಥ್ರ್ಯದಿಂದಲೇ ಕನ್ನಡನಾಡಿನ ಜನರನ್ನು ನಕ್ಕು ನಲಿಸುತ್ತಿರುವ ಅಪರೂಪದ ನಾಟಕ “ಊರು ಸುಟ್ಟರೂ ಹನುಮಪ್ಪ ಹೊರಗ”.



ಈ ನಾಟಕದೊಳಗೊಂದು ದೃಶ್ಯ ಬರುತ್ತದೆ. ದೇವರಾದ ಹನುಮಪ್ಪನನ್ನ ಜೈಲಿನಲ್ಲಿ ಇಡಲಾಗಿದೆ. ಇದನ್ನು ಸುದ್ಧಿ ಮಾಡಲು ಬರುವ ವಾಹಿನಿಯೊಂದರ ವರದಿಗಾರ್ತಿ ಎರಡೂರ ನಡುವಿನ ದೇವರ ಜಗಳವನ್ನ ಬಂಡವಾಳ ಮಾಡಿಕೊಂಡು ಘಟನೆಯನ್ನು ತಿರುಚಲು ಯತ್ನಿಸುವುದಂತೂ ನಮ್ಮ ಸುದ್ದಿವಾಹಿನಿಗಳ ತಿಳುವಳಿಕೆ ಹೀನ, ವ್ಯಾಪಾರಿ ಮನೋಭಾವವನ್ನು ಪ್ರಕಟಪಡಿಸುತ್ತದೆ. ಆ ವರದಿಗಾರ್ತಿ ವಜ್ರಮಟ್ಟಿ ಧರಗಟ್ಟಿ ಊರ ಹನುಮಪ್ಪನನ್ನು ಪುರಾಣದ ಹನುಮನೊಂದಿಗೆ ತಾಳೆ ಹಾಕಿ ಸಮಾಜದಲ್ಲಿ ಕೋಲಾಹಲವೆಬ್ಬಿಸುವಂತೆ ಮಾಡುವ ಸುದ್ಧಿದಾಹಿಗಳ ಬಂಡವಾಳ ನಗೆಯುಕ್ಕಿಸುವ ಬದಲು ದಿಗಿಲು ಹುಟ್ಟಿಸುತ್ತದೆ. ಇದನ್ನೂ ಕಂಡು ಪ್ರೇಕ್ಷಕ ನಗುವಂತೆ ಮಾಡುತ್ತದೆ ನಾಟಕ.

ಉತ್ತರಕರ್ನಾಟಕದ ಎರಡು ಪುಟ್ಟ ಹಳ್ಳಿಗಳ ನಡುವಿನ ಜಗಳದ ಎಳೆಯನ್ನ ಹಿಡಿದು ನಮ್ಮ ಸಮಾಜದ ಕೈಗನ್ನಡಿಯಂತಹ ಊರು ಸುಟ್ಟರೂ ಹನುಮಪ್ಪ ಹೊರಗ ನಗೆ ನಾಟಕವನ್ನು ಕಟ್ಟಿದ ಹನುಮಂತ ಹಾಲಿಗೇರಿಯವರ ಆಶಯವನ್ನು ಆಟಮಾಟ ತಂಡ ಯತೀಶ ಕೊಳ್ಳೆಗಾಲ ಅವರ ನಿರ್ದೇಶನದಲ್ಲಿ ಕರುನಾಡಿನ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಎರಡು ಊರುಗಳು ದೇವರಿಗಾಗಿ ನ್ಯಾಯಾಲಯದಲ್ಲಿ ಮಾಡುವ ಹೋರಾಟ ಮತ್ತು ಈ ಹಳ್ಳಿಗರ ಮುಗ್ಧತೆಯನ್ನು ಹಣ ಪೀಕಿಸುವ ಕಾಯಕವನ್ನು ಮಾಡಿಕೊಂಡ ವಕೀಲರ ದುಷ್ಟತನವನ್ನು ನಿರೂಪಣೆಯಂತೆ ಆತುರದಲ್ಲಿ ಮುಗಿಸುತ್ತದೆ ನಾಟಕ. ವರ್ಷಾನುಗಟ್ಟಲೆ ಹಿಡಿಯುವ ನ್ಯಾಯ ವ್ಯವಸ್ಥೆ ಮತ್ತು ವಕೀಲರುಗಳ ಹಣದಾಹಕ್ಕೆ ಎಲ್ಲವನ್ನೂ ಕಳಕೊಂಡ ಎರಡೂರ ಜನ ದೇವರೇ ಬೇಡ ಎಂದು ಬಸವಣ್ಣನ ‘ಕಾಯಕವೇ ಕೈಲಾಸ’ ಎಂಬ ತತ್ವವ ನಂಬಿ ಊರುಬಿಟ್ಟು ಗುಳೆ ಹೋಗುವುದು ನಾಟಕದ ವಿಷಾದ. ಈ ದೃಶ್ಯಕ್ಕೆ ಇನ್ನಷ್ಟು ಮಹತ್ವ ನೀಡಿದ್ದರೆ ನಕ್ಕು ಹಣ್ಣಾದ ಪ್ರೇಕ್ಷಕನಿಗೆ ನಗೆಯಾಚೆಗಿನ ಚಿಂತನೆಗೆ ಒತ್ತುಕೊಟ್ಟಂತಾಗುತ್ತಿತ್ತು. ಬರಿಯ ನಗಿಸುವುದಷ್ಟೇ ಸಮಾಜಿಕ ಕಳಕಳಿ ಹೊಂದಿದ ರಂಗತಂಡದ ಧ್ಯೇಯವಾಗದೆ ಪ್ರೇಕ್ಷಕನಿಗೆ ತಾನು ಯಾಕೆ ನಕ್ಕಿದ್ದೇನೆ ಎಂಬ ವಿಚಾರಮಂಥನಕ್ಕೂ ಕಾರಣವಾಗಬೇಕು. ಆ ದೃಷ್ಠಿಯಲ್ಲಿ ತಂಡ ಕಡೆಯ ದೃಶ್ಯದ ವಿಷಾದವನ್ನು ಸ್ಪಷ್ಟವಾಗಿ ಪ್ರೇಕ್ಷಕನ ಮುಂದಿಡಲು ಯತ್ನಿಸಬೇಕು.

ಬಡತನ ಬರಗಾಲದ ನಡುವೆಯೂ ನಮ್ಮ ಜನಪದರಿಗೆ ದೇವರು ತಮ್ಮ ಕೇಡನ್ನು ಕ್ಷಣಹೊತ್ತು ಮರೆಯಲು ಆಸರೆ. ತಮ್ಮ ಊರ ಹನುಮಪ್ಪನ ಮೇಲಿನ ಹಕ್ಕಿಗಾಗಿ ಹೋರಾಡಿ ಮತ್ತಷ್ಟು ಬಡತನಕ್ಕೀಡಾದ ವಜ್ರಮಟ್ಟಿ ಮತ್ತು ಧರಗಟ್ಟಿಯ ಜನಪದರಿಗೆ ಆ ಹನುಮನೇ ತಮ್ಮ ಇಂದಿನ ಕೇಡಿಗೂ ಕಾರಣವಾಗಿದ್ದು ಅವರನ್ನು ಖಿನ್ನರನ್ನಾಗಿಸುತ್ತದೆ. ನಿಮ್ಮ ಹೋರಾಟಕ್ಕೆ ಜಯವಾಗಿದೆ ದೇವರನ್ನು ವಾಪಾಸ್ಸು ನಿಡುವುದಕ್ಕೆ ಬಂದರೆ ಗೆದ್ದವರಿಗೂ ಸೋತವರಿಬ್ಬರಿಗೂ ದೇವರು ಬೇಡ. ಬರಗಾಲ ಮತ್ತು ದೇವರ ಹಕ್ಕಿನ ಹೋರಾಟದಿಂದ ತತ್ತರಿಸಿದ ಊರುಗಳು ದುಡಿಮೆಯನ್ನು ಅರಸಿ ಗೋವಾ ಮುಂತಾದ ಕಡೆ ಗುಳೆಹೋಗುವುದು ಕಂಡರೆ ನಮ್ಮ ಹಳ್ಳಿಗಳು ಇಂದಿಗೂ ರಾಜಕಾರಣಿಗಳ ಸಾಂತ್ವನ ಕೇಂದ್ರಗಳಾಗಿಯೇ ಉಳಿದಿದೆ. ಹಳ್ಳಿಗರ ಬಡತನ ಅನಕ್ಷರತೆಯನ್ನು ಕಾಪಾಡಿಕೊಂಡು ಬರುವ ರಾಜಕಾರಣ ವಿಚಾರ ಮಾಡುವ ಶಕ್ತಿಯನ್ನೇ ನಾಶಮಾಡಿದೆ. ವಿಚಾರವಂತನಾದರೆ ಹುಚ್ಚಮಲ್ಲನಂತೆ ಹುಚ್ಚನ ಪಟ್ಟಕಟ್ಟಿ ನಗುವಂತೆ ಮಾಡಿದೆ. ಎರಡೂ ಊರಿಗೆ ಬೇಡವಾದ ಹನುಮಪ್ಪ ದಾರಿಯ ಮಧ್ಯೆ ನಿಂತಾಗ ಹುಚ್ಚಮಲ್ಲನ ಪ್ರಶ್ನೆಯೆ ಮತ್ತೆ ನೆನಪಾಗುತ್ತದೆ: “ತನ್ನನ್ನೇ ಕಾಪಾಡಿಕೊಳ್ಳಲಾರದ ದೇವರು ಇನ್ನು ನಮ್ಮನ್ನು ಹೇಗೆ ಕಾಪಾಡಿಯಾನು?”



ಸಂಪೂರ್ಣ ಉತ್ತರಕರ್ನಾಟಕದ ಜಾನಪದ ಪ್ರಕಾರಗಳನ್ನೇ ನಾಟಕದ ಓಘಕ್ಕೆ ಬಳಸಿಕೊಂಡ ತಂಡ, ರಂಗಕ್ರಿಯೆಯನ್ನು ಕಟ್ಟುವುದಕ್ಕಿರುವ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿರುವುದು ಅರಿವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪುಟ್ಟ ಪುಟ್ಟ ತಂಡಗಳು ಕನ್ನಡ ರಂಗಭೂಮಿಯ ಚಲನಶೀಲತೆಗೆ ತಮ್ಮ ಕಾಣಿಕೆಯನ್ನು ನೀಡುತ್ತಿವೆ ಮತ್ತು ಈ ತಂಡಗಳ ನಾಟಕಗಳ ಆಯ್ಕೆಗಳನ್ನು ಗಮನಿಸಿದರೆ ಒಂದು ಸಾಮಾಜಿಕ ಚಳವಳಿಯನ್ನು ಕಟ್ಟುವ ನಿಟ್ಟಿನಲ್ಲಿ ಸಾಗಿದೆ. ಬಹುತೇಕ ಯುವ ನಟ ನಟಿಯರೇ ಭಾಗಿಯಾಗಿರುವ ಈ ಧಾರೆಯಲ್ಲಿ ವಿಚಾರಗಳ ಹರಿತವೂ ಒಳಗೊಂಡಿರುವುದು ಹೊಸ ಭರವಸೆಯನ್ನು ಮೂಡಿಸಿದೆ.
ಆಟಮಾಟದಂತಹ ತಂಡಗಳು ಇನ್ನಷ್ಟು ಹೊಸ ಹೊಸ ರಂಗಪ್ರಸ್ತುತಿ ಮತ್ತು ರಂಗ ಸಾಧ್ಯತೆಗಳನ್ನು ನಾಡಿಗೆ ನೀಡಲಿ.

-ಸಂತೋಷ ಗುಡ್ಡಿಯಂಗಡಿ

Sunday, March 29, 2015

ಸರ್ಕಾರಿ ಶಾಲೆಯೊಳಗೊಬ್ಬ ಸಂತ; ಸ. ರಘುನಾಥ

(ಈ ಲೇಖನವನ್ನು ನಾನು ಬರೆದದ್ದು ಕಳೆದ ವರ್ಷ. ಆದರೆ ಪತ್ರಿಕೆಯೊಂದರಲ್ಲಿ ಇದು ಪ್ರಕಟಣೆಗೆ ಬರುವ ಹೊತ್ತಿಗೆ ಮೇಸ್ಟ್ರು ನಿವೃತ್ತರಾದ್ದರಿಂದ ಪ್ರಕಟವಾಗಿಲ್ಲ. ಈಗ ನಾನೇ ಇಲ್ಲಿ ಪ್ರಕಟಿಸುತ್ತಿರುವೆ.)



ಹಣ್ಣು ಕೊಡುವ ದೇವರು
ಒಂಟಿಕಾಲ ವ್ಯಕ್ತಿಯೊಬ್ಬರು ತನ್ನ ಗಾಡಿಯಿಂದ ಹಣ್ಣುಗಳನ್ನೆತ್ತಿ ಭಿಕ್ಷುಕರಿಗೆ ಕೊಡುತ್ತಿದ್ದರೆ ಗಾಡಿಯವ ಏನೂ ಮಾತಾನಾಡುವುದಿರುವುದ ಕಂಡು, ಆಚೀಚೆಯವರು ಗಾಡಿಯವನಿಗೆ ‘ಆತ ಹಣ್ಣು ತೆಗೆಯುತ್ತಿದ್ದಾನೆ ನೋಡು’ ಎಂದರೆ ‘ತೆಗೆಯಲಿ ಬಿಡಿ ಆತ ತನಗಾಗಿ ಹಣ್ಣು ತೆಗೆದುಕೊಳ್ಳುತ್ತಿಲ್ಲವಲ್ಲ ಆತ ದೇವರು’ ಎನ್ನುತ್ತಾನೆ ಶ್ರೀನಿವಾಸಪುರದ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರುವ ರಾಜ. ಆ ‘ದೇವರು’ ಹಣ್ಣು ಮುಟ್ಟದೆ ಹಾಗೆಯೇ ಕುಂಟಿಕೊಂಡು ಹೋದರೆ ‘ನಿಂಗೇನು ದಾಡಿ, ಹಣ್ಣು ಮುಟ್ಟದೆ ಹಾಗೇ ಹೋಗ್ತೀಯಲ್ಲ’ ಎಂದು ರಾಜ ಬಯ್ಯುತ್ತಾನೆ. ಆ ಒಂಟಿ ಕಾಲ ಮನುಷ್ಯ ರಾಜನ ಪ್ರೀತಿಯ ಸರ್ಕಾರಿ ಶಾಲಾ ಮೇಷ್ಟ್ರು.


ಆ ಮೇಷ್ಟ್ರು ಒಮ್ಮೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಬಂದ ಭಿಕ್ಷುಕಿಯೊಬ್ಬರು ತನ್ನ ಬಳಿಯಿದ್ದ ಹತ್ತು ರೂಪಾಯಿಗೆ 100ಗ್ರಾಂ ದ್ರಾಕ್ಷಿ ಕೊಂಡು ಮೇಸ್ಟ್ರಿಗೆ ಕೊಡುತ್ತಾಳೆ. ಬೇಡಮ್ಮ ನಿನ್ನ ಮಕ್ಕಳಿಗೆ ಕೊಡು ಎನ್ನುತ್ತಾರೆ ಮೇಸ್ಟ್ರು. ಆಕೆ ಇಲ್ಲ ನೀವು ತಿನ್ನಲೇಬೇಕು, ನಾನು ಗರ್ಭಿಣಿಯಾಗಿದ್ದಾಗ ಒಂದೂವರೆ ತಿಂಗಳು ನನ್ನನ್ನು ಸಾಕಿದ್ದೀರಿ ಎಂದಾಗ ಮೇಸ್ಟ್ರಿಗೆ ಮೂವತ್ತೈದು ವರ್ಷಗಳ ಹಿಂದಿನ ಘಟನೆ ನೆನಪಾಗುತ್ತದೆ. ಆಗ ಅವರ ಶಾಲೆಯ ಮುಂದಿನ ಮರದ ಕೆಳಗೊಬ್ಬ ಗರ್ಭಿಣಿ ಭಿಕ್ಷುಕಿ ಕುಳಿತಿರುತ್ತಿದ್ದಳು. ಮಕ್ಕಳಿಗೆ ಉಪ್ಪಿಟ್ಟು ಕೊಟ್ಟಾದ ಮೇಲೆ ಆಕೆಗೂ ಸ್ವಲ್ಪ ಉಪ್ಪಿಟ್ಟು ನೀಡುತ್ತಿದ್ದರು. ಆಕೆ ಆ ಮೇಷ್ಟ್ರರನ್ನು ದೇವರಂತೆ ಕಂಡಳು. ತನ್ನನ್ನು ತನ್ನ ಮಗುವನ್ನು ಸಾಕಿದ  ದೇವರಿಗೆ ದ್ರಾಕ್ಷಿ ನೀಡಿ ಸತ್ಕರಿಸಿದಳು.

ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಾದರೂ ಈ ಜಗತ್ತಿನಲ್ಲಿದೆಯೇ? ಎಂದು ಕೇಳುವ ಈ ಮೇಸ್ಟ್ರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಪಲ್ಲಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸ. ರಘುನಾಥ ಅವರು. ಸ. ರಘುನಾಥ ಮೇಸ್ಟ್ರು ಕೆಲಸ ಮಾಡಿದೆಡೆಯೆಲ್ಲ ಜನ ಅವರನ್ನು ದೇವರು ಎನ್ನುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೇಸ್ಟ್ರನ್ನು ದೇವರು ಅಂತ ಜನರು ಕರೆಯಬೇಕೆಂದರೆ ಅವರು ಮಾಡುವ ಪವಾಡಗಳು ಎಂತವು ಎಂದು ಹುಡುಕಿಕೊಂಡು ಹೋದರೆ ನೂರಾರು ಮಕ್ಕಳ ಬದುಕು ಬದಲಿಸಿದ ಕಥೆಗಳು, ನೂರಾರು ಜನರ ಹಸಿವು ನೀಗಿದ ಕಥೆಗಳು, ಸಾವಿರಾರು ಕಾಡು ಪ್ರಾಣಿ -ಪಕ್ಷಿಗಳು ಹೊಸ ಬದುಕನ್ನು ಕಂಡುಕೊಂಡ ಕಥೆಗಳು, ನೂರಾರು ಜನರ ಕಾಯಿಲೆಗಳು ಗುಣವಾದಂತ ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಇವು ಪವಾಡಗಳಲ್ಲ. ವ್ಯಕ್ತಿಯೊಬ್ಬ ತನ್ನ ಜೀವಿತವನ್ನು ಸಾಮಾಜಿಕ ಬದುಕನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದರ ಉದಾಹರಣೆ. ರಘುನಾಥ ಮೇಸ್ಟ್ರು ತನ್ನ ಬದುಕನ್ನ ಹೀಗೆ ರೂಪಿಸಿಕೊಳ್ಳುವ ಹಿಂದೊಂದು ಕ್ರೂರವಾದ ಹಸಿವಿನ ಕಥೆಯಿದೆ.

ಹನ್ನೆರಡು ಮಕ್ಕಳ ತುಂಬು ಕುಟುಂಬದಲ್ಲಿ ಜನಸಿದ ರಘುನಾಥ ಅವರ ಮನೆಯಲ್ಲಿ ತುತ್ತು ಅನ್ನಕ್ಕೂ ಕಷ್ಟ. ಅಜ್ಜ ಅಜ್ಜಿಯ ಆಶ್ರಯದಲ್ಲಿ ಒಂದಷ್ಟು ಕಾಲ ಬೆಳೆದರು. ಅಜ್ಜನ ಶ್ಯಾನುಭೋಗಿಕೆ ಹೋದ ಮೇಲೆ ಸಿದ್ಧಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಕಾಲೇಜು ಸೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಬೆಂಗಳೂರಿಗೆ ಬಂದು ಹೋಟೆಲಿನಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿಕೊಂಡರು. ಹೋಟೆಲ್ ಕೆಲಸ ಮತ್ತು ವಿದ್ಯಾಭ್ಯಾಸ ಎರಡೂ ಕೈಗೆಟುಕದೆ ಹಸಿವು ತನ್ನ ಭೀಕರ ಮುಖವನ್ನು ತೆರೆದುಕೊಂಡಿತ್ತು.

“ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕು ಮನೆಯ ಮುಂದೆ ನಿಂತು ತುತ್ತು ಅನ್ನ ಬೇಡಿದೆ ಗುರುವೆ, ಯಾರೂ ನೀಡಲಿಲ್ಲ. ಒಂದು ತುತ್ತು ಭಿಕ್ಷೆಗೂ ಯೋಗ್ಯನಲ್ಲ ನಾನು ಅನ್ನಿಸಿತು. ರೈಲು ಹಳಿಗಳ ಮೇಲೆ ನಡೆಯುತ್ತಾ ಸಾಗಿದೆ. ಸುತ್ತಲಿನ ಒಂದು ಸದ್ದು ನನಗೆ ಕೇಳಿಸಲಿಲ್ಲ. ಅವತ್ತಿನ ಆ ಕ್ಷಣದ ಏಕಾಗ್ರತೆ ಏನಾದರೂ ನನಗೆ ಇಂದು ಸಾಧ್ಯವಾಗಿದ್ದರೆ ಇಂದು ನನ್ನ ಸಾಹಿತ್ಯದ ದಿಕ್ಕೇ ಬದಲಾಗುತ್ತಿತ್ತು. ಎಚ್ಚರವಾದಾಗ ನಾನು ಬೌರಿಂಗ್ ಆಸ್ಪತ್ರೆಯಲ್ಲಿದ್ದೆ. ನಾನು ಕಾಲು ಕಳೆದುಕೊಂಡಿದ್ದೆ” ಅಂದು ಸಮಾಜ ಅವರಿಗೆ ಒಂದು ತುತ್ತು ಅನ್ನ ನೀಡದೆ ಕಾಲು ಬಲಿ ಪಡೆಯಿತು; ಆದರೆ ಆ ಕಾಲು ಕಳೆದಕೊಂಡ ಮನುಷ್ಯ ಇಂದು ಧಾವಂತದಲ್ಲಿ ಓಡುತ್ತಿರುವ ಅದೇ ಸಮಾಜದ ನಡುವೆ ಕುಂಟಿಕೊಂಡು ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆ ಪುಣ್ಯಾತ್ಮ ರೈಲು ಕಾಲನ್ನಷ್ಟೇ ಬಲಿ ಪಡೆದು ರಘುನಾಥ ಅವರನ್ನ ಈ ನಾಡಿಗೆ ನೀಡಿ ಸಾವಿರಾರು ಜನರ ಬದುಕಲ್ಲಿ ನಗೆಯರಳಲು ಹಾದಿ ಮಾಡಿಕೊಟ್ಟಿತು. ಅದೇ ರಘುನಾಥ ಮೇಸ್ಟ್ರು ಈ ಸಮಾಜದ ಬಗ್ಗೆ ಹೀಗೆ ಹೇಳುತ್ತಾರೆ “ ಈ ಸಮಾಜದಲ್ಲಿದ್ದು ಏನಾದರೂ ಮಾಡಬೇಕು ಅಂತಿದ್ದರೆ ನಷ್ಟ ಮತ್ತು ನೋವನ್ನು ಅನುಭವಿಸೋಕೆ ಸಿದ್ಧವಾಗಿರಬೇಕು. ಇದು ಅನುಭವ ಸಿದ್ಧಾಂತ. ಇದಕ್ಕಾಗಿ ಯಾರನ್ನೂ ದೂಷಿಸುವುದರಲ್ಲಿ ಅರ್ಥವಿಲ್ಲ. ಗಾಂಧಿ, ಏಸುವಿನಂತವರೇ ಈ ಸಮಾಜದಿಂದ ನೋವನ್ನ ತಿಂದಿದ್ದಾರೆ; ಇನ್ನು ನನ್ನಂತ ಚಿಕ್ಕವರು ಯಾವ ಲೆಕ್ಕ?”

ಮೊಲ ಸಾಕಾಣೆ ಮಾಡುವುದನ್ನು ಕಲಿಸುತ್ತಾ...

‘ತಾನೊಂದು ಮರದಂತೆ ಬದುಕಬೇಕು’ ಎಂದು ಬಯಸಿದ ಸ. ರಘುನಾಥ ಅವರಿಗೆ ಸರ್ಕಾರಿ ಶಾಲೆಯ ಮೇಸ್ಟ್ರಾಗಿ ಕೆಲಸ ಸಿಕ್ಕಿತು. ಮರವನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನ ಕಟ್ಟಿಕೊಳ್ಳಲು ಬಯಸಿದ ಮನಕ್ಕೆ ಸರ್ಕಾರಿ ಶಾಲೆ ವರದಾನವಾಯಿತು; ಅದು ರಘುನಾಥ ಮೇಸ್ಟ್ರಿಗಷ್ಟೇ ಆ ಶಾಲೆಗೆ ಕಲಿಯಲು ಬಂದ ಮಕ್ಕಳಿಗೂ. ರಘುನಾಥ ಮೇಸ್ಟ್ರಿರುವ ಶಾಲೆಯೆಂದರೆ ಅದು ಬರಿಯ ಶಾಲೆಯಷ್ಟೆ ಅಲ್ಲ, ಅದೊಂದು ಆಸ್ಪತ್ರೆ, ಅದೊಂದು ಪ್ರಾಣಿ ಸಂಗ್ರಹಾಲಯ, ಅದೊಂದು ಚೆಲುವಾದ ಕೈತೋಟದ ನಂದನವನ. ಗೌನಿಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿರುವ ಈ ಒಂಟಿ ಕಾಲ ಮೇಸ್ಟ್ರು ಶಾಲೆಗಷ್ಟೇ ಹೋಗಿ ಬಂದಿಲ್ಲ. ಶಾಲಾ ನಂತರದ ಸಮಯಗಳಲ್ಲಿ ಸುತ್ತ ಮುತ್ತಲ ಊರುಗಳಿಗೆ ಬೇಟಿ ನೀಡಿ ಬಡವರಿಗೆ ಅನಾಥರಿಗೆ ಉಚಿತವಾಗಿ ಔಷಧಿ ನೀಡುತ್ತಿದ್ದರು. ಅಲೆಮಾರಿಗಳ ಟೆಂಟುಗಳಿಗೆ ಬೇಟಿ ನೀಡಿ ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತಂದು ಓದಿಸುತ್ತಿದ್ದರು, ಅವರ ತಂದೆ ತಾಯಿಯರಿಗೆ ದಿನನಿತ್ಯದ ಊಟ ಉಪಹಾರಗಳಿಗೆ ಅಕ್ಕಿ ಸಾಮಾನುಗಳನ್ನು ತಾವೇ ಒದಗಿಸಿ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರುತ್ತಿದ್ದರು.

ನಮ್ಮ ಮಕ್ಕಳು

ಗಾಯಗೊಂಡ ಜಿಂಕೆಮರಿಯ ಆರೈಕೆಯಲ್ಲಿ...

ಶಾಲಾ ಸಮಯದ ನಂತರ ಊರೂರು ತಿರುಗಿ ಅಲೆಮಾರಿಗಳು ಅನಾಥರು ಭಿಕ್ಷುಕರನ್ನು ಬೇಟಿ ಮಾಡಿ ಅವರಿಗೆ ತಕ್ಷಣದ ಉಪಚಾರ ನೀಡುತ್ತಿದ್ದಾಗಲೇ ಅವರು ರೂಪಿಸಿದ್ದೆ “ನಮ್ಮ ಮಕ್ಕಳು”. ಇದೊಂದು ಸಂಘಟನೆಯೆಂದರೆ ತಪ್ಪಾದೀತು. ಅನಾಥರು ನಿರ್ಗತಿಕ ಮಕ್ಕಳಿಗೆ ಸಿಕ್ಕ ಆಸರೆ. ಈ ಮೇಸ್ಟ್ರು, ನಮ್ಮ ಮಕ್ಕಳು ಎಂಬ ತಾಯ್ತನದ ಮಡಿಲೊಳಗೆ ಸಲಹಿದ ಹಲವಾರು ಮಕ್ಕಳಿಂದು ಮೇಸ್ಟ್ರುಗಳಾಗಿದ್ದರೆ, ಬೇರೆ ಬೇರೆ ಉದ್ಯೋಗಗಳನ್ನು ಪಡೆದು ಹೊಸ ಜೀವನ ಆರಂಭಿಸಿದ್ದಾರೆ. ನಮ್ಮ ಮಕ್ಕಳ ವಿಶೇಷ ಎಂದರೆ ಭಿಕ್ಷೆ ಬೇಡುವವರ, ಬುಡಬುಡಿಕೆಯವರ, ಅಲೆಮಾರಿಗಳ ಮಕ್ಕಳೂ ಇಂದು ಶಿಕ್ಷಣ ಪಡೆದು ಮೇಸ್ಟ್ರುಗಳಾಗಿದ್ದಾರೆ ಎಂಬುದು!

ರಘುನಾಥ ಮೇಸ್ಟ್ರ ಅಪರೂಪದಲ್ಲಿ ಅಪರೂಪದ ಗುಣವೊಂದನ್ನು ಕುರಿತು ಹೇಳಲೇಬೇಕು. ನಮ್ಮ ಮಕ್ಕಳ ಮೂಲಕ ಶಿಕ್ಷಣ ಪಡೆದು ಉದ್ಯೋಗಸ್ತರಾದ ಮೇಲೆ ಅಂತವರ ಸಂಪೂರ್ಣ ಸಂಪರ್ಕವನ್ನೇ ಕಡಿದುಕೊಳ್ಳುತ್ತಾರೆ. ಅವರಿಂದ ಯಾವ ನೆರವನ್ನೂ ಬಯಸುವುದಿಲ್ಲ; ಮಾತನಾಡಿಸುವುದಿಲ್ಲ! ಯಾಕೆ ಸರ್ ಹೀಗೆ? ಎಂದರೆ: ‘ನೋಡು ಗುರುವೆ, ಅವರು ನನ್ನ ಮುಂದೆ ಕೈ ಕಟ್ಟಿಕೊಂಡು ನಿಂತು ನಿಮ್ಮಿಂದ ನಾನು ಹೀಗಾದೆ. ಎನ್ನುವುದನ್ನ ಕೇಳುವುದಕ್ಕೆ ಬೇಜಾರು. ಮತ್ತೆ ಅವರಿಗೆ ನಾನು ಮಾಡಬಹುದಾದ ಸಹಾಯ ಸಾಕಾಗಿದೆ. ಹಾಗಾಗಿ ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಟ್ಟುಕೊಂಡಿಲ್ಲ’ ಎನ್ನುವ ಅವರಿಗೆ ತನ್ನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಅಪಾರವಾದ ಹೆಮ್ಮೆ ಇದೆ. ಹೀಗೆಲ್ಲ ಹೇಳುವಾಗ ಅವರ ಆದರ್ಶದ ಮರದ ಕಥೆ ನೆನಪಾಗುತ್ತದೆ. ಅವರೇ ಹೇಳುವ ಹಾಗೆ “ಒಂದು ಮರ ಹಣ್ಣು ಬಿಡುತ್ತದೆ. ಆ ಹಣ್ಣನ್ನ ಒಳ್ಳೆಯವರು ಕೆಟ್ಟವರು ಹಕ್ಕಿಗಳು ಪ್ರಾಣಿಗಳು ಎಲ್ಲಾ ತಿನ್ನುತ್ತಾರೆ. ಮುದೊಂದು ದಿನ ಕಟುಕನೊಬ್ಬ ಬಂದು ಮರವನ್ನು ಕಡಿದು ನಾಶ ಮಾಡುತ್ತಾನೆ. ಆಮೇಲೆ ಅಲ್ಲಿ ಒಂದು ಮರ ಇತ್ತು ಎಂಬುದಕ್ಕೆ ಯಾವ ಕುರುಹೂ ಇರುವುದಿಲ್ಲ, ನಾನೂ ಕೂಡ ಆ ಮರದಂತೆ ಬದುಕಬೇಕು ಗುರುವೆ”
ಕಟುಕರಿದ್ದರು ಕುಂಟುವ ಕಾಲ ಬಳಿಯಲ್ಲೇ

ಗಾಯಗೊಂಡು ಸಿಕ್ಕಿದ ಕಾಡುಪಾಪದ ಮರಿ...

ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳಲಾರದ ಮನಸುಗಳು ನಮ್ಮ ಜೊತೆ ಜೊತೆಯಲ್ಲಿ ಇರುತ್ತವೆ. ರಘುನಾಥ ಮೇಸ್ಟ್ರ ಇಕ್ಕೆಲದಲ್ಲೂ ಅಂತಹ ಮನಸುಗಳಿದ್ದವು. ಅವರಿದ್ದ ಶಾಲೆ ನಂದನವನ ಎಂದು ಮೊದಲೇ ಪ್ರಸ್ತಾಪಿಸಿದ್ದೆ. ಹೌದು, ಅಲ್ಲಿ ಹಣ್ಣಿನ ಗಿಡಗಳು, ತರಕಾರಿಗಳು, ಹೂವಿನ ಗಿಡಗಳು, ಔಷಧಿ ಗಿಡಗಳನ್ನು ಮಕ್ಕಳ ಮೂಲಕ ನೆಟ್ಟು ಆರೈಕೆ ಮಾಡಿದ್ದರು. ಗಾಯಗೊಂಡು ನರಳುತ್ತಿರುವ ಕಾಡು ಪ್ರಾಣಿ ಪಕ್ಷಿಗಳನ್ನು ತಂದು ಪಂಜರಗಳಲ್ಲಿ ಚಿಕಿತ್ಸೆ ನೀಡಿ ಮಕ್ಕಳು ಸಾಕುತ್ತಾರೆ. ಗುಣವಾದ ಮೇಲೆ ಮತ್ತೆ ಕಾಡಿಗೆ ಬಿಡುತ್ತಾರೆ. ಹಾಗಾಗಿ ಮಕ್ಕಳು ಶಾಲೆಯ ಶಿಕ್ಷಣದ ಜೊತೆ ಜೊತೆಗೆ ಬದುಕಿನ ಪಾಠಗಳನ್ನ ಮಾನವೀಯ ಮೌಲ್ಯಗಳನ್ನ ಕಲಿಯುತ್ತಾರೆ. ಇಂತಹ ಗುಣಪಾಠಗಳನ್ನು ಕಲಿಸುವ ಗುರುವಿರುವಾಗ ಮಕ್ಕಳು ಸಹಜವಾಗಿ ಅವರ ಕಡೆಗೆ ಒಲಿಯುತ್ತಾರೆ ಇದು ಉಳಿದ ಶಿಕ್ಷಕರಿಗೆ ಅಸೂಯೆಯನ್ನ ಮೂಡಿಸುತ್ತದೆ.

ಒಂದು ದಿನ ರಾತ್ರಿ ಬೆಳಗಾಗುವುದರೊಳಗಾಗಿ ಸಂಪೂರ್ಣ ತೋಟವನ್ನು ಕೊಚ್ಚಿ ಕೊಚ್ಚಿ ನಾಶ ಮಾಡಲಾಗಿತ್ತು, ಪಂಜರದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಹೊರಬಿಟ್ಟು ನಿರ್ದಾಕ್ಷಿಣ್ಯವಾಗಿ ಸಾಯಿಸಲಾಗಿತ್ತು. ಬೆಳಿಗ್ಗೆ ಇದನ್ನು ನೋಡಿ ಯಾವತ್ತೂ ಅಳದ ನಾನು ಆ ತೋಟದ ನಡುವೆ ನಿಂತು ಗಳಗಳ ಅತ್ತುಬಿಟ್ಟಿದ್ದೆ; ಮಕ್ಕಳು ನನ್ನೊಡನೆ ಅತ್ತುಬಿಟ್ಟಿದ್ದರು. ಆ ಪುಟ್ಟ ಪುಟ್ಟ ಮಕ್ಕಳು ನನಗೆ ಧೈರ್ಯ ತುಂಬಿದರು “ಸರ್, ಇದೇ ಜಾಗದಲ್ಲಿ ಮತ್ತೆ ಹೀಗೆ ತೋಟ ಮಾಡುವ”; ಮಾಡಿ ತೋರಿಸಿದರು ನನ್ನ ವಿದ್ಯಾರ್ಥಿಗಳು. ಅವರು ನನ್ನ ವಿದ್ಯಾರ್ಥಿಗಳಲ್ಲ ನನ್ನ ಗುರುಗಳು, ಹಿತೈಷಿಗಳು, ಸ್ನೇಹಿತರು ಎಲ್ಲಾ. ಅವರಿಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಗುರುವೆ. ಶಾಲೆ ಮತ್ತು ಮಕ್ಕಳು ಎಂದರೆ ನನ್ನದೇ ಸ್ವರ್ಗ. ಬಸ್ಸಿನ ತನಕ ಬಂದು ಬಿಟ್ಟು ಕಂಡಕ್ಟರ್‍ಗೆ ಹೇಳಿ ಹೋಗುತ್ತಾರೆ “ಮೇಸ್ಟ್ರನ್ನ ಜೋಪಾನವಾಗಿ ತಲುಪಿಸು, ಸೀಟು ಮಾಡಿಕೊಡು” ಅಂತಾರೆ.

ಇತ್ತೀಚೆಗೆ ಗಾಯಗೊಂಡ ಮೊಲದ ಮರಿಯೊಂದು ರಘುನಾಥ ಮೇಸ್ಟ್ರನ್ನೇ ಹುಡುಕಿಕೊಂಡು ಬಂದಿದೆ. ಮಕ್ಕಳೊಡನೆ ಸೇರಿ ಅದಕ್ಕೆ ಉಪಚಾರ ಮಾಡಿದರು. ಆ ಮರಿಯನ್ನು ಕನ್ನಡದ ಅದ್ಭುತ ಪುಟಾಣಿ ಮುದ್ದು ತೀರ್ಥಹಳ್ಳಿಗೆ ಅರ್ಪಿಸಿ ಸಾಕಿ, ಚೇತರಿಸಿಕೊಂಡ ಮೇಲೆ ಕಾಡಿಗೆ ಬಿಟ್ಟಿದ್ದಾರೆ. ಇಂತಹ ಒಂದೂವರೆ ಸಾವಿರ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಪಾಪದ ಜೀವಿಗಳು ರಘುನಾಥ ಮೇಸ್ಟ್ರನ್ನ ಹುಡುಕಿಕೊಂಡು ಬರುವುದಲ್ಲ, ಅವುಗಳ ನೋವಿಗೆ ತುಡಿಯುವ ಜೀವ ಇವರಲ್ಲಿತ್ತು.

ಪ್ರಾಣಿಗಳಿಗಷ್ಟೇ ಅಲ್ಲ ಮನುಷ್ಯರ ಕಷ್ಟಗಳಿಗೂ ಮಿಡಿಯುತ್ತೆ ಈ ಮೇಸ್ಟ್ರ ಹೃದಯ. ಕ್ಯಾನ್ಸರ್, ಹೃದ್ರೋಗಿಗಳಿಗೆ ನಮ್ಮ ಮಕ್ಕಳು ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ನಾಟಿವೈದ್ಯವನ್ನು ಬಲ್ಲ ಇವರು ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ನೀಡುತ್ತಾರೆ. ಮಹಿಳೆಯರ ಬಿಳಿಸೆರಗಿಗೆ ಪರಿಣಾಮಕಾರಿ ಔಷಧಿ ನೀಡುವ ಇವರು ಈವರೆಗೆ ಸಾವಿರದ ಇನ್ನೂರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದಾರೆ. ಮಕ್ಕಳಿಗೆ ನಾಟಿವೈದ್ಯವನ್ನು ಕಲಿಸುತ್ತಾರೆ; ಗಿಡಮೂಲಿಕೆಗಳನ್ನು ಗುರುತಿಸುವುದು ಬೆಳೆಸುವುದು ಶಿಕ್ಷಣವನ್ನಾಗಿಸಿಕೊಂಡು. ಶಾಲೆಯಲ್ಲಿಯೇ ಔಷಧಾಲಯವನ್ನು ಸ್ಥಾಪಿಸಿಕೊಂಡಿದ್ದಾರೆ. ಬೆಂಗಳೂರಿನ ಸ್ನೇಹಿತರುಗಳು ಈ ಔಷಧಾಲಯಕ್ಕೆ ಉಚಿತವಾಗಿ ಔಷಧಿಗಳನ್ನು ತಂದುಕೊಡುತ್ತಾರೆ. ಸುತ್ತ ಮುತ್ತಲಿನ ಹಳ್ಳಿಯವರು ಶಾಲೆಗೆ ಬಂದು ಉಚಿತವಾಗಿ ಔಷಧಿ ಪಡೆಯುತ್ತಾರೆ. ಇತ್ತೀಚೆಗೆ ಗೆಳೆಯರೆಲ್ಲ ಸೇರಿಕೊಂಡು ನಾಲ್ಕು ಗಾಲಿಯ ಸ್ಕೂಟರ್ ಮಾಡಿಕೊಟ್ಟಿರುವುದರಿಂದ ಸುತ್ತ ಮುತ್ತಲಿನ ಊರುಗಳಿಗೆ ತಾವೇ ಹೋಗಿ ಉಚಿತವಾಗಿ ಚಿಕಿತ್ಸೆ ನೀಡಿ ಬರುತ್ತಿದ್ದಾರೆ. ತಿಂಗಳೊಂದಕ್ಕೆ ಎರಡುಸಾವಿರ ಕಿಲೋಮೀಟರ್ ಸುತ್ತುತ್ತಾರೆ, ಆದರೆ ಇದ್ಯಾವುದನ್ನೂ ರಘುನಾಥ ಮೇಸ್ಟ್ರು ಸಮಾಜಸೇವೆ ಅಂದುಕೊಳ್ಳುವುದಿಲ್ಲ; ಪ್ರಚಾರವನ್ನು ಬೇಡುವುದಿಲ್ಲ. ಹಾಗಾಗಿ ಅವರಿಗ್ಯಾವ ಪ್ರಶಸ್ತಿಗಳೂ ಬಂದಿಲ್ಲ ಬರುವುದೂ ಇಲ್ಲ.

ಸಾಹಿತಿ ಸ. ರಘುನಾಥ

ಸಾಹಿತ್ಯ ಕ್ಷೇತ್ರದಲ್ಲಿಯೂ ಈ ಒಂಟಿ ಕಾಲಿನ ಮೇಸ್ಟ್ರದ್ದು ಮಹತ್ವದ ಸ್ಥಾನ. ಕನ್ನಡ ಸಾಹಿತ್ಯಲೋಕಕ್ಕೆ 35ಕೃತಿಗಳನ್ನು ನೀಡಿದ್ದಾರೆ. ಕತೆ, ಕವನ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಜಾನಪದ ಸಂಶೋಧನೆ ಮುಂತಾದ ವಿಸ್ತಾರ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಘುನಾಥ ಮೇಸ್ಟ್ರು ಕನ್ನಡ ಮತ್ತು ತೆಲುಗು ಸಾಹಿತ್ಯ ಧಾರೆ ಸದಾ ಹರಿಯಲು ಸೇತುವಾದವರು. ಇನ್ನೂ ಹತ್ತು ಪುಸ್ತಕಗಳಿಗಾಗುವಷ್ಟು ಹಸ್ತಪ್ರತಿ ಹಿಡಿದು ಪ್ರಕಾಶಕರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.
ಒಂದು ಕಾಲಿನ ಮೇಲೆ ನಡೆಯುತ್ತಾ ಧಾವಂತದ ಸಮಾಜದ ನಡುವೆ ಆಮೆ ವೇಗದಲ್ಲಿ ಸಾಗುತ್ತಾ ಈಸಬೇಕು ಇದ್ದು ಜಯಿಸಬೇಕು ಎಂಬಂತೆ ತನ್ನ ಸುತ್ತಲಿನ ಜಗತ್ತಿನ ನೋವು ನಲಿವುಗಳಿಗೆ ತನ್ನನ್ನೇ ಅರ್ಪಿಸಿಕೊಂಡಿರುವ ರಘುನಾಥ ಮೇಸ್ಟ್ರನ್ನ ಅಕ್ಷರಗಳ ಅಂಕೆಯಲ್ಲಿ ಹಿಡಿದಿರಿಸುವುದೆಂದರೆ ಅದೊಂದು ಪಕ್ಷಿನೋಟವಾದೀತು ಅಷ್ಟೇ. ಸಣ್ಣ ಪುಟ್ಟ ಸ್ಟಂಟುಗಳನ್ನು ಮಾಡಿ ಸಮಾಜಸೇವೆ ಎಂದು ಕರೆಯಿಸಿಕೊಂಡು ಪೋಸು ನೀಡುತ್ತಾ ಇರಬರುವ ಪ್ರಶಸ್ತಿಗಳಿಗೆ ಅರ್ಜಿಹಾಕಿ ಪ್ರಶಸ್ತಿ ಪಡೆಯುವ ಕಿಡಿಗೇಡಿಗಳ ನಡುವೆ ಈ ಸರ್ಕಾರಿ ಶಾಲೆಯ ಮೇಸ್ಟ್ರು ಭಿನ್ನವಾಗಿ ಕಾಣಿಸುವುದಿಲ್ಲವೆ? ತಾನು ಮಾಡುತ್ತಿರುವುದು ಸಮಾಜಸೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಾನು ಬದುಕುವುದೇ ಹಾಗೆ ಎಂದು ನಂಬಿಕೊಂಡಿರುವವರು ಅವರು. ಹಾಗಾಗಿ ತಾನು ಮಾಡಿದ ಯಾವ ಕಾರ್ಯಕ್ಕೂ ದಾಖಲೆಗಳನ್ನು ಉಳಿಸಿಕೊಂಡಿಲ್ಲ. ಮರವೂ ಹಾಗೆ ತಾನು ಯಾರು ಯಾರಿಗೆ ಹಣ್ಣು ನೀಡಿದ್ದೇನೆ ಎಂದು ಬರೆದಿಡುವುದಿಲ್ಲ.

ಈ ಮೇಸ್ಟ್ರು ಇದೇ ವರ್ಷ(2014)ದ ಆಗಸ್ಟ್ ತಿಂಗಳಿನಲ್ಲಿ ಸರ್ಕಾರಿ ಸೇವೆಯಿಂದಷ್ಟೇ ನಿವೃತ್ತರಾಗುತ್ತಿದ್ದಾರೆ. ಈ ಕಡೆಗಾಲದಲ್ಲಿಯಾದರೂ ಸರ್ಕಾರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ತನ್ನ ಋಣವನ್ನು ತೀರಿಸಲಿ.

“ನಾನು ಕುಂಟಿದರೂ, ನನ್ನ ದಾರಿ ಕುಂಟುವುದಿಲ್ಲ” -ಸ. ರಘುನಾಥ
ಇತ್ತೀಚೆಗೆ ಬಂದ ಪ್ರಶಸ್ತಿ
ಶ್ರೀನಿವಾಸಪುರದಿಂದ ಬೆಂಗಳೂರಿಗೆ ಕೂಲಿಗೆ ಹೋಗುವ ಹೆಂಗಸೊಬ್ಬರು ಸೆರಗಿನಲ್ಲಿ ಒಂದೇ ಒಂದು ದಾಳಿಂಬೆ ಹಣ್ಣನ್ನು ತಂದು ಕೊಡುತ್ತಾರೆ. ನಿನ್ನ ಮಕ್ಕಳಿಗೆ ಕೊಡಮ್ಮ ಎಂದರೆ, “ಕಲಾಸಿಪಾಳ್ಯಕ್ಕೆ ಆಟೋದಲ್ಲಿ ಹೋಗಿ ಇದನ್ನ ನಿಮಗಂತ ತಂದಿದ್ದೇನೆ ಸರ್, ನೀವು ನನ್ನನ್ನು ಬದುಕಿಸಿದ್ದೀರಿ ನೀವು ತಿನ್ನಲೇಬೇಕು” ಎಂದು ಮೇಸ್ಟ್ರು ಹಣ್ಣು ತಿನ್ನುವುದನ್ನು ನೋಡಿ ಸಂತಸಪಟ್ಟು ಆ ಮಹಿಳೆ ಮರಳಿದರಂತೆ. ಅದಕ್ಕೆ ಸ. ರಘುನಾಥ ಮೇಸ್ಟ್ರು ಕೇಳುತ್ತಾರೆ “ಜಗತ್ತಿನ ಯಾವ ಮೇಸ್ಟ್ರಿಗೆ ಸಿಕ್ಕಿದೆ ಇಂತಹ ಪ್ರಶಸ್ತಿ ಗುರುವೆ? ಈ ನಾಡಿನ ನೂರಾರು ಜನರ ಋಣಭಾರವನ್ನು ಹೊತ್ತಿರುವ ನಾನೇ ಧನ್ಯ” ಎನ್ನುತ್ತಾರೆ ಅಭಿಮಾನದಿಂದ.
(ನಮ್ಮ ಮಕ್ಕಳಿಗೆ ಸಹಾಯ ಮಾಡಬಯಸುವವರಿಗಾಗಿ ಸ. ರಘುನಾಥ ಅವರ ದೂರವಾಣಿ ಸಂಖ್ಯೆ :9980593921)



ವಿದ್ಯಾರ್ಥಿಗಳ ಕಣ್ಣಲ್ಲಿ ರಘುನಾಥ ಮೇಸ್ಟ್ರು

ರಜಾಕ್ ಸಾಬ್

ರಜಾಕ್ ಸಾಬ್: ನಾವು ಆಂಧ್ರದಿಂದ ಬಂದು ಟೆಂಟುಗಳನ್ನ ಹಾಕ್ಕೊಂಡು ಗೌನಿಪಲ್ಲಿಯಲ್ಲಿ ವಾಸ ಇದ್ದಿದ್ವು. ನಮಗೆ ಮನೆ ಇರಲಿಲ್ಲ. ರಘುನಾಥ ಸರ್ ನಮ್ಮ ಟೆಂಟಿನ ಹತ್ತಿರ ಬಂದು ನಮಗೆ ಊಟ, ಬಟ್ಟೆ ಕೊಟ್ಟು ಶಾಲೆಗೆ ಸೇರಿಸಿಕೊಂಡ್ರು. ನಾವು ತುಂಬಾ ಬಡವರು ನಮಗೆ ಸೋಪು, ಬಟ್ಟೆ, ಪೇಸ್ಟಿಂದ ಹಿಡಿದು ಶಾಲೆಗೆ ಹೋಗೊದಕ್ಕೆ ಬೇಕಾದ ಎಲ್ಲವನ್ನೂ ಸರ್ ಕೊಡಿಸ್ತಿದ್ರು. ನಾನು ಹೈಸ್ಕೂಲಿನವರೆಗೆ ಓದಿದ್ದೆ. ನಮ್ಮ ಮಕ್ಕಳೂಗೆ ನಾನೇ ಮೊದಲನೆಯವನು. ನನಗೀಗ ಮದುವೆಯಾಗಿದೆ ಮಗುವಿದೆ. ನಾನೀಗ ಇಡೀ ಶ್ರೀನಿವಾಸಪರ ತಾಲೂಕಿಗೆ ಹೋಲ್‍ಸೇಲ್ ತೆಂಗಿನಕಾಯಿ ವ್ಯಾಪಾರಿ. ಆಗಾಗ ಹೋಗಿ ಸರ್ ಅವರನ್ನ ಮಾತಾಡಿಸಿಕೊಂಡು ಬರ್ತಾ ಇರ್ತೇನೆ. ಅಲೆಮಾರಿಯಾಗಿದ್ದ ನನ್ನ ಬದುಕನ್ನ ಬದಲಿಸಿದವರು ರಘುನಾಥ ಸರ್.

ನಂದಿನಿ


ನಂದಿನಿ: ನನ್ನ ಹೆಸರು ನಂದಿನಿ. ದ್ವಿತೀಯ ಬಿಎಸ್ಸಿ ಓದುತ್ತಾ ಇದ್ದೀನಿ. ನಾನೂ ನಮ್ಮ ಮಕ್ಕಳು ಬಳಗದಲ್ಲಿದ್ದೀನಿ. ನಾನಿಂದು ಬದುಕಿದ್ದೀನಿ ಅಂದ್ರೆ ಅದಕ್ಕೆ ರಘುನಾಥ ಸರ್ ಕಾರಣ. ನಾನು ಚಿಕ್ಕಂದಿನಲ್ಲೇ ಹೃದಯದ ಸಮಸ್ಯೆಯಿಂದ ಬಳಲುತ್ತಾ ಇದ್ದೆ. ನಮ್ಮಪ್ಪ ಬಡವರು, ಅವರಿಂದ ನನಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ನಾನೊಮ್ಮೆ ನೋವಿಂದ ತರಗತಿಯಲ್ಲಿ ಬಿದ್ದೋಗಿದ್ದೆ. ಆಗ ರಘುನಾಥ ಸರ್ಗೆ ನನ್ನ ಸಮಸ್ಯೆ ಗೊತ್ತಾಗಿ ನನಗೆ ಆಪರೇಷನ್ ಮಾಡಿಸಿದ್ರು. ನಮ್ಮಿಂದ ಒಂದ್ರೂಪಾಯಿ ಕೂಡ ತಗೊಂಡಿಲ್ಲ. ನನ್ನನ್ನ ಈಗಲೂ ಓದಿಸುತ್ತಾ ಇದ್ದಾರೆ. ನನಗೆ ಒಬ್ಬಳಿಗಲ್ಲ ನನ್ನಂತ ನೂರಾರು ಮಕ್ಕಳಿಗೆ ಅವರು ಓದುವುದಕ್ಕೆ ಬೇಕಾದ ಎಲ್ಲಾ ಸಹಾಯ ಮಾಡುತ್ತಾರೆ. ಈ ವರ್ಷ ಸರ್ ನಿವೃತ್ತಿಯಾಗುತ್ತಾರೆ ಎಂಬುದೇ ಬಹಳ ದುಃಳದ ಸಂಗತಿ. ನಮ್ಮಂತಹ ಮಕ್ಕಳಿಗೆ ಬಟ್ಟೆ ಪುಸ್ತಕ ಫೀಸ್ ಎಲ್ಲಾ ಕೊಟ್ಟು ಓದಿಸ್ತಾ ಇರ್ತಾರೆ. ನಮಗೆ ಹಣವನ್ನ ಜಾಗ್ರತೆಯಿಂದ ಖರ್ಚು ಮಾಡುವುದನ್ನ ಹೇಳಿಕೊಡ್ತಾರೆ. ಟೈಲರಿಂಗ್ ಕಲಿಸ್ತಾರೆ. ಬೇರೆ ಮೇಸ್ಟ್ರುಗಳು ಅವರ ಬದುಕನ್ನಷ್ಟೇ ನೋಡಿಕೊಳ್ತಾರೆ ಆದರೆ ರಘುನಾಥ ಸರ್ ಮಕ್ಕಳಿಗೋಸ್ಕರ ಬದುಕ್ತಾರೆ.

ಮಣಿಕಂಠ


ಮಣಿಕಂಠ : ನಾನು ಒಂಬತ್ತನೇ ತರಗತಿ ಓದುತ್ತಾ ಇದ್ದೀನಿ. ನಾನು ಐದನೇ ತರಗತಿಗೆ ಬಂದಾಗ ರಘುನಾಥ ಸರ್ ಅವರನನು ನೋಡಿ ತುಂಬಾ ಹೆದ್ರಿಕೋತಾ ಇದ್ದೆ. ಚನ್ನಾಗಿ ಓದದವರಿಗೆ ಅವರು ಹೊಡಿತಾರೆ ಅಂತ ಕೇಳಿದ್ದೆ. ಆಮೇಲೆ ಸರ್ ಅವರೇ ಕರೆದು ಯಾಕೆ ಹೆದ್ರಿಕೋತಾ ಇದ್ದೀಯಾ ನಾನೇನೂ ಮಾಡಲ್ಲ ಅಂದ್ರು. ನಮ್ಮ ಮನೆಯಲ್ಲಿ ತುಂಬಾ ಕಷ್ಟ. ಅಪ್ಪ ಅಮ್ಮ ಶಾಲೆಗೆ ಬಂದು ನನ್ನೂ ನನ್ನ ತಮ್ಮನ್ನೂ ಶಾಲೆ ಬಿಡಿಸುವುದಾಗಿ ಹೇಳಿದ್ರು. ಅದಕ್ಕೆ ರಘುನಾತ ಸರ್ ನೀವೇನೂ ಚಿಂತೆ ಮಾಡಬೇಡಿ ನಾನು ಓದಿಸ್ತೀನಿ ಮಕ್ಕಳನ್ನ ಅಂದ್ರು, ನಾವಿಬ್ರು ಅಲ್ದೆ ನಮ್ಮೂರಲ್ಲಿ ಹದಿನೈದು ಮಕ್ಕಳನ್ನ ಸರ್ ಓದಿಸ್ತಾ ಇದ್ದಾರೆ. ಶಾಲೆಯಲ್ಲಿ ನಾವು ಕೈತೋಟ ಮಾಡಿದ್ದೀವಿ. ಅಲೊವೇರಾದಿಂದ ಶಾಂಪು ತಯಾರಿಸ್ತೀವಿ. ಮೊಲ ಮತ್ತೆ ಜಿಂಕೆಮರಿಗಳನ್ನ ಸಾಕಿದ್ದೀವಿ. ಅವು ದೊಡ್ಡವಾದ ಮೇಲೆ ಕಾಡಿಗೆ ಬಿಟ್ಟುಬಂದಿದೀವಿ.

-ಸಂತೋಷ ಗುಡ್ಡಿಯಂಗಡಿ

Saturday, March 28, 2015

ಸರ್ಕಾರಿ ಶಾಲೆಗಳು ; ರಂಗಚಟುವಟಿಕೆಗಳು

(ಈ ಲೇಖನವು ನಾಗತೀಹಳ್ಳಿ ಹಬ್ಬದ ನೆನಪಿಗಾಗಿ ತಂದಿರುವ 'ಗ್ರಾಮಮುಖಿ' ನೆನಪಿನ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)
ಸರ್ಕಾರಿ ಪ್ರೌಢ ಶಾಲೆ ರಾಜಾಪುರ, ಗುಲ್ಬರ್ಗ ಜಿಲ್ಲೆಯ ಮಕ್ಕಳು

ಹೊಸದಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ಆಯ್ಕೆಗೊಂಡವರಿಗೆ ಮಯ್ಸೂರು ಡಯಟ್ ಏರ್ಪಡಿಸಿದ್ದ ಬುನಾದಿ ತರಬೇತಿಯಲ್ಲಿ “ಶಿಕ್ಷಣದಲ್ಲಿ ರಂಗಕಲೆ” ವಿಚಾರವಾಗಿ ಮಾತನಾಡುವ ಅವಕಾಶ ನನಗೆ ಒದಗಿ ಬಂತು. ಮೊದಲೇ ಅವರೆಲ್ಲ ಶಿಕ್ಷಕರಾಗಿ ಆಯ್ಕೆಗೊಂಡವರು. ಅವರ ಮುಂದೆ ನಾನು ನಿಲ್ಲಬೇಕೆಂದರೆ ಅವರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಿಲು ಸಮರ್ಥನಾಗಿರಬೇಕು ಎಂದು ಸಾಕಷ್ಟು ತಯಾರಾದೆ. ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ತಲಾ ಒಂದೊಂದು ಗದ್ಯ, ಪದ್ಯ ಪಾಠಗಳನ್ನು ಆಯ್ಕೆ ಮಾಡಿಕೊಂಡೆ. ಅವರ ಮುಂದೂ ನಿಂತೆ. ನನ್ನನ್ನು ಕಂಗೆಡಿಸುವಂತ ಒಂದೂ ಪ್ರಶ್ನೆ ಹುಟ್ಟಲಿಲ್ಲ ಅಲ್ಲಿ. ಮಕ್ಕಳೇ ನಮ್ಮನ್ನ ಆಗಾಗ ತಬ್ಬಿಬ್ಬುಗೊಳಿಸುತ್ತವಲ್ಲ ಎಂದುಕೊಂಡೆ! ನನ್ನ ತರಗತಿ ಮುಗಿದ ಮೇಲೆ ಆಯೋಜಕರು ಆ ಶಿಕ್ಷಕರಿಗೆಲ್ಲ ‘ಬೇರೆ ಶಿಕ್ಷಕರು, ಇವರು ಪಾಠ ಮಾಡುವುದು ಬಿಟ್ಟು ನಾಟಕ ಮಾಡುತ್ತಾರಲ್ಲ ಎಂದುಕೊಂಡರೂ ಪರವಾಗಿಲ್ಲ ನಿಮ್ಮ ತರಗತಿಗಳಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿ’ ಎಂದೂ, ಆಚೆ ಬಂದ ಮೇಲೆ ‘ಇವರೆಲ್ಲ ಹೊಸ ಶಿಕ್ಷಕರು ಇನ್ನೂ ಇಲಾಖೆಯ ಒಳಗೆ ಕಾಲಿರಿಸಿಲ್ಲ ಆಗಲೇ ಇವರಲ್ಲಿ ಬಹುತೇಕರಿಗೆ ಪಾಠ ಮಾಡುವ ಉತ್ಸಾಹವೇ ಇಲ್ಲ’ ಎಂದು ನಿರಾಶರಾಗುತ್ತಾರೆ ಆಯೋಜಕರು.

ನನಗೆ ಅನ್ನಿಸುವುದು, ಶಾಲೆಗಳಲ್ಲಿ ರಂಗಚಟುವಟಿಕೆ ಎಂದರೆ ಅಲ್ಲೊಬ್ಬ ನಾಟಕದ ಮೇಸ್ಟ್ರಿದ್ದು ಪ್ರತಿಭಾಕಾರಂಜಿಗೋ, ಶಾಲಾ ವಾರ್ಷಿಕೋತ್ಸವಕ್ಕೋ ಎರಡು ನಾಟಕಗಳನ್ನು ಆಡಿಸಿಕೊಂಡಿರುವುದೇ ರಂಗಚಟುವಟಿಕೆಯೇ? ಹಾಗಾದರೆ ಶಾಲೆಗಳಲ್ಲಿ ರಂಗಚಟುವಟಿಕೆಗಳು ಹೇಗಿರಬೇಕು? ಅದು ಮಕ್ಕಳ ಶಾಲಾ ಕಲಿಕೆಯೊಳಕ್ಕೆ ಹೇಗೆ ಸಂಬಂಧ ಹೊಂದಿರಬೇಕು? ಉಳಿದ ವಿಷಯಗಳು ಬೇರೆ ನಾಟಕವೇ ಬೇರೆ ಎಂತಾದರೆ ಶಿಕ್ಷಣದಲ್ಲಿ ರಂಗಕಲೆ ಎಂಬ ತರಬೇತಿ ಏಕೆ ಬೇಕು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತದೆ.

ಮಂಗಳೂರಿನ ಸ್ವರೂಪ ಸಂಸ್ಥೆ ಪ್ರೌಢ ಶಾಲಾ ಹಂತದ ಗಣಿತ, ವಿಜ್ಞಾನವನ್ನೂ ಒಳಗೊಂಡು ಎಲ್ಲಾ ವಿಷಯಗಳ  ಪಾಠಗಳನ್ನು ನಾಟಕವನ್ನಾಗಿ ರೂಪಾಂತರಿಸಿಕೊಂಡು ಆ ಮೂಲಕ ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡುತ್ತಿದೆ. ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ‘ಶಿಕ್ಷಣದಲ್ಲಿ ರಂಗಕಲೆ’ ಕಾರ್ಯಾಗಾರದಲ್ಲಿ ಗಣಿತದ ಶಿಕ್ಷಕರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಬಹಳ ವಿಶಿಷ್ಟವಾದದ್ದು: “ನಾನು ಇದುವರೆಗೆ ಗಣಿತ ಕಷ್ಟ ಎಂದುಕೊಂಡಿದ್ದೆ; ಈಗ ಗೊತ್ತಾಯಿತು ಗಣಿತ ಕಷ್ಟ ಅಲ್ಲ ಗಣಿತದ ಮೇಸ್ಟ್ರು ಕಷ್ಟ”. ಈ ಎರಡೂ ಉದಾಹರಣೆಯಲ್ಲಿ ‘ಕಷ್ಟ’ ಎನ್ನುವುದನ್ನು ಸುಲಭವಾಗಿಸಿಕೊಳ್ಳುವ ತಂತ್ರಕ್ಕೆ ರಂಗಕಲೆಯನ್ನು ಬಳಸಿಕೊಳ್ಳಲಾಗಿತ್ತು. ಅಂದರೆ ಶಾಲೆಯಲ್ಲಿ ಯಾವುದೋ ನಿರ್ದಿಷ್ಟÀ ಪಠ್ಯವನ್ನಾಯ್ದುಕೊಂಡು ನಾಟಕವಾಡುವುದೇ ರಂಗಚಟುವಟಿಕೆಯಲ್ಲ; ಒಬ್ಬ ಶಿಕ್ಷಕ ಪಾಠ ಮಾಡುವ ಪ್ರಕ್ರಿಯೆಯಲ್ಲಿ ತನ್ನನ್ನು ಸೃಜನಶೀಲವಾಗಿ ತೊಡಗಿಸುಕೊಳ್ಳುವುದೂ ರಂಗಚಟುವಟಿಕೆಯಾಗಬಹುದು. ಇದಕ್ಕಾಗಿಯೇ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ‘ಶಿಕ್ಷಣದಲ್ಲಿ ರಂಗಕಲೆ’ ಎಂಬ ತರಬೇತಿಯನ್ನು ಆಗಾಗ ನೀಡುತ್ತಿದೆ. ಆದರೆ ಶಿಕ್ಷಕರು ಇದನ್ನೊಂದು ಮಾಮೂಲಿ ತರಬೇತಿಯನ್ನಾಗಿ ಗಣಿಸಿದ್ದಾರೆಯೆ ಹೊರತು, ತಾನು ಮಕ್ಕಳ ಮುಂದೆ ಸೃಜನಶೀಲವಾಗಿ ತೆರೆದುಕೊಳ್ಳುವುದಕ್ಕಿರುವ ಮೆಟ್ಟಿಲು ಎಂದು ಭಾವಿಸಿಕೊಂಡಿಲ್ಲ. ಹಾಗಾಗಿ ಸರ್ಕಾರಿ ಶಾಲಾ ಮೇಸ್ಟ್ರುಗಳು ಮಕ್ಕಳಿಗೆ ಕಷ್ಟವಾಗುತ್ತಲೇ ಇದ್ದಾರೆ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಡ್ಲಘಟ್ಟ ಮಕ್ಕಳ ಶಾಮಂತಿ

ಶಿಕ್ಷಣದಲ್ಲಿ ರಂಗಕಲೆ ಎಂಬ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳದೆಯೇ ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ಇತ್ತೀಚೆಗೆ ನಿರಂತರವಾಗಿ ಸಾಗಿದೆ. ಇದಕ್ಕೆ ಕಾರಣ ಸರ್ಕಾರ ಐದು ವರ್ಷಗಳ ಹಿಂದೆ ಪ್ರೌಢ ಶಾಲೆಗಳಿಗೆ ನಾಟಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು. ಈ ಹಿಂದೆಯೂ ರಾಜ್ಯದ ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ನಾಟಕ ಶಿಕ್ಷಕರಿದ್ದರು. ನೀನಾಸಮ್ ಮುಂತಾದ ರಾಜ್ಯದ ಬೇರೆ ಬೇರೆ ರಂಗಶಾಲೆಗಳಲ್ಲಿ ಕಲಿತು ಬಂದ ಹೊಸ ಉತ್ಸಾಹಿ ಯುವಕ ಯುವತಿಯರ ಪಡೆ ರಂಗಶಿಕ್ಷಕರಾಗಿ ನೇಮಕಗೊಂಡು ಶಾಲೆಗಳಿಗೆ ತೆರಳಿ ಈ ಐದು ವರ್ಷಗಳಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆಂದು ಹೇಳಿಕೊಳ್ಳುವುದಕ್ಕೆ ಆಗದಿದ್ದರೂ, ಸರ್ಕಾರಿ ಶಾಲಾ ರಂಗಭೂಮಿ ಹೊಸ ಆಯಾಮ ಪಡೆಯುವುದು, ಮಕ್ಕಳ ಆಸಕ್ತಿಯ ಕ್ಷೇತ್ರಗಳ ಹುಡುಕಾಟ ಇದರಿಂದ ಸಾಧ್ಯವಾಗಿದೆ ಎಂದು ಧೈರ್ಯವಾಗಿ ಹೇಳಬಹುದು. ನಾಟಕ ಶಿಕ್ಷಕರಲ್ಲದಿದ್ದರೂ ಹಲವಾರು ಉತ್ಸಾಹಿ ಮೇಸ್ಟ್ರುಗಳು ಅಲ್ಲಲ್ಲಿ ರಂಗಕಲೆಯನ್ನು ಶಾಲೆಗಳಲ್ಲಿ ಜೀವಂತವಾಗಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹಲವಾರು ಜನ ಪ್ರಾಥಮಿಕ ಶಾಲಾ ಶಿಕ್ಷಕರು ಒಂದು ವರ್ಷದ ನಿಯೋಜನೆಯೊಂದಿಗೆ ನೀನಾಸಮ್ ಪದವಿ ಪಡೆದು ಬಂದು ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಉಡುಪಿ ಜಿಲ್ಲಾ ಪ್ರತಿಭಾಕಾರಂಜಿ ನಾಟಕ ಸ್ಪರ್ಧೆ ಎಂದರೆ ಅದೊಂದು ಮಕ್ಕಳ ನಾಟಕೋತ್ಸವದಂತೆಯೇ ಇರುತ್ತದೆ; ಅಷ್ಟು ಗುಣಮಟ್ಟದ ಮಕ್ಕಳ ನಾಟಕಗಳು ಅಲ್ಲಿ ತಯಾರಾಗುತ್ತಿವೆ.

ಕೋಲಾರ ಜಿಲ್ಲೆ ಕಶೆಟ್ಟಿಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೇಣು ಬರೆದ ತೇಜಸ್ವಿ ಚಿತ್ರ


ನಾಟಕದ ಮೇಸ್ಟ್ರು ಎಂದರೆ ನಾಟಕ ಮಾಡಿಕೊಂಡು ಸಂಬಳ ಪಡೆದು ತಮ್ಮ ತಮ್ಮ ಪಾಡಿಗೆ ಇದ್ದುಬಿಡುವುದು, ನಿಮಗೇನು ಯಾರೂ ಕೇಳುವುದಿಲ್ಲ ಯಾವ ದಾಖಲೆಯೂ ಇಡಬೇಕಾಗಿಲ್ಲ, ಅಥವಾ ಬಿಸಿಯೂಟದ ಖರ್ಚು ವೆಚ್ಚ ನೋಡಿಕೊಂಡೋ, ಗ್ರಂಥಾಲಯ ನೋಡಿಕೊಂಡೋ ಇದ್ದುಬಿಡುವುದು, ಹೀಗೆ ಸಂಬಳಕ್ಕೊಂದು ಜನ ಎಂಬಂತ ಮೂದಲಿಕೆಯನ್ನ ಹುಸಿ ಮಾಡುವಂತೆ ರಾಜ್ಯದ ನಾನಾ ಕಡೆಯಲ್ಲಿ ಕೆಲಸ ಮಾಡುತ್ತಿರುವ ರಂಗಶಿಕ್ಷಕರು ತಮ್ಮ ಸೃಜನಶೀಲತೆಯನ್ನು ತೋರ್ಪಡಿಸುತ್ತಿದ್ದಾರೆ.

ರಂಗಭೂಮಿ ಹೇಳಿಕೇಳಿ ಎಲ್ಲಾ ಕಲೆಗಳನ್ನೂ ಒಳಗೊಂಡ ಸಮಗ್ರ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ, ಚಿತ್ರಕಲೆ ಮುಂತಾದ ಲಲಿತಕಲೆಗಳ ಸಂಗಮ. ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳನ್ನು ನಡೆಸುತ್ತಿರುವ ಬಹುತೇಕ ರಂಗ ಗೆಳೆಯರು, ಅತ್ಯುತ್ಸಾಹದಲ್ಲಿ ಎರಡು ನಾಟಕಗಳನ್ನು ಮಾಡಿಸಿ ಆಮೇಲೆ ಸುಸ್ತಾಗಿ ಕುಳಿತಿಲ್ಲ. ಬದಲಾಗಿ ನಾಟಕ ಎಂದರೆ ಅಭಿನಯ ಚಾತುರ್ಯವನ್ನು ತೋರ್ಪಡಿಸುವ ಕಲೆಯಷ್ಟೇ ಅಲ್ಲ, ಅದೂ ಒಂದು ಕಲಿಕೆ. ಶಾಲಾ ಶೈಕ್ಷಣಿಕ ಶಿಸ್ತಿನ ಆವರಣದೊಳಕ್ಕೆ ನಾಟಕ ಮಾಡುವುದೆಂದರೆ ಅದೊಂದು ಶಿಕ್ಷಣದ ಭಾಗ ಎಂಬುದನ್ನು ದೃಢವಾಗಿ ಕಂಡುಕೊಂಡ ಈ ರಂಗಶಿಕ್ಷಕರು ತಮ್ಮ ತಮ್ಮ ಭಾಗದ ಮಕ್ಕಳ ಮನೋಭಾವವನ್ನು ಅರಿತುಕೊಂಡು ತಮ್ಮದೇ ಆದ ರೀತಿಯಲ್ಲಿ ಪಠ್ಯಕ್ರಮವನ್ನು ವಿನ್ಯಾಸ ಮಾಡಿಕೊಂಡು ಮಕ್ಕಳ ಮುಂದೆ ನಿಂತರು...

ಹಾಗೆ ನಿಂತ ಒಂದಷ್ಟು ಪ್ರಯೋಗಗಳು:

ಸರ್ಕಾರಿ ಪ್ರೌಢ ಶಾಲೆ, ಜಾಕನಪಲ್ಲಿ ಮಕ್ಕಳ ರಂಗತರಬೇತಿ

ಅಶೋಕ ತೊಟ್ನಳ್ಳಿ. ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ ಜಾಕನಪಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಟಕದ ಮೇಸ್ಟ್ರು. ಇವರ ರಂಗಚಟುವಟಿಕೆ ಶಾಲಾ ಆವರಣವನ್ನು ಮೀರಿ ಊರೊಳಗಿನ ಜಾತೀಯ ಕಟ್ಟಳೆಯನ್ನು ಒಡೆಯುವ ಪ್ರಯತ್ನದಲ್ಲಿ ಸಾಗಿದೆ. ಆ ನಿಟ್ಟಿನಲ್ಲಿ ಒಂದಷ್ಟು ಯಶಸ್ವಿಯೂ ಆಗಿದೆ. ಊರ ದೇವರ ಕಟ್ಟೆಯ ಮೇಲೆ ನಾಟಕವಾಡುವಂತಹ ಸನ್ನಿವೇಶ ನಿರ್ಮಾಣವಾದಾಗ ಕೆಳಜಾತಿಯ ಮಕ್ಕಳು ಕಟ್ಟೆಯ ಬಳಿ ಸುಳಿಯಲು ಹಿಂಜರಿದರು. ಮೇಲ್ಜಾತಿ ಮಕ್ಕಳು ಊರ ಗೌಡರನ್ನು ಒಪ್ಪಿಸಿ ನಾಟಕವಾಡಿಯೇ ತೀರಿದರು. ಅಂದಿನಿಂದ ಅಲ್ಲಿ ಎಲ್ಲಾ ಜಾತಿಯ ಮಕ್ಕಳು ಆಟವಾಡುವುದು ಸಾಗಿದೆ. ಅಶೋಕ ತಿಂಗಳಿಗೊಮ್ಮೆ ಊರವರನ್ನೆಲ್ಲಾ ಸೇರಿಸಿ ‘ತಿಂಗಳ ಸಂಜೆ’ ಎನ್ನುವ ಕಾರ್ಯಕ್ರಮವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಶಾಲಾ ವೇದಿಕೆಯಲ್ಲಿ ಹಳ್ಳಿಯ ಜನರು ತಾವು ಮರತೇ ಬಿಟ್ಟಿದ್ದ ಹಾಡು ಕುಣಿತ, ಕೋಲಾಟವನ್ನು ಮತ್ತೆ ಆಡುವುದಕ್ಕೆ ಆರಂಭಿಸಿದ್ದಾರೆ. ನಿರಂತರವಾದ ಚಟುವಟಿಕೆಯು ಶಾಲೆಯನ್ನು ಒಂದು ಸಾಂಸ್ಕøತಿಕ ಕೇಂದ್ರವನ್ನಾಗಿ ರೂಪಿಸುತ್ತಿದೆ. ಮಕ್ಕಳು ನಾಟಕದಲ್ಲಿ ಸತತ ಎರಡು ವರ್ಷಗಳಿಂದ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದು ಹೆಸರು ಮಾಡಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ ಕ್ಯಾಲ್ಕೊಂಡ ಮಕ್ಕಳ ನಾಟಕ

ಕೃಷ್ಣಮೂರ್ತಿ ಮೂಡಬಾಗಿಲು : ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕ್ಯಾಲ್ಕೊಂಡದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಕಳೆದ ಐದು ವರ್ಷಗಳಿಂದ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಈ ಸರ್ಕಾರಿ ಶಾಲೆಯ ಮಕ್ಕಳದ್ದೇ ಪಾರಮ್ಯ. ಅಭಿನಯವೇ ನಾಟಕ ಮತ್ತು ನಟನ ಬಹುಮುಖ್ಯ ಆಸ್ತಿ ಎಂಬುವುದನ್ನು ಸಾಬೀತು ಮಾಡುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೃಷ್ಣಮೂರ್ತಿ ರಂಗಸಜ್ಜಿಕೆ, ರಂಗಪರಿಕರ ಮುಂತಾದವುಗಳಿಗೆ ಆನಂತರದ ಸ್ಥಾನ ನೀಡುತ್ತಾರೆ. ರಂಗಶಾಲೆಯೊಂದರ ವಿದ್ಯಾರ್ಥಿಗಳಂತೆ ರಂಗಶಿಸ್ತನ್ನು ಮಕ್ಕಳಿಗೆ ಕಲಿಸುವ ಈ ಮೇಸ್ಟ್ರ ರಂಗಚಟುವಟಿಕೆಯ ಬೆಂಬಲಕ್ಕೆ ಇಡೀ ಊರು ಸದಾ ನಿಂತಿರುತ್ತದೆ.

ಹ್ಯಾಟಿ ರಮೇಶ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇವರು ಶಿಕ್ಷಕರಾದ ಆರಂಭದಲ್ಲಿ ಮೊದಲು ಮಾಡಿದ ಕೆಲಸ ವಿದ್ಯಾರ್ಥಿಗಳ ಹೆತ್ತವರಿಗೆ ರಂಗಭೂಮಿಯ ಮಹತ್ವದ ಕುರಿತು ಕಾರ್ಯಾಗಾರ ನಡೆಸಿದ್ದು. ನಿರಂತರವಾಗಿ ನಾಟಕದ ಚಟುವಟಿಕೆಯ ಜೊತೆ ಜೊತೆಗೆ “ಅರಳು ಮೊಗ್ಗು” ಮಕ್ಕಳ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ನಾಟಕ ಅನ್ನುವುದು ಮಕ್ಕಳ ಕಲಿಕೆಗೂ ಹೇಗೆ ನೆರವಾಗಬಲ್ಲುದು ಎಂಬ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ರಮೇಶ್, ಮಕ್ಕಳಲ್ಲಿನ ಏಕಾಗ್ರತೆ, ಕಲಿಕಾಸಕ್ತಿ ಬೆಳೆಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಗೋಪಾಲಕೃಷ್ಣ : ದಕ್ಷಿಣಕನ್ನಡ ಜಿಲ್ಲೆಯ ಅದ್ಯಪಾಡಿ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಚಿತ್ರಕಲೆ ಮತ್ತು ರಂಗಕಲೆ ಕಲಿಕೆಗೆ ಹೇಗೆ ಪೂರಕವಾಗಬಹುದು ಎಂಬುದನ್ನು ತನ್ನ ಅಪರೂಪದ ಕಲಿಕಾ ಕ್ರಮದ ಮೂಲಕ ಹುಡುಕಾಟದಲ್ಲಿ ತೊಡಗಿದ್ದಾರೆ. ಮಕ್ಕಳಿಗಾಗಿ ತಾನೇ ವಿನ್ಯಾಸ ಮಾಡಿಕೊಂಡ ಕಲಿಕಾ ಸಾಮಾಗ್ರಿ, ವಿಭಿನ್ನ ಪ್ರಶ್ನೆಪತ್ರಿಕೆಗಳು ಅವರ ಹುಡುಕಾಟಕ್ಕೆ ಸಾಕ್ಷಿ. ಮಕ್ಕಳಿಂದ ಕಥೆ, ಕವನ ಬರೆಯಿಸಿ ಅವುಗಳನ್ನು ರಂಗಕ್ಕೆ ಅಳವಡಿಸಿ ಶಾಲೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರತಿಭಾಕಾರಂಜಿಯಂತಹ ಸ್ಫರ್ಧೆಗಳಲ್ಲಿ ಬೇರೆ ಬೇರೆ ಶಾಲೆಯ ಮಕ್ಕಳು ಒಂದಾಗಿ ಸಹಕಾರ ಮನೋಭಾವದಿಂದ ಬೆರೆಯುವಂತಾಗಬೇಕು ಎಂದು ಮಕ್ಕಳನ್ನು ತಯಾರುಗೊಳಿಸಿರುವ ಗೋಪಾಲ್, ತಮ್ಮ ಮಕ್ಕಳು ಮಾತ್ರ ಬೇರೆ ಮಕ್ಕಳಿಗೆ ಸಹಾಯ ಮಾಡುತ್ತಾರೆ; ಉಳಿದೆಲ್ಲ ಮಕ್ಕಳು ಪ್ರತಿಭಾಕಾರಂಜಿಯನ್ನು ಮಕ್ಕಳ ನಡುವಿನ ಯುದ್ಧ ಅನ್ನುವ ಹಾಗೆ ಭಾವಿಸುತ್ತಾರೆ ಎಂದು ಸಂಕಟಪಡುತ್ತಾರೆ.

ಚಿತ್ರಾ ವಿ. : ಧಾರವಾಡ ಜಿಲ್ಲೆಯ ಮನುಗುಂಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕಿಯಾಗಿರುವ ಚಿತ್ರಾ, ರಂಗಭೂಮಿಯ ವಾತಾವರಣ ನಿರ್ಮಾಣ ಮಾಡಲು ಹೆಣಗಾಡಿ ಈಗೊಂದು ರೂಪಕ್ಕೆ ತಂದುನಿಲ್ಲಿಸಿ ಹೊಸ ಹೊಸ ರಂಗಪ್ರಯೋಗದಲ್ಲಿ ತೊಡಗಿಕೊಂಡಿದ್ದಾರೆ. ಕಿನ್ನರ ಮೇಳದಂತಹ ರಂಗತಂಡಗಳನ್ನು ಶಾಲೆಗೆ ಕರೆಯಿಸಿ ನಾಟಕಗಳನ್ನು ಮಕ್ಕಳಿಗೆ ತೋರಿಸಿದ್ದಾರೆ. ಗೋಕುಲ ನಿರ್ಗಮನ ಮುಂತಾದ ವಿಶಿಷ್ಟ ರಂಗಪ್ರಯೋಗಗಳು, ವಿಭಿನ್ನ ಚಲನಚಿತ್ರಗಳನ್ನು ಶಾಲೆಯ ಪ್ರೊಜೆಕ್ಟರ್ ಬಳಸಿ ಮಕ್ಕಳಿಗೆ ತೋರಿಸಿ ಹೊಸ ಹೊಸ ಅಭಿರುಚಿಗಳನ್ನು ಬೆಳೆಸಿದ್ದಾರೆ.

ಎಸ್. ಕಲಾಧರ್ ಮತ್ತು ದೇವರಾಜ್ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಈ ಜೋಡಿ ಸುತ್ತಮುತ್ತಲ ಶಾಲೆಯ ಮಕ್ಕಳನ್ನು ತಮ್ಮ ಶಾಲೆಗೆ ಆಹ್ವಾನಿಸಿ ಮಕ್ಕಳ ರಂಗೋತ್ಸವವನ್ನು ಆಚರಿಸಿ ಭಾಗವಹಿಸಿದ ಮಕ್ಕಳಿಗೆಲ್ಲ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಾರೆ. ಈ ಜೋಡಿಯ ಅಪರೂಪದ ಕೆಲಸಗಳು ಬೇರೆಯವರಲ್ಲಿ ಹೊಟ್ಟೆಯುರಿಯನ್ನು ತರಿಸಿ ಒಬ್ಬರನ್ನು ಶಾಲೆಯಿಂದ ವರ್ಗಾವಣೆ ಮಾಡಿಸಿಬಿಟ್ಟಿದೆ. ಆದರೂ ಛಲಬಿಡದ ಕಲಾಧರ್ ಶಾಲೆಯಲ್ಲಿದ್ದುಕೊಂಡೆ “ಶಾಮಂತಿ” ಎನ್ನುವ ಮಕ್ಕಳ ಬರಹಗಳ ಅಪರೂಪದ ಪುಸ್ತಕವನ್ನು ವರ್ಷಕ್ಕೊಮ್ಮೆ ಹೊರ ತರುತ್ತಿದ್ದಾರೆ.


ಸರ್ಕಾರಿ ಪ್ರೌಢ ಶಾಲೆ, ಹೆಮ್ಮರಗಾಲ ಶಾಲೆಯ ಮಕ್ಕಳ ಪತ್ರಿಕೆ

ಸದಾನಂದ ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕೋಣಿಯಲ್ಲಿ ಇಂಗ್ಲಿಶ್ ಮೇಸ್ಟ್ರು. ಒಂದು ವರ್ಷದ ನಿಯೋಜನೆಯ ಮೇರೆಗೆ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಮುಗಿಸಿಕೊಂಡು ಮರಳಿ ಶಾಲೆಗೆ ಬಂದು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂರಕವಾಗಿ “ಮಿಂಚು” ಎನ್ನುವ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಶ್ರೀಕಾಂತ್ ಕುಮಟಾ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರು. ಮಕ್ಕಳ ಜೊತೆ ಜೊತೆಗೆ ಮುಖವಾಡ ರಚಿಸಿಕೊಂಡು ಅವುಗಳನ್ನೇ ಪಾತ್ರವಾಗಿಸಿಕೊಂಡು ರಂಗಪ್ರಯೋಗಗಳನ್ನು ರೂಪಿಸುತ್ತಾ ಬಂದವರು. ಅವರ ರಂಗಪ್ರಯೋಗಗಳು ಜಾತಿವಾದಿಗಳ ನಿದ್ದೆಗೆಡಿಸಿದ್ದೂ ನಡೆದಿದೆ. ಆದರೆ ಇರುವುದನ್ನ ತೋರಿಸಿಕೊಡಬೇಕು ರಂಗಭೂಮಿ, ಅದು ಕೂಡ ಕಲಿಕೆ ಎಂದು ದೃಢವಾಗಿ ನಂಬಿದ್ದ ಶ್ರೀಕಾಂತ್ ನಾಲ್ಕು ತಿಂಗಳ ಹಿಂದೆ “ಮಲೆನಾಡ ಇಳೆ” ಎಂಬ ಮಕ್ಕಳ ಪತ್ರಿಕೆಯನ್ನೂ ಹೊರಡಿಸುತ್ತಿದ್ದಾರೆ.

ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಮಕ್ಕಳ ಪತ್ರಿಕೆ

ಶಿವಾನಂದ ಸ್ವಾಮಿ : ಮಯ್ಸೂರು ನಗರದ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ರಂಗಶಿಕ್ಷಕರಾಗಿರುವ ಇರುವ ಮಕ್ಕಳ ರಂಗಚಟುವಟಿಕೆಗಳ ಜೊತೆ ಜೊತೆಗೆ ಗೊಂಬೆಯಾಟವನ್ನೂ ಮಾಡಿಸುತ್ತಾ ಬಂದಿದ್ದಾರೆ.

ಗುರುರಾಜ್ ಹೊಸಪೇಟೆ : ಕೊಪ್ಪಳ ಜಿಲ್ಲೆ ಜಹಾಗೀರಗುಡದೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕರಾಗಿರುವ ಇರುವ ‘ಮಕ್ಕಳ ಹೆಜ್ಜೆ ಜಾನಪದದತ್ತ’ ಎಂಬ ಘೋಷಣೆಯೊಂದಿಗೆ ಶಾಲಾ ರಂಗಚಟುವಟಿಕೆಗೆ ಹೊಸ ಆಯಾಮ ನೀಡಿದ್ದಾರೆ. ಇವರೆಲ್ಲರ ಜೊತೆಗೆ ರಾಯಚೂರಿನ ಮಾನ್ವಿಯಲ್ಲಿ ರಾಮಣ್ಣ, ಬಳ್ಳಾರಿಯ ಹೂವಿನಹಡಗಲಿಯಲ್ಲಿ ಅನ್ನಪೂರ್ಣ ದೇಸಾಯಿ, ಅಕ್ಕಮ್ಮ, ಮಡಿಕೇರಿಯಲ್ಲಿ ಪ್ರವೀಣ್ ಕುಮಾರ್ ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸವಿತಾ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮೂಡಲಕೊಪ್ಪಲಿನಲ್ಲಿ ಶಾಂತಾಮಣಿ, ಕೊಟ್ಟೂರಿನಲ್ಲಿ ಶ್ರೀಕಾಂತ್ ದಾವಣಗೆರೆ, ಚನ್ನಗಿರಿಯಲ್ಲಿ ವೆಂಕಟೇಶ್ವರ, ಕುಂದಾಪುರದ ಗುಜ್ಜಾಡಿಯಲ್ಲಿ ವಾಸುದೇವ ಗಂಗೇರ, ಚಾಮರಾಜನಗರ ಜಿಲ್ಲೆಯ ಯಳಂದೂರಿನ ಗುಂಬಳ್ಳಿಯಲ್ಲಿ ಮಧುಕರ ಮಳವಳ್ಳಿ, ಧಾರವಾಡ ಕಲಘಟಗಿಯಲ್ಲಿ ಮಲ್ಲೇಶ ಪಾವಗಡ, ಧಾರವಾಡದಲ್ಲಿ ರಾಘವೇಂದ್ರ ಗುಂಡಬಾಳ, ಗುಲ್ಬರ್ಗದಲ್ಲಿ ರಾಘವೇಂದ್ರ ಹಳೇಪೇಟೆ, ಬೆಂಗಳೂರಿನ ಹೊಸಕೋಟೆಯಲ್ಲಿ ಶ್ಯಾಮಲ ಗುಡ್ಡಿಯಂಗಡಿ, ಭಾನುಪ್ರಕಾಶ್, ತುಮಕೂರಿನಲ್ಲಿ ಗೋಪಾಲಕೃಷ್ಣ, ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಶೇಖರಪ್ಪ, ಹಾನಗಲ್ಲ ತಾಲೂಕಿನಲ್ಲಿ ಈಡಿಗರ ವೆಂಕಟೇಶ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೀತಿ ಇನ್ನೂ ಹಲವಾರು ಜನ ಶಿಕ್ಷಕ ಶಿಕ್ಷಕಿಯರು ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕುಗ್ರಾಮಗಳಲ್ಲಿ ಎಂಬುದು.

ನನ್ನ ಚಟುವಟಿಕೆಯನ್ನೂ ಇಲ್ಲಿ ಪ್ರಸ್ತಾಪಿಸುತ್ತೇನೆ. ನಂಜನಗೂಡಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಂಗಶಿಕ್ಷಕನಾಗಿರುವ ನಾನು, ನಾಟಕವನ್ನು ಆಡುವುದೂ ಕಲಿಕೆ; ನಾಟಕವನ್ನು ನೋಡುವುದೂ ಕಲಿಕೆ ಎಂದು ಭಾವಿಸಿಕೊಂಡಿರುವವನು ಮತ್ತು ನನ್ನ ವಿದ್ಯಾರ್ಥಿಗಳ ರಂಗಚಟುವಟಿಕೆಗಳನ್ನು ಆ ನಿಟ್ಟಿನಲ್ಲಿ ವಿನ್ಯಾಸ ಮಾಡಿಕೊಂಡಿರುವವನು. ಮೇಲೆ ತಿಳಿಸಿರುವಂತಹ ಶಿಕ್ಷಕರೂ ಅಲ್ಲದೆ ಹೆಸರು ಸೂಚಿಸದ ಇನ್ನೂ ಅನೇಕ ಶಿಕ್ಷಕರು ಕೂಡ ಇದನ್ನೇ ನಂಬಿಕೊಂಡಿದ್ದಾರೆಂಬುದು ಅವರೊಡನೆ ಮಾತನಾಡಿದಾಗ ನನ್ನ ಅನುಭವಕ್ಕೆ ಬಂದಿದೆ. ಸಾಹಿತ್ಯ ಓದು, ಬರಹ ಕೂಡ ರಂಗಕಲಿಕೆಯ ಒಂದು ಭಾಗ ಎಂದು ನಂಬಿಕೊಂಡು ಬಂದಿರುವ ನಾನು ಮಕ್ಕಳಲ್ಲಿನ ಕಲ್ಪನಾ ಶಕ್ತಿ ಬೆಳೆಸುವುದಕ್ಕೆ ಸುಳ್ಳು ಕಥೆ ಬರೆಸುವುದು, ಕವಿತೆಗಳನ್ನು ಬರೆಸುವ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಮಕ್ಕಳ ಆ ಕಲಿಕೆಯ ಪ್ರದರ್ಶನಕ್ಕೆ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡು ಹಿಂದೆ “ಹೆಮ್ಮರ” ಈಗ “ಅಳ್ಳೀಮರ” ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೇನೆ. ಮತ್ತು ಶಾಲೆಯಲ್ಲಿ ಮಕ್ಕಳ ರಂಗಚಟುವಟಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟಮಾಡುವುದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಗಿದ್ದನ್ನು ಗಮನಿಸಿದ್ದೇನೆ. ಶಾಲೆಯ ರಜೆಯ ವೇಳೆಯಲ್ಲಿ ರಂಗಶಿಬಿರಗಳನ್ನು ನಡೆಸಿ ಮಕ್ಕಳಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವುದು ನನಗೆ ಸಾಧ್ಯವಾಗಿದೆ.

ರಂಗ ತರಬೇತಿ ಶಿಬಿರ ಎಂದರೆ ಅಲ್ಲಿ ಪೂರ್ಣವಾಗಿ ರಂಗಕ್ಕೆ ಸಂಬಂಧಿಸಿದ ಕಲಿಕೆಗೆ ಮಕ್ಕಳನ್ನು ತೊಡಗಿಸಬಹುದು. ಆದರೆ ಶಾಲೆಗಳಲ್ಲಿ ಅದು ಸಾಧ್ಯವಿಲ್ಲ. ಯಾಕೆಂದರೆ ಶಾಲೆಯ ಚೌಕಟ್ಟು ವಿಭಿನ್ನ ವಿಷಯಗಳ ಕಲಿಕಾವೇದಿಕೆ. ಅಲ್ಲಿ ರಂಗ ಕಲಿಕೆಗೆ ಮಕ್ಕಳನ್ನು ತಯಾರುಗೊಳಿಸಬೇಕೆಂದರೆ ಸಮಯದ ಮಿತಿ ಇದೆ. ಎಲ್ಲಾ ರಂಗಶಿಕ್ಷಕರ ಕೊರತೆ ಎಂದರೆ ಸಮಯದ ಮಿತಿ. ಆದರೆ ಈ ಎಲ್ಲಾ ಶಿಕ್ಷಕರು ಸಮಯದ ಮಿತಿಗೆ ತಮ್ಮನ್ನು ಮಿತಿಗೊಳಿಸಿಕೊಳ್ಳದೆ, ಅದನ್ನು ಮೀರಿ ಶಾಲಾ ಅವಧಿಯ ನಂತರವೂ ರಂಗತಾಲೀಮು ನಡೆಸುವುದರೊಂದಿಗೆ ಮಕ್ಕಳ ಅಭಿರುಚಿಯನ್ನು ಹಿಗ್ಗಿಸುವತ್ತ ಮುನ್ನಡೆದಿದ್ದಾರೆ. ರಂಗಚಟುವಟಿಕೆ ಎಂದರೆ ಅದು ಬರಿಯ ನಾಟಕದ ತಾಲೀಮು ಪ್ರದರ್ಶನವಲ್ಲ; ಬದಲಾಗಿ ಮಕ್ಕಳ ವ್ಯಕ್ತಿತ್ವವಿಕಸನದ ಹೆದ್ದಾರಿ ಎಂಬುದನ್ನು ಅರಿತಿರುವುದು ಅವರ ತರಗತಿಗಳ ವಿನ್ಯಾಸದ ರೂಪುರೇಷೆಗಳಲ್ಲಿ ವೇದ್ಯವಾಗುತ್ತದೆ. ನಾಟಕ ಶಿಕ್ಷಕ ಎಂಬ ಹುದ್ದೆಯನ್ನು ವಾರ್ಷಿಕೋತ್ಸವ, ರಾಷ್ಟ್ರೀಯ ಹಬ್ಬಗಳ ಸಾಂಸ್ಕøತಿಕ ಕಾರ್ಯಕ್ರಮಗಳ ತಯಾರಕ ಎಂಬುದಕ್ಕೆ ಸೀಮಿತಗೊಳಿಸಿಕೊಳ್ಳದೆ, ರಂಗಕಲೆಯ ಜೀವಂತಿಕೆಯ ಅರಿವನ್ನು ಮೂಡಿಸುವ ಪ್ರಯತ್ನ ಈ ಎಲ್ಲರ ಚಟುವಟಿಕೆಗಳಲ್ಲಿ ಎದ್ದು ಕಾಣುತ್ತದೆ. ಒಂದು ವೇಳೆ ಈ ಶಿಕ್ಷಕರು ತಮ್ಮ ಕರ್ತವ್ಯದಿಂದ ವಿಮುಖರಾಗಿಬಿಟ್ಟರೆ ತಮ್ಮ ಸಹೋದ್ಯೋಗಿಗಳ ಕಣ್ಣಲ್ಲಿ ಸಣ್ಣವರಾಗಬೇಕಾಗುತ್ತದೆ. ಆ ಎಚ್ಚರವನ್ನು ರಂಗ ಶಿಕ್ಷಕರು ಕಾಪಾಡಿಕೊಂಡರೆ ಸರ್ಕಾರಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳು ಜೀವಂತವಾಗಿರುತ್ತದೆ.

ಪ್ರತಿಭಾಕಾರಂಜಿ : ಇದು ಮಕ್ಕಳೊಳಗಿನ ಪ್ರತಿಭಾವಿಲಾಸವನ್ನು ತೆರೆದು ಕಾಣಿಸುವ ವೇದಿಕೆ. ಆದರೆ ಶಿಕ್ಷಕರ ಸಣ್ಣತನಗಳು ಮಕ್ಕಳ ಪ್ರತಿಭೆಯ ಕಗ್ಗೊಲೆಯನ್ನು ಮಾಡುತ್ತಿವೆ. ಪ್ರತಿಭಾವಂತ ಮಕ್ಕಳು ಕೆಳಹಂತದ ಸ್ಪರ್ಧೆಗಳಲ್ಲಿಯೆ ನಿರ್ಗಮಿಸುವಂತಾಗುತ್ತಿದೆ. ಮಕ್ಕಳ ಮಧ್ಯದ ಸ್ಪರ್ಧಾಮನೋಭಾವ ಸಂಘರ್ಷದ ರೂಪ ತಾಳಿ, ಬೇರೆ ಬೇರೆ ಶಾಲೆಗಳ ಮಕ್ಕಳು ಒಂದೆಡೆ ಸೇರಿದ್ದರೂ ಒಟ್ಟಿಗೆ ಬೆರೆಯುವುದು ಸಾಧ್ಯವಾಗುತ್ತಿಲ್ಲ. ಪ್ರತಿಭಾಕಾರಂಜಿಯಲ್ಲಿ ಅತಿದೊಡ್ಡ ಸ್ಪರ್ಧೆ ನಾಟಕ. ರಂಗಶಿಕ್ಷಕರಿರುವ ಶಾಲೆಗಳ ಮಕ್ಕಳ ನಾಟಕಗಳು ರಂಗಭೂಮಿಯ ಶಿಸ್ತಿನೊಂದಿಗೆ ರೂಪುಗೊಂಡು ಯಶಸ್ವಿಯಾಗಿದ್ದರೆ, ರಂಗ ಚಟುವಟಿಕೆಯ ಪರಿಚಯವಿಲ್ಲದೆಯೂ ಕೆಲ ಉತ್ಸಾಹಿ ಶಿಕ್ಷಕರು ನಾಟಕಗಳನ್ನು ತಯಾರುಮಾಡಿಕೊಂಡು ಭಾಗವಹಿಸುತ್ತಾರೆ. ಆದರೆ ಇಲ್ಲಿ ರಂಗಶಿಸ್ತಿನ ಯಾವುದೇ ಗಂಧಗಾಳಿಯಿಲ್ಲದ ನಾಟಕಗಳೆ ಮುಂದಿನ ಹಂತಕ್ಕೆ ಹೋಗುವಂತಾಗುತ್ತದೆ. ಕಾರಣ ಶಿಕ್ಷಕರ ಪ್ರಭಾವ. ಇದು ಹೆಚ್ಚಿನ ಎಲ್ಲಾ ಸ್ಪರ್ಧೆಗಳಲ್ಲೂ ಕಂಡು ಬಂದು ಮಕ್ಕಳು ಮಕ್ಕಳನ್ನೇ ದ್ವೇಷಿಸುವಂತಾಗುತ್ತದೆ. ಪ್ರತಿಭಾಕಾರಂಜಿಯಲ್ಲಿ ಮಕ್ಕಳ ನಾಟಕಗಳ ಸ್ಪರ್ಧೆಯನ್ನು ಮಾಡಿಸುವ ಬದಲು ಮಕ್ಕಳ ನಾಟಕೋತ್ಸವ ಮಾಡಿದರೆ ಬೇರೆ ಬೇರೆ ಜಿಲ್ಲೆಗಳ ಮಕ್ಕಳು ಪ್ರೀತಿಯಿಂದ ಬೆರೆತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಬಂಧುತ್ವವನ್ನು ಬೆಳೆಸಿಕೊಳ್ಳುತ್ತಾರೆ. ರಂಗಭೂಮಿಯ ಉದ್ದೇಶವು ಅದೆ. ಬದುಕನ್ನು ತಿಳಿಯುವುದು. ಹಾಗಾದಾಗ ನಮ್ಮ ನಡುವಿನ ಕ್ರೋಧವಳಿದು ಸೌಹಾರ್ದತೆ ಮನೆ ಮಾಡುತ್ತದೆ; ಅದು ಶಿಕ್ಷಣ. ಇಂತಹ ನಾಟಕೋತ್ಸವಗಳು ನಡೆದರೆ ಮಕ್ಕಳು ಬೇರೆ ಬೇರೆ ನಾಟಕಗಳನ್ನು ನೋಡುತ್ತಾರೆ. ನಾಟಕವನ್ನು ನೋಡುವುದು ಎಂದರೆ ಅದೇ ಒಂದು ಕಲಿಕೆ. ಗಂಟೆಗಟ್ಟಲೆ ನಿಂತು ಭಾಷಣವೋ ಉಪನ್ಯಾಸವೋ ಮಾಡಿ ಕಲಿಸುವ ಕ್ರಮಕ್ಕಿಂತಲೂ ನಾಟಕಗಳನ್ನು ಮಾಡಿ, ನೋಡಿ ಕಲಿಸುವ ಕಲಿಕೆ ಮಕ್ಕಳ ಮನೋಲೋಕವನ್ನು ಬಹುಬೇಗ ಪ್ರಭಾವಿಸುತ್ತವೆ.

ಸರ್ಕಾರಿ ಶಾಲೆಗಳಲ್ಲಿ ರಂಗಚಟುವಟಿಕೆಗಳು ನಡೆಯುತ್ತವೆ. ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ರಂಗಶಿಕ್ಷಕರ ಚಟುವಟಿಕೆಗಳನ್ನು ಆಗಾಗ ರಾಜ್ಯದ ದೊಡ್ಡ ಪತ್ರಿಕೆಗಳು ಸುದ್ಧಿ ಮಾಡುತ್ತಿವೆ. ರಂಗಚಟುವಟಿಕೆ ನಡೆÀಸುವುದಕ್ಕೆ ಸಂಪನ್ಮೂಲವೂ ಅಗತ್ಯ. ಸಂಪನ್ಮೂಲವನ್ನು ಕ್ರೋಢೀಕರಿಸುವುದಕ್ಕೆ ಹಣದ ಅಗತ್ಯವು ಇರುತ್ತದೆ. ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ನಡೆಸುವ ಎಲ್ಲಾ ಶಿಕ್ಷಕರ ಅಳಲು ಒಂದೆ, ತಾವು ಏನೇ ಕಾರ್ಯಕ್ರಮ ನಡೆಸಿದರೂ ಅದಕ್ಕೆ ತಮ್ಮ ಜೇಬಿನಿಂದಲೇ ಹಣವನ್ನು ಭರಿಸಬೇಕಾಗುತ್ತದೆ ಎಂಬುದು! ಅದಕ್ಕೆ ಬಹುತೇಕ ರಂಗಶಿಕ್ಷಕರು ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ಕೂಡ! ಒಂದು ಒಳ್ಳೆಯ ಕಾರ್ಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ನಡೆಸುತ್ತಾರೆ ಎಂದರೆ ಅದರ ಕೀರ್ತಿ ಶಾಲೆಗೆ ಸಲ್ಲುವುದು. ತಮ್ಮದೆ ಸಂಬಳದಲ್ಲಿ ಶಾಲೆಯಲ್ಲಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಅದನ್ನು ತಮ್ಮ ಶಾಲೆಯ ಕಾರ್ಯಕ್ರಮ ಎಂದು ಹೆಮ್ಮೆಪಟ್ಟುಕೊಳ್ಳುವ ಈ ರಂಗಶಿಕ್ಷಕರು, ನಾಟಕೋತ್ಸಾಹಿ ಮೇಸ್ಟ್ರುಗಳ ಉತ್ಸಾಹ ಬತ್ತದೆ ಸದಾ ಉಳಿಯಲಿ. ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿ ಸಮರ್ಥವಾಗಿ ಬಳಕೆಯಾಗಲಿ.

ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ರಂಗಚಟುವಟಿಕೆಗಳು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಲಾಖೆ ನೀಡಿ ಗೌರವಿಸಿದೆ. ಆಯಾಯ ಜಿಲ್ಲಾ ಡಯಟ್ ಸಂಸ್ಥೆ ಈ ಶಿಕ್ಷಕರನ್ನು ಸಂಪನ್ಮೂಲವ್ಯಕ್ತಿಗಳನ್ನಾಗಿ ಬಳಸಿಕೊಳ್ಳುತ್ತಿದೆ. ಇಲಾಖೆಯ ಶಿಕ್ಷಣವಾರ್ತೆ ಪತ್ರಿಕೆ ಇವರ ರಂಗಚಟುವಟಿಕೆಗಳನ್ನು ಕುರಿತು ವಿವರವಾದ ಚಿತ್ರ ಲೇಖನಗಳನ್ನು ಪ್ರಕಟಿಸಿದೆ. ಸಂಘ ಸಂಸ್ಥೆಗಳು ನಿರಂತರವಾಗಿ ನಾಟಕಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರುಗಳನ್ನು, ವಿದ್ಯಾರ್ಥಿಗಳನ್ನು ಗೌರವಿಸಿದೆ. ಕಾಲೆಳೆಯುವ ಸಹೋದ್ಯೋಗಿಗಳ ನಡುವೆ ಬೆನ್ನುತಟ್ಟುವ ಸಹೋದ್ಯೋಗಿಗಳ ಸಂಖ್ಯೆಯು ಬೆಳೆಯುತ್ತಿದೆ. ನಾಟಕದ ಪರಿಣಾಮ ಉಳಿದ ಶಿಕ್ಷಕರಿಗೆ ಮನವರಿಕೆಯಾಗುತ್ತಿದೆ.

ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಕೊರತೆ ಎಂದರೆ ರಾಜ್ಯದಲ್ಲಿರುವ ಸಾವಿರಾರು ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ರಂಗಶಿಕ್ಷಕರಿರುವ ಶಾಲೆಗಳ ಸಂಖ್ಯೆ ನೂರನ್ನೂ ದಾಟುವುದಿಲ್ಲ. ರಂಗಕಲೆಯ ಪರಿಚಯ ಕೆಲವೇ ಕೆಲವು ಶಾಲೆಗಳ ಕೆಲವೇ ಕೆಲವು ಮಕ್ಕಳಿಗೆ ತಲುಪುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ರಂಗಚಟುವಟಿಕೆಗಳು ವಿಸ್ತಾರಗೊಳ್ಳಬೇಕಾದರೆ ಸರ್ಕಾರ ಇನ್ನಷ್ಟು ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇತರೆ ವಿಷಯಗಳ ಉತ್ಸಾಹಿ ಶಿಕ್ಷಕರಿಗೆ ಅವರ ಕಾರ್ಯದೊತ್ತಡದ ಮಿತಿಯಿರುತ್ತದೆ. ಹಾಗಾಗಿ ಮಕ್ಕಳಿಗೆ ರಂಗಕಲೆಯ ಸಮಗ್ರ ಪರಿಚಯವಾಗಬೇಕಾದರೆ ಪ್ರತೀ ಶಾಲೆಯಲ್ಲೂ ರಂಗಶಿಕ್ಷಕರಿರಬೇಕು. ರಂಗಚಟುವಟಿಕೆ ಎಂದರೆ ಪ್ರತಿಭಾಕಾರಂಜಿ, ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೆ ಅದೊಂದು ಕಲಿಕೆಯಾಗಬೇಕು. ಆ ನಿಟ್ಟಿನಲ್ಲಿ ಇಲಾಖೆ ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸಬೇಕು. ಆಗ ಶಾಲೆಯ ಉಳಿದ ಶಿಕ್ಷಕರು ಪಠ್ಯೇತರ ಎಂದು ಭಾವಿಸುವ ನಾಟಕ, ನೃತ್ಯ ಮುಂತಾದ ವಿಷಯಗಳಿಗೆ ಮಹತ್ವ ನೀಡಲು ತೊಡಗುತ್ತಾರೆ. ಇದು ಆಗಬೇಕಾದ ದರ್ದು. ಇಲ್ಲವಾದಲ್ಲಿ ರಂಗಚಟುವಟಿಕೆಗಳು ಉಳಿದ ಶಿಕ್ಷಕರಿಗೆ ಸಮಯ ವರ್ಥಮಾಡುವ ವಿಧಾನವಾಗಿ ಕಾಣುತ್ತದೆ.

ಶಾಲೆಯ ಚಟುವಟಿಕೆ ಎಂದರೆ ಅದೊಂದು ಸಮಾಜದ ಚಟುವಟಿಕೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಹಾಗಾಗುತ್ತಿಲ್ಲ. ಶಿಕ್ಷಕರು ಕೂಪಗಳಾಗಿ ತಮ್ಮ ವಿಷಯವೇ ಮೇಲು ಅದಕ್ಕೇ ಹೆಚ್ಚು ಮಹತ್ವ ನೀಡಬೇಕು. ಕ್ರೀಡೆ, ನಾಟಕ, ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಿಗೆ ಪರೀಕ್ಷೆಯಿಲ್ಲ ಹಾಗಾಗಿ ಅವನ್ನು ಕಲಿಯದಿದ್ದರೂ ನಡೆಯುತ್ತದೆ ಎಂಬ ಧೋರಣೆ ಹೊಂದಿದ್ದಾರೆ; ಇದು ಆರೋಪವಲ್ಲ ನಿಜ ಸ್ಥಿತಿ. ನಾಟಕ, ಚಿತ್ರಕಲೆ ಮುಂತಾದ ವಿಷಯಗಳ ಶಿಕ್ಷಕರು ಎಷ್ಟೇ ಅದ್ಭುತವಾಗಿ ಕೆಲಸ ನಿರ್ವಹಿಸಿದರೂ ಶಾಲೆಗಳಲ್ಲಿಯೆ ಅವರಿಗೆ ಬೆನ್ತಟ್ಟುವ ಕೆಲಸ ನಡೆಯುತ್ತಿಲ್ಲ. ನಾಟಕ ಮುಂತಾದ ಕಲೆಗಳು ಮಕ್ಕಳ ಬೆಳವಣಿಗೆಯಲ್ಲಿ, ಮನುಷ್ಯರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂಬ ಅರಿವಿಲ್ಲ. ತಮ್ಮ ದುರಂಹಕಾರದಿಂದಾಗಿ  ಉತ್ತಮ ಕಾರ್ಯಗಳನ್ನು ಕಡೆಗಣಿಸಿಯೋ, ಮುಖ್ಯಶಿಕ್ಷಕರಿಗೆ ಕಿವಿಚುಚ್ಚಿಯೋ ರಂಗಶಿಕ್ಷಕರ, ಉತ್ಸಾಹಿ ಶಿಕ್ಷಕರಿಗೆ ಅಡ್ಡಗಾಲಾಗುತ್ತಿದ್ದಾರೆ. ಇಂತವುಗಳು ನಿಂತರೆ ಸರ್ಕಾರಿ ಶಾಲೆಗಳು ಹೊಸ ಚೈತನ್ಯ ಪಡೆದುಕೊಳ್ಳುತ್ತವೆ. ತಾವೇ ಜ್ಞಾನಿಗಳು ಎಂಬ ಅಹಂಭಾವವನ್ನು ಬಿಟ್ಟು ಪ್ರತಿಭಾವಂತ ರಂಗಶಿಕ್ಷಕರು, ಸಂಗೀತ, ಚಿತ್ರಕಲಾ ಶಿಕ್ಷಕರು ಮುಂತಾದ ಶಿಕ್ಷಕರ ನೆರವನ್ನು ತಮ್ಮ ವಿಷಯಗಳಿಗೆ ಬಳಸಿಕೊಂಡರೆ ಶಾಲಾ ಕಲಿಕೆಯ ಹಳೆಯ ಮಾದರಿಗಳನ್ನು ಮುರಿದು ಹೊಸದಾಗಿ ಕಟ್ಟಬಹುದು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡಮಕ್ಕಳ ಬಾಳಿಗೆ ದೀಪವಾಗಬಹುದು. ಇದರ ಸಂಪೂರ್ಣ ಹೊಣೆಗಾರಿಕೆ ಶಿಕ್ಷಕರದ್ದು.
ಶಿಕ್ಷಣ ಎನ್ನುವುದು ಪಾಠಗಳನ್ನು ಮಾಡಿ ಅಂಕ ಗಳಿಸುವ ಯಂತ್ರಗಳನ್ನು ತಯಾರುಮಾಡುವ ಕಾರ್ಖಾನೆಯಲ್ಲ. ಅದು ಸಮಾಜದ ಸಜ್ಜನರನ್ನು ರೂಪುಗೊಳಿಸುವ ಪ್ರಯೋಗ ಶಾಲೆ. ಈ ಪ್ರಯೋಗ ಶಾಲೆಗೆ ಜೀವಂತಿಕೆಯ ಸ್ಪರ್ಶ ಬೇಕಾಗಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಈ ಜೀವಂತಿಕೆ ಕಳೆದು ಹೋಗಿದೆ. ರಂಗಕಲೆ ಅದನ್ನು ಹುಡುಕಿಕೊಡುವ ಸಾಮಥ್ರ್ಯ ಹೊಂದಿದೆ. ಬೇರೆ ಬೇರೆ ವಿಷಯಗಳ ಶಿಕ್ಷಕರು ರಂಗಕಲೆಯನ್ನು ತಮ್ಮ ಪಾಠ ಮಾಡುವ ಕ್ರಮಕ್ಕೆ ಅಳವಡಿಸಿಕೊಳ್ಳುವುದು ಕೂಡ ರಂಗಚಟುವಟಿಕೆಯೇ ಆಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ನಾಟಕಗಳನ್ನು ಆಡಿಸುವುದು ಮಾತ್ರ ರಂಗಚಟುವಟಿಕೆ ಎನಿಸಿಕೊಳ್ಳುವುದಿಲ್ಲ, ಶಾಲೆಯ ನಿರಂತರ ಪಾಠ ಪ್ರವಚನಗಳಲ್ಲಿ ರಂಗಕಲೆಯ ಅಳವಡಿಕೆ ಕೂಡ ರಂಗಚಟುವಟಿಕೆಯೆ ಎನಿಸಿಕೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ರಂಗಕಲೆಯ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಮತ್ತು ಅವರ ಬಳಕೆಯನ್ನು ಮಾಡಿಕೊಳ್ಳುವ ಕುರಿತಾಗಿ ಇಲಾಖೆಯೇ ನೀತಿಯೊಂದನ್ನು ರೂಪಿಸಿ ‘ಆದೇಶ’ ರೂಪದಲ್ಲಿ ಶಾಲೆಗಳಿಗೆ ದಯಪಾಲಿಸಿದರೆ ಮಕ್ಕಳನ್ನು ಕಲಿಕಾಯಂತ್ರಗಳನ್ನಾಗಿ ಜಡಗೊಳಿಸಿದ್ದ ವ್ಯವಸ್ಥೆಯೊಳಗೊಂದಷ್ಟು ಲವಲವಿಕೆ ಮೂಡಬಹುದು.

- ಸಂತೋಷ ಗುಡ್ಡಿಯಂಗಡಿ