'ಕೊರಬಾಡು' ಬಿಡುಗಡೆ ಕುರಿತು ಪ್ರಜಾವಾಣಿ ವರದಿ
ಭಾಷೆ ವಿಘಟಿಸುವ ಶಿಕ್ಷಣ : ಕೆವಿಎನ್ ಬೇಸರ
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ 'ಬಳಗ'ದ ವತಿಯಿಂದ ಸಂತೋಷ ಗುಡ್ಡಿಯಂಗಡಿ (ಬಲತುದಿ) ಅವರ 'ಕೊರಬಾಡು' ಕಥಾಸಂಕಲನವನ್ನು ಶೇಂಗಾ ಬುಟ್ಟಿಯಿಂದ ತೆಗೆಯುವ ಮೂಲಕ ವಿದ್ಯಾರ್ಥಿನಿ ಎಸ್. ಸುಪ್ರಿಯಾ ಲೋಕಾರ್ಪಣೆ ಮಾಡಿದರು. ಸಾಹಿತಿ ಡಾ. ನೀಲಗಿರಿ ಎಂ. ತಳವಾರ, ಭಾಷಾತಜ್ಞ ಡಾ. ಕೆ. ವಿ. ನಾರಾಯಣ ಇದ್ದಾರೆ
ಮೈಸೂರು: ಮಕ್ಕಳ ಮಾತಿನ ಲಯಗಾರಿಕೆಯನ್ನು ಕಿತ್ತುಕೊಳ್ಳುತ್ತಿರುವ ಶಿಕ್ಷಣ, ಕಣ್ಣು ಮತ್ತು ಕಿವಿಯ ಭಾಷೆಯನ್ನು ಒಂದಾಗಿಸುವ ಬದಲು ವಿಘಟಿಸುತ್ತಿದೆ ಎಂದು ಭಾಷಾತಜ್ಞ ಡಾ.ಕೆ.ವಿ. ನಾರಾಯಣ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ‘ಬಳಗ’ದ ವತಿಯಿಂದ ಏರ್ಪಡಿಸಿದ್ದ ಸಂತೋಷ ಗುಡ್ಡಿಯಂಗಡಿ ಅವರ ‘ಕೊರಬಾಡು’ ಕಥಾ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಕಥೆಗಳ ಕುರಿತು ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ಕಣ್ಣಿನ (ಶಿಷ್ಟ ಭಾಷೆ) ಕನ್ನಡಕ್ಕೆ ಮಕ್ಕಳನ್ನು ಸೀಮಿತಗೊಳಿಸುತ್ತಿದೆ. ಕಿವಿಯ (ಆಡು ಭಾಷೆ) ಕನ್ನಡಕ್ಕೆ ಅವರು ತೆರೆದುಕೊಳ್ಳುವುದಕ್ಕೆ ಅಡ್ಡಿಯಾಗಿದೆ. ಇದರಿಂದ ಕನ್ನಡದ ಜೀವಂತಿಕೆಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಭಾಷೆಯ ಲಯಗಾರಿಕೆಯನ್ನು ಶಿಕ್ಷಕರು ದುಡಿಸಿಕೊಳ್ಳಬೇಕು. ಇದು ವ್ಯಕ್ತಿಗತ ನೆಲೆಯಲ್ಲಿ ಸಾಧ್ಯವಾದರೂ ಬದಲಾವಣೆ ಕಷ್ಟ. ಭಾಷೆಯ ಲಯಗಾರಿಕೆ ಉಳಿಸಿಕೊಳ್ಳಲು ಶಿಕ್ಷಣ ಕ್ರಮದಲ್ಲಿ ದೊಡ್ಡ ಪಲ್ಲಟವಾಗಬೇಕು. ಕಳೆದುಹೋಗುತ್ತಿರುವ ಕನ್ನಡದ ಜೀವಂತಿಕೆಯನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಕಥೆ, ಕವಿತೆಯಲ್ಲಿ ಭಾಷೆ ಅರ್ಥ ಸಂವಹನಕ್ಕೆ ಸೀಮಿತವಾಗುವುದಿಲ್ಲ. ಕೃತಿಯು ಓದುಗರೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಮಹಾಕಾವ್ಯಗಳಂತೆ ಕಥೆಯು ಕಣ್ಣು ಮತ್ತು ಕಿವಿಯ ಓದುಗಾರಿಕೆಯಾಗಿ ಉಳಿದಿಲ್ಲ. ಕಥೆಯಲ್ಲಿ ಈ ಲಯಗಾರಿಕೆಯನ್ನು ಇಟ್ಟುಕೊಂಡು ಯಶಸ್ವಿಯಾದವರು ದೇವನೂರ ಮಹದೇವ ಮಾತ್ರ. ಹೊಸ ತಲೆಮಾರಿನ ಕಥೆಗಾರರು ಕಥೆಯ ಭಾಷೆಯನ್ನು ಈ ನಿಟ್ಟಿನಲ್ಲಿ ದುಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ 1980ರ ದಶಕದವರೆಗಿನ ಎಲ್ಲ ಕಥೆಗಾರರ ನೆಲೆ ಒಂದೇ ಆಗಿತ್ತು. ಕಥೆಗಾರ ತನ್ನೊಳಗಿನ ಭಾವನೆಯನ್ನು ಹಂಚಿಕೊಳ್ಳಲು, ಓದುಗರಿಗೆ ಹೊಸದನ್ನು ಹೇಳಲು ಕಥೆಯನ್ನು ಮಾಧ್ಯವನ್ನಾಗಿ ಮಾಡಿಕೊಂಡಿದ್ದ. ಆದರೆ, ಹೊಸ ತಲೆಮಾರಿನ ಕಥೆಗಾರರ ನೆಲೆಯೇ ಬೇರೆ. ಸಾಂಸ್ಕೃತಿಕ ವ್ಯಕ್ತಿತ್ವ ಕಂಡುಕೊಳ್ಳುವ ಉದ್ದೇಶಕ್ಕಾಗಿ ಅನೇಕರು ಕಥೆ ರಚಿಸುತ್ತಿದ್ದಾರೆ. ಸ್ವಂತಿಕೆಯ ಹುಡುಕಾಟದಲ್ಲಿ ಮಹಿಳಾ ಸಾಹಿತ್ಯ ಹುಟ್ಟಿದಂತೆಯೇ, ಯುವ ತಲೆಮಾರಿನ ಸಾಹಿತ್ಯವೂ ರಚನೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಿದರು.
ಹೊಸ ತಲೆಮಾರಿನ ಕಥೆಗಾರರನ್ನು ಸಾಹಿತ್ಯ ಪರಂಪರೆಯಲ್ಲಿ ತುಲನೆ ಮಾಡುವುದು ತಪ್ಪು. ಹೊಸಬರು ಸಮಾಜವನ್ನು ನೋಡುವ ದೃಷ್ಟಿಕೋನ ವಿಭಿನ್ನ. ಕಥೆಯ ಸಾಮಗ್ರಿಗಾಗಿ ಮಾತ್ರ ಅವರು ಹುಡುಕಾಟ ನಡೆಸುವುದಿಲ್ಲ. ಅಲ್ಲದೇ, ಕಥೆಗಾರರು ಶೋಧಕರಾಗಿಯೂ ಕಾಣುತ್ತಿಲ್ಲ. ಅವರ ತಾಕಲಾಟ ಮತ್ತು ಅಸ್ತಿತ್ವದ ಹುಡುಕಾಟದಲ್ಲಿ ಪ್ರಜ್ಞಾವಂತಿಕೆ ಇರುತ್ತದೆ ಎಂದು ಹೇಳಲಾಗದು ಎಂದರು.
5ನೇ ತರಗತಿಯ ವಿದ್ಯಾರ್ಥಿನಿ ಎಸ್. ಸುಪ್ರಿಯಾ ‘ಕೃತಿ ಲೋಕಾರ್ಪಣೆ’ ಮಾಡಿದರು. ಸಾಹಿತಿ ಡಾ.ನೀಲಗಿರಿ ಎಂ. ತಳವಾರ, ‘ಬಳಗ’ದ ಸಂಚಾಲಕ ಶಿವಕುಮಾರ ಕಾರೇಪುರ ಇದ್ದರು.
ಕೃಪೆ : ಪ್ರಜಾವಾಣಿ
No comments:
Post a Comment